#ಕಿರಣ_ವಾಚನ : 📚📖📚📖
ಗೋಕರ್ಣದ ಬ್ರಹ್ಮರ್ಷಿ ದೈವರಾತರು 🙏🙏
ಗೋಕರ್ಣದ ನಾಗರಿಕರಿಗೆ ಬ್ರಹ್ಮರ್ಷಿ ದೈವರಾತರ ಬಗ್ಗೆ ಎಷ್ಟು ಮಾಹಿತಿ ಇದೆ ಎಂದು ಗೊತ್ತಿಲ್ಲ. ಆದರೆ ಗೋಕರ್ಣಕ್ಕೆ ಬರುವ ಯಾತ್ರಿಗಳಿಗಂತೂ ಗೊತ್ತೇ ಇರಲಿಕ್ಕಿಲ್ಲ . ಗೋಕರ್ಣದಲ್ಲಿ ಆದಿ ಕಾಲದ ಋಷಿಮುನಿಗಳಿಗೆ ಸಮಾನ ವಿದ್ವತ್ತುಳ್ಳ ಬ್ರಹ್ಮರ್ಷಿ ದೈವರಾತರು ಗೋಕರ್ಣದಲ್ಲಿದ್ದರು ಎನ್ನುವುದು ಕೇಳಿಯೇ ಮೈರೋಮಾಂಚನಗೊಳ್ಳುತ್ತದೆ.
ಕೇವಲ ಗೋಕರ್ಣದವರಷ್ಟೇ ಅಲ್ಲ, ಭಾರತೀಯ ವೇದ ಸಂಸ್ಕೃತಿಯನ್ನು ಗೌರವಿಸುವ, ತಿಳಿದುಕೊಳ್ಳುವ ಪ್ರತಿಯೊಬ್ಬ ಸನಾತನಿಯೂ ಇವರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ನಾಡಿಗೆ ಇವರ ಕೊಡುಗೆಯನ್ನು ಅರಿತುಕೊಳ್ಳಬೇಕಾಗಿದೆ.
ಇತ್ತೀಚಿಗೆ ನನಗೆ, ಮಹರ್ಷಿಗಳ ಜೀವನ ಚರಿತ್ರೆ "ಛಂದೋದರ್ಶನ ಆವಿರ್ಭಾವ" ಓದುವ ಅವಕಾಶ ಸಿಕ್ಕಿತು. ಅವರ ಮುಖಚಿತ್ರ ನೋಡಿದರೆ ಸಾಕು, ಆ ಗಾಂಭೀರ್ಯದಲ್ಲೆಷ್ಟು ಜ್ಞಾನರಾಶಿ ಇದೆ ಎಂದು ತಿಳಿಯುತ್ತದೆ. ಈ ಪುಸ್ತಕ ಓದುವಾಗ ೧೮ - ೧೯ ರ ಶತಮಾನದಲ್ಲಿ ಗೋಕರ್ಣದಲ್ಲೆಡೆ ನಾವು ಓಡಾಡಿದಂತೆ ಭಾಸವಾಗುತ್ತದೆ. ಅಷ್ಟು ಸುಂದರವಾಗಿ, ವಿವರವಾಗಿ ಬರೆದ ಈ ಪುಸ್ತಕದ ಲೇಖಕರು, ಈಗ ಗೋಕರ್ಣದ ಅಶೋಕವನದಲ್ಲಿ ನೆಲೆಸಿರುವ ಮಹರ್ಷಿಗಳ ಮೊಮ್ಮಗರಾದ ಶ್ರೀ.ವೇದಶ್ರವ ಶರ್ಮರು.
೧೮೯೨ ರಲ್ಲಿ ಗೋಕರ್ಣದಲ್ಲಿ ಜನಿಸಿದ ಮಹರ್ಷಿಗಳು ಬಾಲ್ಯದಿಂದಲೇ ಅಸಾಧಾರಣ ಬುದ್ಧಿಮತ್ತೆ ಹೊಂದಿದವರು. ಚಿಕ್ಕವನಿದ್ದಾಗಲೇ ಗೋಕರ್ಣ ಬಿಟ್ಟು ಗುರುವನರಿಸುತ್ತ ಲೋಕ ಸಂಚಾರ ಮಾಡಿ, ದೇಶ ಕಂಡ ಮಹಾನ್ ಸಂತರಾದ ಶ್ರೀ ರಮಣ ಮಹರ್ಷಿಗಳು, ಶ್ರೀ ವಾಸುದೇವಾನಂದ ಸರಸ್ವತಿ ಟೆಂಬೆ ಸ್ವಾಮಿಗಳು ಮತ್ತು ಶ್ರೀ ಕಾವ್ಯಕಂಠ ವಾಶಿಷ್ಠ ಗಣಪತಿ ಮುನಿಗಳ ಬಳಿ ಶಿಷ್ಯತ್ವ ಸ್ವೀಕರಿಸಿ, ತಪಸ್ಸುಗೈದು ಬ್ರಹ್ಮರ್ಷಿಯ ಮಟ್ಟಕ್ಕೇರಿದರು.
ಗೋಕರ್ಣಕ್ಕೆ ಮರಳಿ ಬಂದ ಮಹರ್ಷಿಗಳು ಮೊದಲು ಸಮುದ್ರದಡಿಯಲ್ಲಿ ಆಶ್ರಮ ನಿರ್ಮಿಸಿ ಗುರುಕುಲ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ವೈದಿಕ ಜ್ಞಾನವೆರೆದವರು. ನಂತರ ಈಗಿನ ಅಶೋಕೆಯಲ್ಲಿ ಆಶ್ರಮ, ಗೋಶಾಲೆ ನಿರ್ಮಿಸಿ ಸನಾತನ ಧರ್ಮದ ಮೂಲ ಸಂಪತ್ತಾದ, ವೇದ, ಯೋಗ, ಆಯುರ್ವೇದ ಶಿಕ್ಷಣವನ್ನು ಕಲಿಸುತ್ತ ಜನರ ಒಳಿತಿಗೆ, ಧರ್ಮದ ಉಳಿವು, ಉನ್ನತಿಗಾಗಿ ಪರಿಶ್ರಮ ಪಟ್ಟವರು.
ದೈವರಾತರ ವಿದ್ವತ್ತನ್ನು ಗೌರವಿಸಿ ನೇಪಾಳದ ರಾಜಮನೆತನ ಅವರಿಗೆ ವಿಶೇಷವಾಗಿ ಸನ್ಮಾನಿಸಿತ್ತು . ಭಾರತ ದೇಶದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದರವರು ಸ್ವತಃ ಅಶೋಕೆಯ ಆಶ್ರಮಕ್ಕೆ ಭೇಟಿ ನೀಡಿದ್ದರು.
ದೈವಾಂಶಸಂಭೂತರಾದ ದೈವರಾತರು ೧೯೭೫ ರಲ್ಲಿ ಇಹಲೋಕ ತ್ಯಜಿಸಿದರು. ಆದರೆ ಗೋಕರ್ಣದ ಅದೇ ಅಶೋಕೆಯಲ್ಲಿ ಅವರ ಮೊಮ್ಮಕ್ಕಳು ಆಯುರ್ವೇದ ಕೇಂದ್ರವನ್ನು ಸ್ಥಾಪಿಸಿ ಮಹರ್ಷಿ ದೈವರಾತರ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ.
ನೀವೂ ಮಹರ್ಷಿ ದೈವರಾತರ ಜೀವನ ಚರಿತ್ರೆ ಓದಿ, ಸನಾತನ ಧರ್ಮದ ಉಳಿವು ಏಳಿಗೆಗಾಗಿ ಜನ್ಮವೆತ್ತವರ ಆಶೀರ್ವಾದ ಪಡೆದುಕೊಳ್ಳಿ .
ಕಿರಣ ಅಂಕ್ಲೇಕರ.
ಸದಾ ಒಂದಿಲ್ಲೊಂದು ಚಟುವಟಿಕೆಕಯಲ್ಲಿ ನಿರತರಾಗಿರುವ
ಕಿರಣ ಅಂಕ್ಲೇಕರ ನಮ್ಮ ನಡುವಿನ ಸೃಜನಶೀಲ ಬರಹಗಾರರು. ಕವಿತೆ,ಕತೆ,ನುಡಿಚಿತ್ರ,ಭಗವದ್ಗೀತೆಯ ವ್ಯಾಖ್ಯಾನ, ಆಧ್ಯಾತ್ಮಿಕ ಚಿಂತನೆ ಹೀಗೆ ಬಿಡುವಿರದ ಬರವಣಿಗೆ. ಗೋಕರ್ಣದ ಮಹರ್ಷಿ ದೈವರಾತರ ಬಗ್ಗೆ ಅವರು ಬರೆದ ಲೇಖನ ನಿಮ್ಮ ಸಂದನಕ್ಕಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments