ಬಲುಹು – ಗೆಲುವು

ಸೋಲಿಗಿಂತ ಗೆಲುವನ್ನು ನಿಭಾಯಿಸುವುದು ಕಷ್ಟ. ಸೋಲಿಗೆ ಒಬ್ಬನೇ ಅಪ್ಪ, ಗೆಲುವಿಗೆ ನೂರಾರು ಮಂದಿ. ಒಬ್ಬ ಯಜಮಾನನ ಸೇವೆ ಮಾಡುವುದು ಸುಲಭ, ಹತ್ತಾರು ಮಂದಿ ಯಜಮಾನರ ಜೊತೆಗೆ ಕೆಲಸ ಮಾಡುವುದು ಕಷ್ಟ.


ಗೆಲುವು ಹೀಗೆ ಹತ್ತಾರು ಜನರ ಹೆಗಲ ಮೇಲೆ ಕುಳಿತಿರುವುದರಿಂದ ಹತ್ತು ಕಡೆಗೆ ಎಳೆಯುವವರನ್ನು ನಿಯಂತ್ರಿಸುತ್ತಿರಬೇಕು. ಅವರೆಲ್ಲರ ಚಿತ್ತವನ್ನು ಗುರಿಯ ಕಡೆಗೆ ನೆಡುವಂತೆ ಮಾಡಿ ಉದ್ದೇಶಿತ ಫಲ ಸಾಧಿಸಬೇಕು.


ಇನ್ನೊಂದೆಡೆ ಸೋಲು ಛಲ ಸಾಧಿಸಲು ತನ್ನ ಶಕ್ತಿಯನ್ನು ಕ್ರೋಢೀಕರಿಸುತ್ತ ಇರುತ್ತದೆ. ಅದು ಪೌಷ್ಠಿಕ ಆಹಾರಗಳನ್ನು ಸೇವಿಸುತ್ತ, ವ್ಯಾಯಾಮ ಮಾಡುತ್ತ ಇರುತ್ತದೆ. ಮುಂದಿನ ಬಾರಿ ಗೆಲುವು ಸಾಧಿಸಲಿಕ್ಕಾಗಿ ಗೆಲುವಿನ ಬಿಂದುವಿಗಿಂತ ಮುಂದೆ ಅದು ದೃಷ್ಟಿ ನೆಡುತ್ತದೆ.


ಗೆಲುವು ಸಂಭ್ರಮದಲ್ಲಿ ಮೈಮರೆಯುತ್ತದೆ. ಸೋತವನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಆತ್ಮವಿಶ್ವಾಸದಲ್ಲಿ ಬೀಗುತ್ತಿರುತ್ತದೆ.


ಸೋಲು ನೆಲಕಚ್ಚಿರುವುದರಿಂದ ಅದಕ್ಕೆ ಅವಮಾನಗಳಿರುವುದಿಲ್ಲ, ಆದರೆ ಹಟ ಇರುತ್ತದೆ, ಛಲ ಇರುತ್ತದೆ. ಹಾಗಾಗಿ ಅದು ನೆಲದಲ್ಲಿ ಬಿದ್ದ ಪ್ರತಿ ಕಾಳನ್ನು ಹೆಕ್ಕುತ್ತಿರುತ್ತದೆ. ಜೋಳಿಗೆಯನ್ನು ತುಂಬಿಸಿಕೊಳ್ಳುತ್ತ ಹೋಗುತ್ತದೆ.


ಗೆಲುವು ಹಂಚುತ್ತಲೇ ಹೋಗಬೇಕಾಗುತ್ತದೆ. ಅದು ಕ್ರೋಢೀಕರಿಸುವಂತಿಲ್ಲ; ಕೂಡಿಡುವಂತಿಲ್ಲ. ಹಂಚಿದಷ್ಟು ಅದರ ಶಕ್ತಿ ಹೆಚ್ಚಾಗುತ್ತ ಹೋಗುವುದು ನಿಜ, ಆದರೆ ಒಂದು ಹಂತದ ನಂತರ ಗೆಲುವಿಗೆ ಹಂಚಲು ಏನೂ ಉಳಿದಿರುವುದಿಲ್ಲ. ಹಾಗಾಗಿ ಅದು ಎಲ್ಲರ ಏಳಿಗೆ ಮತ್ತು ಎಲ್ಲರ ಅಭಿವೃದ್ಧಿಯ ಕಡೆಗೆ ಗಮನ ಕೊಡಬೇಕಾಗುತ್ತದೆ. ಅದಕ್ಕಾಗಿ ಎಲ್ಲರೂ ದುಡಿಯುವಂತೆ ಮಾಡಬೇಕಾಗುತ್ತದೆ.


ಗೆಲುವಿನ ಗುಲಾಬಿ ಪಕಳೆಗಳ ಪಕ್ಕದಲ್ಲೇ ಮುಳ್ಳುಗಳಿರುತ್ತವೆ. ಮುಳ್ಳುಗಳನ್ನು ನಿಭಾಯಿಸಿ ಹೂಗಳನ್ನು ಕೊಯ್ಯಬೇಕಾಗುತ್ತದೆ. ಹೂ ಮತ್ತು ಮುಳ್ಳುಗಳ ಸಮಭಾರ - ಸಮಸ್ಥಿತಿಯನ್ನು ಒಪ್ಪಿಕೊಳ್ಳುತ್ತಲೇ ಗಿಡವನ್ನು ಸಲಹುತ್ತಿರಬೇಕಾಗುತ್ತದೆ.


ಸೋಲಿನ ಮುಳ್ಳುಗಳೆಲ್ಲ ನಿವಾರಿಸಿ ಹೋಗಿರುತ್ತವೆ. ಅದು ಮತ್ತೆ ನೆಲ ಮಟ್ಟದಿಂದ ಜೀವಸತ್ತ್ವವನ್ನು ಪಡೆದುಕೊಂಡು ಹೊಸ ಹೂಗಳನ್ನು ಅರಳಿಸಲು ಗಮನ ಕೇಂದ್ರೀಕರಿಸುತ್ತದೆ. ನಿಧನಿಧಾನ ಅದರಲ್ಲಿ ಚಿಗುರುಗಳು ಮೂಡತೊಡಗುತ್ತವೆ. ಎಲೆ ಬಲಿಯುತ್ತದೆ. ಗಿಡ ದೃಢವಾಗುತ್ತದೆ.


ಸೋತ ಮೇಲೂ ಸೋಲಿನ ಜೊತೆಗೆ ಉಳಿದಿರುವವರು ಅದರ ಕಟ್ಟಾ ಅನುಯಾಯಿಗಳಾಗಿರುತ್ತಾರೆ. ಅಲ್ಲಿ ಕ್ರಿಮಿಕೀಟಗಳ ಹಾವಳಿ ಕಡಿಮೆ.


ಗೆಲುವಿನ ಹೂಗಳ ತುಂಬ ಭ್ರಮರಗಳು; ಕ್ರಿಮಿಕೀಟಗಳು.. ಅವುಗಳನ್ನು ನಿಯಂತ್ರಿಸುವುದೇ ಒಂದು ಸಾಹಸ. ಹೂ ಕೀಳುವವರು, ಮೊಗ್ಗು ಹರಿಯುವವರು, ಗೆಲ್ಲು ಮುರಿಯುವವರು, ಗಿಡವನ್ನೇ ಕಿತ್ತು ಕದ್ದೊಯ್ಯುವವರು ಬಹಳ ಮಂದಿ ಇರುತ್ತಾರೆ. ಹೂದೋಟಕ್ಕೆ ಬೇಲಿ ಹಾಕಬೇಕಾಗುತ್ತದೆ. ಕಾವಲುಗಾರರನ್ನು ನೇಮಿಸಬೇಕಾಗುತ್ತದೆ. ನೀರು ಗೊಬ್ಬರ ಒದಗಿಸುತ್ತಲೇ ಇರಬೇಕಾಗುತ್ತದೆ. ಅಗತೆ ಕೊಡಬೇಕಾಗುತ್ತದೆ.


ಗೆಲುವಿನರಮನೆಗೆ ಬಾಗಿಲುಗಳು ನೂರಾರು.

ಸೋಲಿನ ಗುಡಿಸಲಿನಲ್ಲಿ ತಣ್ಣನೆ ನೆಳಲು.


ಗೆಲುವಿನ ಹೊರೆ ನಿಭಾಯಿಸಲು ಸಂತತ ನಿರತ ನಿರಂತರ ಶಕ್ತಿ ಬೇಕು. ಹೊರೆ ಕೆಳಗಿಳಿಸುವಂತಿಲ್ಲ. ಗೆಲುವೆಂಬುದು ಸವಾಲು. ಗೆದ್ದ ಮೇಲೆ ನಾಯಕನ ಹೊರತು ಉಳಿದವರು ನಿದ್ರಿಸುವುದು ಮಾಮೂಲು.


ಗೆದ್ದ ಮೇಲೆ ಜವಾಬ್ದಾರಿ ಹೆಚ್ಚು. ಗೆದ್ದ ಯಾರೂ ನಿದ್ರಿಸುವಂತಿಲ್ಲ. ಸದಾ ಎಚ್ಚರಿರಬೇಕು. ಸದಾ ಜಾಗೃತ ಸ್ಥಿತಿಯಲ್ಲಿರಬೇಕು. ಮಹಲಿನಿಂದಾಚೆ ಇನ್ನೊಂದು ಮಹಲನ್ನು ಎಬ್ಬಿಸಬೇಕು. ನಾಯಕನಿಂದ ದ್ವಾರಪಾಲಕನ ವರೆಗೆ ಏಕಚಿತ್ತದಿಂದ ಕೆಲಸ ಮಾಡುತ್ತಿರಬೇಕು.


ಸದಾ ಕಾರ್ಯಶೀಲನಿಗೆ ಮಾತ್ರ ಗೆಲುವು ಒದಗಿ ಬರುತ್ತದೆ. ಚಿಂತನೆ, ಕಾರ್ಯಶೀಲತೆ, ಜಾಗೃತಿ ಮತ್ತು ಫಲಿತಾಂಶದ ಕಡೆಗೆ ದೃಷ್ಟಿ – ಈ ನಾಲ್ಕರ ಕಡೆಗೆ ಯಾರು ಸದಾ ನಿಮಗ್ನರಾಗಿರುತ್ತಾರೋ ಅವರಿಗೆ ಮಾತ್ರ ಗೆಲುವು ಸಿಕ್ಕಲು ಸಾಧ್ಯ. ಅಂಥವರಿಗೆ ಮಾತ್ರ ಸಿಕ್ಕಿದ ಗೆಲುವನ್ನು ಉಳಿಸಿಕೊಳ್ಳಲು ಸಾಧ್ಯ.


ಗೆಲುವೆಂಬುದು ಅಂತಿಮ (end point) ಅಲ್ಲ. ಅದು ಆರಂಭ! ಪದವಿ (degree) ಎಂಬುದು ಹೇಗೆ ಉದ್ಯೋಗಕ್ಕೆ ಒಂದು ರಹದಾರಿಯೋ ಹಾಗೆ ಗೆಲುವು ಎಂಬುದು ದುಡಿಯಲಿಕ್ಕಿರುವ ಒಂದು ಅರ್ಹತೆ. ಗೆಲುವಿನೊಂದಿಗೆ ಆಗುವುದು ಪ್ರವೇಶ ಮಾತ್ರ, ಪ್ರವೇಶ ಸಿಕ್ಕಿದ ಮೇಲೆ ನಿರಂತರ ದುಡಿಯುತ್ತಿದ್ದರೆ ಮಾತ್ರ ಅಭಿವೃದ್ಧಿ.

ನೀನು ದುಡಿದರೆ ಮಾತ್ರ ರಂಗದಲ್ಲಿರುತ್ತಿ. ದುಡಿಮೆಯೇ ಬಲುಹು (power, energy, strength). ದುಡಿಮೆಯೇ ಗೆಲುವು.

ಕೋಟೆಯನು ಎತ್ತರಿಸು; ಒಂದೊಂದು ಕಲ್ಲಿನೆಡೆಯಲ್ಲು ಕಾಣಿಸಬಹುದಾದ ಬಿರುಕುಗಳ ಮುಚ್ಚು;

ಗಿಡಗಂಟಿಗಳ ಕತ್ತರಿಸು ಬುರುಜುಗಳಲ್ಲಿ ಕಾವಲಿಡು

ಕೊಳ್ಳಗಳಲ್ಲಿ ತುಂಬಿರಲಿ ನೀರು, ಕಚ್ಚಿ ತಿನ್ನುವ ಮೊಸಳೆ

ದಿಡ್ಡಿ ಬಾಗಿಲುಗಳ ತೆಗೆ ಬೇಕೆಂದಾಗ

ಸದಾ ತೆರೆದಿಡು ಮಹಾದ್ವಾರ

ಕಣ್ಗಾಪು ಕಾವಲು ಪಡೆಯನಿಡು

ಕಳಿಸು ನಾಲ್ದೆಸೆಗು ನಿಷ್ಣಾತ ಪಹರೆಯವರ

ಇರಲಿ ಗಡಿ ಗುಂಡಾರಗಳ ಸಂಪರ್ಕ ಸಂವಹನ

ಗೆಲುವೆಂಬುದು ಮುಳ್ಳ ಹಾಸಿಗೆ

ಆಸೆ ನಿರೀಕ್ಷೆ ಭರವಸೆಗಳ ಬೆಸುಗೆ!


-ಡಾ. ವಸಂತಕುಮಾರ ಪೆರ್ಲ.

22 views0 comments