ಬಾನು ಸುರಿವ ನೀರಿಗೆ
ಕಾದು ನಿಂತ ಈ ಧರೆ
ವರುಣ ದೇವನೊಲುಮೆಗೆ
ಕರ ಮುಗಿದಿವೆ ಕೆರೆ-ತೊರೆ
ಬಾನಿನತ್ತ ಬಯಕೆಯಿಂದ
ಕರ ಚಾಚಿದೆ ವನರಾಶಿ
ಜಲಕಾಗಿ ಜಪಿಸುತಿದೆ
ಜೀವಕೋಟಿ ಮೇಳೈಸಿ
ಸುಡುವ ರವಿಯ ಕಿರಣಕೆ
ತರು ಲತೆಗಳ ಮರಣ
ಕಣ್ಣ ಹನಿಯು ಆವಿಯಾಗಿ
ಬುವಿಯಾಗಿದೆ ಮಸಣ
ಬರದ ಭೀಕರತೆಯ
ಮರೆಸಿ ಬಿಡೊ ಮಳೆರಾಯ
ಕರುಣೆದೋರಿ ಧರಣಿಯ
ಹಸಿರಾಗಿಸು ಮಹನೀಯ
ಮನುಜ ಕುಲದ ಪಾಪಕೆ
ಬಲಿ ಕೊಡದಿರು ಇಳೆಯ
ಚಿಗಿವ ಗಿಡದ ನಗುವಲ್ಲಿ
ನಿನ್ನ ಋಣ ಗೆಳೆಯ
- ಶ್ರೀಧರ ಶೇಟ್ ಶಿರಾಲಿ.
--- + ---
Comments