ಭವ ಸಾಗರ ದಾಟಿಸುವ ನಾವಿಕ|
ಕಾಯ್ದು ನಿಂತ ನದಿ ನಾವಿಕನ|
ಸೂರ್ಯನ ಮುನ್ನಡೆಸೆ|
ದೀಪದ ಬೆಳಕು|
ಎದೆಯ ಮೊಗ್ಗರಳಿ ಮಧು ದ್ರವಿಸಲಿ||
ಇದು ರಸರಾಮಾಯಣ ಕಾವ್ಯದಲ್ಲಿರುವ ಗುಹನಿಗೆ ಸಂಬಂಧಿಸಿದ ಮೂರು ಸಾಲಿನ ಚಿಕ್ಕ ಪದ್ಯ. ಈ ಕಾವ್ಯದಲ್ಲಿ ರಾಮಾಯಣದ ಕಥೆ ಪ್ರಧಾನವಲ್ಲ. ಸರ್ವರ ಅಭ್ಯುದಯಕ್ಕೆ ಶ್ರೀರಾಮ ಹೇಗೆ ಕಾರಣೀಭೂತನಾದ ಎಂಬುದನ್ನು ಗಮನಕ್ಕೆ ತರುವ ಉದ್ದೇಶವುಳ್ಳದ್ದು ಈ ಕಾವ್ಯ. ಅದಕ್ಕೆ ಪೂರಕವಾಗಿ ರಾಮಾಯಣದ ಕೆಲವು ಘಟನೆಗಳು, ಪಾತ್ರಗಳು, ವರ್ಣನೆಗಳು ಇಲ್ಲಿವೆ. ಕೈಕೇಯಿಯ ಆಶಯ, ಆದೇಶದಂತೆ 14 ವರ್ಷ ವನವಾಸ ಮಾಡಲು ರಾಮ ಅಯೋಧ್ಯೆಯಿಂದ ಹೊರಟು ಬಂದಾಗ ಗಂಗಾನದಿಯನ್ನು ದಾಟಬೇಕಾಗಿ ಬರುತ್ತದೆ. ಅದನ್ನು ದಾಟಿಸುವ ಗುಹನಿಗಾಗಿ ಕಾಯುತ್ತಿರುತ್ತಾನೆ. ಆ ಸಂದರ್ಭವನ್ನು ಚಿತ್ರಿಸುವ ಪದ್ಯ ಇದು. ಶ್ರೀರಾಮ ಅಸಾಮಾನ್ಯನಾಗಿದ್ದರೂ ಅವನ ಅಸಾಮಾನ್ಯತೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಎದ್ದು ಕಾಣುವಂತಹುದು. ಅವನು ಸಾಮಾನ್ಯನಂತೆಯೇ ಬಹುಮಟ್ಟಿಗೆ ಕಾಣಿಸಿಕೊಂಡವನು. ಅಂತಹ ಒಂದು ಸಂದರ್ಭ ಇದು.
ಇಲ್ಲಿ ಎರಡು ಸಂಗತಿಗಳು ಇವೆ. ಮೊದಲಿಗೆ ಸೂರ್ಯನ ಮುನ್ನಡೆಸೆ ದೀಪದ ಬೆಳಕು ಎನ್ನುವುದನ್ನು ಗಮನಿಸಬೇಕು. ಆ ನಂತರ ಭವಸಾಗರವನ್ನು ದಾಟಿಸುವ ನಾವಿಕ ನದಿಯನ್ನು ದಾಟಿಸುವ ನಾವಿಕನಿಗಾಗಿ ಕಾದು ನಿಂತಿದ್ದಾನೆ ಎನ್ನುವುದನ್ನು ಗಮನಿಸಬೇಕು. ಆಗ ಇದಕ್ಕೆ ಇರುವ ಮಹತ್ವ ಪ್ರಕಾಶಮಾನ ಆಗುತ್ತದೆ. ಈ ಪದ್ಯದಲ್ಲಿ ಸೂರ್ಯನ ಮುನ್ನಡೆಸೆ ದೀಪದ ಬೆಳಕು ಮುಕ್ತಾಯದ ಸಾಲು. ಇದಕ್ಕೆ ಅನೇಕ ಅರ್ಥಗಳಿವೆ. ಮೊದಲಿಗೆ ಇದೊಂದು ವಿಡಂಬನೆ ಎಂದು ಗ್ರಹಿಸಬಹುದು. ನಾವು ಬಗೆ ಬಗೆಯಾಗಿ ಶ್ರೀರಾಮನ ವ್ಯಕ್ತಿತ್ವವನ್ನು ಗ್ರಹಿಸುತ್ತೇವೆ. ಅವನು ಇರುವುದು ಹಾಗೆಯೇ ಎಂದು ನಿರ್ಧರಿಸುತ್ತೇವೆ, ನಮಗೆ ತಿಳಿದಂತೆ ಮೌಲ್ಯಮಾಪನ ಮಾಡುತ್ತೇವೆ. ನಮಗೆ ಇಷ್ಟ ಬಂದಂತೆ ನಿಂದಿಸುತ್ತೇವೆ, ಅದಕ್ಕೆ ಪ್ರಚಾರವನ್ನೂ ಕೊಡುತ್ತೇವೆ. ಶ್ರೀರಾಮನನ್ನು ಅರ್ಥಮಾಡಿಕೊಳ್ಳುವ ಇಂಥ ಪ್ರಯತ್ನ ಕೈದೀಪ ಹಿಡಿದುಕೊಂಡು ಸೂರ್ಯನ ದರ್ಶನ ಪಡೆಯಲು ಹೊರಟಂತಾಗುತ್ತದೆ ಅಷ್ಟೇ. ಶ್ರೀರಾಮ ಸ್ವಪ್ರಕಾಶಿತ ಸೂರ್ಯ, ಗುಹ ಕೈಯಲ್ಲಿರುವ ದೀಪ. ಎರಡೂ ಬೆಳಕು ಕೊಡುತ್ತವೆ, ಬೆಳಗುತ್ತವೆ. ಕೈದೀಪ ಕೇವಲ ಒಂದು ಸಾಧನ. ಅದರಿಂದ ಇಡೀ ಜಗತ್ತನ್ನು ಕಾಣಲಾಗದು.
ಇದನ್ನು ಸರಳವಾಗಿಯೂ ಅರ್ಥಮಾಡಿಕೊಳ್ಳಬಹುದು. ಶ್ರೀರಾಮ ಚಿಕ್ಕಮ್ಮ ಕೈಕೇಯಿಯ ಮಾತಿಗೆ ಕಟ್ಟು ಬಿದ್ದು 14 ವರ್ಷಗಳ ವನವಾಸಕ್ಕಾಗಿ ಸೀತೆ, ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೊರಟ ಸಂದರ್ಭದಲ್ಲಿ ಗಂಗಾನದಿಯನ್ನು ದಾಟಬೇಕಾಗಿದೆ. ಆ ಪ್ರದೇಶದ ನಾಯಕ ಗುº. ಅದರಿಂದ ಅವನಿಗಾಗಿ ಶ್ರೀ ರಾಮ ಕಾಯುತ್ತಾ ಇದ್ದಾನೆ. ಕೈಕೇಯಿಯಿಂದಾಗಿ ರಾಜನಾಗುವ ಅವಕಾಶ ತಪ್ಪಿ ಹೋಗದಿದ್ದರೆ ಸೂರ್ಯವಂಶವನ್ನು ಮುನ್ನಡೆಸುವವನು ಅವನೇ ಆಗಿದ್ದ. ಅವನೇ ಎಲ್ಲರ ದೀಪದ ಬೆಳಕು ಆಗುತ್ತಿದ್ದ. ಈಗ ಸಂದರ್ಭ ಬದಲಲಾಗಿಬಿಟ್ಟಿದೆ. ನದಿಯನ್ನು ದಾಟಿಸುವವನಿಗಾಗಿಯೂ ಕಾಯಬೇಕಾಗಿದೆ.
ಆದರೆ ಈ ಪದ್ಯಕ್ಕೆ ಹಲವಾರು ವಿಶಿಷ್ಟ ಅರ್ಥಗಳೂ ಇವೆ: ದಶರಥ ಕುಲೋದ್ಧಾರಕ ಪುತ್ರನಿಗಾಗಿ ಅಶ್ವಮೇಧ ಮತ್ತು ಪುತ್ರಕಾಮೇಷ್ಟಿ ಯಾಗ ಮಾಡಿ ದೈವಕೃಪೆಯಿಂದ ಪಡೆದವನು ಹಿರಿಯ ಮಗ ರಾಮ. ದೈವಿಕತೆಯ ಜೊತೆಗೆ ಅವನಿಗೆ ಅವನ ವಿಶಿಷ್ಟ ಕುಲದಲ್ಲಿ ಜನಿಸಿದ ರಘು, ದಿಲೀಪ, ಅಜರಂಥ ಮಹಾರಾಜರ ಭವ್ಯ ಪರಂಪರೆಯ ಭಂಡಾರವೇ ಬೆನ್ನಿಗೆ ಇದೆ. ಅವನಿಗೆ ಮುನ್ನಡೆಯಲು ಯಾವ ಪ್ರತ್ಯೇಕವಾದ ಹೊರಗಿನ ದೀಪದ ಅವಶ್ಯಕತೆಯೇ ಇಲ್ಲ. ಸೂರ್ಯ ವಂಶಜನೂ ಆದ ಅವನು ಸಹಜವಾಗಿ ಸೂರ್ಯನಂತೆ ಸ್ವಪ್ರಕಾಶಿತ. ಆದರೂ ಅವನು ನದಿಯನ್ನು ದಾಟಿಸುವವನಿಗಾಗಿ ಕಾಯುತ್ತಾನೆ ಎನ್ನುವುದು ಅವನ ಸಜ್ಜನಿಕೆ. ಇತರರ ಘನತೆಗೆ ತನ್ನಿಂದ ಕುಂದುಂಟಾಗಬಾರದೆಂಬ ಕಾಳಜಿ ಅವನದು.
ಸೂರ್ಯನ ಮುನ್ನಡೆಸೆ ಎನ್ನುವುದಕ್ಕೆ ಸೂರ್ಯ ಮುಳುಗಿದ ನಂತರ ಬೆಳಕನ್ನು ಕೊಡುವ ಸಂಗತಿಗಳು ಎನ್ನುವ ಅರ್ಥವೂ ಇದೆ. ಸೂರ್ಯ ಮುಳುಗಿದ ನಂತರ ಒಂದೊಂದೇ ನಕ್ಷತ್ರಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ತಾರೆಗಳಿಂದ ತುಂಬಿದ ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಬೆಳಕು ಹಬ್ಬಿ ನಕ್ಷತ್ರಗಳ ಜೊತೆಗೆ ಸುತ್ತಲಿನ ಸಂಗತಿಗಳು ಕಾಣಲಾರಂಭಿಸುತ್ತವೆ. ಮುನ್ನಡೆಯುವ ದಾರಿಯೂ ಗೋಚರವಾಗುತ್ತದೆ. ಚಂದ್ರನ ಬೆಳಕು ಹುಣ್ಣಿಮೆಯ ಬೆಳಕಾಗುವಷ್ಟು ವಿಸ್ತøತ ಆದಾಗ ಮತ್ತಷ್ಟು ನಿಚ್ಚಳ. ಇವೆಲ್ಲಾ ದೇವರ ಮುಂದೆ ಹಚ್ಚಿಡುವ ಹಣತೆಗಳ ಹಾಗೆ. ಇವು ಮಾರ್ಗದರ್ಶಿಗಳೂ ಹೌದು, ತಂತಮ್ಮ ಪಾಡಿಗೆ ಬೆಳಗಿಕೊಳ್ಳುವವುಗಳೂ ಹೌದು. ಇದು ಅಭ್ಯುದಯದ ಒಂದು ರೂಪ. “ರಾಮಾಯಣದ ಉದ್ದೇಶ ಸರ್ವರ ಅಭ್ಯುದಯ” ಎನ್ನುವ ದರ್ಶನ ರಸ ರಾಮಾಯಣದ್ದು. ಸರ್ವರಲ್ಲಿ ಗುಹನೂ ಒಬ್ಬ ಎನ್ನುವ ಸೂಚನೆ ಇಲ್ಲಿದೆ.
ಸೂರ್ಯನನ್ನು ಮುನ್ನಡೆಸುವ ದೀಪ ಎಂದರೆ ಸೂರ್ಯನಿಗೇ ದಾರಿ ತೋರಲು ಕೈಯಲ್ಲೊಂದು ದೀಪ ಹಿಡಿದ ಹಾಗೆ ಎಂದೂ ಅರ್ಥ ಆಗುತ್ತದೆ. ಹಾಗೆ ದೀಪ ಹಿಡಿದವನಿಗೆ ತಾನು ದಾರಿ ಮುನ್ನಡೆಸಬಲ್ಲೆ ಎಂಬುದು ಖಾತರಿಯಾದ ವಿಷಯ. ಸೂರ್ಯನ ಪ್ರಖರವಾದ ಬೆಳಕಿನ ಮುಂದೆ ಕೈದೀಪದ ಬೆಳಕು ಕಾಣುವುದೇ ಇಲ್ಲ ಎನ್ನುವುದು ಮನಸ್ಸಿಗೇ ಬರುವುದಿಲ್ಲ. ಇದನ್ನು ಅದ್ವೈತದ ಮಾಯೆಗೆ ಹೋಲಿಸಬಹುದು. ಮಾಯೆ ನಿಜವಾಗಿ ಇರುವುದನ್ನು ಮರೆಮಾಡುತ್ತದೆ, ಇಲ್ಲದುದನ್ನು ಎತ್ತಿ ತೋರಿಸುತ್ತದೆ. ಶ್ರೀರಾಮ ಸಾಮಾನ್ಯನಾಗಿದ್ದೂ ನಿಜವಾದ ಬೆಳಕು ಯಾವುದು ಎಂಬುದನ್ನು ತನ್ನ ನಡೆ ನುಡಿಯಿಂದ ತೋರಿಸಿಕೊಟ್ಟ - ಅಸಾಮಾನ್ಯನಾದ - ಪುರುಷ. ಅವನಿಗೆ ಅವನೇ ಸಾಟಿ ಎನ್ನುವುದೂ ಒಂದು ಅರ್ಥ.
ಈ ಹಿನ್ನೆಲೆಯಲ್ಲಿ ಗಂಗಾನದಿಯನ್ನು ದಾಟುವ ಈ ಪ್ರಸಂಗವನ್ನು ಆಧ್ಯಾತ್ಮಿಕವಾಗಿ ಅರ್ಥೈಸಿಕೊಳ್ಳುವ ಕವಿ ಶ್ರೀರಾಮನನ್ನು ಭವ ಸಾಗರ ದಾಟಿಸುವ ನಾವಿಕ ನದಿ ನಾವಿಕನಿಗಾಗಿ ಕಾಯ್ದು ನಿಂತಿರುವುದಕ್ಕೆ ಹೋಲಿಸಿರುವುದನ್ನು ಗಮನಿಸಬೇಕು. ಶ್ರೀರಾಮ ಈಗಾಗಲೇ ಹರ ಮತ್ತು ಹರಿ ಇಬ್ಬರ ಪ್ರತೀಕವಾಗಿ ರೂಪುಗೊಂಡಿರುವುದು ಸೀತೆಯನ್ನು ಮದುವೆಯಾಗುವ ಮತ್ತು ಪರಶುರಾಮನ ಸಂದರ್ಭದಲ್ಲಿ ಸುಸ್ಪಷ್ಟ ಆಗಿದೆ. ಆತ ಭವ ಸಾಗರವನ್ನು ದಾಟಿಸುವ ನಾವಿಕನಾಗಿಯೇ ತೋರಿಬಂದಿದ್ದಾನೆ. ಆದರೂ ಸಾಮಾನ್ಯ ಮನುಷ್ಯನಂತೆ ಪ್ರಾಪಂಚಿಕ ನದಿಯನ್ನು ದಾಟಿಸುವ ನಾವಿಕನಿಗಾಗಿ ಕಾದು ನಿಂತಿದ್ದಾನೆ. ಇಲ್ಲಿ ಎರಡು ರೀತಿಯ ನಾವಿಕರು ಇದ್ದಾರೆ. ಒಬ್ಬನ ಭವ ಎನ್ನುವ ಸಾಗರದಷ್ಟು ಭಂಗಗಳನ್ನೆಲ್ಲಾ ಪರಿಹರಿಸಿ ಆ ಸಾಗರದಲ್ಲಿ ಮುಳುಗಲು ಅಥವಾ ತೇಲಲು ಅಥವಾ ಈಜಲು ಬಿಡದೆ ನಾವೆಯೊಂದರಲ್ಲಿ ತನ್ನ ಜೊತೆಯಲ್ಲೇ ಕುಳ್ಳಿರಿಸಿಕೊಂಡು ಅಪಾರವಾದ ಸಾಗರವನ್ನು ದಾಟಿಸುವವನು ಒಬ್ಬ ನಾವಿಕ. ಇನ್ನೊಬ್ಬ ನೀರಿನ ರಾಶಿಯೊಡನೆ ರಭಸವಾಗಿ ಆಳ ಮತ್ತು ಅಗಲವಾಗಿರುವ ಪಾತ್ರದಲ್ಲಿ ಹರಿಯುವ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ದೋಣಿಯೊಂದರಲ್ಲಿ ಜನರನ್ನು ದಾಟಿಸುವ ಅಥವಾ ತನ್ನನ್ನೇ ದಾಟಿಸಿಕೊಳ್ಳುವ ನಾವಿಕ.
ಮೊದಲನೆಯ ನಾವಿಕ ಭಗವಂತನಿಗೆ ಪ್ರತೀಕವಾದರೆ ಎರಡನೆಯ ನಾವಿಕ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ದಾಟುವ ಕ್ರಿಯೆಗಷ್ಟೇ ಸೀಮಿತವಾಗಿ ಇರುವ ಭವಬದ್ಧ ಜೀವಿಗಳ ಪ್ರತೀಕ ಆಗಬಹುದು. ಭವ ಸಾಗರವ ದಾಟಿಸುವ ನಾವಿಕ ನದಿ ನಾವಿಕನಿಗಾಗಿ ಕಾಯ್ದು ನಿಂತಿರುವುದನ್ನು ವಿಶಿಷ್ಟಾದ್ವೈತ ಸಿದ್ಧಾಂತದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ವಿಶಿಷ್ಟಾದ್ವೈತದಲ್ಲಿ ಮರ್ಕಟ ನ್ಯಾಯ, ಮಾರ್ಜಾಲ ನ್ಯಾಯ ಎಂಬ ಉಪ ಸಿದ್ಧಾಂತಗಳು ಇವೆ. ಮಾರ್ಜಾ¯ ನ್ಯಾಯದ ಪ್ರಕಾರ ಭಗವಂತ ಬೆಕ್ಕಿನ ಹಾಗೆ. ಬೆಕ್ಕು ತನ್ನ ಮರಿಗಳ ಸಂರಕ್ಷಣೆಯನ್ನು ಮಾಡಲು ಅದೇ ತನ್ನ ಮರಿಗಳನ್ನು ಅವುಗಳಿಗೆ ಸ್ವಲ್ಪವೂ ನೋವಾಗದ ಹಾಗೆ ಬಾಯಿಯಲ್ಲಿ ಕಚ್ಚಿಕೊಂಡು ತನಗೆ ಸುರಕ್ಷಿತ ಎಂದು ತೋರಿದ ಜಾಗಕ್ಕೆ ಮರಿಗಳನ್ನು ಸ್ಥಳಾಂತರ ಮಾಡುತ್ತಿರುತ್ತದೆ, ಭಗವಂತನೂ ಹಾಗೆಯೇ. ಸಂಸಾರಕ್ಕೆ ಸಿಕ್ಕಿಕೊಂಡು ಒದ್ದಾಡುತ್ತಿರುವ ಮಾನವಜೀವಿಯನ್ನು ಉದ್ಧರಿಸಲು ತಾನೇ ಮುಂದಾಗಿ ಬಂದು ಮೇಲೆತ್ತಿಕೊಳ್ಳುತ್ತಾನೆ. ಮರ್ಕಟ ನ್ಯಾಯದ ಪ್ರಕಾರ ಭಗವಂತ ಕೋತಿಯ ಹಾಗೆ. ಕೋತಿ ಸುಮ್ಮನೆ ಮರಿಗಳ ಹತ್ತಿರ ಇರುತ್ತದೆ. ಮರಿಗಳೇ ತಮ್ಮ ರಕ್ಷಣೆಗಾಗಿ ತಾಯಿ ಕೋತಿಗೆ ಆತುಕೊಳ್ಳುತ್ತವೆ. ಶ್ರೀರಾಮ ಈ ಎರಡೂ ಅರ್ಥದಲ್ಲಿ ನದಿ ನಾವಿಕನಾಗಿ ಕಾಯ್ದು ನಿಂತಿದ್ದಾನೆ. ಇದು ಅಹಲ್ಯೆ, ವಿರಾಟ, ಕಬಂಧ, ಶಬರಿ, ಮಾರೀಚ ಮುಂತಾದವರ ಪ್ರಸಂಗಗಳಲ್ಲಿ ಸ್ಪಷ್ಟವಾಗುತ್ತದೆ. ಇಂಥ ಮಾನವೀಯತೆ ಎದೆಯ ಮೊಗ್ಗರಳಿ ಮಧುವನ್ನು ದ್ರವಿಸಲಿ ಎನ್ನುವ ಸದಾಶಯ ಇಲ್ಲಿಯದು.
[ಶ್ರೀ ಗಜಾನನ ಹೆಗಡೆ ವಿರಚಿತ 'ರಸರಾಮಯಣ ' ದ ಪದ್ಯವೊಂದರ ಅವಲೋಕನ]
ಕೆ . ಎಲ್ . ಪದ್ಮಿನಿ ಹೆಗಡೆ
Comentários