ಸುಮಾರು ನಲವತ್ತೇಳು ಸಾವಿರ ಹಾಡುಗಳು, ಹದಿನಾರು ಭಾಷೆಗಳಲ್ಲಿ, ಐವತ್ನಾಲ್ಕು ವರ್ಷಗಳ ಗಾನ ಯಾನ, ನಾಲ್ಕು ಭಾಷೆಗಳಲ್ಲಿ ಆರು ರಾಷ್ಟ್ರಪ್ರಶಸ್ತಿಗಳು, ಒಂದು ದಿನಕ್ಕೆ ಹದಿನೆಂಟು, ಹತ್ತೊಂಬತ್ತು ಹಾಡುಗಳ ರೆಕಾರ್ಡಿಂಗ್!! ಸುಮಾರು ನೂರೈವತ್ತು ನಾಯಕ ನಟರಿಗೆ ಹಾಡಿದ ಕೀರ್ತಿ, ಗಿನ್ನೀಸ ರೆಕಾರ್ಡ್! ಅಬ್ಬಬ್ಬಾ ಇವೆಲ್ಲವೂ ಸಾಧ್ಯವಾದುದು ಕೇವಲ ಒಬ್ಬರಿಂದ ಮಾತ್ರ, ಅವರೆ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ವಿರಾಜಮಾನರಾಗಿದ್ದ ಸಂಗೀತ ಸಾಮ್ರಾಟ್ ' one and only' ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಮಾತ್ರ!!! . ಎಸ್ ಪಿ ಬಿ ಅಂದರೆ ' ಸರಸ್ವತಿ ಪುತ್ರ ಬಾಲೂ' ' ' ದಿ ಸ್ವೀಟೆಸ್ಟ ಪರಸನ್ ಬಾಲೂ' ಅಂತಾನೆ ಅಭಿಮಾನಿಗಳಿಂದ, ಸಂಗೀತ ದಿಗ್ಗಜರಿಂದ, ಪ್ರಶಂಸೆಗೆ ಭಾಜನರಾದವರು. 'ಪುರುಷ ಸರಸ್ವತಿ' ಎಂಬ ಅಭಿದಾನಕ್ಕೂ ಮಾನ್ಯರಾದವರು. ಮೂರು ತಲೆಮಾರಿನ ನಾಯಕ ನಟರಿಗೆ ಧ್ವನಿಯಾಗಿ ,ಅತ್ಯುತ್ತಮ ಪೋಷಕ ನಟರಾಗಿ, ಸಂಗೀತ ನಿರ್ದೇಶಕರಾಗಿ ಸಂಗೀತವನ್ನೇ ಉಸಿರಾಡಿದ , ಮುದ್ದು ಮುಖದ ಸ್ನಿಗ್ಧ ನಗುವಿನ ವಿನಯ ಸರಳತೆಯ ಸಾಕಾರ ಮೂರ್ತಿ ,ಮೇರು ಶಿಖರವೊಂದು ನಮ್ಮ ನಡುವಿಂದ ಮರೆಯಾದುದು ಜನಸಾಮಾನ್ಯರಿಂದ ಹಿಡಿದು ಸಿನಿಮಾ ,ಸಂಗೀತ ಲೋಕದ ದಿಗ್ಗಜರಿಗೆಲ್ಲ ಅರಗಿಸಿಕೊಳ್ಳಲಾರದ ಕಹಿ ಸತ್ಯ
' ಅವರದು ಜನ್ಮತಃ ಶ್ರೀಕಂಠ! ಅದಕ್ಕವರು ಯಾವ ಉಪಚಾರವನ್ನೂ ಮಾಡುತ್ತಿರಲಿಲ್ಲ.ಮಂದ್ರ ಮಧ್ಯಮ ತಾರಕ ಸ್ಥಾಯಿಗಳಲ್ಲಿ ಅದು ಸಿದ್ಧಗೊಂಡ ಫಿರಂಗಿಯಂತೆ ಸಿಡಿಯಲು ಸದಾ ಸಿದ್ದವಿರುತ್ತಿತ್ತು.ದಿನಕ್ಕೆರಡು ಸ್ಟುಡಿಯೋ, ಮ್ಯೂಸಿಕ್ ಡೈರೆಕ್ಟರ್, ನಿರ್ಮಾಪಕರು ಯಾರೊ, ಯಾವ ಹಾಡೊ, ಯಾವ ದಿನವೊ. ಸಮಯ ಚಿಕ್ಕದು ಕೆಲಸ ದೊಡ್ಡದು; ಪ್ರತಿ ಹಾಡಿಗೂ ನ್ಯಾಯ ಸಿಗಬೇಕು; ಒಂದು ಹಾಡು ಮುಗಿಸಿ ಮತ್ತೊಂದಕ್ಕೆ ಓಡುಬೇಕು.ಐವತ್ತು ವರ್ಷಗಳ ಈ ಲೌಕಿಕಾಲೌಕಿಕ ಜೀವನದಲ್ಲಿ ಎಲ್ಲೂ ಎಡವದೆ ಬಂದಿದ್ದಾರಲ್ಲ ಇವರು! ಇವರ ಮೆದುಳಿನ ಕಂಪ್ಯೂಟರ್ ಅದೆಷ್ಟು ' ಜಿಬಿ' ಗಳದ್ದಾಗಿರಬೇಕು' ಇದು ನಾದಬ್ರಹ್ಮ ಹಂಸಲೇಖ ಅವರು ಎಸ್ ಪಿ ಬಿ ಕುರಿತು ಮಾಡಿದ ಉದ್ಘಾರ! ಒಂದು ಕಾರ್ಯಕ್ರಮದಲ್ಲಿ ಎಸ್ ಪಿಬಿ ಗಾಯನ ಕೇಳಿದ ಬಾಲಮುರಳಿ ಕೃಷ್ಣ ಅವರು: ಬಾಲೂ ಸ್ವಲ್ಪ ಶ್ರಮಪಟ್ಟರೆ ನನ್ನಂತೆ ಹಾಡಬಹುದು; ಆದರೆ ನಾನು ಎಷ್ಟೇ ಶ್ರಮಪಟ್ಟರೂ ಅವರಂತೆ ಹಾಡಲಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ' ಮುದ್ದಿನ ಮಾವ ಸಿನಿಮಾ ದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಎಸ್ ಪಿ ಬಿ ಎಲ್ಲಾ ಹಾಡುಗಳನ್ನು ತಾನೇ ಹಾಡುವುದು ಸರಿಯಲ್ಲ; ತನ್ನ ಪಾತ್ರಕ್ಕೆ ರಾಜ್ ಕುಮಾರ್ ಹಾಡಿದ್ದರೆ ಚೆನ್ನಾಗಿತ್ತು ಎಂದು ಹೇಳಿಕಳುಹಿಸಿದರಂತೆ. ಅದಕ್ಕೆ ಡಾ ರಾಜ್ ' ಅರೆ, ಗಂಗೆ ಬಂದು ಒಂದು ಬಟ್ಟಲು ನೀರು ಕೇಳಿದಂತಾಯ್ತಲ್ಲ ಇದು' ಎಂದು ಮೊದಲಿಗೆ ಹಾಡಲು ಒಪ್ಪಿರಲಿಲ್ಲವಂತೆ. ಅನಂತರ ಹಾಡು ಮುಗಿಸಿದ ರಾಜ್ ಕುಮಾರ್: ನಾನೇನೊ ಹಾಡು ಹಾಡಿದ್ದೇನೆ; ಆದರೆ ನಿಮ್ಮ ತರ ಆಗಿಲ್ಲ. ಏನಾದರೂ ತಿದ್ದುಪಡಿ ಇದ್ದರೆ ಸರಿಪಡಿಸಿಕೊಳ್ಳಿ' ಎಂದರಂತೆ!! ಎಂತಹ ಸೌಜನ್ಯ ,ಎಂತಹ ಅಭಿಮಾನ ಗಾನ ಗಂಧರ್ವ ಡಾ ರಾಜ್ ಅವರಿಗೆ ಗಾನ ಗಾರುಡಿಗ ಡಾ ಎಸ್ ಪಿ ಬಿ ಅವರ ಮೇಲೆ!! ಇಂತಹ ಸಾವಿರಾರು ಅಪರೂಪದ ಅನುಪಮ ಕ್ಷಣ ಗಳಿಗೆ ಸಾಕ್ಷಿಯಾಗಿದ್ದ ಗಾನ ಶ್ರೇಷ್ಠ ಸಾರ್ವಕಾಲಿಕ ಗಾನ ಸಾಮ್ರಾಟ ಕೊರೊನಾ ಮಹಾಮಾರಿಗೆ ಬಲಿಯಾದುದು ಮಹಾದುರಂತ. ಲಾಕ್ ಡೌನ ಸಮಯದಲ್ಲಿ ಜಯಂತ್ ಕಾಯ್ಕಿಣಿ ಅವರ' ಕಾಣದಂತೆ ಕಾಡುತಿದೆ ವೈರಿ ಕೊರೊನಾ' ಎಂಬ ಜಾಗ್ರತ ಗೀತೆ ಹಾಡಿ ಎಲ್ಲರನ್ನೂ ಎಚ್ಚರಿಸಿದವರು; ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬೀದಿಗೆ ಬಂದ ಕಾರ್ಮಿಕರ, ವ್ಯಾಪಾರಿಗಳ ನೆರವಿಗಾಗಿ ಫೇಸ್‌ಬುಕ್ ನಲ್ಲಿ ಗಾಯನ ಅಭಿಯಾನ ಆರಂಭಿಸಿ ನೊಂದವರ ಬಾಳಿಗೆ ಬೆಳಕಿನ ದೀವಟಿಗೆಯಾದವರು; ಎಸ್ ಜಾನಕಮ್ಮ ಅವರ ಕುರಿತು ಸುಳ್ಳು ಸಾವಿನ ಸುದ್ದಿ ಹರಿದಾಡಿದಾಗ ತೀವ್ರ ವಿಷಾದಿಸಿ ಹಾಗೆಲ್ಲ ಸುಳ್ಳು ಸುದ್ದಿ ಬಿತ್ತರಿಸದಂತೆ ವಿನಮ್ರವಾಗಿ ವಿನಂತಿಸಿಕೊಂಡವರು; ತಮಗೇ ಕೊರೊನಾ ಪಾಸಿಟಿವ್ ಬಂದಾಗ ಧೈರ್ಯವಾಗಿ ' ಲೈಟಾಗಿ ಬಂದಿದೆ.; ಸ್ವಲ್ಪ ನೆಗಡಿ ಅಷ್ಟೇ; ಇನ್ನೆರಡು ದಿನಗಳಲ್ಲಿ ಮನೆಗೆ ಬರುತ್ತೇನೆ ' ಎಂದು ಆಸ್ಪತ್ರೆ ಸೇರಿದ ಸ್ವರ ಮಾಂತ್ರಿಕ ಆಸ್ಪತ್ರೆಯ ಯಂತ್ರಗಳ ನಡುವೆ ಬಂಧಿಯಾಗಿ ನಿಧಾನವಾಗಿ ಮಂದ್ರಕ್ಕೆ ಜಾರಿ ಕೊನೆಗೆ ಶಾಶ್ವತವಾಗಿ ಸ್ವರೋಚ್ಛಾರ ನಿಲ್ಲಿಸಿ ಗಂಧರ್ವ ಲೋಕಕ್ಕೆ ತೆರಳಿದುದು ,ಅವರು ಮತ್ತೆ ಮಾಡುವುದಿಲ್ಲ ಎಂಬುದು, ಅವರ ಕಿಲಕಿಲ ನಗುವಿನ ವಿನಮ್ರ ಮಾತುಗಳನ್ನು ಮತ್ತೆ ಕೇಳಲಾಗದು ಎಂಬುದು ವಿಧಿಸತ್ಯವಷ್ಟೇ!! ಹಾಳು ಕೊರೊನಾ ಕ್ರೂರಿ ಕೊರೊನಾ ಹಠಮಾರಿ ಕೊರೊನಾ ಎಂತಹ ದಿವ್ಯಾತ್ಮವನ್ನು ಬಲಿತೆಗೆದುಕೊಂಡಿತು!!
ಎಸ್ ಪಿ ಬಿ ಮೂಲತಃ ಆಂಧ್ರಪ್ರದೇಶದವರು. ಅವರ ಪೂರ್ಣ ಹೆಸರು ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಆದರೆ ಅವರ ಸಂಗೀತಕ್ಕೆ ಭಾಷೆಯ ಹಂಗಿರಲಿಲ್ಲ. ದಕ್ಚಿಣ ಭಾರತದ ಎಲ್ಲಾ ಭಾಷೆಗಳ ಬಹು ಬೇಡಿಕೆಯ ಏಕಮೇವಾದ್ವಿತೀಯ ಗಾಯಕರಾಗಿ ಐದು ದಶಕಗಳ ಕಾಲ ಮೆರೆದು ಗಿನ್ನೀಸ್ ಪುಸ್ತಕದಲ್ಲಿ ದಾಖಲಾದವರು. ಎಸ್ ಪಿ ಬಿ ಎಲ್ಲಾ ಭಾಷೆಗಳಲ್ಲಿ ಹಾಡಿದರೂ ಕನ್ನಡವೆಂದರೆ ಎಲ್ಲಿಲ್ಲದ ಅಭಿಮಾನ ಅವರಿಗೆ; ' ನನಗೆ ಮುಂದಿನ ಜನ್ಮವಿದ್ದರೆ ಅದು ಕನ್ನಡ ನಾಡಲ್ಲೆ ಆಗಲಿ, ಇದು ಬೆಂಗಳೂರಲ್ಲಿದ್ದೀನಿ ಅಂತ ಹೇಳುವ ಮಾತಲ್ಲ ಸ್ವರಗಳ ಮೇಲಾಣೆ' ಎನ್ನುತ್ತಿದ್ದರು. ಇನ್ನು ಕನ್ನಡದಲ್ಲಿ ಅವರ ಮಧುರ ಕಂಠದಲ್ಲಿ ಮೂಡಿಬಂದ Evergreen ಹಾಡುಗಳೇನು ಒಂದೇ ಎರಡೇ!! ಒಂದೊಂದೂ ಅಣಿಮುತ್ತು. ಮಾಮರವೆಲ್ಲೊ ಕೋಗಿಲೆಯೆಲ್ಲೊ, ನಗುವ ನಯನ ಮಧುರ ಮೌನ, ಜೊತೆಯಲಿ ಜೊತೆ ಜೊತೆಯಲಿ, ನೀ ಮೀಟಿದ ನೆನಪೆಲ್ಲವೂ, ಶಿಲೆಗಳು ಸಂಗೀತವ, ನೀನು ನೀನೆ , ಡಿಂಗರೆ ಡಿಂಗರೆ ಡಿಂಗ, ಈ ಸುಂದರ ಬೆಳದಿಂಗಳ, ಚಾಮುಂಡಿ ತಾಯಿಯಾಣೆ, ಕನ್ನಡ ನಾಡಿನ ಜೀವನದಿ ,ಅರ್ಪಣೆ ನಿನಗೇ ಅರ್ಪಣೆ ಕನ್ನಡವೆ ನಮ್ಮಮ್ಮ, ಪ್ರೇಮ ಚಂದ್ರಮ, ಸೋಲೆ ಇಲ್ಲ, ಘರನೆ ಘರ ಘರನೆ ..... ಹೀಗೆ ಮುಗಿಯದಾ ಸರಣಿ ನನ್ನ ನೆಚ್ಚಿನ ಹಾಡುಗಳ ಸರಣಿ .
ಎಂಬತ್ತರ ದಶಕವದು , ರೇಡಿಯೋ ಒಂದೇ ಹಳ್ಳಿ ಹಳ್ಳಿಗಳಲ್ಲಿ ದಾಂಗುಡಿ ಇಟ್ಟಿದ್ದ ಕಾಲ. ಕನ್ನಡ ಶಾಲೆಯಲ್ಲಿ ಓದುತ್ತಿದ್ದ ನನಗೆ ಸಿನೆಮಾ ಹಾಡುಗಳೆಂದರೆ ಪಂಚಪ್ರಾಣ. ನಮ್ಮ ಕೇರಿಯಲ್ಲಿ ಮೊದಲು ರೇಡಿಯೋ ಎಂಟ್ರಿ ಕೊಟ್ಟಿದ್ದು ನಮ್ಮ ಮನೆಯಲ್ಲಿ.ಆಗೆಲ್ಲ ಕನ್ನಡ ಶಾಲೆಗಳು ಬೆಳಿಗ್ಗೆ ಎಂಟರಿಂದ ಹನ್ನೊಂದು , ಮಧ್ಯಾಹ್ನ ಎರಡು ವರೆಯಿಂದ ಐದು ಇಪ್ಪತ್ತರವರೆಗೆ ನಡೆಯುತ್ತಿತ್ತು. ಮಧ್ಯಾಹ್ನ ಒಂದುವರೆಯಿಂದ ಪ್ರಸಾರವಾಗುವ ಚಿತ್ರಗೀತೆಗಳನ್ನು ಎಂದೂ ಮಿಸ್ ಮಾಡುತ್ತಿರಲಿಲ್ಲ. ರೇಡಿಯೋ ಕಾಲ ಮೇಲೆ ಇಟ್ಟುಕೊಂಡು ಜೋರಾಗಿ ಹಚ್ಚಿಕೊಂಡು ಅದರ ಒಟ್ಟಿಗೇ ಹಾಡುವ ಹುಚ್ಚು. ಹೀಗಾಗಿ ಆ ದಿನಗಳ ಹಿಟ್ ಹಾಡುಗಳೆಲ್ಲಾ ನಾಲಿಗೆ ತುದಿಯಲ್ಲೇ ಇರುತ್ತಿದ್ದವು. ಎರಡು ಗಂಟೆಗೆ ಚಿತ್ರಗೀತೆ ಮುಗಿದ ಬಳಿಕವೇ ಅದೇ ಖುಷಿಯಲ್ಲಿ ಹಾಡನ್ನು ಗುನುಗುತ್ತಾ ಶಾಲೆಗೆ ಹೋಗುವುದು. ಆ ಹಳೆಯ ಹಾಡುಗಳನ್ನು ಕೇಳಿದಾಗೆಲ್ಲ ಅದೆಷ್ಟು ರೋಮಾಂಚನ!! ಎಸ್ ಪಿ ಬಿ ,ಎಸ್ ಜಾನಕಮ್ಮ ಅವರ ಕಾಂಬಿನೇಷನ್ ಕೇಳಲು ಅದೆಷ್ಟು ಹಿತ.ಅಂದಿನಿಂದ ಇಂದಿನವರೆಗೂ ಎಸ್ ಪಿ ಬಿ ಎಂದರೆ ಆರಾಧನಾ ಭಾವ. ಅನಂತರದಲ್ಲಿ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ' ಎದೆ ತುಂಬಿ ಹಾಡುವೆನು' ಹಾಡಿನ ಜೊತೆಗೆ ಅವರ ಮುತ್ತಿನಂತಹ ಮಾತು ಕೇಳುವ ಸಯೋಗ. ಅದೊಂದು ರಸಗವಳ ಸಂಗೀತ ಪ್ರಿಯರಿಗೆ.ಅವರ ' ವೀಕೆಂಡ್ ವಿತ್ ರಮೇಶ' ತುಂಬಾ ಕಾಡಿದೆ. ನನ್ನ ಇಡೀ ಜೀವಮಾನದಲ್ಲಿ ನಾನು ಅತಿಯಾಗಿ ನೆಚ್ಚಿಕೊಂಡಿದ್ದು ಮಹಾನ್ ಮಾನವತಾವಾದಿ ಕ್ಷಿಪಣಿ ತಜ್ಞ ಡಾ ಕಲಂ, ಇನ್ನೋರ್ವ ನಟ ಸಾರ್ವಭೌಮ ಡಾ ರಾಜ್‍ಕುಮಾರ್, ಮತ್ತೋರ್ವ ಮಧುರ ಕಂಠದ ಒಡೆಯ ಎಸ್ ಪಿ ಬಿ. ಇವರನ್ನು ನೋಎಬೇಕೆನ್ನುವ ನನ್ನ ಕನಸು ಈಡೇರಿರಲಿಲ್ಲ.ಇವರೆಲ್ಲರೂ ಬದುಕಿದ್ದ ಕಾಲದಲ್ಲಿ ನಾವು ಬದುಕಿದ್ದೇವೆ ಎಂಬುದೇ ನಮ್ಮ ಭಾಗ್ಯ. ಇವರೆಲ ಯುಗಪುರುಷರು. ಮತ್ತೆ ಮತ್ತೆ ಹುಟ್ಟಿ ಬರಲಾರರು.. ಇವರೆಲ್ಲರ ಸಾವಿನ ಸಂದರ್ಭದಲ್ಲಿ ನನ್ನಷ್ಟಕ್ಕೇ ತುಂಬಾ ಅತ್ತಿದ್ದೇನೆ. ಈಗಲೂ ಇವರ ಬಗ್ಗೆ ಮಾತಾಡುವಾಗ , ಓದುವಾಗ ಮನಸ್ಸು ತೇವ ವಾಗುತ್ತದೆ. ಎಸ್ ಪಿ ಬಿ ಮತ್ತೆ ಗುಣಮುಖರಾಗಿ ಬರುತ್ತಾರೆ ಎಂದೇ ನಂಬಿದ್ದೆ. ಅಂದು ಶಾಲೆಯಲ್ಲಿ ಒಬ್ಬಳೇ ಇದ್ದೆ. ನಮ್ಮ ಮನೆಯವರು ಕರೆ ಮಾಡಿ ವಿಷಯ ತಿಳಿಸಿದಾಗ ಅಳು ಒತ್ತರಿಸಿ ಬಂತು. ಅವರ ಸಾವು ತುಂಬಾ ಕಾಡುತ್ತಿದೆ. ಹಂಸಲೇಖ ಮುನ್ನುಡಿ ಬರೆದ ಭದ್ರಾವತಿ ರಾಮಾಚಾರಿ ಅವರು ಬರೆದ' ಎಸ್ ಪಿ ಬಾಲಸುಬ್ರಹ್ಮಣ್ಯಂ' ಕೃತಿ ತರಿಸಿ ಓದಿದೆ. ಸಮಾಧಾನವಾಗಲಿಲ್ಲ. ಮನಸ್ಸಿನ ದುಗುಡವನ್ನು ಅಕ್ಷರದ ಮೂಲಕ ಚಿತ್ರಿಸಿ ಹಗುರಾಗುವ ಪ್ರಯತ್ನವಷ್ಟೆ.
ಸುಧಾ ಭಂಡಾರಿ.
ಹಡಿನಬಾಳ
Comentários