top of page

ಬುಕ್ ಫೇಸ್- ೨೯೬

ಸಾಹಸದ ಬದುಕಿನ ಅನುಭವಗಳ ಅನಾವರಣ

*************

ತಂದೆ ಸಹಿತ ಎಲ್ಲಮಕ್ಕಳೂ ಬರೆಹಗಾರರೆ. ಇದು ನನ್ನ ಆತ್ಮೀಯ ಮಿತ್ರ ಬಳಗದವರಾದ ಹಬ್ಬು ಕುಟುಂಬದ ಬಗ್ಗೆ ಹೇಳಬೇಕಾದ ಮಾತು. ಹಿರಿಯ ಲೇಖಕ ಮೋಹನ ಹಬ್ಬು, ಅವರ ಸಹೋದರರಾದ ಅರುಣಕುಮಾರ ಹಬ್ಬು, ಉದಯಕುಮಾರ ಹಬ್ಬು ಈ ಮೂವರು ಬರೆಹಗಾರರಾಗಿ ನನಗೆ ಮೊದಲೇ ಪರಿಚಿತರು. ಕತೆ ಕವನ ಕಾದಂಬರಿ ನಾಟಕಗಳಲ್ಲದೆ ಒಂದೇ ಕುಟುಂಬದ ಈ ಮೂವರೂ ತಮ್ಮ ತಮ್ಮ ಆತ್ಮಕಥನ ಬರೆದದ್ದೊಂದು ವಿಶೇಷ. ಈಗ ಅವರ ಕೊನೆಯ ಸಹೋದರ ಜಯಪ್ರಕಾಶ್ ಹಬ್ಬು ಅವರ ಆತ್ಮಕಥನವೂ ಕೈಸೇರಿದಾಗ ಇನ್ನಷ್ಟು ಅಚ್ಚರಿ ಮತ್ತು ಸಂತೋಷ. ಇವರ ತಂದೆ ಸಗುಣ ಶಂಕರ ಹಬ್ಬು ಅವರೂ ಅನೇಕ ಕಿರುಲೇಖನಗಳನ್ನು ಬರೆದಿದ್ದರಂತೆ. ಮತ್ತೊಬ್ಬ ಅಣ್ಣ ರಾಮಚಂದ್ರ ಹಬ್ಬು ಅವರ ಆತ್ಮಕಥೆಯೂ ಬಂದಿದೆಯಂತೆ. ಒಟ್ಟಾರೆ ಇದು ಬರೆಹಗಾರರ ಕುಟುಂಬ.

ಜಯಪ್ರಕಾಶ ಅವರು ಉದ್ಯಮಿಯಾಗಿ ಕೃಷಿಕರಾಗಿ ಸಾಧನೆಗೈದವರು. ನಿತ್ಯ ನಿರಂತರ ಬರಹಗಾರರೇನಲ್ಲ. ಆದರೆ ಅದೊಂದು ಕುಟುಂಬದ ಸಂಸ್ಕಾರ, ಸ್ಪರ್ಶ ಇರುತ್ತದಲ್ಲ, ಅದು ಅಂತರ್ಗತವಾಗಿ ಇರುವ ಶಕ್ತಿ. ಯಾವುದೋ ಸಂದರ್ಭದಲ್ಲಷ್ಟೇ ಹೊರಬರುತ್ತದೆ. ಜಯಪ್ರಕಾಶ ಅವರಲ್ಲಿ ಸುಪ್ತವಾಗಿದ್ದ ಆ ಶಕ್ತಿ ಈ ನೆನಪಿನ ಜರಡಿಯಲ್ಲಿಳಿದು ಬಂದು ಆತ್ಮಾವಲೋಕನ ಮಾಡಿಕೊಂಡಿದೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ಯಾರೇ ಇದ್ದರೂ ಅವರಿಗೆ ಹೇಳಿಕೊಳ್ಳುವಂತಹದೇನಾದರೂ ಇದ್ದೇಇರುತ್ತದೆ. ಹೇಳಿಕೊಳ್ಳಬೇಕೆಂಬ ಹಂಬಲವೂ ಇರುತ್ತದೆ. ಆದರೆ ಎಲ್ಲರಿಗೂ ಅದನ್ನು ಬರೆಹಕ್ಕಿಳಿಸಲು ಸಾಧ್ಯವಾಗುವದಿಲ್ಲ. ಜಯಪ್ರಕಾಶ ಅವರಲ್ಲಿ ರಕ್ತಗತವಾಗಿ ಬಂದ ಬರೆಯುವ ಸಾಮರ್ಥ್ಯ ಈ ಮೂಲಕ ಬೆಳಕಿಗೆ ಬಂದಿದೆ. ಅವರೂ ತಮ್ಮ ಅಣ್ಣಂದಿರಂತೆ ಬದುಕಿನ ಆರಂಭದ ಹಂತದಲ್ಲಿ ನೋವು , ಕಷ್ಟ ಅನುಭವಿಸಿದವರೆ. ಅಣ್ಣ ಮೋಹನ ಅವರ ನೆರವಿನಿಂದ ಪದವಿ ಪಡೆದು ಮೊದಲು ಮುದ್ರಣ ವ್ಯವಸಾಯ ಮಾಡಿ, ನಂತರ ಕೃಷಿಕ್ಷೇತ್ರಕ್ಕೆ ಕಾಲಿಟ್ಟು, ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ಬದುಕಿನ ಮೇಲೆ ತಮ್ಮ ಹತೋಟಿ ಸ್ಥಾಪಿಸಿಕೊಂಡವರು. ಇಂತಹ ಹೋರಾಟದ ಬದುಕಿನಲ್ಲಿ ಎಲ್ಲರಿಗೂ ಯಶಸ್ಸು ಸಿಗುತ್ತದೆಂದೇನೂ ಇಲ್ಲ. ಪ್ರಯತ್ನಶೀಲತೆಯೊಂದಿಗೆ ಅದೃಷ್ಟದ ಬಲವೂ ಬೇಕು. ಆ ತಮ್ಮ ಅನುಭವಗಳನ್ನೆಲ್ಲ ಸರಳವಾಗಿ ಹೇಳಿಕೊಂಡುಹೋಗಿರುವ ಅವರ ಈ ಕೃತಿ ಓದಿದಾಗ ಅವರು ಸಾಹಿತ್ಯ ಕ್ಷೇತ್ರಕ್ಕೆ ಹೊಸಬರೆಂದು ಅನಿಸುವದೇ ಇಲ್ಲ. ಹಲವು ಊರುಗಳ ನೀರು ಕುಡಿದು ಗಟ್ಟಿಯಾದ ಜೀವ ಎಲ್ಲಿ , ಎಂತಹ ಪರಿಸ್ಥಿತಿಯಲ್ಲೂ ಬದುಕು ಕಟ್ಟಿಕೊಳ್ಳುತ್ತದೆ. ಗೋವಾ ಸಹಿತ ಅನೇಕ ಪ್ರದೇಶಗಳಲ್ಲಿ ಸಾಗಿ ಬಂದ ಜಯಪ್ರಕಾಶ್ ಅವರ ಬದುಕು ರೋಚಕವಾದದ್ದೂ ಅದೇ ಕಾರಣದಿಂದ. ಮಾವ, ನಾಗು ಎಂಬ ರೈತ, ಅಂಜಿನಿ ಚಿಕ್ಕಿ, ಬೇಬಿ, ಲಕ್ಷ್ಮೀನಾರಾಯ ಹೆಗಡೆ, ಮುದ್ರಣಾಲಯದ ಅನುಭವಗಳೆಲ್ಲ ಒಂದೊಂದಾಗಿ ಬಿಚ್ಚಿಕೊಳ್ಳುತ್ತ ಎರಡನೆಯ ಭಾಗದಲ್ಲಿ ಅವರು ಕಾಲಿಟ್ಟ ಬೇರೆ ಕ್ಷೇತ್ರಗಳತ್ತ ಸಾಗುತ್ತದೆ. ಗೋವಾದಲ್ಲಿಯೂ ನಾಲ್ಕು ವರ್ಷ ಇದ್ದು ಹೊಸ ಜಗತ್ತಿನ ಅನುಭವ ಪಡೆದ ಅವರು ಬದುಕಿನ ಒಂದು ಪರಿಪೂರ್ಣ ಹಂತ ತಲುಪುವ ತನಕದ ಹಲವು ಬಗೆಯ ಸ್ವಾರಸ್ಯಕರವಾದ, ಕಟು ಮಧುರವಾದ ಅನುಭವಗಳನ್ನು ಈ ೧೪೦ ಪುಟಗಳ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಮನುಷ್ಯ ನಿರಾಶಾವಾದಿಯಾದರೆ ಏನನ್ನೂ ಸಾಧಿಸಲಾರ. ಆಶಾವಾದಿಯಾಗಿ ಬಂದ ಕಷ್ಟನಷ್ಟಗಳನ್ನೆಲ್ಲ ಸಹಜ ಅನುಭವವಾಗಿ ಸ್ವೀಕರಿಸುತ್ತ ಸಾಗಿದಾಗ ಮಾತ್ರ ಯಶಸ್ಸು ದೊರಕಲು ಸಾಧ್ಯ. ಜಯ ಎಂಬ ಶಬ್ದ ಅವರ ಹೆಸರಿನಲ್ಲೇ ಇದೆ. ಪ್ರಕಾಶವೂ ಸೇರಿದೆ. ಅವರ ಈ ಆತ್ಮಾವಲೋಕನ ಇತರರಿಗೆ ಪ್ರೇರಣೆ ಒದಗಿಸುವಂತಹದೆನ್ನುವದಂತೂ ನಿಜ. ನನ್ನ ನೇರ ಸಂಪರ್ಕ ಇಲ್ಲದಿದ್ದರೂ ನನಗೆ ಈ ಪುಸ್ತಕ ಕಳಿಸಿದ ಅವರ ಪ್ರೀತಿಗೆ ಧನ್ಯವಾದಗಳು.


ಬೆಂಗಳೂರಿನ ಜಾಗೃತಿ ಪ್ರಿಂಟರ್ಸ್ ಈ ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದೆ. ಬೆಲೆ :೧೫೦/-ರೂ.

ಮೊ. ಸಂಪರ್ಕ: ೯೧೪೧೪೭೨೬೬೯


13 views0 comments

Comentarios


bottom of page