
ಅದೊಂದು ಊರಿಗೆ ಮಾದರಿಯಂತಿರುವ ಬಸಪ್ಪ ಮತ್ತು ಅವರ ಮಡದಿ ಕಾಳವ್ವರ ತುಂಬು ಬಡ ಕುಟುಂಬ. ಐದು ಗುಂಟೆ ವ್ಯವಸಾಯದ ಭೂಮಿ, ಒಂದು ಹರಕು ತಟ್ಟಿ ಗುಡಿಸಲನ್ನ ಬಿಟ್ಟರೆ ಅವರ ಬಳಿ ಇದ್ದ ಬಹು ದೊಡ್ಡ ಸಂಪತ್ತೆಂದರೆ ಅದು 'ಹೃದಯ ಶ್ರೀಮಂತಿಕೆ' ಮಾತ್ರ. ದಾನ-ಧರ್ಮದಲ್ಲಂತೂ ಕೇಳುವುದೇ ಬೇಡ, ಎತ್ತಿದ ಕೈ ಇವರದು. ದೇಹಿ ಎಂದು ಬೇಡಿ ಮನೆಯ ಬಾಗಿಲಿಗೆ ಬಂದವರಿಗೆ ಕಾಳವ್ವ 'ಇಲ್ಲ' ಎಂದು ಬರೀಗೈಯಲ್ಲಿ ಕಳಿಸಿದ ದಿನವೇ ಇಲ್ಲ. ಅವಳ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡದೇ ಹೋದರೆ ಅವಳಿಗೆ ಉಂಡ ಅನ್ನ ಮೈಗೆ ಹತ್ತುತ್ತಿರಲಿಲ್ಲವೇನೋ. ಅಂತಹ ಒಂದು ಬಹು ದೊಡ್ಡ ಗುಣವುಳ್ಳ ಕರುಣಾಮಯಿ ಆಕೆ. ಇನ್ನು, ಸರಳ ನಡೆ - ನುಡಿಯಿಂದ ಪರಿಶುದ್ಧ ಜೀವನ ಸಾಗಿಸಲು ಮಾರ್ಗದರ್ಶಿಯಂತಿದ್ದವನು ಆಕೆಯ ಪತಿ ಬಸಪ್ಪ . ಉದಾರಿ, ಸರ್ವರಲ್ಲೂ ಬೆರೆಯುವಂತಹ ಸರಳ, ನೇರ ಮಾತಿನ ಮೃದು ಮನದ ವ್ಯಕ್ತಿಯಾಗಿದ್ದ. ಹೃದಯ ಶ್ರೀಮಂತರೆಂದರೆ ಹೀಗಿರಬೇಕೆಂದು ಮಾತನಾಡಿಕೊಳ್ಳುವಂತೆ ಅವರಿಬ್ಬರ ವ್ಯಕ್ತಿತ್ವವಿತ್ತು. ಏನೋ ಗೊತ್ತಿಲ್ಲ 'ದೇವರ ಆಟ ಬಲ್ಲವರಾರು' ಎನ್ನುವಂತೆ ಇಂತಹ ಒಳ್ಳೆಯ ಮನಸ್ಸಿನ ದಂಪತಿಗಳಿಗೆ ಮದುವೆಯಾಗಿ ಹದಿನೈದು ವರ್ಷಗಳಾದರೂ ಸಂತಾನ ಭಾಗ್ಯವನ್ನೇ ದೇವರು ಕರುಣಿಸಿರಲಿಲ್ಲ. ಬಸಪ್ಪ ಮಕ್ಕಳಿಲ್ಲವೆಂದು ಅಷ್ಟೇನೂ ಸಂಕಟ ಪಡದಿದ್ದರೂ ಕಾಳವ್ವ ಮಾತ್ರ ಒಮ್ಮೊಮ್ಮೆ ಚಿಂತಾಕ್ರಾಂತಳಾಗಿ ತಲೆಯ ಮೇಲೆ ಕೈ ಹೊತ್ತು ಕೋಣೆಯ ಮೂಲೆ ಸೇರಿ ಬಿಡುತ್ತಿದ್ದಳು. ಹಗಲೆಲ್ಲ ಗಂಡ-ಹೆಂಡತಿ ಇಬ್ಬರೂ 'ಕಾಯಕವೇ ಕೈಲಾಸ' ಎಂಬ ತತ್ತ್ವಕ್ಕೆ ಬದ್ಧರಾಗಿ ದುಡಿಯುತ್ತಾ ಸಮಯ ಕಳೆಯುತ್ತಿದ್ದುದರಿಂದ, ಅವಳಿಗೆ ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿರಲಿಲ್ಲ. ಆದರೆ ರಾತ್ರಿ ವೇಳೆ ಸಮೀಪಿಸುತ್ತಿದ್ದಂತೆ ಮನೆ ಎಲ್ಲಾ ನಿಶ್ಯಬ್ಧವಾಗಿ ಸ್ಮಶಾನ ಮೌನ ಆವರಿಸಿದಂತೆ, ಏನೋ ಮನೆಯಲ್ಲಿ ಕೊರತೆ ಇದೆ ಎನ್ನುವಂತೆ ಭಾಸವಾಗುತಿತ್ತು. ಆಗಲೇ ಅವಳು "ಮನೆಯಲ್ಲಿ ಮಕ್ಕಳಿದ್ದರೆ" ಎಂದು ನೆನೆದು ಕಲ್ಪನಾ ಲೋಕಕ್ಕೆ ಜಾರಿ ಬಿಡುತ್ತಿದ್ದಳು. ಮತ್ತೆ ಬಸಪ್ಪ "ಕಾಳವ್ವ, ಅಡಿಗೆ ಆಯಿತೇನೇ" ಎಂದು ಕರೆದಾಗಲೇ ಅವಳಿಗೆ ಎಚ್ಚರಾಗಿ ತಾ ಕಂಡಿದ್ದೆಲ್ಲ ಭ್ರಮೆ ಎಂದು ಅರಿವಾಗುತ್ತಿತ್ತು. ಹೀಗಿರುವಾಗ ಒಮ್ಮೆ ಅವರ ನೆಂಟರ ಮನೆಗೆ ಮದುವೆ ಸಮಾರಂಭಕ್ಕೆಂದು ಹೋದಾಗ ಅವಳಿಗೆ ಪರಿಚಯವಿದ್ದ ಎಲ್ಲಾ ಹೆಂಗಸರು ಕಾಳವ್ವನನ್ನು ಕರೆದು ನಿಲ್ಲಿಸಿ, ಪ್ರಶ್ನೆಗಳ ಮಳೆಗರೆಯುತ್ತಾರೆ. "ಕಾಳವ್ವಾ , ಆರಾಮಾಗಿದ್ದೀಯಾ? ಇನ್ನೂ ಮಕ್ಕಳಾಗಲಿಲ್ಲವೇ?" ಎಂದು ಮುಂತಾಗಿ ಪ್ರಶ್ನಿಸಲು ಕಾಳವ್ವ, "ಇಲ್ಲ, ನನಗೂ ಅದೇ ಸಂಕಟ" ಎಂದು ಮುಂದೆ ಮಾತೇ ಹೊರಡದಾಗಿ ಮೌನಕ್ಕೆ ಶರಣಾಗಿಯೇ ಬಿಟ್ಟಳು. ಅಲ್ಲಿ ಬಂದವರು ಅಷ್ಟಕ್ಕೆ ಸುಮ್ಮನಾಗುವ ಬದಲು ಹೇಳಿದರು "ನೀನ್ಯಾಕೆ ಕಾಳವ್ವ, ಹರಕೆ, ವ್ರತ, ದೇವರ ದರ್ಶನ ಎಲ್ಲಾ ಮಾಡಬಾರದು? ಮಾಡಿದರೆ ಖಂಡಿತಾ ಮಕ್ಕಳು ಆಗಿಯೇ ಆಗುತ್ತದೆ, ಹೆದರಬೇಡ " ಎಂದು, ದಶರಥ ಮಹಾರಾಜ ಸಂತಾನಕ್ಕಾಗಿ ಪುತ್ರಕಾಮೇಷ್ಠಿ ಯಾಗ ಮಾಡಿದ ರೀತಿಯಲ್ಲೇ ಇಂದು ಇವರು ಅವಳಿಗೆ ಇರೋ-ಬರೋ ವ್ರತ, ಹರಕೆ, ದೇವರ ದರ್ಶನ, ಹೋಮ ಹವನ ಎಲ್ಲಾ ಹೆಸರುಗಳನ್ನು ಅವಳ ತಲೆಗೆ ತುರುಕಿ ಕಳುಹಿಸಿದರು. ಪಾಪ, ಮಕ್ಕಳಿಲ್ಲದ ಆಕೆಗೆ ಇವರುಗಳು ಹೇಳಿದ್ರಲ್ಲ, ಅದೆಲ್ಲ ವೇದವಾಕ್ಯವೇ ಎಂದೆನಿಸಿತು. ಅಂತೂ-ಇಂತೂ ವೇದವಾಕ್ಯವನೆಲ್ಲ ತಲೆಯಲ್ಲಿ ತುಂಬಿಕೊಂಡು ಸಮಾರಂಭ ಮುಗಿಸಿ ಗಂಡನ ಜೊತೆ ಮನೆಯ ಹಾದಿ ಹಿಡಿದವಳು ದಾರಿಯುದ್ದಕ್ಕೂ ಹೋಗುವಾಗ ಕೂಡ ಅವರು ಆಡಿದ ಮಾತನ್ನೇ ಮನದಲ್ಲಿ ಗಿರಕಿ ಹಾಕುತ್ತಾ ನಡೆದಳು. ಮನೆಗೆ ಹೋದವಳೇ ತಡ ಮಾಡಲಿಲ್ಲ ಒಂದೊಂದೇ ಹರಕೆ, ವ್ರತ, ಹೋಮ ಹವನದ ಬಗ್ಗೆ ಬಸಪ್ಪನಲ್ಲಿ ಪ್ರಸ್ತಾಪವಿಡಲು ಶುರು ಮಾಡಿಯೇ ಬಿಟ್ಟಳು. ಇಲ್ಲಿಯವರೆಗೆ ಆರಾಮಾಗಿ ಇದ್ದ ಬಸಪ್ಪನ ನೆಮ್ಮದಿಯನ್ನು ಹಾಳು ಗೆಡವಿದಳು. ಅವಳದು ದಿನ ಬೆಳಗಾದರೆ ಒಂದೇ ಗೋಳು "ಏನ್ರೀ, ನಾವ್ಯಾಕೆ ಊರ ಹೊರಗಿನ ದೇವಿಯ ಗುಡಿಗೆ ಹೋಗಿ ಬರಬಾರದು" ಎನ್ನುವುದು. ಅವನಾದರು ಏನು ಮಾಡಿಯಾನು ಇವಳ ಕಿರಿಕಿರಿ ಅನುಭವಿಸುವುದಕ್ಕಿಂತ ಹೋಗಿ ಬರುವುದೇ ಒಳ್ಳೆಯದೆಂದು ಮರು ಮಾತನಾಡದೆ "ಆಯ್ತು ನೀನೇಳಿದಂಗೆ ಆಗ್ಲಿ" ಎಂದು ಬಸಪ್ಪ ಗುಡಿಯ ಕಡೆ ಮಡದಿಯ ಕರೆದುಕೊಂಡು ಹೊರಾಟೇ ಬಿಟ್ಟ. ಹೀಗೆ ವರ್ಷಾನುಗಟ್ಟಲೆ ಹರಕೆ, ವ್ರತ, ಪೂಜೆ ಎಲ್ಲಾ ಮಾಡಿದ ಮೇಲೆ ಅದೇನೋ ಗೊತ್ತಿಲ್ಲ ಮೊದಲನೇ ಮಗುವಿಗೆ ತಾಯಿಯಾಗುವ ಭಾಗ್ಯ ಒಲಿದು ಬಂತು. ಆಗ ಆ ದಂಪತಿಗಳಿಗೆ ಆದ ಸಂತೋಷಕ್ಕೆ ಪಾರವೇ ಇಲ್ಲ, ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟು ಅತೀವ ಸಂತಸ ವ್ಯಕ್ತಪಡಿಸಿದರು. ಅವಳು ಹಿಂದೆ ಅನುಭವಿಸಿದ ದುಃಖದ ಕ್ಷಣವೆಲ್ಲಾ ಮರೆಯಾಗಿ ಹೃದಯ ಹರ್ಷದಿಂದ ಗರಿಗೆದರುತ್ತದೆ. ಮಗನ ನಾಮಕರಣವನ್ನಂತೂ ಕೈಯಲ್ಲಿ ಕಾಸಿಲ್ಲದಿದ್ದರೂ ಮನೆಯಲ್ಲಿರುವ ಭತ್ತ ಮಾರಿ ಆ ದುಡ್ಡಿನಿಂದ ದೊಡ್ಡ ಹಬ್ಬದಂತೆ ಆಚರಿಸಿದರು. ಹೀಗೆ ಕಾಲಾಂತರ ಕಾಳವ್ವ ಕೊನೆಗೆ ಹನ್ನೆರಡು ಮಕ್ಕಳಿಗೆ ಜನ್ಮ ನೀಡಿದಳು. ಅಂತಹ ಕಡು ಬಡತನದ ನಡುವೆ ತನ್ನ ಮಕ್ಕಳನ್ನ ಬೆಳೆಸಲು ಅವರಿಬ್ಬರೂ ಪಟ್ಟ ಪಾಡು ಹೇಳತೀರದು. ತಾನು ಒಂದು ಹೊತ್ತು ಊಟ ಬಿಟ್ಟು ತನ್ನ ಮಕ್ಕಳಿಗೆ ತುತ್ತು ನೀಡಿ, ತನ್ನ ಸೀರೆ ಹರಿದಿದ್ದರೂ ಲೆಕ್ಕಿಸದೇ ಅವರಿಗೆ ಹೊಸ ಅಂಗಿಯ ಕೊಡಿಸಿದ ಮಹಾತಾಯಿ ಕಾಳವ್ವ. ತಾವು ಶಾಲೆಯ ಮೆಟ್ಟಿಲು ಏರದಿದ್ದರೂ ಸಹ ತಮ್ಮ ಹನ್ನೆರಡು ಮಕ್ಕಳಿಗೆ ಕಾಳವ್ವ ಮತ್ತು ಬಸಪ್ಪ ಶಿಕ್ಷಣವನ್ನು ಕೊಡಿಸಿದರು. ಕಾಳವ್ವ ಆಗಾಗ ಹೇಳುತ್ತಿದ್ದಳು "ನಮ್ಮ ದೊಡ್ಡ ಮಗ ಸಿದ್ಧಲಿಂಗಯ್ಯನಿಗೆ ಒಂದು ನೌಕರಿ ಸಿಕ್ ಬುಟ್ರೆ ಎಲ್ಲಾ ಸರಿ ಹೋತದೆ ಸುಮ್ಕಿರಿ, ಹೆದರ್ಬ್ಯಾಡ್ರಿ" ಎಂದು ಗಂಡನಿಗೆ ಸಂತೈಸುತ್ತಿದ್ದಳು. ಬಸಪ್ಪ ಕೂಡ ಅದೇ ಆಸೆಯಲ್ಲೇ ದಿನಗಳೀತಾ ಇದ್ದ. ಅಂತೂ ದೊಡ್ಡ ಮಗನಿಗೆ ಒಂದು ಪೊಲೀಸ್ ಕೆಲಸ ಸಿಕ್ಕೇ ಬಿಡ್ತು. ಇನ್ನೇನು, ನಮ್ಮ ಕಷ್ಟ ಎಲ್ಲಾ ದೂರ ಆಗಿ ಬಿಡುವುದು, ನೆಮ್ಮದಿಯ ಜೀವನ ನಡೆಸಲು ಅವಕಾಶ ಸಿಕ್ಕ ಹಾಗೆ ಆಯ್ತು, ಎಂದು ನೌಕರಿ ಸಿಕ್ಕ ಮಗನಿಗೆ ತಡ ಮಾಡದೇ ಮದುವೆ ಮಾಡಿದರು. ಮದುವೆ ಅದದ್ದೇ ತಡ, ಗುಟುಕು ತಿಂದು ರೆಕ್ಕೆ ಬಲಿತ ಮೇಲೆ ತಾಯಿ ಹಕ್ಕಿಯ ಮರಿಗಳು ಹೇಗೆ ಗೂಡು ಬಿಟ್ಟು ಹಾರಿ ಹೋಗುತ್ತವೆಯೋ ಅದೇ ರೀತಿ ಹೆಂಡತಿಯ ಸಮೇತ ಮನೆ ಬಿಟ್ಟು ಓಡಿ ಹೋದವ ಮತ್ತೆ ಇತ್ತ ಕಡೆ ಸುಳಿಯಲೇ ಇಲ್ಲ ಆ ಪುಣ್ಯತ್ಮ! ಪಾಪ ಕಾಳವ್ವಳಿಗೆ ಗುಡಿಯೇ ಮಗುಚಿ ಹೆಗಲ ಮೇಲೆ ಬಿದ್ದ ಹಾಗೆ ಆಯ್ತು. ಆದರೂ ಆವಾಗ ಕೂಡ ಅಷ್ಟೇನೂ ಧೈರ್ಯ ಕಳೆದು ಕೊಂಡಿರಲಿಲ್ಲ. ಯಾಕೆಂದರೆ ಇನ್ನೂ ನಮಗೆ ಹನ್ನೊಂದು ಮಕ್ಕಳಿಲ್ಲವೇನ್ರೀ, ಅವ ಹೋದರೆ ಹೋಗಲಿ ಬಿಡಿ ಎಂದು ಸುಮ್ಮನಾಗಿದ್ದಳು. ಹೀಗೆ ಒಬ್ಬರ ಬೆನ್ನಿಗೆ ಒಬ್ಬರಿಗೆ ಕಾಳವ್ವನ ಪುಣ್ಯದ ಫಲವೇ ಇರಬೇಕು ಎನ್ನುವಂತೆ ನೌಕರಿ ಸಿಕ್ಕಿ, ಮದುವೆಯೂ ಕೂಡ ಮಾಡಿ ಆಯ್ತು. ನೌಕರಿ ಕೊಡಿಸಿ ಮದುವೆ ಮಾಡಿದ್ದಷ್ಟೇ ಬಂತು ಕಾಳವ್ವ. ಆದರೆ ಇರುವಷ್ಟೂ ಜನ ಮಕ್ಕಳು ಸಹ " ಹಿರಿಯಣ್ಣನ ಚಾಳಿ ಮನೆ ಮಂದಿಗೆ" ಎನ್ನುವಂತೆ ಅವನ ಹಾದಿಯನ್ನೇ ತುಳಿದರು. ಇನ್ನೇನು ಆ ಬಡ ದಂಪತಿಗಳಿಗೆ ಮುಪ್ಪಿನ ಕಾಲ ಬಂದು ಆವರಿಸಿತು. ಎಷ್ಟೋ ಬಾರಿ ಕಾಳವ್ವ ಮಕ್ಕಳಿಗೆ ಫೋನು ಮಾಡಿ "ನೀವು ನನಗೆ ಊಟ ಹಾಕೋದು ಬ್ಯಾಡ್ರಪ್ಪ ನಿಮ್ಮನ್ನ ನಂಗೆ ನೋಡಬೇಕು ಅನಿಸುತ್ತಿದೆ ಒಂದು ಸಾರಿ ಬಂದು ಹೋಗಿ" ಎಂದರೂ ಏನೇನೋ ಸುಳ್ಳು ಕಾರಣ ಹೇಳಿ ತಪ್ಪಿಸಿಕೊಂಡರು. ಯಾವ ಒಬ್ಬ ಮಗನೂ ಸಹಾಯಕ್ಕೆ ಬರದೇ ಇರುವುದನ್ನು ಗಮನಿಸಿದ ನೆರೆಹೊರೆಯ ಪರಿಚಯವಿದ್ದ ಜನ ಮುದಿ ಜೀವಕ್ಕೆ ಊಟವನ್ನೆಲ್ಲ ತಂದು ಕೊಟ್ಟು, ಮಾತನಾಡಿಸಿ ಹೋದರು. ನೆರಮನೆಯ ಗಂಗವ್ವ ತಮ್ಮ ಮನೆಯಲ್ಲಿ ಏನೇ ಮಾಡಿದರೂ ಸಹ ಈ ವಯಸ್ಸಾದ ಜೀವಕ್ಕೆ ಕೊಟ್ಟು ಹೋಗುತ್ತಿದ್ದಳು. ಇವರು ಬೇಡವೆಂದರೂ ಸಹ "ನನಗೆ ತಂದೆ-ತಾಯಿ ಇಲ್ಲ ನಿಮ್ಮಲ್ಲೇ ಅವರನ್ನು ಕಾಣುವೆನೆಂದು" ಹೇಳಿ ಸಮಾಧಾನ ಪಡುತ್ತಿದ್ದಳು. ಅವರಿಗೆ ಸಹಾಯ ಮಾಡಲು ಬರುವವರು ಲೆಕ್ಕದ ಹೊರಗೆ. ಯಾಕೆಂದರೆ ಹಿಂದೆ ಈ ದಂಪತಿಗಳು ಪರರಿಗೆ ಮಾಡಿದ ಸಹಾಯ, ದಾನ - ಧರ್ಮ ಅವರ ಒಳ್ಳೆಯ ಗುಣ ಇದಾವುದನ್ನು ಜನ ಇನ್ನೂವರೆಗೆ ಮರೆತಿಲ್ಲ. ಆದರೂ ಅವರಿಗೆ ಒಂದೇ ಕೊರಗು 'ಮಕ್ಕಳೆನಿಸಿಕೊಂಡವರಿಗೆ ನಾವು ಬೇಡವಾದರೆ!' ಎನ್ನುವುದು. ಒಮ್ಮೆ ಕಾಳವ್ವ ಗಂಡನ ಬಳಿ ಕುಳಿತು ಗೋಗರೆದು ಕಣ್ಣೀರಿಟ್ಟಳು. "ಒಂದು ಕಾಲದಲ್ಲಿ ಮಕ್ಕಳಿಲ್ಲದೇ ನೊಂದು-ಬೆಂದು ತತ್ತರಿಸಿ ಹೋದವಳು ನಾನು; ನಾನು ಮಾಡದ ವ್ರತವಿಲ್ಲ, ನಾನು ಹೊರದ ಹರಕೆ ಇಲ್ಲ, ನಾನು ಹೋಗದ ಗುಡಿ ಇಲ್ಲ. ಇಷ್ಟೆಲ್ಲಾ ಮಾಡಿ ಮಕ್ಕಳನ್ನ ಹಡೆದಿದ್ದು ನಾನು ಇಂಥವರನ್ನೇ? ಮಕ್ಕಳನ್ನು ದಯಪಾಲಿಸಿ ದೇವಾ ಎಂದು ದೇವರಲ್ಲಿ ಅಂಗಲಾಚಿ ಬೇಡಿದ್ದು ನಾನು ಇಂಥವರಿಗೋಸ್ಕರವೇ?... ಛೇ, ನಾನಾಗ ಚಂದಿರನ ತೋರಿಸುತ್ತಾ ಬೆಳದಿಂಗಳ ರಾತ್ರಿಯಲ್ಲಿ ಕೈ ತುತ್ತು ನೀಡಿದ್ದು ಇಂಥವರಿಗಾಗಿಯೇ? ಅಮ್ಮಾ, ಅಮ್ಮಾ ಎಂದು ನಿಮಿಷಕ್ಕೆ ಎರಡು ಬಾರಿ ಕರೆಯುತ್ತಾ, ಸೆರಗು ಹಿಡಿದು ಓಡಾಡುತ್ತಿದ್ದ ಮಕ್ಕಳು, ಈಗ ಅಮ್ಮನ ಒಂದು ಮಾತು ಕೂಡ ಅವರಿಗೆ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಬದಲಾಗಿ ಹೋದರೇ? ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲುಹಿದ ಮಮತೆಯೆಲ್ಲಾ ಇವರಿಗೆ ಮರೆತು ಹೋಯಿತೇ?" ಎಂದು ಕಲ್ಲು ಬಂಡೆಯೂ ಕೂಡ ಕರಗಿ ನೀರಾಗುವಂತೆ ಒಂದೇ ಸಮನೆ ಹಲುಬಿದಳು. ಆಗ ಬಸಪ್ಪ ಗದ್ಗದ ಕಂಠದಲ್ಲಿ "ಕಾಳವ್ವ, ಅವರೀಗ ವಿದ್ಯಾವಂತರು, ಹಣ, ಆಸ್ತಿ ಇರುವವರು ನಾವೆಲ್ಲ ಯಾವ ಲೆಕ್ಕ, ನಮ್ಮನ್ನೆಲ್ಲ ಈಗ ಅವರು ನೆನೆಸಿಕೊಂಡರೆ ನಾಚಿಕೆ ಆಗುತ್ತೋ ಏನೋ ಅಳಬ್ಯಾಡ ಸುಮ್ಕಿರು, ಮಕ್ಕಳು ಬರದೇ ಹೋದರೂ ನಮ್ಮ ಒಳ್ಳೆತನದಿಂದ ಎಲ್ಲರೂ ಸಹಾಯ ಮಾಡಿ ಅವರಿಗಿಂತ ಹೆಚ್ಚಿನ ಪ್ರೀತಿ ನೀಡಿ ನೋಡಕಂತಾ ಇಲ್ವ" ಎಂದ. ಕಾಳವ್ವ ಮೆಲ್ಲಗೆ ಅಳುತ್ತಾ ಸುಯ್ಲು ಸೋರದ ಹಾಗೆ ಒಳಗೊಳಗೆ ನುಂಗುತ್ತಾ ನಾನು ಹರಕೆ ಹೊತ್ತು ಮಕ್ಕಳ ಪಡೆಯುವುದಕ್ಕಿಂತ ಬಂಜೆಯಾಗಿಯೇ ಇದ್ದರೆ!!.... ಎಂದು ಮನದಲ್ಲೇ ಮಮ್ಮಲ ಮರುಗುತ್ತಾ, ಶುಷ್ಕ ಕಣ್ಣುಗಳಿಂದ ಕೆಳಗಿಳಿದ ನೀರನ್ನು ಕೈಗಳಿಂದ ಒರೆಸಿಕೊಳ್ಳುತ್ತಾ ಒಳ ಕೋಣೆಯತ್ತ ಮುಖ ಮಾಡಿ ನಡೆದಳು.
ಪೂಜಾ ನಾರಾಯಣ ನಾಯಕ ✍️ (BSc ತೃತೀಯ ವರ್ಷ)

ಪೂಜಾ ನಾರಾಯಣ ನಾಯಕ ಕುಮಟಾ ತಾಲೂಕಿನ ಮಾಸ್ಕೇರಿಯವರು.ವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿರುವ ಅವರು ಕವಿತೆ, ಕತೆಗಳ ಬರವಣಿಗೆ ಮತ್ತು ಸಾಹಿತ್ಯದ ಓದಿನಲ್ಲಿ ಆಸಕ್ತರು ಅವರ ಕತೆ ನಿಮ್ಮ ಓದಿಗಾಗಿ. ಸಂಪಾದಕರು.
Comments