top of page

ಭಾಗ್ಯವಿಧಾತ

ಬಾಪೂಜಿ ನೀವಿಲ್ಲದ ಮನೆಮನವಿಲ್ಲ

ಜಗದ ಉದ್ದಗಲಕ್ಕೆ

ನ್ಯೂಯಾರ್ಕಿನ ಯುನಿಯನ್ ಸ್ಕ್ವೇರ್‌ನಲ್ಲೂ

ನಿಮ್ಮ ಪ್ರತಿಮೆಯಿದೆ 

ಜಗತ್ತು ನಿಮ್ಮ ಪ್ರೀತಿಸುತ್ತದೆ ಪೂಜಿಸುತ್ತದೆ

ನಮ್ಮೆಲ್ಲರ ಹೃದಯದ ಉರಿವ ಪ್ರಣತಿ..

ಜೀವಜ್ಯೋತಿ ನೀವು...


ರವೀಂದ್ರರು ಮಹಾತ್ಮಾ ಎಂದರು ನಿಮ್ಮ

ಭೋಸರು ರಾಷ್ಟ್ರಪಿತನೆಂದರು 

ಎಲ್ಲಕ್ಕೂ ಸಲ್ಲುವವರು ನೀವು 

ಅಸ್ಪೃಶ್ಯತೆ ಅಜ್ಞಾನ ಮದ್ಯಪಾನ ಬಡತನದ

ನಿವಾರಣೆಗೆ ಬದುಕ ಮುಡಿಪಿಟ್ಟು

ದೇಶವೆಂದರೆ ತನ್ನ ಮನೆ ..ದೇಶವಾಸಿಗಳು ಒಡಹುಟ್ಟಿದವರು

ಎಂದು ಮುನ್ನಡೆಸಿದವರು ನೀವು


ಅಹ್ಮದಾಬಾದಿನಿಂದ

ಕಾಲುನಡಿಗೆಯಲ್ಲೇ ನಾಲ್ಕುನೂರು ಕಿಮೀ ದಂಡಿಯವರೆಗೆ

ನಡೆದು ಉಪ್ಪು ತಯಾರಿಸಿದಿರಿ

ತುಂಡು ಖಾದಿಯ ನಿಮ್ಮ ಬೆನ್ನಿಗೆ ಲಕ್ಷ ಲಕ್ಷ ಜನ.. ಅದಮ್ಯ ಶಕ್ತಿ ನೀವು..

ಅಸಹಕಾರ ಆಂದೋಲನ,ಅಹಿಂಸೆ,ಉಪವಾಸ ಸತ್ಯಾಗ್ರಹ 

ನೂತ ಖಾದಿಯ ಉಡುಪು.. ಸ್ವದೇಶಿ ನೀತಿ

ಎಲ್ಲವೂ ನಿಮ್ಮ ಹುಟ್ಟುವಳಿ


ಕ್ವಿಟ್ ಇಂಡಿಯಾ ಚಳುವಳಿ ಜೊತೆಜೊತೆಗೆ ಹಳ್ಳಿಗಳ ಶುದ್ದೀಕರಣ

ಶಾಲೆ, ಆಸ್ಪತ್ರೆಗಳ ನಿರ್ಮಾಣ ,ಜಮೀನುದಾರರ ವಿರುದ್ಧ ಪ್ರತಿಭಟನೆ

ಕ್ಷಾಮದ ಕಾಲದ ತೆರಿಗೆ ರದ್ದು.. ಹೀಗೆ ಎಲ್ಲದರ ರೂವಾರಿ ನೀವು

ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಯ ಸಂಕೇತವಾಗಿ

ದೀರ್ಘಾವಧಿಯ ಉಪವಾಸ ಹತ್ತಾರು ಬಾರಿ ಮಾಡಿದಿರಿ

ಜನಸಾಮಾನ್ಯನ ಹಾಗೆ ಬದುಕು ನಡೆಸಿದಿರಿ


ದಕ್ಷಿಣಾಫ್ರಿಕಾ ವರ್ಣಭೇದ ನೀತಿಯ ವಿರುದ್ಧ ನಿಮ್ಮ ಹೋರಾಟ 

ಇಂದಿಗೂ ಜನಜನಿತ...ಪರಮ ಸತ್ಯವನ್ನೇ ನುಡಿವ ಪ್ರಮಾಣ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ

ಚರಕದ ಜೊತೆಗೆ ಆರ್ಥಿಕ ಸ್ವಾವಲಂಬನೆ

ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ

ಮಹಿಳಾ ಹಕ್ಕುಗಳ ವಿಸ್ತರಣೆ 

ಅನವರತ ಹೋರಾಟದ ತರುವಾಯ

ಬ್ರಿಟೀಷರನ್ನು ಭಾರತ ಬಿಟ್ಟು ತೊಲಗಿಸಿ ಸ್ವಾತಂತ್ರ್ಯ ದೊರಕಿಸಿದಿರಿ ಮಹಾನುಭಾವ


ಹೀಗೆ ಎಲ್ಲವೂ ಹೌದು ನೀವು

ಭೂಮಿಯ ಮೇಲೆ ನಡೆದಾಡಿದ ದೇವರು

ಅನವರತ ನಿಮ್ಮ ನೆನೆವ ಪುಣ್ಯ ಸಿಕ್ಕಿದೆ ನಮಗೆ

ಧನ್ಯರು ನಾವು 

ನೀವು ನಡೆದ ಹಾದಿಯಲ್ಲಿ

ಸಾಗುವ ಸಂಕಲ್ಪ ಮಾಡುವೆವು ಇಂದು

ಬಾಪೂ ನಮ್ಮೊಂದಿಗಿರಿ ಎಂದೆಂದೂ..


-ರೇಣುಕಾ ರಮಾನಂದ


84 views0 comments

コメント


bottom of page