ನಾವು ಒಂದು ಭಸ್ಮಾಸುರನನ್ನು ಸೃಷ್ಟಿ ಮಾಡಿದ್ದೇವೆ
ನಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತಿದೆ
ಮರೆಯಾಗಲು ಜಾಗವಿಲ್ಲ
ಹಗಲಿರುಳು ಓಡುತ್ತಿದ್ದೇವೆ
ಮಕ್ಕಳನ್ನು ಬಗಲಿಗವಚಿ
ಕೈಲಾಗದವರು ಬಿದ್ದಿದ್ದಾರೆ
ಅಳಿದುಳಿದವರು
ಮನೆಮಠ ತೊರೆದಿದ್ದೇವೆ
ಗುಂಪುಗುಂಪಾಗಿ ಗುಳೆ ಎದ್ದಂತೆ
ಕಾಡು ನಾಶವಾಗಿದೆ
ಎಲ್ಲಿ ಅಡಗುವುದು ಗೊತ್ತಿಲ್ಲ
ಸಂಬಂಧಗಳು ನಾಶವಾಗಿ
ನಮಗೆ ನಾವೇ ಮುಖ್ಯವಾಗಿ
ವ್ಯವಧಾನವೇ ಇಲ್ಲದಂತೆ
ಇದೇ ಕೊನೆಯ ಓಟ ಎಂಬಂತೆ
ಜೀವ ಉಳಿಸಿಕೊಳ್ಳಲು
ಬೇಡಿ ತಿನ್ನಲು
ಭಸ್ಮಾಸುರ ಬೆನ್ನು ಹತ್ತಿದ್ದಾನೆ
ಕೈಯ ಎತ್ತಿದ್ದಾನೆ
ಎಲ್ಲಿಗೆ ಓಡುವುದು
ಉರುಟಾಗಿದೆ ಭೂಮಿ
ನಮ್ಮ ಎದೆಗೇ ಬಂದಿದ್ದಾನೆ
ಬಿಸಿಲ ಧಗೆ ಬೇಗೆ
ಓಡುವುದು ಎಲ್ಲಿಗೆ
ಈ ಬಟಾಬಯಲಿನಲ್ಲಿ
ಇನ್ನೀಗ ನಮ್ಮ ತಲೆಯ ಮೇಲೆ
ನಮ್ಮದೇ ಕೈ.
-ಡಾ. ವಸಂತಕುಮಾರ ಪೆರ್ಲ
Comments