ಕ್ಷೀಣಿಸುತ್ತಿದ್ದವು ಸಂಜೆ ಮಬ್ಬಲಿ ಭಾನುವಿನ ಕಿರಣಗಳು
ಮರಳುತಲಿದ್ದವು ತಂತಮ್ಮ ಗೂಡಿಗೆ ಚಿಲಿಪಿಲಿ ಹಕ್ಕಿಗಳು
ಪಡುವಣದಲಿ ಚೆಲ್ಲಿದ್ದ ದಿನಕರನು ನೆತ್ತರಿನ ಓಕುಳಿಯ
ನೀಡಿದ್ದ ಜಗಕೆ ಸಂಜೆಯಾವರಿಸುವ ಮುನ್ಸೂಚನೆಯ
ಬಾಳ ಸಂಜೆಯ ಹೊಸ್ತಿಲಲಿ ಕುಳಿತಿತ್ತು ಹಿರಿಜೀವ
ಮೆಲುಕು ಹಾಕುತ್ತಿತ್ತು ಗತಿಸಿದ ನೋವು ನಲಿವ
ಬಡತನದಲ್ಲೂ ಕಳೆದ ಮುಂಜಾವಿನ ಸುಂದರ ಬಾಲ್ಯ
ಹಾಯ್ದಿತ್ತು ಆಡಿದ ಆಟಗಳು ಮಾಡಿದ ಕೀಟಲೆಗಳು
ಇರಲಿಲ್ಲ ಆಗ ಬದುಕಿನ ಜವಾಬ್ಧಾರಿಯ ಭಾರ
ಕಂಡಿದ್ದು ಕೇವಲ ಭವಿಷ್ಯದ ಮುನ್ನೋಟದ ಕನಸ
ಬಾಲ್ಯ ಕಳೆದಂತೆ ಚಿಗುರೊಡೆಯಿತು ಹರೆಯದ ಕನಸು
ಹಾದುಹೋದವು ಹರೆಯದ ಸವಿನೆನಪಿನ ಚಣಗಳು
ಕಣ್ಣಿಗೆ ಕಟ್ಟಿದವು ಸರಸ ವಿರಸದ ನಿಮಿಷಗಳು
ಮರುಕಳಿಸಿದವು ಹೊತ್ತ ಜವಾಬ್ಧಾರಿಯ ನೊಗಭಾರಗಳು
ತಾ ಮಾಡಿದ ಬದುಕಿನ ಹಾರಾಟ ಹೋರಾಟ ತಾಕಲಾಟಗಳು
ಗತಿಸಿದ ಜೀವನದಲಿ ತಾ ಪಡೆದು ನೀಡಿದ ಕ್ಷಣಗಳು
ಹಾದುಹೋಯಿತು ತನ್ನ ತೋಳಿನಲಿ ಬಲವಿದ್ದ ಕಾಲ
ಬಿಸಿನೆತ್ತರು ದೇಹದಲಿ ಹರಿಯುತ್ತಿದ್ದ ಸಮಯ
ಹುಮ್ಮಸ್ಸಿನಲಿ ಬದುಕಿನ ಹೋರಾಟದಲಿ ಸೆಣೆಸಿದ್ದ ಗಳಿಗೆ
ಹರಿಯಿತು ಉಂಡ ಸೋಲು ಗೆಲವುಗಳ ಹಿನ್ನೋಟ
ತನ್ನವರಿಂದ ಹೆರವರಿಂದ ಅನುಭವಿಸಿದ ನೋವು ನಲಿವು
ತನ್ನವರಿಗೆ ಹೆರವರಿಗೆ ತಾ ಕೊಟ್ಟ ಸುಖ ದುಃಖ
ಅಲ್ಲಿಂದ ಈ ವರೆಗೆ ಬದಲಾದ ತಾನು ತನ್ನವರು
ಬದಲಾದ ದೇಹ ಮನಸುಗಳ ಈ ಹೊಯ್ದಾಟ
ಮಬ್ಬುಗಟ್ಟಿದ ಕಣ್ಣು ನೆರೆತು ಹಣ್ಣಾದ ಕೂದಲು
ಇಳಿಬಿದ್ದ ದವಡೆ ಶಕ್ತಿ ಗುಂದಿದ ದೇಹ
ಜೋತುಬಿದ್ದ ಗದ್ದ ನೆರಿಗೆಗಟ್ಟಿದ ಚರ್ಮ
ತಿಳಿಸುತ್ತಿದ್ದವು ಗತಿಸಿದ ಬಾಳಿನ ಮರ್ಮ
ಕಾಲನ ತಕಧಿಮಿತ ದಲ್ಲಿ ಕುಣಿದು ದಣಿದಿತ್ತು ಜೀವ
ಸಾಗಿತ್ತು ಸಿಹಿ ಕಹಿ ನೆನಪುಗಳ ಕನವರಿಕೆಯ ಭಾವ
ಆಯಾಸ ತರಿಸಿತ್ತು ಬೆಳಗಿಂದ ಸಂಜೆಯವರೆಗಿನ ಪಾಡು
ಮುಗಿಯಲೆಂದು ಬಯಸಿತ್ತು ಬಾಳ ಪಯಣದ ಹಾಡು
ಅಂದು ಕನಸ ಕಂಡಿದ್ದು ಮುಂಬರುವ ಬಾಳ ಮುನ್ನೋಟ
ಇಂದು ಕಾಣುತ್ತಿರುವುದು ಗತಿಸಿದ ವಾಸ್ತವದ ಹಿನ್ನೋಟ
ಮುನ್ನೋಟ ಹಿನ್ನೋಟದಲಿ ಇಂದು ನಡೆದಿದೆ ತೊಳಲಾಟ
ಬಾಳ ಪಯಣದ ಅಂತ್ಯದಲಿ ಬಲ್ಲವರಾರು ವಿಧಿಯಾಟ?
-ಶುಭಲಕ್ಷ್ಮಿ ಆರ್ ನಾಯಕ
ಕವಯತ್ರಿ ಶುಭಲಕ್ಷ್ಮಿ ಆರ್ ನಾಯಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪುಟ್ಟ ಹಳ್ಳಿ ಕೆಂಕಣಿ ಶಿವಪುರದಲ್ಲಿ ಜನನ.ಹಿರೇಗುತ್ತಿ ಯಲ್ಲಿ ಪ್ರೌಢ ಶಿಕ್ಷಣ , ಪಿಯುಸಿ ಹಾಗೂ ಪದವಿ ಗೋಖಲೆ ಶತಾಬ್ಧಿ ಕಾಲೇಜು ಅಂಕೋಲಾ , ಕಾರವಾರದ ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಬಿ. ಇಡಿ ಪದವಿ . ನಂತರ ಉಡುಪಿಜಿಲ್ಲೆಯ ಕುಂದಾಪುರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ವೃತ್ತಿಗೆ ಪ್ರವೇಶ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ವಾಸ, ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ನ ಸರಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ. ಓದು ಹಾಗೂ ಕವನ ಬರೆಯುವ ಹವ್ಯಾಸ ಇವರದು.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕರು.
ಕವಿತೆಯ ಒಳನೋಟಗಳನ್ನು ಚೆನ್ನಾಗಿ ಪ್ರಸ್ತುತ ಪಡಿಸಿರುವಿರಿ ಮೇಡಂ...