ಹೊಸಿಲ ಬಾಗಿಲಿಗೆ
“ಸರ್ವೇ ಜನಾ ಸುಖಿನೋ ಭವಂತು”
ಎಂದು ಬರೆದ ಮಿತ್ರನ ಮನೆಯಲ್ಲಿ
ಗೋಡೆಯ ಮೇಲೆ ಇಳಿಬಿಟ್ಟ
ವರ್ಣಮಯ ಕ್ಯಾಲೆಂಡರಿನಲ್ಲಿ
ರಾಧಾ-ಮಾಧವರ ರಂಗಿನಾಟದ ದೃಶ್ಯ.
ನೋಡನೋಡುತ್ತಿದ್ದಂತೆ
ಸಂಭ್ರಮಗಳೆಲ್ಲ ಧರೆಗಿಳಿದು
ಊರೆಲ್ಲ ಹೋಳಿಹುಣ್ಣಿಮೆಯ
ಓಕುಳಿಯಾಟದ ಕಲರವ.
ಸಿಂಗಾರದ ಬಂಡಿತುಂಬ
ಬಣ್ಣ ತುಂಬಿದ ಕುಂಭ.
ಚಿಣ್ಣರೋ, ಯುವಕರೋ, ಮುದುಕರೋ
ಬಣ್ಣ ಚಿಮ್ಮುವರೇ ಎಲ್ಲ.
ವರ್ಣನೆಗೂ ಮೀರಿದ ಬಣ್ಣಗಳಿಗೆ
ಬೆರಗಾಗಿತ್ತು ಕಾಮನ ಬಿಲ್ಲು.
ಬಣ್ಣಗಳಲಿ ಮಿಂದವರು,
ಒಬ್ಬರಿಗೊಬ್ಬರ ಗುರುತು
ಸಿಗದೇ ಬೇಸ್ತು ಬಿದ್ದರು.
ಒಬ್ಬರ ಮುಖ ಇನ್ನೊಬ್ಬರು
ನೋಡಿ ಮುಸಿಮುಸಿ ನಕ್ಕರು.
ಕೊನೆಕೊನೆಗೆ ಬಣ್ಣಗಳಿಗೇ ಮತ್ತೇರಿ
ಕುಣಿದವು ತಮ್ಮತಮ್ಮಲ್ಲೇ ಮದವೇರಿ .
ಓಣಿ ಓಣಿಗೊಂದು, ಕೇರಿ ಕೇರಿಗೊಂದು,
ಊರಿಗೆಷ್ಟೋ ಹೊರಟವು ವರ್ಣದ ತೇರು.
ಒಂದೊಂದಕೂ ರಂಗು ರಂಗಿನ
ಬೆಡಗಿನ ಪತಾಕೆ ಬೇರೆ ಬೇರೆ.
ತೇರಿನ ತುಂಬಾ ಬಣ್ಣಗಳ ಪಿಚಕಾರಿ,
ಆಗಾಗ್ಗೆ ಬಣ್ಣ ಬದಲಿಸುವ ಕೋವಿ.
ಒಂದರೊಳಗಿನ್ನೊಂದು ಬಣ್ಣ,
ಹೊರಗೊಂದು, ಒಳಗೊಂದು ವರ್ಣ.
ಶ್ಯಾಮ ವರ್ಣದಲ್ಲಿ
ಶಕುನಿ, ದುರ್ಯೋಧನ, ದುಶ್ಶಾಸನ.
ಕೊನೆಗೊಂದೂ ಗೊತ್ತಾಗದೇ,
ಎಲ್ಲ ಸೇರಿ ಕಲಸು ಮೇಲೋಗರವಾಗಿ,
ಸರ್ವ ಬಣ್ಣ ಮಸಿ ನುಂಗಿತ್ತು.
ಕ್ಯಾಲೆಂಡರಿನಲ್ಲಿ ನಲಿವ ರಾಧೆಯ
ಮಿಂಚು ಕಣ್ಣುಗಳು ಬೆದರಿ,
ಮುಖ ಬಣ್ಣಗೆಟ್ಟು,
ಗೋಡೆಯಿಂದಿಳಿದು ಓಡಿಬಂದು,
ಶ್ಯಾಮನಲಿ ಸೆರಗೊಡ್ಡಿ ಬೇಡಿಕೊಂಡಳು:
“ಬೇಡ ಕೃಷ್ಣಾ ರಂಗಿನಾಟ.”
ಶ್ಯಾಮ ವರ್ಣದ ಮುಖಗಳಿಗೆಲ್ಲ
ಉಕ್ಕಿತ್ತು ಹೊಸ ಹುರುಪು.
ಕುಣಿಯತೊಡಗಿದವು, ಕೈ ಕೈ ಹಿಡಿದು
ಕೇಕೆ ಹಾಕುತ್ತ ರಾಧೆಯ ಸುತ್ತ.
-ನಾರಾಯಣ ಭಟ್, ಹುಬ್ನಳ್ಳಿ

ಕರ್ನಾಟಕ ವಿದ್ಯುತ್ ನಿಗಮ, ಬೆಂಗಳೂರಿನಲ್ಲಿ ಧೀರ್ಘ ಸೇವೆಯ ಬಳಿಕ ಸ್ವಯಂ ನಿವೃತ್ತಿ ಗೊಂಡಿರುವ ಶ್ರೀ ನಾರಾಯಣ ಭಟ್ ಇವರು ಸಾಹಿತ್ಯದ ಓದುವಿಕೆಯಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಸಾಹಿತ್ಯಗಳು ಇವರ ಓದುವಿಕೆಯ ವಿಶಾಲ ಹರವು. ಆಗೀಗ ಸಾಹಿತ್ಯ ರಚನೆಯಲ್ಲಿ ತೊಡಗುವ ಇವರು ಪ್ರಸ್ತುತದಲ್ಲಿ ತಮ್ಮ ಮಡದಿಯೊಂದಿಗೆ ಯಲ್ಲಾಪುರದ ಹುಬ್ನಳ್ಳಿಯಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ -ಸಂಪಾದಕ