top of page

ಬುಕ್ ಫೇಸ್

ಜೀವನಪಥದಲ್ಲಿ ಬಿಚ್ಚಿದ ನೆನಪಿನ ಸುರುಳಿಗಳು


" ಶರಾವತಿ ಸೀಮೆಯ ಅಣ್ಣುಹಿತ್ತಲಿನ ಮಾಣಿಯೊಬ್ಬನ ಸಂವೇದನೆ, ಅಭಿರುಚಿ ಮತ್ತು ಸಮಾಜಶೀಲತೆಯನ್ನು ರೂಪಿಸಿದ ಅಮೂಲ್ಯ ಪರಿಸರ, ಪ್ರಸಂಗಗಳ ಉಜಳಣಿ ಪುಸ್ತಕ ಇದು. ಎಂದೂ ಬರವಣಿಗೆ ಮಾಡದ ಜಿ. ಎಸ್. ಹೆಗಡೆ ಅವರು ಕಳೆದೆರಡು ವರುಷಗಳಲ್ಲಿ ಬರೆದ ನೆನಪುಗಳ ಸಂಗ್ರಹ."

- ಇದು ಈ ಪುಸ್ತಕದ ಬೆನ್ನುಡಿಯಲ್ಲಿ ಖ್ಯಾತ ಕವಿ -ಕತೆಗಾರ ಜಯಂತ ಕಾಯ್ಕಿಣಿ ಅವರು ಬರೆದದ್ದು. ನಿಜ, ಇದು ಯಾವ ಕಟ್ಟುಪಾಡಿಗೂ ಒಳಗಾಗದೇ ಬರೆಯುತ್ತ ಹೋದ ನೆನಪುಗಳ ಸರಮಾಲೆ. ಜಿ. ಎಸ್. ಹೆಗಡೆ ಇಂದು "ಸಪ್ತಕದ ಹೆಗಡೆ"ಯಾಗಿಯೇ ನಾಡಿನ ಸಂಗೀತಲೋಕದಲ್ಲಿ ಪರಿಚಿತರು. ಅವರದು ಒಂದು "ಸಂಗೀತ ಕುಟುಂಬ"ವೆನ್ನುವದಕ್ಕಿಂತ ಸಂಗೀತವೇ ಅವರ ಕುಟುಂಬ ಎನ್ನಲೂಬಹುದು. ಏಕೆಂದರೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದೊಡನೆ ಹಲವು ಬಗೆಯಲ್ಲಿ ಬೆರೆತುಹೋದ ಬದುಕು ಅವರದು. ಪತ್ನಿ ಗೀತಾ , ಮಗ ಧನಂಜಯ ಇವರಂತೂ‌ ಸಂಗೀತಗಾರರೇ. ಸಂಗಡ ಕಳೆದ ಹದಿನೈದಿಪ್ಪತ್ತು ವರುಷಗಳಿಂದಲೂ ಅವರು ಸಪ್ತಕ ಸಂಸ್ಥೆಯ ಮೂಲಕ ಏರ್ಪಡಿಸುತ್ತ ಬಂದ ನೂರಾರು ಹಿರಿಯ ಕಿರಿಯ ಕಲಾವಿದರ ಕಾರ್ಯಕ್ರಮಗಳು, ಯುವ ಕಲಾವಿದರಿಗೆ ನೀಡುತ್ತ ಬಂದ ಪ್ರೋತ್ಸಾಹಗಳ ಮೂಲಕ ಅವರು ಸರಕಾರದ ಅಕಾಡೆಮಿಗಳು ಮಾಡುವದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ.

ಆದರೆ ಈ " ಜೀವನ ಪಥ- ನೆನಪಿನ ರಥ" ಹೆಗಡೆಯವರ ಬಾಲ್ಯದ ಬದುಕಿನಿಂದ ಹಿಡಿದು ಇಂದಿನತನಕದ ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿನ ಬೆಳವಣಿಗೆಯ ದಾರಿಯನ್ನೂ ಪರಿಚಯಿಸುತ್ತದೆ. ಅವರೇನೂ ಇದನ್ನು ಒಂದು‌ಪುಸ್ತಕ ರೂಪವಾಗಿ ಪ್ರಕಟಿಸುವ ಉದ್ದೇಶವಿರಿಸಿಕೊಂಡು ಬರೆಯುತ್ತಹೋದದ್ದಲ್ಲ. ಆ ವ್ಯವಸ್ಥಿತ ಸ್ವರೂಪ ಇಲ್ಲಿ ಇಲ್ಲವೂ ಇಲ್ಲ. ಮೊದಲು ಫೇಸಬುಕ್ ನಲ್ಲಿ ತಮಗೆ ನೆನಪಾದ ಕೆಲವು ಸಂಗತಿಗಳನ್ನು ಬರೆಯಲು ಹೊರಟ ಅವರು ಕ್ರಮೇಣ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ ಹಾಗೇ ವಿಸ್ತರಿಸುತ್ತ ಹೋದಾಗ ಇವನ್ನೆಲ್ಲ ಸಂಗ್ರಹಿಸಿ ಪುಸ್ತಕ ಮಾಡಬಹುದೆಂಬ ಸಲಹೆಗಳು ಬಂದದ್ದರಿಂದ ಅವನ್ನೆಲ್ಲ ಸೇರಿಸಿ ನಮ್ಮ ಕೈಗೆ ಕೊಟ್ಟಿದ್ದಾರೆ ಅಷ್ಟೇ.

ಅವರೇ ಹೇಳುವಂತೆ " ಜೀವನಪಥದಲಿ ಸಾಗಿ ಸವೆಸಿ ಅನುಭವಿಸಿದ , ಒಳಗಿಂದೊಳಗಿಂದ ದೂಡಿ ಹೊರಬರಲು ಹವಣಿಸುತಿಹ ಹಳೆಯ ನೆನಪುಗಳ ಸಂತೆಗೆ ಇನ್ನೆಂತು ಸಂತೈಸಲಿ, . ಬರೆಹ, ಚಿತ್ರ, ಶ್ರಾವ್ಯ ರೂಪವ ನೀಡಿ ರಥದೊಳಿಟ್ಟು ಪುಸ್ತಕ ರೂಪದಿ‌ ನಿಮ್ಮ ಮುಂದೆ ಇಡುತ್ತಿದ್ದೇನೆ..‌"

ಹೊನ್ನಾವರ ತಾಲೂಕಿನ ಕಾಸರಕೋಡು ಹತ್ತಿರದ ಅಣ್ಣಿಹಿತ್ತಲು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಸೀಮಿತ ಪರಿಸರದಿಂದ " ಸಪ್ತ ( ಕ) ಸಾಗರದಾಚೆಗೂ ತನ್ನ ರೆಕ್ಕೆಪಕ್ಕ ಬಿಚ್ಚಿ ಹಾರಿದ ಹಳ್ಳಿಹಕ್ಕಿಯ ಸಾಹಸದ ಕತೆ ಇದು. ಈ ಪುಸ್ತಕದ ಒಂದು ವಿಶೇಷ ಎಂದರೆ ಇದು ಓದುವ ಮತ್ತು ಕೇಳುವ ಪುಸ್ತಕ. ಕನ್ನಡದಲ್ಕಿ ಇಂತಹ ಪುಸ್ತಕ ಅಪರೂಪ. ಇಲ್ಲಿ ಸುಮಾರು ಒಂದುನೂರು ಭಾಗಗಳಲ್ಲಿರುವ ಚಿಕ್ಕ ಚಿಕ್ಕ ಲೇಖನಗಳ ಕೊನೆಯಲ್ಲಿ ಕ್ಯೂ ಆರ್. ಕೋಡ್ ಹಾಕಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ನಿಮಗೆ ಸಂಗೀತವನ್ನೂ ಕೇಳಲು ಸಾಧ್ಯ, ಯಕ್ಷಗಾನ ಕುಣಿತವನ್ನೂ ನೋಡಲು ಸಾಧ್ಯ. ಇದೊಂದು ಹೊಸ ಪ್ರಯೋಗ. ಸುಮಾರು ಆರು ದಶಕಗಳ ಒಂದು ಸಾಂಸ್ಕೃತಿಕ ಬದುಕು ಇಲ್ಲಿಯ ೨೩೦ ಪುಟಗಳಲ್ಲಿ ಉನ್ಮುಕ್ತವಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಜಿ. ಎಸ್. ಹೆಗಡೆಯವರ ಬದುಕಿನುದ್ದಕ್ಕೂ ಹರಡಿಕೊಂಡ ಸಿಹಿಕಹಿ ಅನುಭವಗಳು, ಏರಿಳಿತಗಳು, ನೋವು ನಲಿವುಗಳು ಅವರದೇ ಸ್ವಚ್ಛಂದ ಶೈಲಿಯಲ್ಲಿ ಕಾಣಸಿಗುತ್ತವೆ.

ಇಲ್ಲಿ ಮುಖ್ಯವಾಗಿ ಮೂರು ಹಂತಗಳ ಬೆಳವಣಿಗೆಯ ಸ್ವರೂಪವನ್ನು ನಾವು ಕಲ್ಪಿಸಿಕೊಳ್ಳಬಹುದು. ಒಂದು- ಅವರ ವೈಯಕ್ತಿಕ/ ಕೌಟುಂಬಿಕ ಬದುಕು ರೂಪುಗೊಂಡ ಬಗೆ. ಅವರ ಬಾಲ್ಯದ ಜೀವನದಿಂದ ಬ್ಯಾಂಕ್ ನೌಕರಿ ಪಡೆದು ಬದುಕಿನ ದಾರಿ ಭದ್ರಪಡಿಸಿಕೊಳ್ಳುವತನಕದ ದಾರಿ.

ಎರಡು- ಅವರ ಮಗ ಧನಂಜಯ ಬಾಲಪವಾಡವಾಗಿ ಬೆಳೆದು ಸಂಗೀತ ಕ್ಷೇತ್ರದಲ್ಲಿ ಇಂದು ರಾಷ್ಟ್ರಮಟ್ಟದ ಯುವಗಾಯಕನಾಗಿ ಹೆಸರು ಗಳಿಸಿಕೊಳ್ಳುವತನಕದ ದಾರಿ.

ಮೂರು- ಸಪ್ತಕ ಸಂಗೀತ ಸಂಸ್ಥೆ ಸ್ಥಾಪಿಸಿ ಕಳೆದ ೧೫ ವರ್ಷಗಳಲ್ಲಿ ಅದನ್ನು ಬೆಳೆಸಿ ಅದಕ್ಕೊಂದು ಅಸ್ಮಿತೆಯನ್ನು ತಂದುಕೊಡುವತನಕದ ಸಾಹಸದ ಕತೆ.

ಈ ಮೂರೂ ಹಂತಗಳಲ್ಲಿ ಅವರ ಬದುಕಿನಲ್ಲಿ ಪ್ರವೇಶಿಸಿ ಪ್ರಭಾವ ಬೀರಿದ ವ್ಯಕ್ತಿಗಳ ಚಿತ್ರಣವೂ ಇಲ್ಲಿದೆ. ಸಹಜವಾಗಿಯೇ ಸಾಮಾಜಿಕ/ ಸಾಂಸ್ಕೃತಿಕ ಬದುಕೆಂದರೆ ಬಗೆಬಗೆಯ ಅನುಭವಗಳ ಸಮ್ಮಿಶ್ರಣವೇ ಆಗಿರುತ್ತದೆ. ಅವನ್ನೆಲ್ಲ ನೆನಪಿಸಿಕೊಂಡು ದಾಖಲಿಸಲಾದ ಕೃತಿ ಇದು. ಇಲ್ಲಿರುವ ಎಲ್ಲ ಅಂಶಗಳನ್ನೂ ನಾನು ಹೇಳಲು ಸಾಧ್ಯವಿಲ್ಲ. ನೀವು ಇದನ್ನು ತರಿಸಿಕೊಂಡು ಓದಬಹುದು, ನೋಡಬಹುದು, ಕೇಳಬಹುದು. ಬೆಲೆ ಕೇವಲ ನೂರು ರೂಪಾಯಿ. ಪುಟ: ೨೬೪

ಸಂಪರ್ಕ : ೭೦೧೯೪೩೪೯೯೨.


- ಎಲ್. ಎಸ್. ಶಾಸ್ತ್ರಿ
3 views0 comments
bottom of page