ಕೃತಿಪರಿಚಯ
" ಬಹುಬಲ "
( ರಾಮ ಹೆಗಡೆ ಕೆರೆಮನೆ ನೆನಪಿನ ಹೊತ್ತಗೆ)
ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ನಾವು - ಬದುಕುಳಿದ ಜನ - ನಂಬಲಸಾಧ್ಯವಾದ, ಸಹಿಸಲಸಾಧ್ಯವಾದ ಹಲವು ಸಾವುಗಳನ್ನು ಕಂಡಿದ್ದೇವೆ. ನೊಂದಿದ್ದೇವೆ. ಕಾಣದ ಆ ವಿಧಿಯನ್ನು ಶಪಿಸಿದ್ದೇವೆ. ಅಂತಹ ಸಾವುಗಳಲ್ಲಿ ಕೆರೆಮನೆ ರಾಮ ಹೆಗಡೆಯವರದೂ ಒಂದು. ಅವರನ್ನು ಹತ್ತಿರದಿಂದ ಬಲ್ಲವರು, ಒಡನಾಡಿದವರು, ಅಷ್ಟೇ ಏಕೆ, ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದವರು ಸಹ ಅವರ ಅಕಾಲಿಕ ನಿಧನದಿಂದ ಬೇಸರ ಪಟ್ಟುಕೊಂಡಿದ್ದಾರೆ. ಅಂಥವರ ನೋವನ್ನೆಲ್ಲ ಅಕ್ಷರದಲ್ಲಿ ಹಿಡಿದಿಡುವ ಪ್ರಯತ್ನದ ಅಂಗವಾಗಿ ಹೊರಬಂದಿರುವದೇ ಈ "ಬಹುಬಲ" - ನೆನಪಿನ ಹೊತ್ತಗೆ. ಮೊನ್ನೆಯಷ್ಟೇ ರಾಮ ಹೆಗಡೆಯವರ ಪ್ರಥಮ ಪುಣ್ಯತಿಥಿಯಂದು ಬಿಡುಗಡೆಯಾದದ್ದು.
ಡಾ. ಶ್ರೀಪಾದ ಶೆಟ್ಟಿ, ಪ್ರೊ. ನಾಗರಾಜ ಹೆಗಡೆ ಅಪಗಾಲ, ಮತ್ತು ಪ್ರೊ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ ಅವರ ಸಂಪಾದಕತ್ವದಲ್ಲಿ ಹೊರಬಂದಿರುವ ಬಹುಬಲದಲ್ಲಿ ರಾಮ ಹೆಗಡೆಯವರನ್ನು ಬೇರೆಬೇರೆ ರೀತಿಯಲ್ಲಿ ಅರಿತ ಸುಮಾರು ೩೫ ಜನ ತಮ್ಮ ಆತ್ಮೀಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮೊದಲ ಭಾಗದಲ್ಲಿ ಎಂ. ಎ. ಹೆಗಡೆ ದಂಟಕಲ್, ರಾಘವ ನಂಬಿಯಾರ, ಉಮಾಕಾಂತ ಭಟ್ಟ, ಕಬ್ಬಿನಾಲೆ ವಸಂತ ಭಾರದ್ವಾಜ,ಸೂರಾಲು ದೇವೀಪ್ರಸಾದ ತಂತ್ರಿ, ಎಂ. ಪ್ರಭಾಕರ ಜೋಶಿ, ಕೆ. ಎಸ್. ಕಲ್ಕೂರ, ಗುರುರಾಜ ಮಾರ್ಪಳ್ಳಿ, ನಾರಾಯಣ ಯಾಜಿ ಸಾಲೇಬೈಲ್, ಕಪ್ಪೆಕೆರೆ ಭಾಗವತರು, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಮೂರ್ತಿ ದೇರಾಜೆ ಮೊದಲಾದವರು ರಾಮ ಹೆಗಡೆಯವರೊಂದಿಗಿನ ತಮ್ಮ ಒಡನಾಟದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.
ಎರಡನೆಯ ಭಾಗದಲ್ಲಿ ರಾಮ ಹೆಗಡೆಯವರ ಪತ್ನಿ ನಾಗವೇಣಿ, ಅವರ ಮಕ್ಕಳು, ಬಂಧುಗಳು ತಮ್ಮ ನೋವನ್ನು ಬರೆಹದಲ್ಲಿಳಿಸಿದ್ದಾರೆ. ಮೂರನೆಯ ಭಾಗದಲ್ಲಿ ರಾಮ ಹೆಗಡೆಯವರು ಬರೆದ ೨-೩ ಲೇಖನಗಳಿವೆ. ೨೧೬ ಪುಟಗಳ ಈ ಸ್ಮರಣ ಕೃತಿ ಒಟ್ಟಿನಲ್ಲಿ ರಾಮ ಹೆಗಡೆಯವರ ಬಹುಮುಖೀ ಪ್ರತಿಭೆಯನ್ನು ಹಿಡಿದಿಡುವದು ಒಂದೆಡೆಯಾದರೆ , ರಾಮ ಹೆಗಡೆಯವರ ವ್ಯಕ್ತಿತ್ವದ ಆಪ್ತಮುಖವನ್ನೂ ತೋರಿಸಿಕೊಡುತ್ತದೆ.
ರಾಮ ಹೆಗಡೆ/ ರಾಮಣ್ಣ/ ರಾಮು ಎಲ್ಲರಿಗೂ ಪ್ರಿಯರಾಗಿದ್ದರು. ಮೊದಲ ನೋಟಕ್ಕೆ ಗಂಭೀರ ಅನಿಸಿದರೂ ಪರಿಚಯಕ್ಕೆ ಬಂದನಂತರ ಅವರ ಸರಳ ಸಹಜ ನಡೆನುಡಿ ಎಲ್ಲರನ್ನೂ ಅವರತ್ತ ಎಳೆದುಕೊಳ್ಳುತ್ತಿತ್ತು. ವಿದ್ಯಾರ್ಥಿಗಳಿಗೆ ಆದರ್ಶ ಅಧ್ಯಾಪಕರಾಗಿ, ತಂದೆತಾಯಿಗೆ ಹೆಮ್ಮೆಯ ಮಗನಾಗಿ, ಕಲಾಪ್ರಿಯರಿಗೆ ಉತ್ತಮ ಯಕ್ಷಗಾನ / ಸಂಗೀತ ಕಲಾವಿದರಾಗಿ, ಕಲಾಚಿಂತಕರಿಗೆ ಉಪಯುಕ್ತ ಸಮಾಲೋಚಕರಾಗಿ ಅವರು ಅಕ್ಷರಶಃ " ಬಹು- ಬಲ" ರೇ ಆಗಿದ್ದರು. ಅವರಿಂದ ಯಕ್ಷಗಾನ ರಂಗ ಬಹಳಷ್ಟನ್ನು ನಿರೀಕ್ಷಿಸುತ್ತಿರುವಾಗಲೇ ಸಾವು ಬಂದೆರಗಿದ್ದು ಎಲ್ಲರಿಗೂ ಆಘಾತವನ್ನುಂಟುಮಾಡಿದ ಸಂಗತಿ.
ಇಲ್ಲಿನ ಪ್ರತಿಯೊಂದು ಬರೆಹದಲ್ಲೂ ರಾಮ ಹೆಗಡೆಯವರ ಗುಣ ವೈಶಿಷ್ಟ್ಯಗಳನ್ನು ಹಲವರು ಹಲವು ಬಗೆಯಲ್ಲಿ ಬಿಚ್ವಿಟ್ಟಿರುವದನ್ನು ಕಾಣಬಹುದು. ಡಾ. ಎಂ. ಪ್ರಭಾಕರ ಜೋಶಿಯವರು ಕಂಡಂತೆ " ಸಂಬಂಧಗಳ ಹದದಲ್ಲಿ ಅವರು ಪಕ್ವತೆಯುಳ್ಳ ವ್ಯಕ್ತಿ. ಸುಸಂಸ್ಕೃತ ಗಂಭೀರ ವ್ಯಕ್ತಿತ್ವ."
" ರಾಮ ಹೆಗಡೆಯವರು ಮಹಾಬಲರ ನೈಜ ಉತ್ತರಾಧಿಕಾರಿಯಾಗಿದ್ದರು. ಯಕ್ಷಗಾನ ಸಂಗೀತದ ಲಕ್ಷ್ಯಪುರುಷ" ಎಂದು ಡಾ. ರಾಘವ ನಂಬಿಯಾರರು ಹೇಳಿದರೆ, " ಯಕ್ಷಗಾನ ಸಂಗೀತದ ವಿಶೇಷ ಅಧ್ಯಯನ ಮಾಡುವವರಿಗೆ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು" ಎಂದು ದಂಟಕಲ್ ಹೆಗಡೆ ಹೇಳುತ್ತಾರೆ.
ಹೀಗೆ ರಾಮ ಹೆಗಡೆಯವರ ವ್ಯಕ್ತಿತ್ವವನ್ನು ಹಲವರು ಹಲವು ಬಗೆಯಾಗಿ ಕಂಡು ಚಿತ್ರಿಸುವ ಬರೆಹಗಳಿಂದ ಕೂಡಿದ " ಬಹುಬಲ" ಅವರ ನೆನಪನ್ನು ನಮ್ಮ ಮಧ್ಯೆ ಬಹುಕಾಲ ಉಳಿಸುವ ಪ್ರಯತ್ನದ ಒಂದು ಮಹತ್ವದ ಅಂಗವಾಗಿದೆ. ಈ ನೆನಪಿನ ಸಂಪುಟಕ್ಕೆ ಲೇಖನ ಬರೆಯುತ್ತ " ನಾವು ಕಳೆದುಕೊಂಡಿದ್ದು ರಾಮುವನ್ನಷ್ಟೇ ಅಲ್ಲ, ಇನ್ನೂ ಬಹಳಷ್ಟನ್ನು" ಎಂದು ನಾನು ಬರೆದದ್ದು ಅವರ ನಿಧನದಿಂದ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಕ್ಕೆ ಆದ ಬಹುದೊಡ್ಡ ನಷ್ಟವನ್ನು ಸೂಚಿಸಲಿಕ್ಕಾಗಿಯೇ. ಯಕ್ಷಗಾನ ರಾಗಗಳಿಗೆ ಸಂಬಂಧಪಟ್ಟ ರಾಮು ಅವರ ಸಂಶೋಧನಾತ್ಮಕ ಪ್ರಕ್ರಿಯೆಯನ್ನು ಅವರ ಪತ್ನಿ ನಾಗವೇಣಿಯವರು ಮುಂದುವರಿಸಿ ಮುಗಿಸಿದ್ದು ಅದರ ದಾಖಲಾತಿಯನ್ನು ಯಕ್ಷಗಾನ ಅಕಾಡೆಮಿ ಮಾಡಿರುವದು ಸ್ತುತ್ಯಾರ್ಹ. ರಾಮ ಹೆಗಡೆಯವರ ಮಕ್ಕಳೂ ತಂದೆಯಂತೆ ಯಕ್ಷಗಾನದಲ್ಲಿ ಆಸಕ್ತರಿರುವದು ಸಂತೋಷದ ಸಂಗತಿ.
ಈ ಸಂಪುಟ ಹೊರಬರಲು ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಆದರೆ ರಾಮ ಹೆಗಡೆಯವರು ಈ ಪುಸ್ತಕದ ಪುಟಗಳಲ್ಲಿ ಮಾತ್ರವಲ್ಲ, ಎಲ್ಲರ ಮನಸ್ಸಿನ ಹೊತ್ತಗೆಯ ಪುಟಗಳಲ್ಲೂ ಇದ್ದೇಇದ್ದಾರೆ, ಇರುತ್ತಾರೆ.
- ಎಲ್. ಎಸ್. ಶಾಸ್ತ್ರಿ
Comments