top of page

ಭ್ರಷ್ಟ, ಭ್ರಷ್ಟರೆಂದು ಹೀಗಳೆಯುವ ಮುನ್ನ ..... [ ಪ್ರಬಂಧ]


ಪ್ರಭುಗಳಾದ ಮಹಾಜನರೇ,

ಇತ್ತೀಚಿನ ದಿನಗಳಲ್ಲಂತೂ ನನ್ನ ಹಾಗೂ ನನ್ನಂತಹವರ ಬದುಕು ನಿಜವಾಗಿಯೂ ದುಸ್ತರವಾಗುತ್ತಿದೆ. ಬಾಲಕರಾದಿಯಾಗಿ ವೃದ್ಧರವರೆಗಿನವರೆಲ್ಲರೂ ನಮ್ಮನ್ನು ಭ್ರಷ್ಟರೆಂದು ಜರಿದು, ನಮಗೆ ಪ್ರತಿಕ್ರಿಯಿಸಲು ಅವಕಾಶವನ್ನೂ ನೀಡದೆ ಏಕಮುಖವಾಗಿ ಹೀಯಾಳಿಸುತ್ತಿರುವಾಗ ಜನಸೇವಕರಾದ ನಾವು ತಾನೆ ಏನು ಮಾಡಲು ಸಾಧ್ಯ ಹೇಳಿ ಸ್ವಾಮಿ?. ಪ್ರಭುವಿನ ವಿರುದ್ಧ ಧ್ವನಿ ಎತ್ತುವುದು ರಾಜದ್ರೋಹವಾಗುತ್ತದೆಂಬ ಭಯದಿಂದ ಸೇವಕರಾದ ನಾವು ನಮ್ಮ ಎಲ್ಲಾ ನೋವನ್ನು ಬಚ್ಚಿಟ್ಟುಕೊಂಡು ಒಳಗೊಳಗೆ ನವೆಯುತ್ತಿದ್ದೇವೆ.


ಅದೂ ಅಲ್ಲದೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದೇ ಕರೆಯುಲ್ಪಡುವ ಪತ್ರಿಕಾ ಮಾಧ್ಯಮವಂತೂ ನಮ್ಮ ಮೇಲೆ ನಿರಂತರ ದಾಳಿಮಾಡಿ ತೇಜೋವಧೆ ಗೈಯುವುದು ತನ್ನ ಸಂವಿಧಾನದತ್ತ ಹಕ್ಕೆನ್ನುವಂತೇ ವರ್ತಿಸುತ್ತಿದೆ. ಪತ್ರಿಕೆಗಳು ಅವಕಾಶ ಸಿಕ್ಕಾಗಲೆಲ್ಲ ನಮ್ಮ ಬೆನ್ನುಹತ್ತಿ ಸಿಕ್ಕ ಸಿಕ್ಕಲೆಲ್ಲಾ ನಮ್ಮನ್ನು ನಗ್ನಗೊಳಿಸುತ್ತಾ ಕೇಕೇ ಹಾಕಿ ಅದರಲ್ಲಿಯೇ ವಿಲಕ್ಷಣ ತೃಪ್ತಿಯನ್ನು ಕಾಣುತ್ತಿವೆ. ನಮ್ಮ ವಿರುದ್ಧ ಇದ್ದುದನ್ನು ಅಥವಾ ಇಲ್ಲದ್ದನ್ನು ಜೋಡಿಸಿ ಕಲ್ಪನೆಯ ರಂಜಿತ ಕತೆಗಳ ಮೂಲಕ ಹೆಣೆದು ಓದುಗರಿಗೆ ಧಾರಾವಾಹಿಯ ರೂಪದಲ್ಲಿ ಉಣಬಣಿಸುತ್ತಾ ತಮ್ಮ ಓದುಗರ ಸಂಖ್ಯೆಯನ್ನು ಬೆಳೆಸಿಕೊಳ್ಳುತ್ತಿವೆ. ಅಕ್ಷರದ ಜಾತ್ರೆಯಲ್ಲಿ ವ್ಯಂಗ್ಯ ಚಿತ್ರಗಳ ತೇರನ್ನು ಕಟ್ಟಿ ಅದರಲ್ಲಿ ನಮ್ಮನ್ನು ವಿರೂಪವಾಗಿ ಕೂಡಿಸಿ ನಾಡ ತುಂಬೆಲ್ಲಾ ಉದಯದಿಂದ ಅಸ್ತದವರೆಗೆ ಮೆರವಣಿಗೆ ಗೈಯುವ ಅವರ ಕ್ರಿಯೆಯಂತೂ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಕೆಲವು ಪತ್ರಿಕೆಗಳಂತೂ ನಮಗೆ ಅಡ್ಡ ಹೆಸರುಗಳನ್ನು ಇಟ್ಟು ಅಥವಾ ಇದ್ದ ಹೆಸರುಗಳನ್ನು ವಿರೂಪಗೊಳಿಸಿ ಉದ್ದುದ್ದ ಲೇಖನಗಳನ್ನು ಬರೆದು ಸಾಮಾನ್ಯರು ರಸ್ತೆ ಬೀದಿಗಳಲ್ಲಿ ಆಡಿಕೊಳ್ಳುವಂತೆ ನಮ್ಮನ್ನು ನಗೆಪಾಟಲು ಮಾಡುತ್ತಿವೆ. ಇನ್ನು ಅವುಗಳ ವಿರುದ್ಧ ನಾವು ಧ್ವನಿ ಎತ್ತಿದರೆ ಮುಗಿಯಿತು. ಪತ್ರಿಕೆಗಳು ಅದನ್ನು ಮಾಧ್ಯಮದ ಮೇಲಿನ ಹಲ್ಲೆ ಎಂದು ಕರೆದು ಮತ್ತಿಷ್ಟು ಟೀಕೆ-ಟಿಪ್ಪಣಿಗಳ ಕೂರಂಬುಗಳನ್ನು ನಮ್ಮ ಮೇಲೆ ಎಸೆಯುತ್ತವೆ. ನಾವೇ ಸಂಸತ್ತಿನಲ್ಲಿ ಸೃಷ್ಟಿಸಿದ ಮಾಹಿತಿ ಹಕ್ಕು ಕಾಯದೆಯು ಇಂದಿನ ದಿನಗಳಲ್ಲಿ ನಮಗೇ ತಿರುಮಂತ್ರವಾಗಿ ಪರಿಣಮಿಸಿ ನಮ್ಮ ಕೈಗಳನ್ನೇ ಕಟ್ಟು ಹಾಕುತ್ತಿದೆ. ಇನ್ನು ಉಳಿದಿರುವುದು ಮಾನನಷ್ಟ ಮೊಕದ್ದಮೆ. ಆದರೆ ಈ ಗುರಾಣಿ ಹಿಡಿದು ಮುನ್ನುಗ್ಗಿದರೆ ಅದಕ್ಕೆ ಪ್ರತಿಕ್ರಿಯೆ ಏನು ಗೊತ್ತ್ತಾ? ‘ಮಾನ ಇದ್ದವರು ಮಾತ್ರ ಮಾನನಷ್ಟ ಮೊಕದ್ದಮೆ ಹಾಕಬಹುದು; ಆದರೆ ಮಾನಹೀನರು ಮಾನನಷ್ಟ ಮೊಕದ್ದಮೆ ಹಾಕಲು ಹೊರಟರೆ ಅದೊಂದು ಈ ಶತಮಾನದ ದೊಡ್ಡ ಜೋಕು’ ಎಂದು ಪತ್ರಿಕೆಗಳು ಬಣ್ಣಿಸಿ ನಮ್ಮನ್ನೇ ಲೇವಡಿಗೈಯುತ್ತವೆ. ಹಿಂದೊಮ್ಮೆ ಕನ್ನಡದ ಒಂದು ಪತ್ರಿಕೆಯಲ್ಲಿ ‘ಸಾರ್, ಮಂತ್ರಿಗಳಿಗೆ ಏಕೆ ಮಾನಪತ್ರ ಸಲ್ಲಿಸುತ್ತಾರೆ’ ಎಂದು ವಾಚಕರೊಬ್ಬರು ಕೇಳಿದ ಪ್ರಶ್ನೆಗೆ “ ನಮ್ಮ ದೇಶದ ಸಂಪ್ರದಾಯದ ಪ್ರಕಾರ ಯಾವುದು ಯಾರಲ್ಲಿ ಇರುವದಿಲ್ಲವೋ ಅವರಿಗೆ ಅದನ್ನು ನೀಡಬೇಕಾದುದು ನಮ್ಮ ಕರ್ತವ್ಯ. ಹೀಗಾಗಿ ಮಂತ್ರಿಗಳಿಗೆ ಮಾನಪತ್ರ ನೀಡುತ್ತಾರೆ” ಎಂದು ‘ಉತ್ತರಭೂಪ’ ತನ್ನ ಕ್ರೂರ ವ್ಯಂಗ್ಯದ ಬಾಂಬನ್ನು ನಮ್ಮ ಮೇಲೆ ಎಸೆಯುವ ಮಟ್ಟಿಗೆ ಹೋಗಿದ್ದಾನೆ. ಹೀಗಿರುವಾಗ ನಾವು ನಿಸ್ಸಹಾಯಕರಾಗದೆ ಬೇರೆ ಗತಿಯೇ ಇಲ್ಲದ ಹಾಗೆ ಆಗಿದೆ.

ಹೀಗಿದ್ದರೂ ನಾವು ಪತ್ರಿಕೆಗಳ ಹೇಳಿಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಪತ್ರಿಕೆಗಳು ಏನು ಬೇಕಾದರೂ ಬರೆಯಲಿ; ಅದರಿಂದ ಅಂತಹ ದೊಡ್ಡ ಪ್ರಮಾಣದ ಹಾನಿ ನಮಗೆ ಉಂಟಾಗುವದಿಲ್ಲವೆಂಬುದು ಈ ಆರು ದಶಕಗಳ ನಮ್ಮ ಸಾರ್ವತ್ರಿಕ ಚುನಾವಣೆಗಳೇ ನಮಗೆ ದೃಢಪಡಿಸಿಕೊಟ್ಟಿವೆ. ಈ ದೇಶದಲ್ಲಿ ನಿರಕ್ಷರಿಗಳೆ ಹೆಚ್ಚಿರುವಾಗ ಮತ್ತು ಅವರೇ ನಮ್ಮ ಆಪದ್ಬಾಂಧವರಾಗಿರುವವರೆಗೆ ಪತ್ರಿಕೆಗಳು ಏನೇ ಬರೆದುಕೊಂಡರೂ ಅದರಿಂದ ನಮ್ಮ ಮತಪೆಟ್ಟಿಗೆಯ ಮೇಲೆ ಹೆಚ್ಚಿನ ಪರಿಣಾಮವಾಗುವದಿಲ್ಲವೆಂಬ ನೈಜಸತ್ಯದ ಅರಿವು ನಮಗಾಗಿದೆ. ಹಾಗಾಗಿಯೇ ನಾವು ಇಲ್ಲಿಯವರೆಗೆ ಮರುನುಡಿಯದೆ ನಮ್ಮ ‘ಕರ್ತವ್ಯ’ವನ್ನು ನಿಭಾಯಿಸಿಕೊಂಡು ನಮ್ಮಷ್ಟಕ್ಕೇ ನಾವು ಇದ್ದೇವೆ.


ಆದರೆ ನಮ್ಮ ನೆಮ್ಮದಿ ಬಹುಕಾಲ ಉಳಿಯುವಂತೆ ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮದ ಜೊತೆಯಲ್ಲೇ ನಮ್ಮ ವಿರುದ್ಧ ಮತ್ತೊಬ್ಬ ವೈರಿ ತಲೆ ಎತ್ತಿ ನಿಂತಿದ್ದಾನೆ. ಅದೇ ವಿದ್ಯುನ್ಮಾನ ಮಾಧ್ಯಮ. ಅಣ್ಣ ‘ಮುದ್ರಾರಾಕ್ಷಸ’ನಿಗೆ ಅಕ್ಷರಗಳೇ ಆಯುಧವಾದರೆ ತಮ್ಮ ‘ವಿದ್ಯುನ್ಮಾನ’ನು ಚಿತ್ರ ಮತ್ತು ಧ್ವನಿಗಳೆಂಬ ಎರಡು ಪ್ರಭಲ ಅಸ್ತ್ರಗಳನ್ನು ನಮ್ಮಿಂದಲೇ ವರವಾಗಿ ಪಡೆದಿದ್ದಾನೆ. ವಿದ್ಯುನ್ಮಾನವು ಹೊಸ ತಂತ್ರಜ್ಞಾನವೆಂದು ನಾವು ಭಾವಿಸಿ ಅನುಮತಿ ನೀಡಿದ್ದು ತಪ್ಪಾಯಿತೆಂದು ಈಗ ನಮಗೆ ಭಾಸವಾಗುತ್ತಿದೆ. ಪ್ರಾರಂಭದಲ್ಲಿ ಕೇವಲ ಸಂಗೀತ, ಕಲೆ, ಸಿನೇಮಾ, ಆಟೋಟಗಳಿಗೆ ಸೀಮಿತವಾಗಿದ್ದ ವಿದ್ಯುನ್ಮಾನ ವಾಹಿನಿಗಳು ಇಂದು ತಮ್ಮ ಕಂಬಂಧಬಾಹುಗಳನ್ನು ನಮ್ಮ ಹೊಸ್ತಿಲವರೆಗೂ ವಿಸ್ತರಿಸುತ್ತಿವೆ. ತಮ್ಮ ಕ್ಯಾಮರಾಗಳಲ್ಲಿ ನಮ್ಮನ್ನು ಸೆರೆ ಹಿಡಿದು ನಮ್ಮ ಪ್ರಭುಗಳ ಮನೆಯ ಒಳಗಡೆಗೆ ತಂದು ಅವನ ಎದುರೇ ನಮ್ಮನ್ನು ನಗ್ನಗೊಳಿಸಿ ನಿಲ್ಲಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಈ ವಾಹಿನಿಗಳ ಹಾವಳಿ ಎಷ್ಟು ಪ್ರಭಲವಾಗಿದೆಯೆಂದರೆ ಅವುಗಳ ಕಣ್ಣುತಪ್ಪಿಸಿ ನಾವು ದೊಡ್ಡದಾಗಿ ಉಸಿರಾಡುವುದೂ ಕಷ್ಟವಾಗಿದೆ. ಸಧ್ಯ ನಮ್ಮ ಪುಣ್ಯ - ನಮ್ಮ ಬೆಡ್‍ರೂಮ್ ಮತ್ತು ಟಾಯಲೆಟ್ ಈ ಎರಡು ಪ್ರದೇಶಗಳಲ್ಲಾದರೂ ನಾವು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವ ಭಾಗ್ಯ ಉಳಿದಿದೆ. [ಕ್ಷಮಿಸಿ, ಇತ್ತೀಚೆಗೆ ಮಂತ್ರಿಯೋರ್ವರ ಬೆಡ್‍ರೂಮಿನ ದೃಶ್ಯಗಳೂ ಸಹ ಅನಾವರಣಗೊಂಡಿರುವದನ್ನು ಪತ್ರಿಕೆಯಲ್ಲಿ ನೋಡುತ್ತೇವೆ. ಅಲ್ಲವೆ !] ಇನ್ನು ಕೆಲವೊಮ್ಮೆ ಚರ್ಚೆ-ಸಂವಾದಗಳ ನೆವದಲ್ಲಿ ನಮಗೆ ಸ್ಟುಡಿಯೋಗೆ ಕರೆಯಿಸಿ ಅಲ್ಲಿ ನಮನ್ನು ಪಾಟಿಸವಾಲಿಗೆ ಸಿಲುಕಿಸುವುದಲ್ಲದೆ ಸಾರ್ವಜನಿಕರನ್ನೂ ಸಂಪರ್ಕಿಸಿ ಅವರ ಮುಖಾಂತರವೂ ನಮ್ಮ ಮೇಲೆ ಪ್ರಶ್ನೆಗಳ ಬಾಣಗಳನ್ನು ಆಹ್ವಾನಿಸಿ ಮಜಾ ನೋಡುತ್ತವೆ. ನಮ್ಮ ಮೇಲೆ ಅಣಕವಾಡಗಳನ್ನು ರಚಿಸಿ ಅಥವಾ ಸಿನೇಮಾ ಹಾಡುಗಳನ್ನು ಹಾಕಿ ನಮ್ಮನ್ನು ಲೇವಡಿಗೈಯುತ್ತವೆ. ಒಟ್ಟಾರೆ ನಮ್ಮ ಋಣಾತ್ಮಕ ಅಂಶಗಳನ್ನು ಬಂಡವಾಳವಾಗಿಸಿಕೊಂಡು ತನ್ಮೂಲಕ ತಮ್ಮ ಕಾರ್ಯಕ್ರಮಗಳ ರಸಗವಳವನ್ನು ಜನರಿಗೆ ಉಣಬಡಿಸುತ್ತಾ ತಮ್ಮ ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಳ್ಳುತ್ತವೆ. ನಮ್ಮಿಂದಲೇ ಶಾಸನಬದ್ಧ ಅನುಕೂಲತೆಯನ್ನು ಪಡೆದು ಇಂದು ಭಸ್ಮಾಸುರನಂತೆ ಬೆಳೆದು ನಮ್ಮನ್ನು ನಾಶಗೊಳಿಸುವ ಹುನ್ನಾರ ನಡೆಸಿವೆ. ಆದರೆ ಯಾವ ವಿಷ್ಣುವು ಮೋಹಿನಿ ರೂಪ ತಳೆದು ನಮ್ಮನ್ನು ರಕ್ಷಿಸುತ್ತಾನೋ ದೇವರೇ ಬಲ್ಲಾ!. ಯದಾ ಯದಾಹಿ ಧರ್ಮಸ್ಯ ....


ಪತ್ರಿಕೆ ಹಾಗೂ ಟಿ.ವಿ.ಗಳಲ್ಲಿ ಕಾಣಬರುವ ಟೀಕೆ-ಟಿಪ್ಪಣಿಗಳಿಗೆ ದಯವಿಟ್ಟು ಕಿವಿಗೊಡಬಾರದಾಗಿ ಮಹಾ ಪ್ರಭುಗಳಾದ ಜನತಾ ಜರ್ನಾಧನರಾದ ತಮ್ಮಲ್ಲ್ಲಿ ನನ್ನ ನಮ್ರ ವಿನಂತಿ. ಯಾಕೆಂದರೆ ಯಾರ ಮೇಲಾದರೂ ಆರೋಪ ಹೊರಿಸುವುದು ಸುಲಭ. ಆದರೆ ಆರೋಪಗಳ ಹಿಂದೆ ವಾಸ್ತವಿಕತೆಯ ಸತ್ಯವು ಉಸಿರುಗಟ್ಟಿ ಕುಳಿತಿರುತ್ತದೆ. ಆ ಸತ್ಯವನ್ನು ಪ್ರಭುಗಳಾದ ತಮ್ಮ ಎದುರು ನಾನು ನಿವೇದಿಸಬಯಸುತ್ತೇನೆ. ಅವುಗಳನ್ನು ತಾವು ಸಮಚಿತ್ತದಿಂದ ಆಲಿಸುತ್ತೀರಾ.

ನೋಡಿ ಸ್ವಾಮಿ, ಜನಸೇವಕನಾಗುವುದೆಂದರೆ ಒಬ್ಬ ಕಲಾವಿದನೊ, ಸಂಗೀತಗಾರನೋ, ಕವಿಯೋ, ವಿಜ್ಞಾನಿಯೋ ಅಥವಾ ಒಬ್ಬ ಸಂತನೋ ಆಗುವಷ್ಟು ಸುಲಭವಲ್ಲ. ಸಂಗೀತ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮಿಕ ಚಿಂತನೆ ಮುಂತಾದವುಗಳಲ್ಲಿ ಸಾಧಕನ ಹುಟ್ಟಾ ಪ್ರತಿಭೆ, ಆಸಕ್ತಿ ಮತ್ತು ಪ್ರಯತ್ನ ಇವೆಲ್ಲವೂ ಮುಪ್ಪುರಿಗೊಂಡಿರುತ್ತವೆ. ತಂದೆ, ತಾಯಿ, ಬಂಧು, ಗುರು, ಸ್ನೇಹಿತ - ಹೀಗೆ ಯಾರ್ಯಾರದೋ ಪ್ರೋತ್ಸಾಹ, ಪ್ರೇರಣೆಗಳು ಅಂತಹವರಿಗೆ ದೊರಕುತ್ತದೆ. ಸಮಾಜವು ಸಹ ಆರಂಭದಿಂದಲೂ ತನ್ನದೇ ಆದ ಆಸರೆಯನ್ನು ಅಂತವರಿಗೆ ನೀಡುತ್ತದೆಯಷ್ಟೇ ಅಲ್ಲಾ ಅವರ ಪ್ರತಿ ಹೆಜ್ಜೆಗೂ ಬೆಂಗಾವಲಾಗಿ ನಿಲ್ಲುತ್ತದೆ. ಆದರೆ ಒಬ್ಬ ಬಾಲಕ ತಾನು ರಾಜಕಾರಣಿಯಾಗಿ ಜನಸೇವೆ ಮಾಡುತ್ತೇನೆಂದು ಹೇಳಲಿ - ಆತನ ತಂದೆ-ತಾಯಿಗಳು ಬಡಿಗೆ ಹಿಡಿದು ನಿಲ್ಲುತ್ತಾರೆ; ‘ ನೀನು ನಿಷ್ಪ್ರಯೋಜಕ, ಮನೆ ಬಿಟ್ಟು ತೊಲಗು’ ಎಂದು ಗದರಿಸುತ್ತಾರೆ. ಎಲ್ಲಾ ತಂದೆ-ತಾಯಿಗಳಿಗೂ ತಮ್ಮ ಮಗು ವಿದ್ಯೆ ಕಲಿತು ಒಬ್ಬ ವೈದ್ಯನೋ, ಇಂಜನಿಯರನೋ ವಿಜ್ಞಾನಿಯೋ, ಚಾರ್ಟರ್ಡ ಅಕೌಂಟೆಂಟ್ ಅಥವಾ ದೊಡ್ಡ ಉದ್ದಿಮೆದಾರನೋ ಆಗಲೀಯೆಂಬ ಮಹಾತ್ವಾಕಾಂಕ್ಷ್ಷೆ ಇರುತ್ತದೆ. ಕೊನೆ ಪಕ್ಷ ತಮ್ಮ ಮಗ/ಮಗಳು ಸರಕಾರಿ ಗುಮಾಸ್ತನೋ, ಪೇದೆಯೋ, ಪ್ಯೂನ್‍ನೋ ಆದರೂ ಆಗಲಿ ಆದರೆ ಜನಸೇವಕನು ಆಗುವುದು ಮಾತ್ರ ಬೇಡ ಎಂಬುದು ಅವರ ಮನದವಾಂಛೆ. ಒಟ್ಟಾರೆ ಜನಸೇವೆ ಮಾಡುವುದು ನಿಷ್ಪಲದಾಯಕ ಎಂಬುದು ಅವರೆಲ್ಲರ ಮನದ ಇಂಗಿತ. ಹೀಗಿರುವಾಗ ಜನಸೇವಕನಾಗುವುದು ಒಂದು ಅಪರೂಪದ ಯೋಗವೆಂಬುದು ನನ್ನ ಪ್ರಮಾಣಿಕ ನಂಬುಗೆ. ಇಂಗ್ಲೀಷ ಲೇಖಕನೊಬ್ಬ ‘ Politics is the last resort of scoundrel’ ಅಂದರೆ ‘ರಾಜಕಾರಣವು ಫಟಿಂಗರ ಕೊನೆಯ ಆಶ್ರಯಧಾಮ’ ಎಂದು ಹೀಯಾಳಿಸಿದ್ದನ್ನು ನಾನು ಕಟುವಾಗಿ ವಿರೋಧಿಸುತ್ತೇನೆ. ಅವನಿಗೆ ನನ್ನ ಮೊದಲ ಪ್ರಶ್ನೆ ಇಷ್ಟೇ – ರಾಜಕಾರಣವು ಯಾಕೆ ಅವರ ಮೊದಲ ಆಶ್ರಯತಾಣವಾಗಬಾರದು? ಇಂದು ಈ ದೇಶದ ಎಲ್ಲಾ ಆಗು-ಹೋಗುಗಳು ಜನಸೇವಕರಿಂದ ನಿರ್ಧರಿತವಾಗುವಾಗ ಅದನ್ನು ಕೊನೆಯ ಆಶ್ರಯಧಾಮವೆಂದು ಕರೆದಿರುವುದು ಖಂಡಿತ ತಪ್ಪು. ನನ್ನ ದೃಷ್ಟಿಯಲ್ಲಿ ರಾಜಕಾರಣವು ಒಂದು ಅಪರೂಪ ಸಾಧ್ಯವಾದ ಸಾಧನೆ.


ಇನ್ನು ರಾಜಕಾರಣಿಗಳನ್ನು ಸ್ವಾರ್ಥಿಗಳೆಂದು ಆರೋಪಿಸುವಾಗಲೆಲ್ಲ ನನಗೆ ನಿಜವಾಗಿಯೂ ಖೇದವೆನಿಸುತ್ತದೆ. ರಾಜಕಾರಣಿ ಯಾ ಜನಸೇವಕನಾಗುವುದು ಕೇವಲ ಒಂದೆರಡು ವರುಷಗಳಲ್ಲಿ ಆಗುವ ಪ್ರಕ್ರಿಯೆಯಲ್ಲ. ಅದು ನಿರಂತರ ಹೋರಾಟ, ಛಲ ಬಿಡದ ಪ್ರಯತ್ನ ಮತ್ತು ಗುರಿಯೆಡೆಗೆ ತದೇಕ ಚಿತ್ತದಿಂದ ನಡೆಸುವ ತಪಸ್ಸಿನ ಫಲವೆಂದರೆ ಅತಿಶಯೋಕ್ತಿಯೇನೂ ಇಲ್ಲ. ಜನರು ಸಾಮಾನ್ಯವಾಗಿ ನಿರಂತರವಾಗಿ ಹರಿಯುವ ಆದಾಯದ ಸೆಲೆಯನ್ನು ನೆಚ್ಚ್ಚಿಕೊಂಡು ಅದರೆಡೆಗೆ ಮುನ್ನುಗ್ಗುತ್ತಿರುವ ಈ ಸಮಾಜದಲ್ಲಿ ಒಬ್ಬ ರಾಜಕಾರಣಿ ಉದ್ಭವವಾಗುವುದು ಅಷ್ಟು ಸಣ್ಣ ಮಾತೇನೂ ಅಲ್ಲ. ಸದಾ ಅನಿಶ್ಚಿತತೆಯ ಗೂಡಾದ ರಾಜಕೀಯ ವೃತ್ತಿಯಲ್ಲಿ ನಮ್ಮ ಬದುಕಿಗೆ ಆಸರೆ ನೀಡುವುದಕ್ಕೆ ‘ಯೋಗಕ್ಷೆಮ ಮಯಾಮ್ಯಹಂ’ ಎಂದು ಉದ್ಘೋಷಿಸುವ ಯಾವ ವಿಮಾ ಕಂಪನಿಗಳೂ ಮುಂದೆ ಬರುವದಿಲ್ಲ. ನಮ್ಮ ಬದುಕಿಗೆ ನಾವೇ ಕಾರಣರು; ಗೆದ್ದಾಗ ನಮಗೆ ಜೈ - ಎನ್ನುವ ಹಿಂಬಾಲಕರು. ಇನ್ನು ಬಿದ್ದಾಗ ‘ಮಾಡಿದುಣ್ಣೋ ಮಾರಾಯ’ ಎಂದು ಹೇಳಿ ಕೈ ತೊಳೆದುಕೊಂಡು ಗೆದ್ದ ಕುದುರೆಯ ಬಾಲ ಹಿಡಿಯುತ್ತಾರೆ. ಹೀಗಿರುವಾಗ ಜನಸೇವಕರಾದ ನಾವು ನಮ್ಮ ‘ಸೇವೆ’ಯ ಕುರಿತು ಸ್ವಲ್ಪವಾದರೂ ಚಿಂತಿಸುವುದು ತಪ್ಪೇ?. ನಾವು ಜೀವನ ಪೂರ್ತಿ ಜನಸೇವಕರಾಗಿ ಮುಂದುವರಿಯುವುದಕ್ಕೆ ಬೇಕಾದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು ಯಾವ ರೀತಿಯಲ್ಲಿ ತಪ್ಪು ಎಂಬುದು ನನಗಂತೂ ಅರ್ಥವಾಗಿಲ್ಲ. ಶ್ರೀಕೃಷ್ಣಪರಮಾತ್ಮನು ಗೀತೆಯಲ್ಲಿಯೇ ಹೇಳಿಲ್ಲವೇ? ‘ಉದ್ಧರೇತ್ ಆತ್ಮನಾತ್ಮಾನಾಂ’ ಎಂದು. ಅದಕ್ಕಾಗಿಯೇ ನಮ್ಮ ಉದ್ಧಾರಕ್ಕೆಂದು ನಾವು ಅಲ್ಲಲ್ಲಿ ಒಂದಿಷ್ಟು ಸೈಟು, ಹಣ ಮಾಡಿಕೊಳ್ಳುವುದು ಯಾವುದೇ ದೃಷ್ಟಿಯಲ್ಲಿಯೂ ತಪ್ಪಿಲ್ಲವೆಂದು ನಾನು ಭಾವಿಸಿದ್ದೇನೆ.


ರಾಜಕಾರಣಿಗಳಲ್ಲಿ ನೈತಿಕತೆ ಕಡಿಮೆ ಆಗಿದೆ; ಭ್ರಷ್ಠತೆ ಹೆಚ್ಚಿದೆಯೆಂದು ಆರೋಪಿಸುವುದನ್ನು ನಾನು ಅಲ್ಲಲ್ಲಿ ಕೇಳುತ್ತಿರುತ್ತೇನೆ. ನನಗಂತೂ ಈ ವಾದದಲ್ಲಿ ಹುರುಳಿಲ್ಲವೆಂದು ಅನಿಸುತ್ತದೆ. ರಾಜಕಾರಣಿಯೊಬ್ಬನೇ ಭ್ರಷ್ಟ; ಸಮಾಜವು ನೀತಿ, ಧರ್ಮಗಳಿಂದ ತುಂಬಿ ತುಳುಕುತ್ತಿದೆ – ಎಂಬುದು ಸತ್ಯವಾದರೆ ಈ ಮೇಲಿನ ಆರೋಪದಲ್ಲಿ ಸತ್ಯವಿದೆಯೆಂದು ಒಪ್ಪಬಹುದು. ಒಬ್ಬ ಜನಸೇವಕ ಜನರ ಮಧ್ಯದಿಂದಲೇ ಎದ್ದು ಬರುವಾಗ ಆತನಿಗೂ ಅಲ್ಲಲ್ಲಿ ಕೆಸರು ಅಂಟಿಕೊಳ್ಳುವುದು ಸಹಜ. ಒಮ್ಮೆ ಆತ ಅವೆಲ್ಲವನ್ನೂ ಕೊಡವಿ ಮೇಲೆದ್ದು ನಿಂತು ಸತ್ಯಹರಿಶ್ಚಂದ್ರನ ಅಪರಾವತಾರವಾಗುವುದು ಸುಲಭ ಸಾಧ್ಯವಿಲ್ಲ. ಅಂದು ಹರಿಶ್ಚಂದ್ರನನ್ನು ದೇಶಭ್ರಷ್ಠನಾಗಿ ಮಾಡಿ ಮಸಣ ಕಾಯುವಂತೆ ಮಾಡಿದ ಎಲ್ಲಾ ಪಿತೂರಿಗಳು ಇಂದು ಸಹ ನಮ್ಮ ಹಿಂದೆಯೇ ಸದಾ ನಡೆಯುತ್ತಿರುತ್ತವೆ. ಇಂದಿನ ಕಾಲದಲ್ಲಿ ಯಾವುದೇ ಸತ್ಯಹರಿಶ್ಚಂದ್ರನು ಸ್ಥಳೀಯ ಪಂಚಾಯತದ ಚುನಾವಣೆಯಲ್ಲಿ ನಿಂತರೂ ಇಡಗಂಟು ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ಗ್ಯಾರಂಟಿ. ಹೋಗಲಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಲೋಕಲ್ ಚುನಾವಣೆಗೂ ನಿಂತಿಲ್ಲವೆಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅವರು ಆಯ್ಕೆಯಾಗದಿರುವ ಸಾಧ್ಯತೆ. ಇಂದಿನ ಗಾಂಧಿಯೆಂದೇ ಬಿಂಬಿತವಾಗಿರುವ ಅಣ್ಣಾ ಹಜಾರೆಯವರಿಗೆ ನನ್ನ ಸಹೋದ್ಯೋಗಿ ಮಿತ್ರರೊಬ್ಬರು, “ ಉಪವಾಸ ಕೈ ಬಿಡಿ; ಚುನಾವಣೆಗೆ ಬನ್ನಿ” ಎಂದಾಗ ಅಣ್ಣಾವರು ಆ ಪಂಥಾವಾಹ್ವಾನವನ್ನು ಸ್ವೀಕರಿಸಲಿಲ್ಲ. ಇದಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲವೆಂದು ನಾನು ಭಾವಿಸಿದ್ದೇನೆ.


ಬದುಕು ನೀರಿನ ಮೇಲಿನ ಗುಳ್ಳೆಯೆಂಬುದು ಅನುಭಾವಿಗಳ ಮಾತು. ನೀರಿನ ಮೇಲಿನ ಗುಳ್ಳೆಯು ಎಷ್ಟು ನಶ್ವರವೋ ಅದೇ ರೀತಿ ನಮ್ಮ ಬದುಕು ಎಂಬುದು ಅದರ ಅಂತರಾರ್ಥ. ಈ ಮಾತನ್ನು ನಾನು ಸದಾ ಒಪ್ಪಿಕೊಂಡು ಜನಸೇವೆಯ ನನ್ನ ಬದುಕಿನಲ್ಲಿಯೂ ಅದನ್ನು ಅನ್ವಯಿಸಿಕೊಂಡಿದ್ದೇನೆ. ಪ್ರಭುಗಳಿಂದ ಸಾಮಾನ್ಯವಾಗಿ ಐದು ವರುಷಗಳಿಗೊಮ್ಮೆ ಪ್ರದತ್ತವಾಗುವ ಅಧಿಕಾರವು ನಮ್ಮ ಪಾಲಿಗೆ ಶಾಶ್ವತವಲ್ಲವೆಂಬುದನ್ನು ನಾವು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿಯೇ ಅಧಿಕಾರವೆಂಬ ಈ ಜಂಗಮ ಲಕ್ಷ್ಮಿಯನ್ನು ಸ್ಥಾವರಗೊಳಿಸುವುದಕ್ಕೆ ಜನಸೇವಕನು ಸದಾ ಕಾರ್ಯಶೀಲನಾಗಬೇಕಾಗುತ್ತದೆ. ಪ್ರತಿ ಐದು ವರುಷಗಳಿಗೊಮ್ಮೆ ಕೆಲವು ಬಾರಿ ಅದಕ್ಕೂ ಕಡಿಮೆ ಅವಧಿಯಲ್ಲಿ ಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕೋಟ್ಯಾಂತರ ರೂಪಾಯಿ ಹಣ ಚೆಲ್ಲ ಬೇಕಾಗುತ್ತದೆ. ಕೆಲವು ಬಾರಿ ನಮ್ಮ ಪಕ್ಷ ಅಥವಾ ನಮ್ಮಿಂದ ಮುಂದೆ ಲಾಭವಾದೀತೆಂಬ ಆಕಾಂಕ್ಷೆಯಿಂದ ಉದ್ದಿಮೆದಾರರು ಅಥವಾ ಗುತ್ತಿಗೆದಾರರು ನಮಗೆ ನೆರವು ನೀಡುತ್ತಾರೆ. ಆದರೆ ಅದನ್ನು ನೆಚ್ಚಿಕೊಂಡು ಕೂಡುವ ಹಾಗಿಲ್ಲ. ಅದಕ್ಕಾಗಿಯೇ ಯಾವ ಚಣದಲ್ಲಾದರೂ ಎರಗಬಹುದಾದ ಚುನಾವಣೆಯೆಂಬ ಹದ್ದಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಲಕ್ಷ್ಮಿಯ ಕೃಪಾಕಟಾಕ್ಷ ಬೇಕಾಗುತ್ತದೆ. ಚುನಾವಣೆಯ ಗೆಲುವಿಗೆ, ಕೆಲವೊಮ್ಮೆ ಅಧಿಕಾರ ಹಿಡಿಯಲು ‘ಅಪರೇಶನ್’ಗಳ ಮೂಲಕ ಸದಸ್ಯರನ್ನು ನಮ್ಮ ಪಕ್ಷಕ್ಕೆ ಕರೆತರಲು, ಇನ್ನು ಕೆಲವು ಸಲ ಅವಶ್ಯಬಿದ್ದರೆ ಹೊಸ ಪಕ್ಷ ಕಟ್ಟಲು ನಿಮ್ಮ ಹತ್ತಿರ ಲಕ್ಷ್ಮಿ ಇರಲೇಬೇಕು. ಲಕ್ಷ್ಮಿಯೇ ಜನಸೆವಕರ ಮನೆ- ದೇವರೆಂದರೆ ತಪ್ಪೇನೂ ಇಲ್ಲ. ಲಕ್ಷ್ಮಿಯ ಅವಕೃಪೆಗೆ ಒಳಗಾದವನಿಗೆ ಅಧಿಕಾರವೆಂಬುದು ಮರಿಚಿಕೆ.


ಇತ್ತೀಚಿನ ದಿನಗಳಲ್ಲಿ ಕುಟುಂಬ ರಾಜಕಾರಣವು ಅತಿಯಾಗುತ್ತಿದೆಯೆಂಬ ಟೀಕೆ ಅಲ್ಲಲ್ಲಿ ಕೇಳಿಬರುತ್ತಿದೆ. ಜನಸೇವಕರ ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಮತ್ತು ಇದರ ಫಲವಾಗಿ ಸ್ವಜನಪಕ್ಷಪಾತ ನಡೆಯುತ್ತಿರುವ ಆಕ್ಷೇಪಗಳು ಪತ್ರಿಕೆಗಳ ಮುಖ ಪುಟಗಳನ್ನು ಆಕ್ರಮಿಸುತ್ತಿರುವ ಹಲವಾರು ಸನ್ನಿವೇಶಗಳು ವರದಿಯಾಗುತ್ತಿವೆ. ಆದರೆ ಇಂತಹ ಪರಿಸ್ಥಿತಿಗೆ ಕಾರಣವಾದರೂ ಏನು – ಎಂಬುದನ್ನು ತಾವು ನಿರ್ಭಾವುಕರಾಗಿ ಪರಿಶೀಲಿಸಬೇಕಾಗುತ್ತದೆ. ರಾಜಕಾರಣಿ ಅರ್ಥಾತ್ ಜನಸೇವಕನ ಪೂರ್ತಿ ಆಯುಷ್ಯ ಮತ್ತು ಅಮೂಲ್ಯವಾದ ಬದುಕು ಜನತಾಜನಾರ್ಧನನ ‘ಕೈಂಕರ್ಯ’ದಲ್ಲಿಯೇ ಕಳೆದು ಹೋಗುತ್ತದೆ. ಸದಾ ಪರರ ಚಿಂತನೆಯಲ್ಲಿಯೇ ತನ್ನ ಬದುಕನ್ನು ತೊಡಗಿಸಿಕೊಳ್ಳುವ ವ್ಯಕ್ತಿಗೆ ಅವನ ಕೌಟುಂಬಿಕ ಬದುಕಿನತ್ತ ಗಮನ ಹರಿಸುವುದು ಹೇಗೆ ತಾನೆ ಸಾಧ್ಯ ಹೇಳಿ?. ಇದರ ಪರಿಣಾಮವಾಗಿ ಅವನÀ ಕುಟುಂಬವು ಎಷ್ಟೋ ಬಾರಿ ಹಳಿ ತಪ್ಪಿದ ರೈಲಿನಂತೆ ಚಲಿಸುತ್ತದೆ. ಸದಾ ರಾಜಕೀಯ ಚಟುವಟಿಕೆಯಲ್ಲಿ ಮುಳುಗಿರುವ ರಾಜಕಾರಣಿಯ ಮನೆಯಲ್ಲಿ ಮಕ್ಕಳು ವಿದ್ಯೆಯ ಬಗ್ಗೆ ಗಮನ ಹರಿಸುವುದೆಂತು?. ತಂದೆಯ ಅಧಿಕಾರದ ಅಮಲಿನಲ್ಲಿ ಮಕ್ಕಳು ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು. ಅದಕ್ಕಾಗಿಯೇ ರಾಜಕಾರಣಿಗಳ ಮಕ್ಕಳು ಹೆಚ್ಚಿನ ಪ್ರಕರಣಗಳಲ್ಲಿ ಅರೆವಿದ್ಯಾವಂತರಾಗಿ ರಾಜಕೀಯ ಪ್ರಪಂಚಕ್ಕೆ ಧುಮುಕುವ ಅವಕಾಶಕ್ಕೆ ಕಾಯುವುದು ಸಹಜ. ಅದಕ್ಕೆ ಪುಷ್ಟಿ ಎನ್ನುವಂತೆ ಜನಸೇವಕರ ಅನುಯಾಯಿಗಳು ಅವರ ಮಕ್ಕಳ ಮುಗ್ಧ ಮನಸ್ಸಿಗೆ ಅಧಿಕಾರದ ಮಧ್ಯವನ್ನು ಕುಡಿಸುವ ಪ್ರಯತ್ನ ನಡೆಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಂಶದ ಕುಡಿಗಳ ಅರಳುವಿಕೆಯ ಕನಸನ್ನು ಚಿವುಟುವಷ್ಟು ನಾವು ನಿರ್ದಯಿ ಪಾಲಕರಾಗುವುದು ಹೇಗೆ ಸಾಧ್ಯ? ಒಮ್ಮೆ ಹಾಗೆ ಮಾಡುವದರಿಂದ ನಮ್ಮ ಕುಟುಂಬದ ಸ್ವಾಸ್ಥ್ಯ ಹಾಳಾಗುವದಿಲ್ಲವೆ? ಹೀಗಿರುವಾಗ ಕೌಟುಂಬಿಕ ರಾಜಕಾರಣದ ಅಧ್ಯಾಯ ಅನಿವಾರ್ಯವಾಗಿ ತೆರೆದುಕೊಳ್ಳುತ್ತದೆ. ಬಡಿಗನ ಮಗ ಬಡಿಗ, ಕುಂಬಾರನ ಮಗ ಕುಂಬಾರ, ಚಿನಿವಾಲನ ಮಗ ಚಿನಿವಾಲ ಹೀಗೆ ವಂಶಪಾರಂಪರಾಗತ ಉದ್ಯೋಗವನ್ನು ‘ಗುಣಕರ್ಮ ವಿಭಾಗಶಃ’ ಎಂದು ವರ್ಣಿಸಿ ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನೆ ‘ವರ್ಣ-ನೀತಿ’ಗೆ ತನ್ನ ಮುದ್ರೆ ಒತ್ತಿರುವಾಗ ರಾಜಕಾರಣಿಗಳ ಮಕ್ಕಳು ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಅಷ್ಟೇ ಅಲ್ಲಾ ಪ್ರಧಾನ ಮಂತ್ರಿಯ ಪಟ್ಟವನ್ನು ಅಲಂಕರಿಸುವದರಲ್ಲಿ ತಪ್ಪೇನಿದೆ ಎಂಬುದು ನನ್ನ ಪಾಮಾಣಿಕ ಪ್ರಶ್ನೆ.


ಈ ದೇಶದಲ್ಲಿ ಬಡವರಿಗೊಂದು ಕಾನೂನು; ಮಂತ್ರಿ-ಮಾಗದರಿಗೊಂದು ಕಾನೂನು ಇದೆಯೇ ಎಂದು ಹಲವರು ಹುಬ್ಬೇರಿಸಿ ಪ್ರಶ್ನಿಸುತ್ತಾರೆ. ಇಂದಿನ ದಿನಗಳಲ್ಲಿ ಕಾರ್ಪೋರೇಟರಿಂದ ಹಿಡಿದು ಮಂತ್ರಿಗಳ ವರೆಗಿನ ಜನಸೇವಕರು ಶ್ರೀಕೃಷ್ಣನ ಜನ್ಮಸ್ಥಾನದತ್ತ ಮುಖಮಾಡುವ ಅಥವಾ ಕೋರ್ಟು-ಕಟ್ಟೆ ಏರುವ ಪ್ರಸಂಗ ಬಂದಾಗಲೆಲ್ಲ ಅನಾರೋಗ್ಯದ ನೆವವೊಡ್ಡಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಒಬ್ಬ ಜನಸಾಮಾನ್ಯನಿಗೆ ಯಾವ ಮುಲಾಜೆಯಿಲ್ಲದೆ ಜೈಲಿಗೆ ನೂಕುತ್ತಾರಲ್ಲ ಎಂಬುದು ಅವರ ಪ್ರಶ್ನೆಯ ಅಂತರಂಗ. ಆದರೆ ಜನಸಾಮಾನ್ಯರ ಈ ವಾದದಲ್ಲಿ ಹುರುಳಿಲ್ಲವೆಂಬುದು ನನ್ನ ಅನಿಸಿಕೆ. ಜನಸೇವಕ 24 x 07 ಎಂಬ ರೀತಿಯಲ್ಲಿ ಸಮಾಜ ಸೇವೆಯಲ್ಲಿ ಮಗ್ನನಾಗಿ ಕಾಲ-ಕಾಲಕ್ಕೆ ಅನ್ನಾಹಾರ ಸೇವನೆಯಿಂದ ವಂಚಿತನಾಗುವದರಿಂದ ಅವನು ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವೇ ಸರಿ. ತನ್ನ ಪ್ರಭುವಿನ ಯೋಗಕ್ಷೆಮದಲ್ಲಿ ತೊಡಗುವಾಗ ಹಲವಾರು ರಾಜಕೀಯ ಒತ್ತಡಗಳನ್ನು ಆತ ಎದುರಿಸಬೇಕಾಗುತ್ತದೆ. ಪರಿಣಾಮವಾಗಿ ರಾಜಕಾರಣಿಗಳು ಸಾಮಾನ್ಯವಾಗಿ ಬಿ.ಪಿ., ಶುಗರ್, ಹಾಗೂ ಹೃದಯ ಸಂಬಂಧಿ ಕಾಯಲೆಗಳ ವಾರಸುದಾರರಾಗುವುದು ಸಹಜವೆ ಸರಿ. ನಮ್ಮ ದಿನ ನಿತ್ಯದ ರಾಜಕೀಯ ವ್ಯವಹಾರದಲ್ಲಿದ್ದಾಗ ಈ ಯಾವುದೇ ರೋಗಗಳು ರಾಜಕಾರಣಿಗಳನ್ನು ಭಾಧಿಸುವುದಿಲ್ಲವೆಂಬ ಟೀಕೆಯನ್ನು ನಮ್ಮ ಮೇಲೆ ಎಸಗಲಾಗುತ್ತಿದೆ. ಆದರೆ ಸದಾ ಚಲನಶೀಲ ವ್ಯಕ್ತಿತ್ವದ ಜನಸೇವಕನಿಗೆ ನೀವು ಕಂಬಿಯ ಹಿಂದೆ ಕಳುಹಿಸಿ ಅವನ ‘ಕ್ರಿಯಾಶೀಲತೆ’ಯನ್ನು ಮೊಟಕುಗೊಳಿಸಿದಿರೆಂದರೆ ಅವನು ನೀರಿನಿಂದ ಹೊರ ತೆಗೆದ ಮೀನಿನಂತೆ ಚಪಡಿಸುತ್ತಾನೆ. ಅವನ ದೇಹಕ್ಕಂಟಿದ ರೋಗ-ರುಜಿನುಗಳು ಅವನ ಬೆನ್ನು ಹತ್ತುತ್ತವೆ. ಹೀಗಾಗಿ ಜನತಾಸೇವೆಯಲ್ಲಿ ತನ್ನ ‘ಸರ್ವಸ್ವವನ್ನು ಮರೆಯುವ [ರೋಗವನ್ನೂ ಸಹ] ಸಮಾಜಮುಖಿ ರಾಜಕಾರಣಿಯು ಸೆರೆವಾಸವೆಂದಾಗ ತನ್ನ ಇದ್ದು-ಬಿದ್ದ ರೋಗ-ರುಜಿನುಗಳನ್ನು ಸ್ಮರಿಸಿ ವೈದ್ಯಕೀಯ ನೆವದ ಅಡಿಯಲ್ಲಿ ಪರಿಹಾರ ಕಾಣಬಯಸುತ್ತಾನೆ. ಈ ಹಿನ್ನೆಲೆಯಲ್ಲಿ ರಾಜಕಾರಣಿಯ ಅನಾರೋಗ್ಯದ ನಿಮಿತ್ತವು ಖಂಡಿತ ‘ನಾಟಕ’ವಲ್ಲ. ಒಮ್ಮೆ ಅದು ಹಾಗೆ ತೋರಿದರೂ ಅದು ಜನರ ಹಿತಕ್ಕಾಗಿ ಎಂಬುದು ನನ್ನ ಅಭಿಪ್ರಾಯ.


ಮಹಾಪ್ರಭುಗಳೇ, ನನ್ನ ಈ ಕಳಕಳಿಯ ನಿವೇದನೆಯನ್ನು ಮುಗಿಸುವ ಮುನ್ನ ಒಂದು ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಭ್ರಷ್ಟಾಚಾರಿಗಳೆಂದು ನಮ್ಮನ್ನು ತಾವೇ ಕರೆದಿರುತ್ತೀರಿ. ‘ಭ್ರಷ್ಟಾಚಾರ’ ಎಂಬ ಶಬ್ದದಲ್ಲಿಯೇ ನಿಮ್ಮ ಅಪಾದನೆಗೆ ಉತ್ತರ ಅಡಗಿದೆಯೆಂದು ನನ್ನ ಅನಿಸಿಕೆ. ಭ್ರಷ್ಟ ಅಂದರೆ ಧರ್ಮಹೀನ (ನೀತಿಹೀನ) ಅರ್ಥಾತ್ ಧರ್ಮ ಯಾ ನೀತಿಯನ್ನು ಬಿಟ್ಟವನು ಎಂದು ಅರ್ಥ. ಆಚಾರ ಅಂದರೆ ಸನ್ನಡತೆ - ಸರಿಯಾದ ಮಾರ್ಗದಲ್ಲಿ ನಡೆಯುವುದು. ಧರ್ಮವಿಹೀನತೆ ಹಾಗೂ ಸನ್ನಡತೆ ಎರಡೂ ಒಂದೆಡೆ ಇರುವುದು ಹೇಗೆ ಸಾಧ್ಯ.? ಆದರೆ ಧರ್ಮಹೀನತೆಯಲ್ಲಿಯೂ ಆಚಾರ ಅಡಗಿರುವುದರಿಂದ ಭ್ರಷ್ಟಾಚಾರ ಇಂದು ಸರ್ವವ್ಯಾಪಿಯಾಗಿದೆ. ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರಕ್ಕೆ ಇಂದು ಅಲಿಖಿತ ಮಂಜೂರಾತಿ ದೊರಕಿದೆ. ಅಣುರೇಣು ತೃಣಕಾಷ್ಟಗಳಲ್ಲಿ ತಾನಿದ್ದೇನೆಂಬ ವಿಷ್ಣುವಿನಂತೆ ಭ್ರಷ್ಟಾಚಾರವು ಎಲ್ಲೆಡೆ ಅಡಗಿದೆ. ಎಲ್ಲಿಯವರೆಗೆ ಭ್ರಷ್ಟತೆಗೆ ಆಚಾರದ ವಿಶೇಷಣವಿರುತ್ತದೆಯೋ ಅಲ್ಲಿಯವರೆಗೆ ನೀವು ನಮ್ಮನ್ನು ಭ್ರಷ್ಟಾಚಾರಿಗಳೆಂದು ಹೀಯಾಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮನತೆರೆದು ಹೇಳಿ?.

ಇಂತಿ ತಮ್ಮ

ಜನಸೇವಕಶ್ರೀಪಾದ ಹೆಗಡೆ , ಸಾಲಕೊಡ

28 views1 comment
bottom of page