Life is everywhere in a state where much is to be endured and very little to be enjoyed”----ಎಂದು ಖ್ಯಾತ ಇಂಗ್ಲೀಷ್ ಕಾದಂಬರಿಕಾರ ಥಾಮಸ್ ಹಾರ್ಡಿ, ಎಂದೋ ಹೇಳಿದ್ದ. ಈ
ಬದುಕಲ್ಲಿ ಸಂತೋಷವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಸಹಿಸಿಕೊಳ್ಳುವುದೇ ಬಹಳಷ್ಟಿದೆ. ನಿರಾಶಾವಾದದ ಮಾತಿದು ಎಂದೆನಿಸಿದರೂ ನೋವು-ನಲಿವುಗಳ ಮಿಶ್ರಣವೆನಿಸಿದಃಈ ಬಾಳಯಾತ್ರೆಯಲ್ಲಿ ಅನಿರೀಕ್ಷಿತವಾಗಿ ಬಂದೆರಗುವ, ಸಮಸ್ಯೆಗಳೆಂಬ ಕಾರ್ಮೋಡದ
ಕತ್ತಲೆಯನ್ನು ದಾಟಿ ಭರವಸೆಯ ಬೆಳಕನ್ನು ಕಾಣಬೇಕಾದುದು ಅನಿವಾರ್ಯವಾದ ಬಾಳಿನ
ಪರಮಸತ್ಯವಲ್ಲವೆ? ಬದುಕಿನಲ್ಲಿ ಯಶಸ್ಸಿನ ಏಣಿಯನ್ನು ಏರಿ ಸಾಧನೆ ಮಾಡಿದ, ಸಾಧಕರೆಲ್ಲ,
ತಮ್ಮ ಬಾಳಿನಲ್ಲಿ ಕಂಡ ಏಳು-ಬೀಳಿಗೆ ಲೆಕ್ಕವುಂಟೆ? ಎಷ್ಟೆಲ್ಲಾ ಸಂಕಷ್ಟಗಳ ಸರಮಾಲೆಯನ್ನು
ಹೊದ್ದೆದ್ದು ಬಂದವರು ತಾನೆ ಕೊನೆಗೆ ಸಾಧನೆಯ ಸಿಹಿಯನ್ನುಂಡವರು! ಆದರೆ,ಕೆಲವರು ಮಾತ್ರ ಬದುಕಿನ ಇನ್ನೊಂದು ಕರಾಳ ಮುಖಕ್ಕೆ ವಿಮುಖರಾಗಿ, ಮೋಜು-ಮಸ್ತಿಯನ್ನೇ ಜೀವನವೆಂದುಕೊಂಡು ಹಾಯಾಗಿರುವವರು; ಜೀವನದ ಕ್ಷಣಿಕತೆಯನ್ನು, ಬದುಕಿನ ಅನಿಶ್ಚತೆಯನ್ನು, ಸಾವಿನ ನಿಗೂಢ ನಡೆಯನ್ನು, ಅರ್ಥಮಾಡಿಕೊಂಡಿರದ ಇಂಥವರಿಗೂ , ಬಾಳು, ಇಂದು ಕರೋನಾದ, ಕರಿನೆರಳಿನಲ್ಲಿ, ಆತಂಕದ ಸಂಧಿಗ್ಧ ಸಮಯದಲ್ಲಿ ಪಾಠವನ್ನು ಕಲಿಸುತ್ತಿದೆಯೆ?ಐಶ್ವರ್ಯ, ಅಂತಸ್ತು, ಅಧಿಕಾರಗಳಿಗಿಂತ ಪ್ರೀತಿ, ವಿಶ್ವಾಸ, ಮಾನವೀಯತೆಯ ಮಹತ್ವವನ್ನು ಕಲಿಸುತ್ತಿದೆಯೆ? ಬದುಕನ್ನು ಬಂದಂತೆ ಸ್ವೀಕರಿಸುವ, ಮನೋಬಲವನ್ನು ವೃದ್ಧಿಸುವ ಪ್ರಕೃತಿಯೊಂದಿಗೆ ಬೆರೆತು ಬಾಳುವ ಹದವನ್ನು, ಮಾನಸಿಕ ದೃಢತೆಯನ್ನು, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಬದುಕುವ ಅನನ್ಯ ಕಲೆಗಾರಿಕೆಯನ್ನು ಈ ಬದುಕು ಕಲಿಸುತ್ತಿದೆಯೆ?
ಬದುಕಿನ ವಿಸ್ಮಯದ ನಡೆ, ನಮ್ಮ ಊಹೆಯನ್ನು, ಎಲ್ಲಾ ಲೆಕ್ಕಾಚಾರವನ್ನೂ ಬುಡಮೇಲು
ಮಾಡಿಬಿಡಬಲ್ಲದು ಎಂಬ ಸತ್ಯವನ್ನು ಧೃಡೀಕರಿಸುತ್ತಿದೆಯೆ? ಈ ಬದುಕು ಎಷ್ಟೇ ಸವಾಲೊಡ್ಡಲಿ, ನಮ್ಮ ಸಹನೆಯ ಕೋಟೆಯನ್ನು ಛಿದ್ರಗೊಳಿಸಲಿ ಆತಂಕದ ಮೋಡವನ್ನು ಸೃಷ್ಟಿಸಿ, ನಮ್ಮ ಜಂಘಾಬಲವನ್ನೇ ಉಡುಗಿಸಿಬಿಡಬಲ್ಲ ಧೈತ್ಯಭಯದ ಮಳೆಯನ್ನೇ, ಸುರಿಸಿಬಿಡಲಿ- ಧೈರ್ಯ, ಮನಸ್ಥೈರ್ಯ ಹಾಗೂ ಭರವಸೆಯನ್ನು ಬತ್ತದಂತೆ ನೋಡಿಕೊಳ್ಳಬೇಕಾದುದು ನಮ್ಮ ಇಂದಿನ ತುರ್ತು ಅಗತ್ಯ. ಸಾವು-ನೋವುಗಳ ಸಂಖ್ಯೆಯನ್ನು ನೋಡುತ್ತ ಚಿಂತಿತರಾದರೆ, ಬಾಳಿನ, ನಾಳಿನ
ಭವಿಷ್ಯದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವುದಾದರೂ ಹೇಗೆ? ಸಾವಿನ ಕರಾಳಹಸ್ತದ ಭಯ ನಮ್ಮನ್ನ ಧೃತಿಗೆಡಿಸುವುದು ನಿಜವಾದರೂ, ಸುದೀರ್ಘಕಾಲ ಜೈಲಿನಲ್ಲಿ ಬಂಧಿಯಾಗಿದ್ದೂ, ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ನೆಲ್ಸನ್ ಮಂಡೇಲಾರಂಥವರು ನಮಗೆ ಸ್ಫೂರ್ತಿಯಾಗಬೇಕಿದೆ. “ಈ ಸಮಯ ಕಳೆದು ಹೋಗುತ್ತದೆ”- ಎಂಬ ಶಾಶ್ವತ ಸತ್ಯವಾದ ಶ್ರೀಕೃಷ್ಣನ ಮಾತು ಧೈರ್ಯ ತುಂಬ ಬೇಕಿದೆ. ಪ್ರತಿ ಮೋಡಕ್ಕೂ ಒಂದು ಬೆಳ್ಳಿಯ ಅಂಚಿದೆ ಎಂಬ ಮಾತಿನಲ್ಲಿ ನಂಬಿಕೆ ಮೂಡಬೇಕಿದೆ. ಈ ಬದುಕೇ ಕ್ಷಣಿಕವೆನ್ನುವುದುಸತ್ಯವಾದರೆ, ಇಂಥ ಸಮಸ್ಯೆಗಳೂ ಶಾಶ್ವತವೆಂದು ನಂಬುವುದಕ್ಕೇನಿದೆ? ಅನಿಶ್ಚಿತವಾದ ಈ ಬದುಕಿನಲ್ಲಿ, ಎಲ್ಲವೂ ಶಾಶ್ವತವಾದುದು ಬೇಕೆಂದು ಬಯಸುವುದೂ ಮೂರ್ಖತನವಲ್ಲವೇ? ವಾಸ್ತವವನ್ನು ಒಪ್ಪಿಕೊಳ್ಳಲು ನಮ್ಮ
ಕನಸುಗಳನ್ನು ಕುಗ್ಗಿಸುವುದಕ್ಕಿಂತ, ಒಪ್ಪಿಕೊಳ್ಳುತ್ತಲೇ, ಭವಿಷ್ಯದ ಭರವಸೆಗಾಗಿ, ನಮ್ಮ ನಂಬಿಕೆಯನ್ನೇ ಎತ್ತರಿಸಿಕೊಳ್ಳಬೇಕಾಗಿದೆ. ಬದುಕನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಿದೆ.ಎಲ್ಲವೂ ಕಳೆದುಹೋದರೂ, ಭವಿಷ್ಯವೊಂದಿದೆ-ಎಂಬ
ಸತ್ಯವನ್ನು ಧನಾತ್ಮಕವಾಗಿಯೇ ಅರಿಯಬೇಕಿದೆ. ಎಲ್ಲೊ ಓದಿದ ನೆನಪು ಕಂಬನಿ ತುಂಬಿದ ದಿನಗಳ
ಅವನ ಹೃದಯ ನಿದ್ದೆ ಇಲ್ಲದೇ ಒಂದನ್ನು ಮಾತ್ರ ನಿರೀಕ್ಷಿಸುತ್ತಿದೆ. -ಭರವಸೆಯ ಹೊಸಹುಟ್ಟು.”
ಕತ್ತಲೆಯ ಎಲ್ಲಾ ಶಕ್ತಿಯು ಒಟ್ಟುಗೂಡಿದರೂ, ಸೂರ್ಯನು ಪ್ರಭೆಯನ್ನು ನಿಲ್ಲಿಸಲಾರದು.When
we fail to understand the Lessons at the Right Time Life makes us understand the same Lesson a wrong Time. ಎಷ್ಟು ನಿಜವಲ್ಲವೆ?
-ಹೊನ್ನಪ್ಪಯ್ಯ ಗುನಗಾ
ಶ್ರೀ.ಹೊನ್ನಪ್ಪಯ್ಯ ಎಸ್. ಗುನಗಾ ವೃತ್ತಿಯಲ್ಲಿ ಇಂಗ್ಲೀಷ ಉಪನ್ಯಾಸಕರಾದರೂ ಕನ್ನಡ ಸಾಹಿತ್ಯಾರಾಧನೆಯಲ್ಲಿ ಬಹುವಾಗಿ ತೊಡಗಿಕೊಂಡವರು. ಈಗಾಗಲೇ ಅವರು ‘ವಶವಾಗುವ ಮುನ್ನ’ ಎಂಬ ಕವನ ಸಂಕಲನ ಮತ್ತು ‘ ಅರ್ಥ’ ಎಂಬ ಕಥಾ ಸಂಕಲನ ಹಾಗೂ ‘ ಕೌತುಕದ ಕನ್ನಡಿ’ ಎಂಬಅಂಕಣ ಬರೆಹ ಸಂಕಲನವನ್ನು ಪ್ರಕಟಿಸಿದ್ದಾರೆ. ಬರೆವಣಿಗೆಯ ಜೊತೆಗೆ ಸಂಘಟನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ,ಆಲೋಚನಾ ವೇದಿಕೆಯ ಪದಾಧಿಕಾರಿಯಾಗಿ, ಶ್ರೀ ನಾರಾಯಣ ಪ್ರತಿಷ್ಠಾನದ ಪದಾಧಿಕಾರಿಯಾಗಿ ಇವುಗಳ ಜೊತೆಗೆ ಉತ್ತರ ಕನ್ನಡ ಪದವಿ ಪೂರ್ವ ನೌಕರರ ಸಂಘ ಹಾಗೂ ಉತ್ತರ ಕನ್ನಡ ಇಂಗ್ಲೀಷ ಉಪನ್ಯಾಸಕರ ಸಂಘಗಳ ಕಾರ್ಯದರ್ಶಿಯಾಗಿಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಶ್ರೀ.ಹೊನ್ನಪ್ಪಯ್ಯನವರು ಪತ್ರಿಕೆಗಳಿಗೆ ಲೇಖನ ಬರೆಯುವುದಲ್ಲದೆ ನಾಟಕ ಮತ್ತು ಯಕ್ಷಗಾನಗಳಲ್ಲಿಯೂ ಅಭಿನಯಿಸುವ ಮೂಲಕ ಸದಾ ಕ್ರಿಯಾ ಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Comments