ಬೆಳಗಿನೊಂದಿಗೆ [ಕವನ]

Updated: Nov 27, 2020


­­­­ಕೋಳಿ ಕೂಗಿನೊಂದಿಗೆ ಬೆಳಗಾಯಿತೋ,

ಬೆಳಿಗ್ಗೆ ಕೋಳಿ ಕೂಗಿತೋ,

ಬೆಳಗಾಗಿತ್ತು!

ಸೂರ್ಯ ಮೂಡಿದ್ದ ,

ರಾತ್ರಿ ಮುಗಿದ ಮೇಲಿನ ಬೆಳಗು,

ನಿದ್ರೆ ಮುಗಿದ

ಜಗದಳವು.


ಮೈ ಮುರಿಯಲ್ಲಿಲ್ಲ

ಮೈ ಮರೆಯಲಿಲ್ಲ

ಡಂಗುರ ಸಾರಲಿಲ್ಲ,

ದಾರಿ ಕಾಯಲಿಲ್ಲ

ದಾರಿ ಕೇಳಲಿಲ್ಲ

ಬೆಳಗಾಗಿದೆ.


ದಿನವೊಂದು ಉದಯಿಸಿದೆ,

ದಿನವೊಂದು ಮರಣಿಸಿದೆ,

ಹಳೆಯದರೊಂದಿಗೆ

ಹೊಸತುದಯಿಸಿದೆ.

ಎಲ್ಲವೂ ಹೊಸತು ಎಲ್ಲವೂ ಹಳತು ,

ನಿನ್ನೆಯೊಂದಿಗಿನ

ಬದಕು ಸೊಗಸು.

ರಾತ್ರಿ ಕಂಡಂತಹ ಭಾವಿ

ಹಗಲು ಧುಮುಕುವ

ಕನಸು.

ಬನ್ನಿ ಬದುಕೋಣ,

ಹೊಸ ದಿನಗಳೊಂದಿಗೆ,

ಹಳೆಯ ನೆನಪುಗಳೊಂದಿಗೆ.

ಇಂದಿಗೆ ಮುಗಿದಿಲ್ಲ ,

ನಾಳೆಗೆ ನಿಲ್ಲದು

ಮೊಗೆದಷ್ಟು

ಮುಗಿಯದ ಶರಧಿ.


ಮತ್ತೆ ರಾತ್ರಿಯಾಗುತ್ತಿದೆ ,

ಬೆಳಗಾಗಲು.

ಜಿ. ಜಿ ಹೆಗಡೆ

ಮೇಲಿನ ಬಣಗಿ , ಸಿದ್ದಾಪುರ


ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಸಿದ ಶ್ರೀ ಜಿ. ಜಿ. ಹೆಗಡೆಯವರದು ತಮ್ಮ ವೃತ್ತಿ ಬದುಕಿನೊಂದಿಗೆ ಕಲೆ ಸಾಹಿತ್ಯಗಳಲ್ಲಿಯೂ ಅಪಾರ ಪ್ರೀತಿ ಹೊಂದಿರುವ ವ್ಯಕ್ತಿತ್ವ. ಗಾಢ ಓದುವಿಕೆಯ ಜೊತೆಗೆ ಸೂಕ್ಷ್ಮ ಗ್ರಾಹಿತ್ವವನ್ನು ಹೊಂದಿರುವ ಶ್ರೀ ಜಿ. ಜಿ. ಹೆಗಡೆಯವರೊಂದಿಗೆ ಸಾಹಿತ್ಯದ ಕುರಿತು ಮಾತನಾಡುವುದೊಂದು ವಿಶೇಷ ಅನುಭವ. ಪ್ರಸ್ತುತ, ಸಿದ್ದಾಪುರದಲ್ಲಿ ನಿವೃತ್ತಿಯ ನಂತರ ಕೃಷಿಯಲ್ಲಿ ತೊಡಗಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಆಗೀಗ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದು ಅವರ ಇತ್ತೀಚಿನ ಒಂದು ಕವಿತೆ ತಮ್ಮ ಓದಿಗಾಗಿ - ಸಂಪಾದಕ

156 views1 comment