top of page

' ಖುಷಿಯ ಬೀಜ '- ತಮ್ಮಣ್ಣ ಬೀಗಾರ

Updated: Aug 1, 2020

ಮಕ್ಕಳಿಗೆ ಹೇಳಿ ಮಾಡಿಸಿದಂತಿರುವ ತಮ್ಮಣ್ಣ ಬೀಗಾರರ ಕವನ ಸಂಕಲನ ' ಖುಷಿಯ ಬೀಜ '




















ದೊಡ್ಡವರ ಸಾಹಿತ್ಯವು ಮಕ್ಕಳಿಗೆ ಸೂಕ್ತವಾಗಲಾರದು ಎಂಬ ಸತ್ಯವನ್ನು ದೊಡ್ಡವರು ಕಂಡುಕೊಂಡಂದು ಮಕ್ಕಳ ಸಾಹಿತ್ಯವೆಂಬ ಹೊಸ ಪ್ರಕಾರ ಹುಟ್ಟಿಕೊಂಡಿತು. ಇದರ ಧ್ಯೇಯೊದ್ದೇಶಗಳಲ್ಲಿ ಮುಖ್ಯವಾದುದು ಮಕ್ಕಳ ಸಾಹಿತ್ಯವನ್ನು ಮಕ್ಕಳೇ ರಚಿಸುವಂತಾಗಬೇಕು ಎಂದಿದ್ದರೂ ಮಕ್ಕಳಿಗೆ ಸಾಹಿತ್ಯದ ಖುಷಿಯನ್ನು ನೀಡುವುದರೊಂದಿಗೆ ಜೀವನಮೌಲ್ಯಗಳ ಅರಿವು ಮೂಡಿಸುವ ಸಾಹಿತ್ಯವನ್ನು ದೊಡ್ಡವರೇ ಕೊಡಬೇಕಾಗುತ್ತದೆ ಅನ್ನುವುದನ್ನು ಮರೆಯಲಾಗುವುದಿಲ್ಲ. ದೊಡ್ಡವರು ತಾವು ಸ್ವತಃ ಮಕ್ಕಳ ಜಾಗದಲ್ಲಿ ನಿಂತು ಅವರಿಗೆ ಅರ್ಥವಾಗುವ, ಅವರಿಗೆ ಖುಷಿ ನೀಡುವ ಮತ್ತು ಮೌಲ್ಯಯುತ ಸಂದೇಶಗಳನ್ನು ನೀಡುವ ಕಥೆ, ಕವಿತೆ, ನಾಟಕಗಳನ್ನು ಕೊಟ್ಟಾಗ ಅದು ಸಾರ್ಥಕವಾಗುತ್ತದೆ. ಅಂಥ ಒಂದು ಸಾರ್ಥಕತೆಯನ್ನು ಪಡೆಯುವ ಅರ್ಹತೆಯಿರುವ ಕವನ ಸಂಕಲನ ಈಗಾಗಲೇ ಅನೇಕ ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿ ಅಪಾರ ಅನುಭವ ಪಡಿದಿರುವ ತಮ್ಮಣ್ಣ ಬೀಗಾರರ ' ಖುಷಿಯ ಬೀಜ'. ಇದರೊಳಗಿನ ಎಲ್ಲಾ ಕವನಗಳು ಒಂದಿಲ್ಲೊಂದು ರೀತಿಯಲ್ಲಿ ಮಕ್ಕಳ ಆವಶ್ಯಕತೆಗಳನ್ನು ಪೂರೈಸುವ ರೀತಿಯಲ್ಲಿವೆ.

ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳುವುದು ಮತ್ತು ಉತ್ತರಕ್ಕಾಗಿ ದೊಡ್ಡವರನ್ನು ಕಾಡುವುದು ಮಕ್ಕಳ ಮೂಲಭೂತ ಗುಣವೆಂಬುದು ಎಲ್ಲರಿಗೂ ತಿಳಿದ ವಿಚಾರ. ಇಂಥ ಪ್ರಶ್ನೋತ್ತರಗಳನ್ನೇ ಕವಿತೆಯಾಗಿಸಿ, ಉಯ್ಯಾಲೆಯಾಟವಾಡಿದರೆ ಮಕ್ಕಳು ಖುಷಿ ಪಡುವುದು ಮಾತ್ರವಲ್ಲದೆ ವಿಷಯಗಳನ್ನೂ ತಿಳಿದುಕೊಳ್ಳುತ್ತಾರೆ ಅನ್ನುವುದು ಇಲ್ಲಿ ಕವಿಗೆ ತಿಳಿದಿದೆ. ಫಲವಾಗಿ ಅವರ 'ಮಕ್ಕಳಾಗ್ಲಿ'ಎಂಬ ಈ ಕವಿತೆ ರೂಪು ತಳೆದಿದೆ :


ಕಾಮನ ಬಿಲ್ಲು ಬಾಗೋದೇಕೆ

ಸೂರ್ಯಗೆ ಹಾಕೋ ನಮಸ್ಕಾರ

ಮೋಡಗಳೆಲ್ಲ ಗುಡುಗೋದೇಕೆ

ಮಳೆಗೆ ಹಾಕೋ ಜೈಕಾರ..(ಪು.೧೭)


ಮಕ್ಕಳಿಗೆ ಮೈತುಂಬಾ ಆಸಕ್ತಿ-ಕುತೂಹಲ. ಅಲ್ಲಿ ನೋಡಬೇಕು, ಇಲ್ಲಿ ಇಣುಕಬೇಕು, ಅದು ಹೇಗಿದೆ, ಇದು ಹೇಗಾಗತ್ತೆ ಎಲ್ಲವನ್ನೂ ತಿಳಿಯಬೇಕು.ಅದರಲ್ಲೇ ಸಿಕ್ಕಿದ ಖುಷಿ ಬೀಜವಾಗಿ ಬಿತ್ತಲ್ಪಟ್ಟು ಇಮ್ಮಡಿ- ನೂರ್ಮಡಿಯಾಗ ಬೇಕು. ಹಾಗೆನ್ನುತ್ತದೆ ಕವನ 'ಖುಷಿಯ ಬೀಜ':


ಬಸವನ ಹುಳ ಜಾರೋದ್ಹೇಗೆ

ನೋಡಿ ಬರ್ತೇನೆ

ಹಕ್ಕಿ ಮರಿಗೆ ರೆಕ್ಕೆ ಹುಟ್ಟೋದು

ಕಂಡು ಬರ್ತೇನೆ

ಖುಷಿಯ ಬೀಜ ಬಿತ್ತಿ ಬರ್ತೇನೆ..(ಪು.೧೪)

'ಮುಂಜಾವು' 'ಕರೆಸಿ ಸಾಕು, ಮಳೆಯ ಹಾಡು ಹಾಡಿದ್ಯಾರು?' ಕವನಗಳಲ್ಲೂ ಇದೇ ಅಂಶಗಳನ್ನು ಕಾಣಬಹುದು.


ಮಕ್ಕಳಿಗೆ ನಿಸರ್ಗವೇ ಅತಿ ದೊಡ್ಡ ಪಾಠಶಾಲೆ.ಇದನ್ನು ಅನೇಕ ಹಿರಿಯ ಚಿಂತಕರು ಹೇಳಿದ್ದಾರೆ. ಇಲ್ಲಿ ಕವಿ ಉಪಾಯವಾಗಿ ಮಕ್ಕಳಿಗೆ ನಿಸರ್ಗದ ವೈವಿಧ್ಯಮಯ ಮುಖಗಳ ಪರಿಚಯ ಮಾಡಿಸುವ ಪರಿಯೇ ಚಂದ: ಗಾಡಿ ಹೊರಗೆ ಹೊರಟಿತು' ಕವನದಲ್ಲಿ ನೋಡಿ.


ಪಟ್ ಪಟ್ ಮಳೆಹನಿ ಕರೆಯಿತು

ಚುಕ್ ಚುಕ್ ಚುಕ್ ಹಾಡೊ ಹಕ್ಕಿ ಕರೆಯಿತು

ಸಳ ಸಳ ಸಳ ಹರಿವ ನೀರು ಕರೆಯಿತು(ಪು.೧೯)

ಇದೇ ತತ್ವದ ಮೇಲೆ ','ಪೀಟೀಹುಳ','ರಜೆ ಮುಗಿಯದಿರಲಿ'' ಏನಾಯ್ತು?','ಮಳೆಯ ಹಾಡು','ಹಾಗೆ' 'ಹೊಗಲಿ ಸೋತು' ಮೊದಲಾದ ಕವನಗಳಿವೆ


ಮಕ್ಕಳ ಮನಸ್ಸು ಮುಗ್ಧ. ಆದ್ದರಿಂದಲೇ ತಮ್ಮಂತೇ ಇರುವ ಪ್ರಾಣಿ, ಪಕ್ಷಿ,ಗಿಡ, ಮರ, ಹೂವು, ಹಣ್ಣುಗಳ ಜತೆಗೆ ಮಾತನಾಡುವುದು, ಒಡನಾಡುವುದೆಂದರೆ ಅವರಿಗೆ ಬಲು ಖುಷಿ. ಅದಕ್ಕೋಸ್ಕಕರ ಕವಿ ಇಲ್ಲಿ ಕಪ್ಪೆ, ಕೋಗಿಲೆ, ಕಾಗೆ, ಬೆಳ್ಳಕ್ಕಿ, ಮಿಡತೆ, ಮಿಂಚುಳ್ಳಿ, ಗಿಳಿ, ದುಂಬಿ, ಮಾವಿನಮರ, ತೆಂಗಿನಮರಗಳಿಗೆ ಜೀವ ಬರಿಸಿ ಮಕ್ಕಳ ಸಂಗಡ ಆಡಲು ಬಿಡುತ್ತಾನೆ.'ಅಲ್ಲಿ ಇಲ್ಲಿ' ,'ನಕ್ಕಿತ್ತು', 'ತಪ್ಪಿದ ಅನ್ನ', 'ಸಿಗಬಹುದು ಚಿನ್ನ' ಮೊದಲಾದ ಕವನಗಳಲ್ಲಿ ಈ ಗುಣ ಕಾಣಬಹುದು.


ಮಕ್ಕಳು ಚಿಕ್ಕವರಿರುವಾಗಲೇ ಪರಿಸರವನ್ನು ಪ್ರೀತಿಸಲು ಕಲಿಸುವುದು ಬಹಳ ಅಗತ್ಯ. ಗಿಡ ಮರ ಪ್ರಾಣಿ ಪಕ್ಷಿಗಳೊಂದಿಗೆ ಮಕ್ಕಳು ಭಾವನಾತ್ಮಕವಾದ ನಂಟನ್ನು ಬೆಳೆಸಿದರೆ ಅವರು ಬೆಳೆದಾಗ ಪರಿಸರಕ್ಕೆ ಹಾನಿಯಾಗುವಂಥ ಕೆಲಸವನ್ನು ಅವರು ಮಾಡಲಾರರು. 'ಹೊಗೋನಲ್ಲ' ಎಂಬ ಕವನದಲ್ಲಿ ಮುದಿಯಾದ ಮರವನ್ನು ಅಜ್ಜ ಎಂದು ಕರೆಯುವ ಮಗು ಇಲ್ಲಿ ಮರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿ, ಉತ್ತರ ಹೇಳೆಂದು ಒತ್ತಾಯಿಸಿ 'ನೀನು ಯಾಕೆ ಮಾತನಾಡುತ್ತಿಲ್ಲ, ಯಾರಾದರೂ ಕೊಡಲಿಯೇಟು ಹಾಕಿಯಾರೆಂಬ ಭಯವೆ?' ಎಂದು ಕೇಳಿ ಕೊನೆಗೆ ಮಾತು ಕೊಡುತ್ತಾನೆ :


ಹಣ್ಣನು ಕೊಟ್ಟರು ಹೋಗೋನಲ್ಲ

ಎಲೆಗಳ ಹಾಸಲು ಮಲಗೋನಲ್ಲ

ನಿನ್ನಯ ನೆರಳಲೆ ದುಡಿಯುತ್ತೀನಿ

ನಿನ್ನನು ಉಳಿಸಿ ಬಾಳುತ್ತೀನಿ(ಪು.೪೩)

ಮನಸ್ಸನ್ನು ಕರಗಿಸುವ ಒಂದು ಪರಿಕಲ್ಪನೆ ಇದು. 'ಹೇಗಿರುತ್ತೆ?' ಎಂಬ ಕವನದಲ್ಲಿ ಮನುಷ್ಯರ ಆಕ್ರಮಣದಿಂದ ತಪ್ಪಿಸಿಕೊಳ್ಳುವ ಮರಗಳಿಗೆ ರೆಕ್ಕೆ ಬಂದ್ರೆ ಎಂಬ ಕಲ್ಪನೆಯೂ ಇದೇ ಕಾರಣಕ್ಕೆ ಸುಂದರ.


ನಗರದ ಬದುಕಿನಲ್ಲಿ ವಾಹನಗಳ ಹೊಗೆಯ ವಿಷದಿಂದುಂಟಾಗುವ ಪರಿಸರ ನಾಶದ ವಿರುದ್ಧ ಮಕ್ಕಳ ಮಕ್ಕಳ ಮನಸ್ಸನ್ನು ತಿರುಗಿಸುವಂತಹ ಕವನ 'ಸಿಪಾಯಿ'. ನಗರ ಜೀವನದಲ್ಲಿ ಮಕ್ಕಳ ಸೃಜನಶೀಲತೆಗ ಎರವಾಗುವ ಸಂಗತಿಗಳಿರುತ್ತವೆ, ಮತ್ತು ಹಳ್ಳಿಯಲ್ಲಿ ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಕ್ಕಳ ಬದುಕು ಎಲ್ಲಾ ದೃಷ್ಟಿಯಿಂದಲೂ ಶ್ರೀಮಂತವಾಗುತ್ತದೆ ಎಂಬ ಸಂದೇಶವಿರುವ ಕವನ 'ಯಾರು?'


ಅಂಕ ಕೇಂದ್ರಿತವಾದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳನ್ನು ಪುಸ್ತಕದ ಹುಳುಗಳಾಗಿಸುವ ಹೆತ್ತವರು ಮಕ್ಕಳನ್ನು ನಿಸರ್ಗದಿಂದ ದೂರವಾಗಿಸುತ್ತಿರುವುದು ದೊಡ್ಡ ದುರಂತ. 'ಬೆಟ್ಟಕ್ಕೆ ಹೋದ್ರೆ'ಎಂಬ ಕವನವು ತಿಳಿ ಹಾಸ್ಯದೊಂದಿಗೆ ಲಘು ಟೀಕೆಯ ರೂಪದಲ್ಲಿ ಇದನ್ನು ಪ್ರತಿಪಾದಿಸುತ್ತದೆ ,:

ಬೆಟ್ಟಕ್ಕೆ ಹೋದ್ರೆ ಬಯ್ತಾರಪ್ಪ

ತರ್ಲೆ ಮಾಡ್ತಿ ಅಂತಾರಪ್ಪ

ಉಣ್ಣೆ ಉಂಟು ಕಚ್ಚುತ್ತಂತೆ

ಸೊಳ್ಳೆ ಉಂಟು ಚುಚ್ಚುತ್ತಂತೆ..

ಇಂಥ ಹಲವಾರು ಪರಿಣಾಮಕಾರಿ ಚಿತ್ರಗಳಿಂದ ಕೂಡಿದ ತಮ್ಮಣ್ಣ ಬೀಗಾರ ಅವರ 'ಖುಷಿಯ ಬೀಜ' ಮಕ್ಕಳಿಗೆ ಹೇಳಿ ಮಾಡಿಸಿದ ಕವಿತೆಗಳಿಂದ ತುಂಬಿದೆ.ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವುದು ಮಾತ್ರವಲ್ಲದೆ ಸಂತಸದ ಸುಗ್ಗಿಯನ್ನೇ ಉಣ್ಣಿಸಬಲ್ಲ ಬೀಜಗಳು ಇಲ್ಲಿವೆ.


"ಖುಷಿಯ ಬೀಜ" ಮಕ್ಕಳ ಕವನ ಸಂಕಲನ.

ಲೇಖಕರು: ತಮ್ಮಣ್ಣ ಬೀಗಾರ.

ಬೆಲೆ: 50 ರೂ

ಪ್ರಕಟಣೆ: ಪ್ರೇಮಪ್ರಕಾಶನ ಮೈಸೂರು.

9886026085

-ಡಾ. ಪಾರ್ವತಿ ಜಿ. ಐತಾಳ, ಕುಂದಾಪುರ.

ಉಡುಪಿ ಜಿಲ್ಲೆಯ ಕುಂದಾಪುರದ ಭಂಡಾರ್ ಕಾರ್ಸ ಕಾಲೇಜಿನಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾಗಿ 36 ವರ್ಷ ಸುದೀರ್ಘ ಸೇವೆ ಸಲ್ಲಿಸಿ 2017 ರಲ್ಲಿ ನಿವೃತ್ತಿ ಹೊಂದಿರುವ ಪಾರ್ವತಿ ಐತಾಳರು ಸಾಹಿತ್ಯ ರಚನೆಯಲ್ಲಿ ಹಿಂದಿನಿಂದಲೂ ತೊಡಗಿಕೊಂಡಿದ್ದಾರೆ. ಕೇರಳದ ಕಾಸರಗೋಡಿನ ಧರ್ಮತ್ತಡ್ಕ ಗ್ರಾಮದಲ್ಲಿ ಜನಿಸಿದವರಾದ ಇವರು “ಶಿವರಾಮ ಕಾರಂತ ಮತ್ತು ತಕಳಿ ಶಿವಶಂಕರ ಪಿಳ್ಳೆಯವರ ಕಾದಂಬರಿಗಳ ಸ್ತ್ರೀವಾದಿ ತೌಲನಿಕ ಅಧ್ಯಯನ” ಎಂಬ ವಿಷಯದ ಮೇಲೆ ಇಂಗ್ಲೀಷಿನಲ್ಲಿ ಬರೆದ ಮಹಾ ಪ್ರಭಂಧಕ್ಕೆ ಕೇರಳದ ಕಣ್ಣೂರು ವಿಶ್ವವಿಧ್ಯಾಲಯದಿಂದ ಡಾಕ್ಟರೇಟ ಪದವಿ ಪಡೆದಿದ್ದಾರೆ.

ಇವರ ಕೃತಿಗಳ ನಿರೂಪಣಾ ಶೈಲಿ ಮತ್ತು ಗುಣಮಟ್ಟವನ್ನು ನೋಡಿ ಕರ್ನಾಟಕದ ಮುಂಚೂಣಿಯ ಪ್ರಕಾಶಕರಾದ ನವ ಕರ್ನಾಟಕ, ಅಂಕಿತ, ಮನೋಹರ ಗ್ರಂಥ ಮಾಲಾ, ವಸಂತ ಪ್ರಕಾಶನ , ಶ್ರೀನಿವಾಸ ಪುಸ್ತಕ, ದೇಸಿ ಪುಸ್ತಕ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಮೊದಲಾದ ಸಂಸ್ಥೆಗಳು ಪ್ರಕಟಿಸಿವೆ. ಇದುವರೆಗೆ ಪಾರ್ವತಿ ಐತಾಳರ 38 ಅನುವಾದಿತ ಕೃತಿಗಳು, 26 ಸ್ವತಂತ್ರ ಕೃತಿಗಳು ಪ್ರಕಟವಾಗಿವೆ.

ಐದು ಭಾಷೆಗಳನ್ನು ಬಲ್ಲ ಐತಾಳರು ಕರ್ನಾಟಕ ಅನುವಾದ ಅಕಾಡೆಮಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಇವರ ಅನುವಾದಿತ ಕೃತಿಗಳಿಗೆ ಡಾ.ಶಿವರಾಮ ಕಾರಂತ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಹೆಚ್.ವಿ.ಸಾವಿತ್ರಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಲ್ಲಿಕಾ ಹಾಗೂ ವಸುದೇವ ಭೂಪಾಲಂ ದತ್ತಿ ಬಹುಮಾನ ಪಡೆದಿದ್ದಾರೆ. ಸ್ವತಂತ್ರ ಕೃತಿಯಾದ ‘ಒಡಲ ಬೆಂಕಿ’ ಕಾದಂಬರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ, ಮಹಿಳಾ ಚಿಂತನೆಯ ವಿಭಿನ್ನ ನೆಲೆಗಳು ಎಂಬ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ಪ್ರಶಸ್ತಿ ಮುಂತಾದ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಬಹುಮುಖ ಪ್ರತಿಭಾವಂತರಾದ ಇವರು ಆಕಾಶವಾಣಿಯ ನಾಟಕಗಳಲ್ಲಿ ಧ್ವನಿ ನೀಡುವ ಕಲಾವಿದೆಯೂ ಹೌದು. ಸಂಪಾದಕ

108 views0 comments

Comments


bottom of page