top of page

ಬುಕ್ ಫೇಸ್-೩೬೦

ಸಮಾಜಕ್ಷಯದ ಅನೈತಿಕ ಪುಟಗಳು

" ಕ್ಷಯ" - ಕಾದಂಬರಿ

ಡಾ. ವಾಸುದೇವ ಶೆಟ್ಟಿ

******

ಒಬ್ಬ ವ್ಯಕ್ತಿಯ ದೇಹಕ್ಕೆ ಹಿಡಿಯುವ ಕ್ಷಯರೋಗಕ್ಕಿಂತ ಹೆಚ್ಚು ಅಪಾಯಕಾರಿಯಾದುದು ಸಮಾಜ ವ್ಯವಸ್ಥೆ ಗೆ ತಗುಲುವ ಕ್ಷಯ. ಅದು ಸಾಂಸರ್ಗಿಕವಾದುದೂ ಹೌದು. ಸುಲಭವಾಗಿ ಗುಣವಾಗುವಂತಹದೂ ಅಲ್ಲ. ಊರು ಯಾವುದೇ ಇರಬಹುದು, ಅಲ್ಲಿಯ ಮನುಷ್ಯರ ಮನಸ್ಸು ರೋಗಗ್ರಸ್ಥವಾಗಿಬಿಟ್ಟರೆ ಅದು ಸಮಗ್ರ ಸಾಮಾಜಿಕ ವ್ಯವಸ್ಥೆಯನ್ನೇ ಹದಗೆಡಿಸಿಬಿಡುತ್ತದೆ.

ಅದೊಂದು ಊರು. ಶ್ರೀನಿವಾಸ ನಾಯ್ಕ ಎಂಬವನಿಗೆ ವಿಪರೀತ ಕಫ. ಕಫದೊಡನೆ ರಕ್ತವೂ ಬರುತ್ತಿದೆಯೇನೋ , ಇದು ಕ್ಷಯದ ಲಕ್ಷಣವೇನೋ ಎಂಬ ಗುಮಾನಿ. ನೆರೆಮನೆಯ ಶಂಭುಗೌಡನಿಗೆ ಹೇಳಿದಾಗ ಆತನೂ ಇರಬಹುದು ಎಂದು ಅನುಮಾನಿಸಿ ಬೇರು ನಾರುಗಳ ಕಷಾಯ ಮಾಡಿ ಕುಡಿಯುವ ಸಲಹೆ ನೀಡುತ್ತಾನೆ. ಆಗಿನಿಂದ ನಾಯ್ಕನಿಗೆ ಕಾಡುಮೇಡು ಅಲೆದು ಕಂಡ ಕಂಡ ಬೇರು ನಾರು ಕಿತ್ತು ತರುವುದೇ ಕೆಲಸ.

ಹೀಗೆ ಆರಂಭವಾಗುವ ಕ್ಷಯದ ಕತೆ ಕ್ರಮೇಣ ಊರಿನ ಹಲವು ಮನೆಗಳ ಅನೈತಿಕ ಸಂಬಂಧಗಳೊಡನೆ ಒಂದಕ್ಕೊಂದು ಬೆಸೆದುಕೊಳ್ೞುತ್ತ, ಸಾಮಾಜಿಕ ವ್ಯವಸ್ಥೆಯನ್ನೇ ಆವರಿಸಿಕೊಳ್ಳುತ್ತ, ಒಬ್ಬರಿನ್ನೊಬ್ಬರ ಕುರಿತು ಸಂಶಯಿಸಿಕೊಳ್ಳುತ್ತ ಸಾಗುತ್ತದೆ. ಇದು ಯಾವ ಊರಿನಲ್ಲಿಯೂ ನಡೆಯಬಹುದಾದ ಕತೆ- ವ್ಯಥೆ. ಗ್ರಾಮೀಣ ಬದುಕಿನೊಳಗಿನ ದ್ವೇಷಾಸೂಯೆಗಳು, ಅಪನಂಬಿಕೆಗಳು, ಒಳಸಂಬಂಧಗಳು, ನೈತಿಕ ಎಚ್ಚರವಿಲ್ಲದ ಕೊಳೆತ ಮನಸ್ಸುಗಳು ಕ್ಷಯರೋಗಕ್ಕಿಂತ ಹೆಚ್ಚು ಭಯಾನಕವಾಗಿ ವ್ಯಾಪಿಸಿಕೊಳ್ಳುತ್ತ ಹೋಗುವದು ಇವೆಲ್ಲ ಈ ಕಾದಂಬರಿಯನ್ನು ಓದುತ್ತ ಓದುತ್ತ ನಮ್ಮನ್ನು ಒಂದು ವಿಷಾದಭಾವಕ್ಕೆ ನೂಕಿಬಿಡುತ್ತದೆ. ಯಾವುದೂ ನಮಗಿಲ್ಲಿ ಅಸಹಜವೆನಿಸುವದಿಲ್ಲ. ಅದಕ್ಕೆ ಶೆಟ್ಟಿಯವರು ಬಳಸಿದ ಬಿಡುಬೀಸಾದ ಅಪ್ಪಟ ಗ್ರಾಮೀಣ ಭಾಷೆಯೂ ಒಂದು ಕಾರಣ. ಹೊನ್ನಾವರ ಆಸುಪಾಸಿನ ಬಳಕೆಯ ಶಬ್ದಗಳನ್ನೊಳಗೊಂಡ ಶೈಲಿ ಪರಿಣಾಮಕಾರಿಯಾಗಿದೆ.

ಇದು ನಾಯಕ ನಾಯಕಿ ಪ್ರಧಾನವಾದುದಲ್ಲ. ಕ್ಷಯವೇ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶ್ರೀನಿವಾಸ ನಾಯ್ಕ, ಅವನ ಮಾನಸಿಕ ಅಸ್ವಸ್ಥ ಮಗ ಸುರೇಶ, ವೆಂಕಟ ನಾಯ್ಕ ಅಳ್ಳಂಕಿ, ಹೊಸಬಯ್ಯ ನಾಯ್ಕ,ಹುಕ್ಕಿ ಹನುಮಂತ, ಅವನ ಪತ್ನಿ ಪದ್ಮ, ಕೇರಳದ ಮಾಂತ್ರಿಕ ಶಂಕರನ್, ಪಂಚ ಗಿಡ್ಡ ನಾಯ್ಕ, ನಾಗಮ್ಮ ಮೊದಲಾದವರೆಲ್ಲ ಕ್ಷಯ ಉಲ್ಬಣಿಸುವುದಕ್ಕೆ ತಮ್ಮ ತಮ್ಮದೇ ಆದ ರೀತಿಯಲ್ಲಿ ತಿಳಿದೋ ತಿಳಿಯದೆಯೋ ಕಾರಣರಾಗುತ್ತಾರೆ.

ಪುಟಗಳ ಸಂಖ್ಯೆಯ ದೃಷ್ಟಿಯಿಂದ ಕಾದಂಬರಿ ದೊಡ್ಡದೇನಲ್ಲ. ನೂರು ಪುಟಗಳಷ್ಟೆ. ಇದು ಡಾ. ಶೆಟ್ಟಿ ಅವರ ಎರಡನೆಯ ಕಾದಂಬರಿ. ೪೦ ವರ್ಷಗಳಷ್ಟು ಹಿಂದೆಯೇ " ಬಲೆ" ಪ್ರಕಟವಾಗಿದೆ. ಈ ಕಿರುಕಾದಂಬರಿಯನ್ನು ಅವರು ಬರೆದದ್ದೂ ೧೯೮೯-೯೦ ರಷ್ಟು ಹಿಂದೆ. ಸಶಕ್ತ ಬರೆಹಗಾರರೂ , ಸಮರ್ಥ ಪತ್ರಕರ್ತರೂ ಆಗಿರುವ ಶೆಟ್ಟಿಯವರು ಉತ್ತಮ ಕತೆಗಾರರೂ ಹೌದು. ಅಂದರೆ ಅವರಿಂದ ನಮ್ಮ ಹಸಿವನ್ನು ತಣಿಸುವ ಇನ್ನೊಂದಿಷ್ಟು ಉತ್ಕೃಷ್ಟ ಕೃತಿಗಳು ಬರಬೇಕು ಮತ್ತು ಬರುತ್ತವೆ ಎನ್ನುವದು ನನ್ನಂಥವರ ಆಸೆ ಅಪೇಕ್ಷೆ. ಕ್ಷಯ ನಮ್ಮ ಹಸಿವು ಕೆರಳಿಸಿದೆಯಷ್ಟೆ. ಇದು ಸಾಲದು.

‌ ‌‌‌‌ - ಎಲ್. ಎಸ್. ಶಾಸ್ತ್ರಿ

ಪ್ರಕಾಶನ: ವೀರಲೋಕ ಬುಕ್ಸ್ ಪ್ರೈ. ಲಿ.

ಬೆಂಗಳೂರು

ಬೆಲೆ: ೧೨೦/-

ಸಂಪರ್ಕ: 7022122121




 
 
 

Comments


©Alochane.com 

bottom of page