top of page

ಭೀಮಸೇನ ತೊರಗಲ್ಲರ ಕಾದಂಬರಿ "ಕಳಕೊಂಡವರು"

ಇದು ಬೆಳಗಾವಿಯ ಹಿರಿಯ ಪತ್ರಕರ್ತ, ಬರೆಹಗಾರ ಭೀಮಸೇನ ತೊರಗಲ್ಲ ಅವರ ಎರಡನೆಯ ಕಾದಂಬರಿ. ೨೫ ವರ್ಷಗಳ ಹಿಂದೆ ಅವರ " ಸಂಚು" ಎಂಬ ಮಹಾಭಾರತದ ಹಿನ್ನೆಲೆಯ ವಿಶಿಷ್ಟ ಕಾದಂಬರಿ ಪ್ರಕಟವಾಗಿದೆ. ಅದು ನ್ಯಾಶನಲ್ ಬುಕ್ ಟ್ರಸ್ಟ ನಿಂದ ಹಲವು ಭಾರತೀಯ ಭಾಷೆಗಳಿಗೂ ಅನುವಾದವಾಗುವ ಶ್ರೇಯಸ್ಸು ಪಡೆದಿತ್ತು.

ತೊರಗಲ್ಲರದು ಯಾವತ್ತೂ ಜಿಜ್ಞಾಸುವಿನ ಮನಸ್ಥಿತಿ. ಅವರು ಇತರರಿಗಿಂತ ಭಿನ್ನವಾಗಿ ಯೋಚಿಸಬಲ್ಲವರು. ಈ ಕಾದಂಬರಿಗೆ ಸಹ ಅವರು ಹೊಸದೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೃತಿ ವಿವಾದಕ್ಕೊಳಗಾಗುವದೆಂಬ ಭಯದ ಬದಲು ಅವರು ವಿವಾದವಾಗಲಿ ಎಂದೇ ಬಯಸುವವರು. ೨೯೦ ಪುಟಗಳ ಈ ಕೃತಿಯ ಕಥಾವಸ್ತು ಬಹಳ ದೊಡ್ಡದೇನಲ್ಲ ಮತ್ತು ಇದರಲ್ಲಿ ಬರುವ ಪಾತ್ರಗಳ ಸಂಖ್ಯೆಯೂ ದೊಡ್ಡದಲ್ಲ. ಮಾರಿಶಸ್ ದ್ವೀಪದಲ್ಲಿ ಆರಂಭವಾಗುವ ಕತೆ ಬೆಂಗಳೂರಿನ ಮಾಧ್ವಮಠದಲ್ಲಿ ಮುಕ್ತಾಯಗೊಳ್ಳುತ್ತದೆ. ಮಠದ ಸ್ವಾಮಿ, ಅವರ ಕಾರಭಾರಿ ಮತ್ತು ಆರ್ಥಿಕ ಸಲಹೆಗಾರ ಗೋವರ್ಧನರಾವ್ ಈ ಮೂರು ಪಾತ್ರಗಳ ಸುತ್ತ ಗಿರಗಿ ಹೊಡೆಯುವ ಕೃತಿ "ಕಥಾಪ್ರಧಾನ"ವಾದುದಲ್ಲ, "ವಿಚಾರಪ್ರಧಾನ"ವಾದುದು. ವಿಶೇಷವಾಗಿ ಒಂದು ಸಂಪ್ರದಾಯದ ಆಚರಣೆಗಳು, ಪರಂಪರಾಗತ ರೂಢಿರಿವಾಜುಗಳು, ಅವರ ಮನೋಭಾವಗಳು, ಅವರು ಯೋಚಿಸುವ ದಿಕ್ಕು ಇವನ್ನೆಲ್ಲ ಈ ಕೆಲವೇ ಪಾತ್ರಗಳ ಮೂಲಕ ಬಿಂಬಿಸುವ ಪ್ರಯತ್ನ ಇಲ್ಲಿದೆ.

ಧರ್ಮ ಜಿಜ್ಞಾಸೆ ಯಾವತ್ತೂ ಇದ್ದದ್ದೆ. ಜಗತ್ತಿನ ಪ್ರತಿಯೊಂದು ಜನಸಮೂಹವೂ ತನ್ನದೇ ಆದ ಒಂದು ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಅದಕ್ಕೆ ತಕ್ಕಂತೆ ಅಲ್ಲಲ್ಲಿ ಪ್ರತ್ಯೇಕವಾದ ಧರ್ಮಾಚರಣೆಗಳೂ ಬೆಳೆದುಕೊಂಡವು. ಇವೇ ಮುಂದೆ ಒಂದೊಂದು ಪರಂಪರೆ, ಸಂಪ್ರದಾಯಗಳಿಗೆ ದಾರಿಮಾಡಿಕೊಟ್ಟವು. ಅವುಗಳನ್ನು ರೂಪಿಸುವ, ಮತ್ತು ನಿರ್ದೇಶಿಸುವ ಧರ್ಮವೇತ್ತರು, ಪ್ರವರ್ತಕರು, ಮಹಾತ್ಮರು, ಪ್ರವಾದಿಗಳು, ಸಾಧಕರು ತಮ್ಮ ತಮ್ಮದೇ ಆದ ತತ್ವ ಸಿದ್ಧಾಂತಗಳನ್ನು ರಚಿಸಿಕೊಂಡರು, ಬೋಧಿಸಿದರು. ಬುದ್ಧ, ಮಹಾವೀರ, ಕ್ರಿಸ್ತ, ಪೈಗಂಬರ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಬಸವಣ್ಣ ಮೊದಲಾದವರು ಪ್ರತಿಪಾದಿಸಿದ ಧರ್ಮ ಮತಪಂಥಗಳು ಮುಂದೆ ಜಾತಿಕುಲಗಳ ಸಂಕುಚಿತವಾದ ಮತ್ತು ಇಕ್ಕಟ್ಟಾದ ದಾರಿಯಲ್ಲಿ ಹೊರಟಿರುವದನ್ನೂ ನಾವು ಕಾಣುತ್ತಿದ್ದೇವೆ. ಸಾಮಾಜಿಜ ವ್ಯವಸ್ಥೆಯ ಬೆಳವಣಿಗೆ ಬಹಳ ದೀರ್ಘ ಕಾಲದ್ದಾಗಿರುವದರಿಂದ ವಿಭಿನ್ನ ಕಾಲಘಟ್ಟಗಳಲ್ಲಿ ಅದು ಅಂದಂದಿನ ಜನರ ಮನೋಧರ್ಮ, ವೈಚಾರಿಕ ಅರಿವು, ಬೌದ್ಧಿಕ ಮಟ್ಟಗಳನ್ನು ಆಧರಿಸಿ ಬದಲಾವಣೆ ಹೊಂದುತ್ತ , ದ್ವಂದ್ವವನ್ನು ಸೃಷ್ಟಿಸುತ್ತ , ಗೊಂದಲಗಳನ್ನು ಹುಟ್ಟುಹಾಕುತ್ತ ಬಂದಿದ್ದುಂಟು. ಈ ದೃಷ್ಟಿಯಿಂದ ಇಂದು ಧರ್ಮಗಳ ಸಮಗ್ರ ಮರು ಅಧ್ಯಯನ , ವಿಶ್ಲೇಷಣೆ ಅನಿವಾರ್ಯವೆನ್ನಬಹುದು.

"ಕಳಕೊಂಡವರು" ಕಾದಂಬರಿಯ ಮೂಲಬೇರು ಈ ಗೊಂದಲದಲ್ಲೇ ಇದೆ. ಧರ್ಮ, ಮತ, ಪಂಥ, ಜಾತಿ ಇವೆಲ್ಲ ಬೇರೆಬೇರೆ ಎಂಬ ಕಲ್ಪನೆಯಿಲ್ಲದ ಜನೆಲ್ಲವನ್ನೂ ಕಲಸುಮೇಲೋಗರ ಮಾಡುತ್ತಾರೆ. ಶಂಕರ, ಮಧ್ವ, ರಾಮಾನುಜರು ಅದ್ವೈತ, ದ್ವೈತ,ವಿಶಿಷ್ಟಾದ್ವೈತ ಸಿದ್ಧಾಂತಗಳನ್ನು ರೂಪಿಸಿದ್ದು ನಾವು ಹೊಡೆದಾಡಲೆಂದು ಅಲ್ಲ. ಅವರು ಹೇಳಿದ್ದು ನಿಜವಾಗಿಯೂ ಏನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ, ಅಲ್ಪಸ್ವಲ್ಪ ತಿಳಿದರೂ ತಿಳಿಯದವರ ಹಾಗೆಅಮಾಯಕ ಜನರಲ್ಲಿ ತಪ್ಪು ಕಲ್ಪನೆಯ ಬೀಜ ಬಿತ್ತಿ, ದೇವರಲ್ಲೂ " ಮೇಲು- ಕೀಳು" ಎಂಬ " ಭಿನ್ನತೆಯ ವಿಕಟಹಾಸ್ಯ" ಸೃಷ್ಟಿಸಿ, ಅದನ್ನು ತಮ್ಮ ಸ್ವಂತದ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿದ್ದುಂಟು. ಈ ಪೂರ್ವಾಗ್ರಹ ಪೀಡಿತ ಮನೋಭಾವವೇ ಶಿವನೇ ಮೇಲು, ಹರಿಯೇ ಮೇಲು ಎನ್ನುವದನ್ನು ಪ್ರತಿಪಾದಿಸಲು ಬಗೆಬಗೆಯ ಪುರಾಣ ಕಥೆಗಳನ್ನು ಸೃಷ್ಟಿಸುವ ಮಟ್ಟಕ್ಕೂ ಹೋಗಿದ್ದುಂಟು. ಅದೂ ಸಾಲದೆಂಬಂತೆ ಅತಿಯಾದ ಮಡಿಮೈಲಿಗೆ, ಧಾರ್ಮಿಕ ಕಟ್ಟುಪಾಡುಗಳು, ಆಚರಣೆಗಳು, ಸೇರಿಕೊಂಡು ಕೆಲವು ಸಮುದಾಯಗಳು ತಮ್ಮನ್ನು ತಾವೇ ಇತರರಿಂದ ಬೇರ್ಪಡಿಸಿಕೊಂಡು ಅಸ್ಪೃಶ್ಯತೆಯನ್ನು ಆಹ್ವಾನಿಸಿಕೊಂಡು ಪ್ರಗತಿ ಗತಿಗೆ ಹೊಂದಿಕೊಳ್ಳಲಾಗದ ಒಂದು ಸ್ಥಿತಿಯನ್ನು ನಿರ್ಮಿಸಿಕೊಂಡಿದ್ದೂ ಇದೆ. ಮಠವಿರಲಿ, ಮಂದಿರವಿರಲಿ, ಭಕ್ತರಿಂದ ಬರುವ ಹಣ ಚಿನ್ನ ಬೆಳ್ಳಿ ಎಲ್ಲವನ್ನೂ ಶೇಖರಿಸಿ ಕೊಳೆಹಾಕುವ ಕೆಲಸ ಮಾಡದೆ ಅದನ್ನು ಸಮಾಜ ಮುಖಿಯಾದ ಕಾರ್ಯಗಳಲ್ಲಿ ತೊಡಗಿಸುವದಗತ್ಯವಿದೆ. ಪರೋಕ್ಷವಾಗಿ ಈ ಕಾದಂಬರಿ ಅಂತಹದೊಂದು ಸಂದೇಶವನ್ನು ನೀಡುವದೂ ಸುಳ್ಳಲ್ಲ. ಅಥವಾ ಕಾದಂಬರಿಕಾರರ ಉದ್ದೇಶವೇ ಅದಾಗಿರಲೂಬಹುದು ಅನಿಸುತ್ತದೆ.

ಮನುಷ್ಯ ಏನನ್ನೋ ಪಡೆದುಕೊಳ್ಳಲೋಸುಗ ಇನ್ನೇನನ್ನೋ ಕಳೆದುಕೊಳ್ಳುತ್ತಿರುತ್ತಾನೆ. ಬಹಳಸಲ ಮನುಷ್ಯ ತನ್ನನ್ನು ತಾನೇ ಕಳೆದುಕೊಳ್ಳುತ್ತಿರುತ್ತಾನೆ. ಬದುಕು ಇಷ್ಟೇನೇ ಎಂಬ ಅರಿವಾಗುವದರೊಳಗೆ ಅವನ ಬದುಕೇ ಮುಗಿದುಹೋಗಿರುತ್ತದೆ. " ಕತ್ತಲೆಯ ಗುಹೆಯಾಚೆ ಇರುವ ಬೆಳಕಿಂಡಿ ಕಾಣುತ್ತಿಲ್ಲವಲ್ಲ" ಎಂಬ ವ್ಯಥೆಯೊಂದೇ ಕೊನೆಗೂ ಉಳಿದುಕೊಳ್ಳುವದು.

‌" ಕಳಕೊಂಡವರು" ಕಾದಂಬರೀ ಇಂತಹ ಚಿಂತನೆಗಳಿಗೆ ಎಡೆ ಮಾಡಿಕೊಡುವ ಮೂಲಕ ಮಹತ್ವ ಪಡೆದುಕೊಳ್ಳುತ್ತದೆ. ಮಾರಿಶಸ್ ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸಲು ಆಮಂತ್ರಿಸಲ್ಪಟ್ಟು ಅಲ್ಲಿಗೆ ಹೋಗಿ ಅದರಲ್ಲಿ ಯಶಸ್ಸು ಪಡೆದ ಗೋವರ್ಧನರಾವ್ ಅವರು ಭಾರತಕ್ಕೆ ಮರಳಿ ಬೆಂಗಳೂರಿನ ಮಾಧ್ವ ಮಠದ ಸಲಹೆಗಾರರಾದ ನಂತರದ ಬೆಳವಣಿಗೆಗಳು ಈ ಕೃತಿಯ ಮೂಲಕ ಕುತೂಹಲಕರವಾಗಿ ಮೂಡಿಬಂದಿವೆ.

ಕಾದಂಬರಿ ಓದಬಯಸುವವರು ಭೀಮಸೇನ ತೊರಗಲ್ಲ, ೯೪೪೮೧ ೬೦೭೪೮ ಈ ನಂಬರಿಗೆ ಸಂಪರ್ಕಿಸಬಹುದು.

- ಎಲ್. ಎಸ್. ಶಾಸ್ತ್ರಿ

4 views0 comments

Comentarios


bottom of page