top of page

ಬಾ ಫಾಲ್ಗುಣ ರವಿ ದರ್ಶನಕೆ

ಶಿವಮಂದಿರ ಸಮವೆನೆ ಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ|

ಬಾ ಫಾಲ್ಗುಣ ರವಿ ದರ್ಶನಕೆ||

ಕುಂಕುಮ ಧೂಳಿಯ ದಿಕ್ತಟ ವೇದಿಯೊಳೋಕುಳಿಯಲಿ ಮಿಂದೇಳುವನು|

ಕೋಟಿ ವಿಹಂಗಮ ಮಂಗಳ ರವ ರಸನೈವೇದ್ಯಕೆ ಮುದ ತಾಳುವನು|

ಚಿನ್ನದ ಚೆಂಡೆನೆ ಮೂಡುವನು ಹೊನ್ನೆನೆ ಹೊಯ್ ನೀರ್ ನೀಡುವನು|

ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯಮಾಡುವನು||

ತೆರೆ ತೆರೆಯಾಗಿಹ ನೊರೆ ನೊರೆ ಕಡಲೆನೆ ಕಣ್ ನೋಡುವವರೆಗೆ|

ಬನ ಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳಿ ಸಮ ಹಿಮ ಬಾನ್ ಕರೆಗೆ|

ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿ ಮನ ತಾನುರಿದುರಿದೇಳೆ|

ಮರಗಿಡದಲಿ ಜಡದೊಡಲಲ್ಲಿ ಇದೇಕೋ ಸ್ಪಂದಿಸುತಿಹ ಭಾವಜ್ವಾಲೆ||

ವರ್ಣನದಿಂದ್ರಿಯನಂದನವನು ದಾಂಟುತ ದರ್ಶನ ಮುಕ್ತಿಯ ಸೇರಿ|

ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿ ಯೊಳಾನಂದವ ಹೀರಿ|

ಸರ್ವೇಂದ್ರಿಯ ಸುಖನಿಧಿಯಲ್ಲಿ ಸರ್ವಾತ್ಮನ ಸನ್ನಿಧಿಯಲ್ಲಿ|

ಸಕಲಾರಾಧನ ಬೋಧನ ಅನುಭವ ರಸ ತಾನಹುದಲ್ಲಿ||


ಕುವೆಂಪುರವರ ಈ ಕವನ ಫಾಲ್ಗುಣ ಮಾಸದ ರವಿಯ ದರ್ಶನವನ್ನು ಪಡೆಯಲು ಆಹ್ವಾನಿಸುತ್ತಿದೆ. ಅದೇ ತಾನೇ ಉದಯಿಸುತ್ತಿರುವ ಸೂರ್ಯನನ್ನು ಇದು ವರ್ಣಿಸುತ್ತಾ ಉದಯರವಿ ಉಂಟುಮಾಡಬಹುದಾದ ಪರಿಣಾಮಗಳಿಗೆ ಇರುವ ವಿವಿಧ ಆಯಾಮಗಳನ್ನೂ ಗಮನಕ್ಕೆ ತರುತ್ತಿದೆ. ಈ ಆಯಾಮಗಳಿಗೂ ಫಾಲ್ಗುಣ ಮಾಸಕ್ಕೂ ಸಂಬಂಧವನ್ನು ಕಲ್ಪಿಸುತ್ತಿದೆ. ಫಾಲ್ಗುಣ ಚಾಂದ್ರಮಾನ ವರ್ಷದ ಕೊನೆಯ ತಿಂಗಳು ಮಾತ್ರವಲ್ಲದೆ ಇದು ಸೌರಮಾನ ವರ್ಷಕ್ಕೂ ಕೊನೆಯ ತಿಂಗಳು. ಈ ಮಾಸದಲ್ಲಿ ಸೂರ್ಯ ಕುಂಭ ರಾಶಿಯಿಂದ ಮೀನ ರಾಶಿಗೆ ಬರುತ್ತಾನೆ. ಸೌರಮಾನದ 12 ರಾಶಿಗಳಲ್ಲಿ ಮೀನ ಕೊನೆಯದು. ಇದರ ನಂತರ ಚಾಂದ್ರಮಾನದ ಚೈತ್ರಮಾಸದೊಂದಿಗೆ, ಸೌರಮಾನದ ಮೇಷರಾಶಿಗೆ ಸೂರ್ಯನ ಆಗಮನವಾಗುವುದರೊಂದಿಗೆ ಹೊಸವರ್ಷಾರಂಭ. ಫಾಲ್ಗುಣ ಮಾಸದ ವಿಶೇಷತೆ ಚಾಂದ್ರಮಾನ ಮತ್ತೆ ಸೌರಮಾನಗಳೆರಡೂ ಒಂದುಗೂಡುವುದು. ಭಾರತೀಯ ಚಿಂತನೆಯಲ್ಲಿ ಸೂರ್ಯ, ಚಂದ್ರರು ನಮ್ಮ ಎರಡು ಕಣ್ಣುಗಳು, ಜ್ಞಾನೇಂದ್ರಿಯಗಳು. ಸೂರ್ಯ ಮತ್ತು ಚಂದ್ರರ ಗತಿಯನ್ನು ಆಧರಿಸಿ ಪಂಚಾಂಗ ನಮ್ಮ ವ್ಯವಹಾರಗಳನ್ನು ನಿರ್ದೇಶಿಸುತ್ತದೆ.


ಚಾಂದ್ರಮಾನದ ಆರು ಋತುಗಳಲ್ಲಿ ಕೊನೆಯದಾದ ಶಿಶಿರ ಋತುವಿನ ವ್ಯಾಪ್ತಿಗೆ ಒಳಪಟ್ಟದ್ದು ಮಾಘ ಮತ್ತು ಫಾಲ್ಗುಣ ಮಾಸಗಳು. ಶಿಶಿರದ ಲಕ್ಷಣಗಳು ತುಟ್ಟತುದಿ ತಲುಪಿದುದನ್ನು ಮತ್ತು ವಸಂತ ಋತುವಿನ ಆಗಮನವನ್ನು ಉದ್ಘೋಷಿಸುವ ತಿಂಗಳು ಫಾಲ್ಗುಣ. ಅದರ ಸೂಚನೆ ಈ ತಿಂಗಳಿನಲ್ಲಿ ಸುಸ್ಪಷ್ಟ. ಗಡ ಗಡ ಎಂದು ಗದಗುಡಿಸುತ್ತಿದ್ದ ಛಳಿ ಹಿಂದೆ ಸರಿದು ಓಹ್ ಎಂದು ಉದ್ಗರಿಸುವ ಹಿತದ ವಾತಾವರಣ ಕಾಲಿಡುತ್ತದೆ. ಫಾಲ್ಗುಣ ಮಾಸ ವಿವಿಧ ಗುಣ ಮತ್ತು ಫಲಗಳಿಗೆ ಆಕರವಾಗುವ ಸೃಷ್ಟಿಕ್ರಿಯೆ ಮುಂದೆ ಆರಂಭವಾಗುವುದಕ್ಕೆ ಮುನ್ನುಡಿ. ವಿರಾಗಿಯಂತೆ ತಪೋನಿರತನಾಗಿದ್ದ ಶಿವ ಗಿರಿಜೆಯ ತಪಸ್ಸಿಗೆ ಮೆಚ್ಚಿ ಆಕೆಗೆ ಒಲಿದದ್ದು, ಅದನ್ನು ಸಾಧ್ಯಗೊಳಿಸಿದ ಕಾಮ ದಹನ, ರತಿಯ ವಿಲಾಪಕ್ಕೆ ಕರಗಿದ ಶಿವನಿಂದ ಕಾಮ ಅನಂಗನಾಗಿ ಜೀವಂತವಾದದ್ದು, ಆ ಸಂತೋಷಾರ್ಥ ವಿವಿಧ ರಂಗುಗಳ ಓಕುಳಿಯಾಡುವ ಹೋಳಿ ಹಬ್ಬದಾಚರಣೆ, ಅಸಮಾನತೆಯ ಮೂಲದ ಸಾಮಾಜಿಕ ಕೆಡುಕುಗಳ ನಿವಾರಣೆಯಾಗಬೇಕು, ಯಾವುದೇ ಭೇದ ಭಾವನೆ ಇಲ್ಲದೆ ಎಲ್ಲರೂ ಬೆರೆಯ ಬೇಕು ಎನ್ನುವ ಆಶಯದ ಹೋಳಿಯಾಚರಣೆ ಇವೆಲ್ಲಾ ಈ ತಿಂಗಳಿನಲ್ಲಿಯೇ. ಈ ಮಾಸದ ಅಧಿಪತಿ ಗೋವಿಂದ ಎನ್ನುತ್ತದೆ ವೈಷ್ಣವ-ಪಂಚಾಂಗ. ಈ ತಿಂಗಳಲ್ಲಿ ಆಚರಿಸುವ ವ್ರತಗಳಲ್ಲಿ ಪಯೋವ್ರತವೂ ಒಂದು. ಪುರಾಣದ ಪ್ರಕಾರ ಇದನ್ನು ಅದಿತಿ ತನಗೆ ವಿಷ್ಣುವೇ ಮಗನಾಗಿ ಜನಿಸಿ ದೇವೇಂದ್ರನಿಗೆ ಬಲಿಯಿಂದ ಉಂಟಾಗುತ್ತಿರುವ ಪೀಡೆಯಿಂದ ಕಾಪಾಡಬೇಕು ಎಂದು ಮಾಡಿದ ವ್ರತ; ಇದರ ಫಲವೇ ವಾಮನಾವತಾರ. ಫಲ್ಗುಣೀ ನಕ್ಷತ್ರದಲ್ಲಿ ಹುಣ್ಣಿಮೆಯಾಗುವ ಮಾಸ ಫಾಲ್ಗುಣ. ಫಲ್ಗುಣೀ ನಕ್ಷತ್ರದಲ್ಲಿ ಹುಟ್ಟಿದ ಅರ್ಜುನ ಫಲ್ಗುಣಿ. ಅರ್ಜುನ ಭಗವದ್ಗೀತೆಯ ಬೋಧೆಗೆ ಅರ್ಹನಾದವನು. ವಿಶ್ವರೂಪದರ್ಶನ ಪಡೆದವನು. ಈಶ್ವರನಿಗೆ ಸರಿಸಮಾನವಾಗಿ ಹೋರಾಡಿ ಅವನನ್ನು ಮೆಚ್ಚಿಸಿದವನು. ತೀರ್ಥಯಾತ್ರೆಯ ಸಂದರ್ಭದಲ್ಲಿ ಚಿತ್ರಾಂಗದಾ, ಉಲೂಪಿ, ಸುಭದ್ರರನ್ನು ಮದುವೆಯಾದರೂ ದಿವ್ಯ ಸುಂದರಿ ಊರ್ವಶಿಯ ಸುಖಭೋಗವನ್ನು ಬುದ್ಧಿಪೂರ್ವಕವಾಗಿ ನಿರಾಕರಿಸಿದ ಸಂಯಮಿ, ಅತ್ಯಂತ ದೃಢವಾದ ತಪಸ್ಸನ್ನು ಮಾಡಿದ ಹಿರಿದಾದ ತಪಸ್ವಿ. ಇಂಥ ಘನವಾದ ಸಾಧ್ಯತೆಗಳನ್ನೆಲ್ಲ ಅಡಕವಾಗಿರಿಸಿಕೊಂಡ ತಿಂಗಳು ಫಾಲ್ಗುಣ.ಇವನ್ನೆಲ್ಲಾ ಭಾವಿಸಿ ಸುಂದರವಾದ ಹೂಗಳಿಂದ ಅಲಂಕೃತವಾಗಿ ಶಿವನ ಮಂದಿರದಂತೆ ತೋರುವ ಗಿರಿ ಶೃಂಗಕ್ಕೆ ಫಾಲ್ಗುಣದ ರವಿಯ ದರ್ಶನವನ್ನು ಪಡೆಯಲು ಬಾ ಎಂದು (ಸ್ವಗತವೂ ಹೌದು, ಓದುಗರಿಗೂ ಹೌದು) ಆಹ್ವಾನಿಸುತ್ತಿದೆ ಈ ಕವನ. ದರ್ಶನ ಎನ್ನುವುದಕ್ಕೆ ಭಾರತೀಯ ಚಿಂತನೆಯಲ್ಲಿ ಪರಮ ವಾಸ್ತವತೆಯ ಅನುಭಾವ, ಬೋಧೆ ಎಂಬ ಅರ್ಥ ಇದೆ. ಸೂರ್ಯನನ್ನು ಪರಮ ವಾಸ್ತವತೆಯ ಜ್ಞಾನಕ್ಕೆ ಪ್ರತೀಕ ಎನ್ನುತ್ತಾರೆ ತತ್ತ್ವಚಿಂತಕರು. ಸಾಮಾನ್ಯವಾಗಿ ನಾವು ಕಾಣುವ ಸೂರ್ಯ ಪೂರ್ವದಿಕ್ಕಿನಲ್ಲಿ ಕುಂಕುಮ ಬಣ್ಣದಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಅದರ ಸುತ್ತಾ ಆ ಬಣ್ಣ ಧೂಳಿನಂತೆ ಹರಡಿಕೊಂಡಿರುತ್ತದೆ. ಕವಿಯ ಕಣ್ಣಿಗೆ ಈ ಸೂರ್ಯ ಕಾಣಿಸಿಕೊಂಡ ದಿಕ್ಕೇ ನಾವು ಅಂತಿಮವಾಗಿ ನೆಲೆಯೂರುವ ತಟ=ದಡ. ಆ ದಿಕ್ಕೇ ಸತ್ಯದರ್ಶನಕ್ಕಾಗಿ ಮಾಡುವ ಯಜ್ಞದ ವೇದಿಕೆ. ಉತ್ಸಾಹ, ಸಂಭ್ರಮ ಬೆಡಗು ಬಿನ್ನಾಣಗಳ ಸೃಷ್ಟಿಯ ಸೂಚಕವಾದ ವಸಂತೋತ್ಸವದ ಮುಖ್ಯ ಅಂಗ ಓಕುಳಿಯಾಡುವುದು. ಸೂರ್ಯ ಓಕುಳಿಯ ನೀರಿನಲ್ಲಿಯೇ ಮಿಂದೆದ್ದಿದ್ದಾನೆ. ಸೃಷ್ಟಿಯ ಪ್ರತೀಕವಾಗಿ ರೂಪುಗೊಂಡಿದ್ದಾನೆ. ಅದಕ್ಕೆ ಒಂದು ಸಂಕೇತ ಆಹತ= ಕೇಳಿಬರುವ ವ್ಯಕ್ತ-ನಾದ ಮತ್ತು ಅನಾಹತ-ನಾದ=ರವ=ಮೌನ-ನಾದ=ಅಭಿವ್ಯಕ್ತಗೊಳ್ಳದ ನಾದ. ಸೂರ್ಯೋದಯವಾಗುವವರೆಗೂ ಮೌನವಾಗಿದ್ದ ಹಕ್ಕಿಗಳ ಕಲಕಂಠ (ಅನಾಹತ ನಾದ) ಈಗ ಕಲರವ(ಆಹತ ನಾದ)ವಾಗಿದೆ. ಅದು ಬೆಳಗಾಗಿದೆ ಎಂದೂ, ಬೆಳಕೇ ನೈವೇದ್ಯವಾಗಿದೆ ಎನ್ನುವ ಶುಭದ (ಮಂಗಳದ) ಸಂಗತಿಯನ್ನೂ, (ಅಂದರೆ) ಬೆಳಕಿಗೆ ಬೆಳಕೇ ನೈವೇದ್ಯ, ಬೆಳಕೇ ಅಸ್ತಿತ್ವದ ಸಾರ ಎನ್ನುವುದನ್ನೂ ಸಾರುತ್ತಿದೆ. (ನೈವೇದ್ಯ ಎನ್ನುವುದಕ್ಕೆ ದೇವರಿಗೆ ಅರ್ಪಿಸಿದ ಸಂಗತಿಗಳು-ಹಣ್ಣು, ಆಹಾರ, ಪೇಯಗಳು ಎಂಬ ಅರ್ಥವೂ ಇದೆ). ಬೆಳಕು ಸಹಜವಾಗಿ ಸಂತೋಷದ ಆಕರ, ಆಗರ. ಎಲ್ಲವೂ ಮುದಗೊಂಡಿರುವುದು ಕವಿಗೆ ಎದ್ದುಕಾಣುತ್ತಿದೆ. ಮೂಡಿದ ಸೂರ್ಯ ಚಿನ್ನದ ಚೆಂಡಿನಂತಿದ್ದಾನೆ. ಚೆಂಡಿನ ವೃತ್ತಾಕಾರ ಪರಿಪೂರ್ಣತೆಗೂ, ಚಿನ್ನದ ಬಣ್ಣ ಪರಿಶುದ್ಧತೆಗೂ ಪ್ರತೀಕ. ಈ ಸೂರ್ಯ ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಹೊಳೆಯನ್ನು ಹರಿಸುತ್ತಾ ಬರುತ್ತಿದ್ದಾನೆ. ಇದುವರೆವಿಗೂ ನಿದ್ರೆ ಮತ್ತು ಕತ್ತಲಿನಿಂದಾಗಿ ಜಡವಾಗಿದ್ದವುಗಳೆಲ್ಲಾ ಚೈತನ್ಯ ಪಡೆದು ಕ್ರಿಯಾಶೀಲವಾಗಿವೆ. ಛಳಿಗಾಲದ ಹಿಮ ಎಲ್ಲೆಲ್ಲೂ ಆಚ್ಛಾದಿತವಾಗಿತ್ತು, ಅದು ಈಗ ಧೂಳಿಪಟವಾಗಿಬಿಟ್ಟಿದೆ, ಅದರ ಗುರುತೂ ಇಲ್ಲ. ಬನಸಿರಿ ತುಂಬಿದ ಕಣಿವೆಯು ನೊರೆ ತೆರೆಗಳುಳ್ಳ ಕಡಲಿನಂತೆ ಎದ್ದೆದ್ದು ಹೊಳೆ ಹೊಳೆದು ಕಾಣುತ್ತಿದೆ, ಮರಗಿಡಗಳಲ್ಲಿ ಚೈತನ್ಯ ಪುಟಿದೇಳುತ್ತಿದೆ.


ಇಂತಹ ವೇದಿಕೆಯಲ್ಲಿ ಕವಿ-ಪ್ರತಿಭೆಯ ಹೋಮಾಗ್ನಿಯಲ್ಲಿ ಕವಿಯ ಪ್ರತ್ಯೇಕವಾದ ಮನಸ್ಸು ಉರಿದುಹೋಗಬೇಕು, ಕವಿ-ಗ್ರಹಿಕೆ ಪರಾ ಪಶ್ಯಂತಿ ಮಧ್ಯಮಾ ವೈಖರಿಯ ವರ್ಣನೆಯ ಮಿತಿಯನ್ನು ದಾಟಬೇಕು, ಕವಿ-ವೈಯಕ್ತಿಕತೆ ಸೌಂದರ್ಯಸಮಾಧಿಯಲ್ಲಿ ಮೈಮರೆಯಬೇಕು, ಆನಂದ ರಸವನ್ನು ಹೀರಿ ಸರ್ವೇಂದ್ರಿಯಗಳಿಗೂ ಸುಖನಿಧಿಯನ್ನು ಉಣಿಸಬೇಕು, ಸರ್ವಾತ್ಮನ ಸನ್ನಿಧಿಯನ್ನು ಸೇರಬೇಕು. ಕವಿಯ ಕಲಾರಾಧನೆಯು ರಸ-ಬೋಧೆ, ರಸ-ಅನುಭವವಾಗಿ ಕೊನೆಗೆ ರಸವೇ ತಾನಾಗಿಬಿಡಬೇಕು, ದರ್ಶನ-ಅನುಭಾವಿ=ಮುಕ್ತ ಆಗಬೇಕು. ಇದೇ ಈ ಕವನ ಪ್ರಸ್ತಾಪಿಸುತ್ತಿರುವ ಫಾಲ್ಗುಣ-ರವಿ-ದರ್ಶನ.

ಕುವೆಂಪುರವರು ಇಲ್ಲಿ ಬಾಹ್ಯ ರವಿ ಅಂತರಂಗದ ರವಿಯಾಗಬೇಕು; ಬಾಹ್ಯದಲ್ಲಿ ಆಚ್ಛಾದನಾರಹಿತವಾದದ್ದು ಅಂತರಂಗದಲ್ಲೂ ಆಗಬೇಕು; ಬಾಹ್ಯದಲ್ಲಿ ಕಣ್ ಮನ ಸೆಳೆಯುವ ಸೃಷ್ಟಿಸೊಬಗು, ಅದು ಮೂಡಿಸುವ ಸೌಂದರ್ಯಪ್ರಜ್ಞೆ ಇಡೀ ವ್ಯಕ್ತಿತ್ವವನ್ನು ಸೌಂದರ್ಯದ ಆಕರ, ಆಗರವನ್ನಾಗಿಸಬೇಕು, ವ್ಯಕ್ತಿ ಸೌಂದರ್ಯ-ಸಮಾಧಿಸ್ಥಿತಿಯನ್ನು ತನ್ನದನ್ನಾಗಿಸಿಕೊಳ್ಳುವಂತೆ ಮಾಡಬೇಕು; ಬಾಹ್ಯ ಸೂರ್ಯ ಪ್ರಚೋದಿಸುವ ಜ್ಞಾನಾಗ್ನಿ ವೈಯಕ್ತಿಕತೆಯ ಮಿತಿಗಳನ್ನೆಲ್ಲಾ ದಹಿಸಿಬಿಡುವ ಅಂತರಂಗದ ಪ್ರಾಣಾಗ್ನಿಯಾಗಬೇಕು; ಬಾಹ್ಯ ಸಂಗತಿಗಳಿಗೆ ಸ್ಪಂದಿಸುವ ವರ್ಣನಾತ್ಮಕ ಮನಸ್ಸು ಮತ್ತು ಪ್ರತಿಭೆ ವರ್ಣನಾತೀತ ಸ್ತರವನ್ನು ಏರಬೇಕು ರಸಸ್ಯಂದಿ, ರಸ-ಅನುಭಾವಿ, ರಸಜ್ಞ ಆಗಬೇಕು, ರಸವಿಹಾರಿಯೇ ಆಗಿಬಿಡಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ನಾನು ಇದ್ದೇನೆ ಎನ್ನುವ ವೈಯಕ್ತಿಕ ಘನತೆಯ ಅಸ್ತಿತ್ವದ ಹೆಗ್ಗುರುತು ಮಾತ್ರವಲ್ಲದೆ ವ್ಯಕ್ತಿಗೆ ವಾಸ್ತವತೆಯ ದರ್ಶನ ಆಗಿದೆ ಎನ್ನುವುದರ ಹೆಗ್ಗುರುತೂ ಆಗಿದೆ.

- ಕೆ.ಎಲ್. ಪದ್ಮಿನಿ ಹೆಗಡೆ,

ಶ್ರೀಮತಿ ಕೆ.ಎಲ್.ಪದ್ಮಿನಿ: ಸಿರಿಗೆರೆಯ ಪ್ರಥಮ ದರ್ಜೆಯ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕಿಯಾಗಿ ತಮ್ಮ ವೃತ್ತಿ ಜೀವನ ಪಾರಂಭಿಸಿದ ಇವರು ತದನಂತರ ಹೊಳಲಕೆರೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಪ್ರಸ್ತುತದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತತ್ವಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳೆರಡರ ಮೇಲೆ ಎಂ.ಎ. ಮತ್ತು ಎಂಫಿಲ್ ಮಾಡಿರುವ ಇವರು ತತ್ವಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಗಳ ಮೇಲೆ ಹಲವು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಕನ್ನಡದ ಪ್ರಾಚೀನ ಮತ್ತು ಅರ್ವಾಚೀನ ಕವಿಗಳ ಕಾವ್ಯಗಳ ಮೇಲೆ ಆಳವಾದ ಅಧ್ಯಯನ ನಡೆಸಿ ಅವುಗಳನ್ನು ಈಗಾಗಲೇ ಪ್ರಕಟಿಸಿದ್ದಾರಲ್ಲದೆ ಇನ್ನೂ ಇವರ ಹಲವಾರು ಅಧ್ಯಯನ ಕೃತಿಗಳು ಪ್ರಕಟಣೆಗೆ ಕಾದು ಕುಳಿತಿವೆ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರದಲ್ಲಿ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಲ್ಲಿಸಿದ ಸೇವೆ ಸ್ಮರಣಾರ್ಹ. ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇವರ ಅವಿರತ ಸೇವೆಯನ್ನು ಗುರುತಿಸಿದ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿದ್ದಲ್ಲದೆ ಕರ್ನಾಟಕ ಸರಕಾರ ಇವರಿಗೆ 2012 ರಲ್ಲಿ ಮಹಿಳಾ ಸಾಧಕಿಯೆಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಬರಹಗಳು ಅತ್ಯಂತ ಅಧ್ಯಯನ ಶೀಲವಾಗಿವೆ. -ಸಂಪಾದಕ

9,484 views0 comments

Comentários


bottom of page