ಆಚಾರ ಎಂಬ ಪದ ಕನ್ನಡದಲ್ಲಿ ಪ್ರಚಲಿತದಲ್ಲಿದೆ. ಸದಾಚಾರ,ದುರಾಚಾರ,ಅನಾಚಾರ,ಅತ್ತ್ಯಾಚಾರ ಎಂಬ ಪದಗಳು ಬಳಕೆಯಲ್ಲಿವೆ. ಸದಾಚಾರ ಎಂಬ ಪದವು ಹರಿ ಕೀರ್ತನೆ,ಸತ್ಸಂಗ,ಧಾರ್ಮಿಕ ಕ್ಷೇತ್ರದ ಮುಂದಾಳುಗಳ ಮಾತಿನಲ್ಲಿ ಕೇಳುತ್ತವೇವೆ. ಸತ್ಯ ಅಹಿಂಸೆ ಪ್ರಾಮಾಣಿಕತೆ ಆತ್ಮಸಾಕ್ಷಿ ಎಂಬ ಪದಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲ. ಇದಕ್ಕೆ ಕಾರಣ ಸದ್ಯದ ಸಂದರ್ಭ. ಮರ್ಯಾದೆಯನ್ನು ಬಿಟ್ಟು ಹಣವನ್ನು ಗಳಿಸು ಆಮೇಲೆ ಮರ್ಯಾದೆ ತಾನಾಗಿಯೆ ಬರುತ್ತದೆ ಎಂದು ನಂಬಿಕೊಂಡು ವರ್ತಿಸುವವರ ಸಂಖ್ಯೆ ಹೆಚ್ಚಾಗಿದೆ.
ಭ್ರಷ್ಟಾಚಾರ ಎಂಬುದು ಒಂದು ಮಹಾರೋಗ.ಕೆಲವು ರೋಗಗಳಿಗೆ ಔಷಧಿಯಿದೆ,ಯೋಗ್ಯವಾದ ಚಿಕಿತ್ಸೆಯಿದೆ. ಆದರೆ ಭ್ರಷ್ಟಾಚಾರ ಎಂಬ ರೋಗ ಗುಣವಾಗದ ಕಾಯಿಲೆಗಳ ಪಟ್ಟಿಯಲ್ಲಿ ಸೇರಿದೆ.
ಸ್ವಾತಂತ್ಯವು ಬಂದು ಪ್ರಜಾಪ್ರಭುತ್ವವು ಜಾರಿಗೆ ಬಂದ ದಿನದಿಂದ ಭ್ರಷ್ಟಾಚಾರವು ಬೆಳೆಯುತ್ತಲೆ ಇದೆ. ಯಾವುದೆ ಪಕ್ಷವು ಅಧಿಕಾರಕ್ಕೆ ಬರಲಿ ಅಲ್ಲಿ ಭ್ರಷ್ಟಾಚಾರದ ಬೆಳೆ ಹುಲುಸಾಗಿ ಬೆಳೆಯುತ್ತಲೆ ಇದೆ.
ಅಧಿಕಾರದಲ್ಲಿದ್ದಾಗ ಸದ್ದಿಲ್ಲದೆ ಭ್ರಷ್ಟಾಚಾರ ಮಾಡಿ ತಮ್ಮ ಸಿರಿವಂತಿಕೆಯನ್ನು ಹೆಚ್ಚಿಸಿಕೊಂಡವರು ಅಧಿಕಾರ ಹೋದ ಬಳಿಕ ದೇಶ ಭಕ್ತರಾಗಿ ಪ್ರಾಮಾಣಿಕರಾಗಿ ಅಧಿಕಾರ ದಲ್ಲಿದ್ದವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಬಹು ಬಗೆಯ ನಾಟಕವನ್ನಾಡುತ್ತಾರೆ. ತಾನು ಹರಿಶ್ಚಂದ್ರ ಮಹಾರಾಜನ ತುಂಡು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಆಳುವ ಸರಕಾರವಿದ್ದ ಕಾಲದಲ್ಲಿ ವಿರೋಧ ಪಕ್ಷದಲ್ಲಿದ್ದವರು ಗುತ್ತಿಗೆದಾರರು ಸಚಿವರಿಗೆ ಶೇಕಡಾ ನಲವತ್ತು ಪರ್ಸಂಟೇಜ್ ಕೊಡುವ ಬಗ್ಗೆ ಧ್ವನಿಯೆತ್ತಿ ಸುದ್ದಿ ಮಾಡಿದವರು. ಈಗ ಅವರೇ ಅಧಿಕಾರಕ್ಕೆ ಬಂದ ಕಾರಣ ಮೌನಕ್ಕೆ ಶರಣರಾಗಿದ್ದಾರೆ.
ಮಾತು ಮಾತಿಗೆ ದೇಶಾಭಿಮಾನ, ಪ್ರಾಮಾಣಿಕತೆ,ಸತ್ಯಸಂಧತೆಯ ಬಗ್ಗೆ ಮಾತನಾಡುವವರು ಹಣಗಳಿಕೆಯ ಮಹಾಯಜ್ಞದಲ್ಲಿ ತೊಡಗಿ ಕೊಂಡಿದ್ದಾರೆ. ಬೇಲಿಯೆ ಹೊಲವನ್ನು ಮೆಯ್ದರೆ,ಹೆಂಡತಿಯಾದವಳು ತನ್ನ ಮನೆಯಲ್ಲಿಯೆ ಕಳ್ಳತನ ಮಾಡಿದರೆ ಮತ್ತೆ ಯಾರಿಗೆ ದೂರುವುದು. ರಾಜ್ಯವನ್ನು ಮಂತ್ರಿ ಮಾನ್ಯರು ತಮ್ಮ ಅಧಿಕಾರಿಗಳ ಏಜಂಟರ ಮೂಲಕ ವರ್ಗಾವಣೆ, ಕಾಮಗಾರಿ, ಪದೋನ್ನತಿ ಮುಂತಾದ ಕಾರಣಕ್ಕೆ ಹಣ ಪಡೆದು ತಮ್ಮ ಉದ್ಧಾರಕ್ಕೆ ತೊಡಗಿಕೊಂಡರೆ ಭ್ರಷ್ಟಾಚಾರ ಎಗ್ಗಿಲ್ಲದೆ ಬೆಳೆಯುತ್ತದೆ. ಒಂದು ಹನಿ ರಕ್ತದ ಬಿದ್ದಾಗ ಅದರಿಂದ ಸಹಸ್ರ ರಕ್ತ ಬೀಜಾಸುರರು ಹುಟ್ಟಿದಂತೆ ಚಿಕ್ಕ ಅವಕಾಶ ಸಿಕ್ಕರೂ ಅದನ್ನು ಬೆಕ್ಕು ಕಣ್ಣು ಮುಚ್ಚಿ ಹಾಲನ್ನು ಕುಡಿದ ಹಾಗೆ ಲಂಚದ ರೂಪವಾಗಿ ಆಸ್ತಿ ಹಣ ಬಂಗಾರವನ್ನು ಪಡೆಯುವ ನುಂಗಪ್ಪಗಳ ಪೀಳಿಗೆ ಬೆಳೆಯುತ್ತಲೆ ಇದೆ." ಪಾಲಂ ಕಂಡಂ ಗಡಾ ಮೇಲೆ ಬಂದಡಸುವ ಬಡಿಗೆಗಂಡನಿಲ್ಲ" ಎಂದು ಹತ್ತನೆ ಶತಮಾನದಲ್ಲಿ ಮಹಾಕವಿ ಪಂಪ ಹೇಳಿದ ಮಾತು ನೆನಪಾಗುತ್ತಿದೆ. ಆದರೆ ಒಂದಲ್ಲ ಒಂದು ದಿನ ಇದು ಬಯಲಿಗೆ ಬರುತ್ತದೆ. ಅನ್ಯಾಯವಾಗಿ ಗಳಿಸಿದ್ದು ಹತ್ತು ವರ್ಷ ಉಳಿಯ ಬಹುದು ಆದರೆ ಹನ್ನೊಂದನೆ ವರ್ಷದಲ್ಲಿ ಆ ಗಳಿಕೆಯು ಮೂಲದಲ್ಲಿ ಇದ್ದುದನ್ನು ಒಡಗೂಡಿಕೊಂಡು ನಾಶವಾಗುತ್ತದೆ ಎಂಬ ಸಂಸ್ಕೃತ ಸುಭಾಷಿತವಿದೆ.
( ಅನ್ಯಾಯೇನ ಉಪಾರ್ಜಿತ ದ್ರವ್ಯಂ ದಶವರ್ಷೆ ತಿಷ್ಠತಿ ಪ್ರಾಪ್ತೆ ಏಕಾದಶ ವರ್ಷೆ ಸಮೂಲಂ ವಿನಶ್ಯತಿ)
ಮನಸ್ಸಾಕ್ಷಿಗೆ ವಿರುದ್ದವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ ಯಾರು ಸುಖವಾಗಿಲ್ಲ. ಮಾಡಿದ ತಪ್ಪಿಗೆ ಮನವೆ ಸಾಕ್ಷಿ ತೋಡಿದ ಬಾವಿಗೆ ಜಲವೆ ಸಾಕ್ಷಿ ಎಂಬ ಗಾದೆಯಂತೆ ಅವರನ್ನು ಅಪರಾಧ ಪ್ರಜ್ಞೆ ಬಿಡದೆ ಕಾಡುತ್ತದೆ.
ಈ ಭ್ರಷ್ಟಾಚಾರದ ಮಹಾರೋಗವನ್ನು ದೂರ ಮಾಡಲು ನಮ್ಮ ಯುವ ಜನಾಂಗ ಮುಂದಡಿಯಿಡ ಬೇಕಾಗಿದೆ. ಯುವಕರಾದ ರಾಜಕಾರಣಿಗಳು, ಅಧಿಕಾರಿಗಳು,ಸಮಾಜ ಸೇವಕರು,ವೈದ್ಯರು
ಶಿಕ್ಷಕರು, ಪತ್ರಕರ್ತರು, ಸಮಾಜದಲ್ಲಿ ಜವಾಬ್ದಾರಿಯ ಸ್ಥಾನದಲ್ಲಿರುವ ಉದ್ಯಮಿಗಳು, ವ್ಯಾಪಾರಿಗಳು ಭ್ರಷ್ಟಾಚಾರವನ್ನು ಬಡಿದೋಡಿಸಲು ವೀರ ಪ್ರತಿಜ್ಞೆ ಮಾಡಿ ಮುಂದಡಿಯಿಡ ಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮೆಲ್ಲರ ಮುಂದಿದೆ. ಭ್ರಷ್ಟಾಚಾರ ರಹಿತ ಭವ್ಯ ಭಾರತ ದೇಶದ ಕನಸು ನನಸಾಗಲಿ.
ಡಾ.ಶ್ರೀಪಾದ ಶೆಟ್ಟಿ
Comments