‘ಆಲೋಚನೆ’ ವೇದಿಕೆಯನ್ನು ಪ್ರಾರಂಭ ಮಾಡಿರುವುದಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
‘ಆಲೋಚನೆ’ ಸಾಹಿತ್ಯಲೋಕದಲ್ಲಿ ಒಂದು ಹೊಸ ಕ್ರಾಂತಿಕಾರಕ ವೇದಿಕೆ ಎನ್ನುವುದರಲ್ಲಿ ಏನೇನೂ ಉತ್ಪ್ರೇಕ್ಷೆಯಿಲ್ಲ.
ಡಾ| ಶ್ರೀಪಾದಶೆಟ್ಟರ (ಹೊನ್ನಾವರ) ಮನದಾಳದಲ್ಲಿ ಎಷ್ಟೋ ವರ್ಷಗಳ ಚಿಂತನೆಯಿಂದ ಮೂಡಿಬಂದದ್ದು, ಈ ‘ಆಲೋಚನೆ’. ‘ಆಲೋಚನೆ’ ಯು ಬಹಳಷ್ಟು ಯುವ ಬರಹಗಾರರಿಗೆ ಸ್ಪೂರ್ತಿದಾಯಕವಾಗಿದೆ. ಎಷ್ಟೋ ಬರಹಗಾರರಿಗೆ ತಾನೂ ಬರೆಯಬೇಕೆಂಬ ಸ್ಪೂರ್ತಿ ನೀಡಿದೆ. ಕೆಲವರು ತಾನು ಬರೆದರೆ ಉಪಯೋಗವೇನು? ಅದೆಲ್ಲಿ ಪ್ರಕಟವಾಗುತ್ತದೆ ಎಂಬ ನಿರಾಶೆಯಿಂದಲೇ ತಮ್ಮ ಸಾಹಿತ್ಯಾಸಕ್ತಿಯನ್ನು ಹಾಗೆಯೇ ಹುದುಗಿರಿಸಿಕೊಂಡಿದ್ದರೆ, ಮತ್ತೆ ಕೆಲವರು ತಾವು ಬರೆದದ್ದು ‘ಅಲೋಚನೆ’ ಯ ಮೂಲಕ ಬೆಳಕು ಕಾಣುತ್ತದೆ ಎಂದು ಎಲ್ಲಿಲ್ಲದ ಸಂಭ್ರಮ! ಮುಂದೆ ಬರೆಯಲು ಉತ್ಸಾಹದ ಚಿಲುಮೆ ಮೂಡಿಸುತ್ತದೆ!
ಹಿರಿಯ ಮತ್ತು ಅನುಭವಿ ಸಾಹಿತಿಗಳೂ ಕೂಡ ಸಡಗರದಿಂದ ತಮ್ಮ ಸಾಹಿತ್ಯ ಕೃಷಿಯ ಪಾಲುಗಳನ್ನು ಹಂಚಿಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ. ಕಿರಿಯ ಮತ್ತು ನವೀನ ಸಾಹಿತಿಗಳು ತಮ್ಮ ಬರಹ ಪ್ರಕಟಗೊಳ್ಳುತ್ತಿರುವುದರ ಜೊತೆಗೆ ಪ್ರೋತ್ಸಾಹದಾಯಕ ವಿಮರ್ಶೆಗಳನ್ನು ನೋಡಬಹುದು. ಇದು ಮುಂದೆ ಅವರು ರಚನಾತ್ಮಕ ಸಾಹಿತ್ಯವನ್ನು ರಚಿಸಲು ಉತ್ಸಾಹ ಹಿಮ್ಮಡಿಸುತ್ತದೆ. ‘ಆಲೋಚನೆ’ ಯಲ್ಲಿ ಬರುತ್ತಿರುವ ಬರಹಗಳನ್ನು ನೋಡಿದರೆ ಒಂದೇ ಜಿಲ್ಲೆಯಾದ ಉತ್ತರಕನ್ನಡ (ಸದ್ಯ ಹೆಚ್ಚಿನ ಬರಹಗಳು ಅಲ್ಲಿಂದಲೇ ಬರುತ್ತಿವೆ ಮತ್ತು ಅಲ್ಲಿಯ ಸಾಹಿತಿಗಳು ಬೇರೆ ಊರುಗಳಲ್ಲಿ ನೆಲೆಸಿರುವವರು ಇರುತ್ತಾರೆ) ದಲ್ಲಿ ಎಷ್ಟೊಂದು ವೈವಿಧ್ಯಮಯ ಸಾಹಿತ್ಯ ರೂಪಗಳು ಹರಿದು ಬರುತ್ತಿವೆ – ಗದ್ಯ, ಕವನ, ಕವಿತೆ, ಯಕ್ಷಗಾನ, ಅನುಭವದ ಸಂಗತಿಗಳು, ವನಸಿರಿಯ ಸೊಬಗಿನ ವಿಮರ್ಶೆ, ಸಾಮಾಜಿಕ ಕಾರ್ಯಕರ್ತರ ಪರಿಚಯ ಲೇಖನ, ಗುಡ್ಡಗಾಡು ಜನರ ಸಾಹಿತ್ಯ, ಕಾವ್ಯ, ಕಾದಂಬರಿಯ ಪ್ರತ್ಯೇಕ ವಿಮರ್ಶೆಗಳು ಎಷ್ಟೊಂದು? ಇಷ್ಟರಲ್ಲೇ ನಾಟ್ಯಕಲೆಯ ಬಗ್ಗೆ ನಾಟ್ಯಗಾರ್ತಿಯೊಬ್ಬರಿಂದ ಒಂದು ಲೇಖನವು ಬರುವುದಿದೆ ಎಂದು ನಾಟ್ಯಗಾರ್ತಿಯೊಬ್ಬರು ಭರವಸೆ ನೀಡಿದ್ದಾರೆ.ಜೊತೆಗೆ ಕರಾವಳಿಯ ರುಚಿ ಅಡಿಗೆಯ ಪರಿಚಯವಲ್ಲದೆ ಮಲೆನಾಡಿನ ಸ್ವಾದಭರಿತ ತಿನಿಸುಗಳನ್ನು ಬಡಿಸುವುದು ಆಲೋಚನೆಗೆ ಹೊಸ ಮೆರಗು ತಂದಿದೆ.ಈಗಾಗಲೇ ‘ಆಲೋಚನೆ’ ಗೆ ಸರಿಸುಮಾರು ಹತ್ತು ಸಾವಿರದಷ್ಟು ಸಾಹಿತ್ಯಾಸಕ್ತರು ಸದಸ್ಯರಾಗಿರುವುದು ತುಂಬಾ ಸಂತೋಷದ ವಿಚಾರ ಎಂದು ತಿಳಿದು ಬಂದಿದೆ. ಇಷ್ಟು ಅಲ್ಪ ಸಮಯದಲ್ಲೇ ಇಷ್ಟೊಂದು ‘ಆಲೋಚನೆ’ ಯಲ್ಲಿ ಆಸಕ್ತರಾಗಿದ್ದಾರೆ ಎಂದರೆ ಆಶ್ಚರ್ಯಮಿಶ್ರಿತ ಸಂತೋಷ.‘ಆಲೋಚನೆ’ ನಾಡಿನಾದ್ಯಂತ, ಹೊರನಾಡು ಮತ್ತು ಹೊರದೇಶಗಳಿಗೆ ಹಬ್ಬಿದರೆ ಅಚ್ಚರಿಯೇನೂ ಇಲ್ಲ.! ‘ಆಲೋಚನೆ’ ಯ ಈ ಬೆಳವಣಿಗೆಯ ಭರಾಟೆ ನೋಡಿದರೆ ಈ ಅನುಮಾನ ಅಸಹಜವೆನಿಸದು.
ಇದರ ಸಾರಥ್ಯ ವಹಿಸಿರುವ ಶ್ರೀಪಾದದ್ವಯರ ಮತ್ತು ಅವರ ಸ್ನೇಹಿತ ಬಳಗದವರ ಮೇಲೆ ಸಹಜವಾಗಿ ಹೆಚ್ಚಿನ ಭಾರ ಬೀಳುತ್ತದೆ. ಅದನ್ನು ತಡೆದುಕೊಳ್ಳುವ, ಸಮರ್ಥವಾಗಿ ಮುನ್ನಡೆಸುವ ಶಕ್ತಿಯನ್ನು ಸಾಹಿತ್ಯ ದೇವಿ ಶಾರದೆ ದಯಪಾಲಿಸಲೆಂದು ಪ್ರಾರ್ಥಿಸೋಣ.ಆಲೋಚನೆಯೊಂದಿಗೆ ನಾವೆಲ್ಲ ಕೈಜೋಡಿಸೋಣ.ಆಲೋಚನೆಯ ಬಳಗ ಉತ್ತಮ ಆರೋಗ್ಯ ಮತ್ತು ಬತ್ತದ ಉತ್ಸಾಹದಿಂದ ಕಾರ್ಯವೆಸಗಲಿ ಎಂದು ಹಾರೈಸುವೆ. ಇದು ನನ್ನ ಹೃದಯಾಳದ ಆಶಯ.
ಇ0ತಿ ತಮ್ಮ ಹಿತೈಷಿ
ಡಾ| ದಾಮೋದರ್ ಕೆ. ಪಿ.
Comments