ಕಬೀರ ಕಂಡಂತೆ.. ೧೭
ಮುಂಡ ಮುಡಾಯೆ ಹರಿ ಮಿಲೆ, ಸಬ ಕೋಯಿ ಲೇಹಿ ಮುಂಡಾಯ/
ಬಾರ-ಬಾರ ಕೆ ಮುಂಡತೆ, ಭೇಡ ವೈಕುಂಠ ನ
ಜಾಯೆ//
ಜಗತ್ತಿನಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಅನೇಕಾನೇಕ ಮಾರ್ಗಗಳು ಇವೆ. ಅಧ್ಯಾತ್ಮದ ಸಾಧಕರು ಹೋಮ, ಹವನ, ಪೂಜೆ, ಪುನಸ್ಕಾರ, ಜಪ-ತಪಗಳ ಮೂಲಕ ತಮ್ಮ ಆರಾಧ್ಯ ದೈವವನ್ನು ಪೂಜಿಸುತ್ತಾರೆ. ಇದೇ ಉದ್ದೇಶದಿಂದ ಮಾಡುವ ಕರ್ಮಗಳಲ್ಲಿ ವಿವಿಧ ಬಣ್ಣದ ಉಡುಗೆ, ತೊಡುಗೆ, ಕೈಯಲ್ಲಿ ಜಪಮಣಿ, ಕೊರಳಲ್ಲಿ ಮಾಲೆ, ಮೈಮೇಲೆ ನಾಮ, ಭಸ್ಮ ಮುಂತಾದವುಗಳನ್ನು ಬಳಸುವ ಪದ್ಧತಿಗಳು ರೂಢಿಯಲ್ಲಿವೆ. ಆದರೆ, 'ಬಾಹ್ಯ ಆಡಂಬರ- ಗಳಿಗಿಂತ ಅಂತರಂಗಿಕ ಭಕ್ತಿಯೊಂದಿದ್ದರೆ ಸಾಕು' ಎಂದು ದಾರ್ಶನಿಕರು ಸಾರಿ ಸಾರಿ ಹೇಳಿದರೂ, ಜನರು ಭಕ್ತಿಯನ್ನು ಬದಿಗೊತ್ತಿ ತಮ್ಮ ಸ್ವಾರ್ಥ ಸಾಧನೆಗೋಸ್ಕರ ಆಡಂಬರದ ಆಚರಣೆಗಳಿಗೆ ಮಾರು ಹೋಗಿರುವದು ವಿಪರ್ಯಾಸದ ಸಂಗತಿ. ಇದರ ಜೊತೆಗೆ ಶುಚಿತ್ವವಿರಬೇಕು ಎಂಬ ನಿಯಮವನ್ನೇ "ಮಡಿ" ಎಂದು ಹೇಳುತ್ತ, ತಾನು ಇತರರಿಗಿಂತ ಶ್ರೇಷ್ಠ ಎಂಬ ವ್ಯಸನದಿಂದ ವ್ಯರ್ಥ ಕಸರತ್ತು ನಡೆಸುವವರನ್ನೂ ನಾವು ಕಾಣುತ್ತೇವೆ. ಅದಕ್ಕೇ ಕನಕದಾಸರು, "ಮಡಿ, ಮಡಿ ಎಂದು ನೂರ್ಮಡಿ ಹಾರಿದರೆ, ಮಡಿ ಎಲ್ಲಿ ಬಂತೋ ಬಿಕನಾಸಿ?" ಎಂದು ವ್ಯಂಗ್ಯ ನುಡಿಗಳ ಮೂಲಕ ಸಮಾಜವನ್ನು ಎಚ್ಚರಿಸಿದ್ದಾರೆ.
ಕಬೀರರು, ಬಾಹ್ಯ ಆಡಂಬರಕ್ಕಿಂತ ಆಂತರಿಕ ಪಾವಿತ್ರ್ಯತೆ ಅತ್ಯಂತ ಶ್ರೇಷ್ಠ ಎಂದು ಸಾರಿದ್ದಾರೆ. ಮೇಲಿನ ದೋಹೆಯಲ್ಲಿ ಅವರು,
" ಮುಂಡನದಿಂದ ಹರಿವೊಲಿವನಾದೊಡೆ, ಮುಂಡನವೇ ಲೇಸಹುದು/
ಸದಾ ಮುಂಡನಕ್ಕೊಳಗಾದ ಕುರಿ, ವೈಕುಂಠಕೆ ಹೋಗದೆಂದೂ//"
ಎಂದು ಹಾಡುತ್ತ ಜನ ಜಾಗೃತಿ ಮೂಡಿಸಿದ್ದಾರೆ. ಕುರಿಯ ಮೈಮೇಲಿನ ಉಣ್ಣೆಯನ್ನು ಪದೇ ಪದೇ ಕತ್ತರಿಸಿದರೂ ಅದೇನೂ ವೈಕುಂಠಕ್ಕೆ ಹೋಗದು. ಹಾಗೆಯೇ ಮನುಷ್ಯರು ಬರೀ ತಲೆಗೂದಲು ತೆಗೆಸಿದ ಮಾತ್ರಕ್ಕೆ ಹರಿ ಒಲಿಯಲಾರ.ಆಡಂಬರ -ದ ವೇಷ, ಭೂಷಣಗಳಿಗಿಂತ ಅಂತರಂಗದಲ್ಲಿ ಭಕ್ತಿಭಾವ ಜಾಗೃತವಾಗಬೇಕು ಎಂಬ ಮಾರ್ಮಿಕ ಸಂದೇಶ ನೀಡಿದ್ದಾರೆ.
"ಗರ್ವದಿಂದ ಮಾಡಿದ ಭಕ್ತಿ ದೃವ್ಯದ ಕೇಡು
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ
ಕೊಡದೆ ತ್ಯಾಗ ಎನಿಸಿಕೊಂಬುದು
ಮುಡಿಯಿಲ್ಲದ ಶೃಂಗಾರ
ಧೃಡವಿಲ್ಲದ ಭಕ್ತಿ, ಅಡಿ ಒಡೆದ ಕುಂಭದಲಿ
ಸುಜಲವ ತುಂಬಿದಂತೆ" ಎಂದು ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅತ್ಯಂತ ಮಾರ್ಮಿಕವಾಗಿ ಬಣ್ಣಿಸಿದ್ದಾಳೆ!
ಬಂಗಾರದ ದೇವರ ಮೂರ್ತಿ ಮಾಡಿ, ಅದಕ್ಕೆ ಕೊಡಗಟ್ಟಲೆ ಹಾಲು ಸುರಿದು, ಬಂಡಿಗಟ್ಟಲೆ ಹೂ ಅಲಂಕರಿಸಿ, ಮೃಷ್ಟಾನ್ನವನ್ನು ನೈವೇದ್ಯ ಮಾಡಿದರೂ ಭಕ್ತಿಯಿಲ್ಲದ ಪೂಜೆಗೆ ಭಗವಂತ ಖಂಡಿತ ಒಲಿಯಲಾರ. ಯಾವದು ನಿಜ ಭಕ್ತಿ, ಯಾವುದು ಭಕ್ತಿಯಲ್ಲ ಎಂಬ ಅರಿವಿಲ್ಲದೇ ಮಾಡಿದ ಪೂಜೆ ಫಲಿಸಲಾರದು. "ನಿಜವಾದ ಭಕ್ತಿಯಿಲ್ಲದೇ ದಾನ ಮಾಡಿದರೂ ಅದು ಬೋಳು ತಲೆಗೆ ಶೃಂಗಾರ ಮಾಡಿದಂತೆ" ಎಂಬ ಮಾತುಗಳು ಸಮಾಜವನ್ನು ಎಚ್ಚರಿಸುತ್ತವೆ. ನಿಷ್ಕಲ್ಮಷ ಭಕ್ತಿ, ಅಚಲ ಸತ್ಯ ಮತ್ತು ಶುದ್ಧ ಕಾಯಕ ಕೈಗೊಂಡರೆ ಅದುವೆ ನಿಜವಾದ ಪೂಜೆಯಾಗಿ, ದೈವ ಸಾಕ್ಷಾತ್ಕಾರಕ್ಕೆ ದಾರಿಯಾದೀತು.
ಮಡಿಯುಟ್ಟು ಬಡಬಡಿಸಿ ದೇವನ ಮರೆಯದಿರು
ಬಡಿವಾರದಿಂ ತಾನು ಮೇಲೆಂದು ಮೆರೆಯದಿರು/
ಇಡಿಯಾಗಿ ಅರ್ಪಿಸಿಕೊ ದೇವನಲಿ ಅನುದಿನವು
ತೊಡೆದುಬಿಡು ಕಲ್ಮಷವ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ.
Comments