top of page

ಬರಿಯಕ್ಕಿ ದೋಸೆ ನೆವ್ನಲ್ಲಿ

Updated: Jun 16, 2023

  • ಕತೆ

ಗೋಪಾಲ್ನಿಗೆ ಸ್ವಲ್ಪ ಬೇಗ ಎಚ್ರಿಕೆ ಆಯ್ತು

ಮನ್ಸಿಗೆಂತದೋ ಕಿರಿಕಿರಿ.

ಯಾಕೇಳಿ ತಲೆಗೋಗಲ್ಲ. 

ರಾತ್ರಿ ಸರೀ ನಿದ್ದೆ ಬಾರದ್ರಂದ್ಲೋ ಏನೋ...!  ಹೇಳಿ ಗ್ರೇಶಿದ. 

ಅಮ್ಮ ಎದ್ದು ಬಚ್ಲಿಗೆ

ಬೆಂಕಿ ಹಾಕ್ತಾ ಇತ್ತು. 

"ನೀ ಎಂತದಿಕಮ್ಮ

ಇಷ್ಟು ಬೇಗ ಎದ್ದದ್ದು, 

ಬೆಂಕಿ ನಾನೋ ರಾಧೆಯೋ ಹಾಕುದಿಲ್ವೋ.. 

ಅಂತೇ ಬಂಙ ಬರುದು ಯಾಕೆ ...? "

ಹೇಳಿ ಹೇಳಿದ್ರೂ .....   

ಅದು ಬರೀ ಮಾತಷ್ಟೇಳಿ

ಅವನಿಗೂ ಗೊತ್ತಿತ್ತು. 

"ನನಿಗೆಂತ ಬಂಙ ಮಗಾ, 

ಬೆಳ್ಗಾದ ಮೇಲೆ ನಿದ್ದೆ ಬರುದಿಲ್ಲ, 

ಒಲೆಬುಡ ಕೂತ್ರೆ

ಮೈಕೈ ಬೇನೆಗೆ ಒಳ್ಳೆದಾಗ್ತೆ…" 

ಹೇಳಿ ಅಮ್ಮ ಹೇಳಿದಾಗ

ಗೋಪಾಲ ಮಾತಾಡಲ್ಲ. 

ಬೆಳಿಗ್ಗಾಣ ಕೆಲ್ಸ ಎಲ್ಲಾ

ಮುಗ್ಸಿ ಆದ್ರೂ 

ಕಿರಿಕಿರಿ ಕಮ್ಮಿ ಆಗಲ್ಲ. 

ಹಾಂಗಾಗಿ ಪ್ರಾಣಾಯಾಮ

ಸ್ವಲ್ಪ ಹೆಚ್ಚೇ ಮಾಡಿದ; 

ಊಹೂಂ...! ಆದ್ರೂ ಇಲ್ಲ ....! 

ಯಾಕೇಳಿಯೂ ಅಂದಾಜಾಗಲ್ಲ. 

"ಪುಟ್ಟೂ, ಅಪ್ಪಂಗೆ ಪೂರಿಯೋ..? 

ಅಜ್ಜಿಗೆ ಮಾಡಿದ ತೆಳ್ಳವೋ..? ಕೇಳು…" 

ಹೇಳಿ ರಾಧೆ ಹೇಳಿದ್ದು

ಕೆಮಿಗೆ ಬಿದ್ದಾಗ್ವಾಗ... 

ಗೋಪಾಲ್ನಿಗೆ

ಪಕ್ಕ ತಲೆಗೋಯ್ತು ...! 

ಈ ಕಿರಿಕಿರಿ ಯಾಕೆ ಹೇಳಿ....!! 

ಹಾಂಗಾದ್ರೆ .... ಆಚಕರೆ ಚಿಕ್ಕಯ್ಯ 

’ನನಿಗೆ ನಾಟ್ಬೇಕು’ ಹೇಳಿಯೇ ಹೇಳಿದ್ದೋ...!! 

ಹೇಳಿ ಕಂಡೋಯ್ತು.

ಹಾಂ...! ಅದು ನಿವುಗೆ

ಅರ್ಥ ಆಗ್ಬೇಕಾದ್ರೆ 

ಒಂದು ಸ್ಟೆಪ್ ಹಿಂದಕ್ಕೋಗ್ಬೇಕಾಗ್ತೆ.

        

ಒಂದಿನಕ್ಮೊದ್ಲು 

ಆಚೆಕರೆ ಸುಬ್ರಾಯ ಚಿಕ್ಕಯ್ಯ ಬಂದಿದ್ರು. 

ಒಂದು ಗ್ಲಾಸು ಕಾಪಿ ಕುಡ್ದು, 

ಎಲೆತಟ್ಟೆಂದ ಎರ್ಡು ಅಡಿಕ್ಕೆ ಹೋಳು ಬಾಯಿಗೆ ಹಾಕಿ, 

ಎಳ್ತು ಎಲೆ ಎರ್ಡು ತೆಗ್ದು, 

ತೊಟ್ಟನ್ನೂ ಕೊಡಿಯನ್ನೂ ಚೂಂಟಿ, 

ತೊಟ್ಟಿನ ಅಲ್ಲೇ ಎಲೆತಟ್ಟೆಗೆ ಹಾಕಿ, 

ಕೊಡಿಯ ಕೆನ್ನಿಗೆ ಅಂಟ್ಸಿ, 

ಎಲೆಯ ನಾರು ತೆಗ್ದು 

ಮುಂಗೈ ಬೆನ್ನಿಗೆ ತಿಕ್ಕಿಕೊಂಡಿರುವಾಗ ... 

ಹೇಳಿದ್ದು -

"ಇಕೋ ಗೋಪಾಲ... ನಾನು ನಿನ್ನೆ 

ಗುಡ್ಡೆಕೊಡಿ ಗಣ್ಪಯ್ನಲ್ಲಿಗೆ ಹೋದ್ದಕೋ ...! 

ಅವನತ್ರೆ ದನ ಒಂದು

ಕೊಡುದದೆ ಹೇಳಿ 

ಯಾರೋ ಹೇಳಿದುವು ಹೇಳಿ ಹೋದ್ದು....! 

ಅದು ಮತ್ತೆ ನೋಡುವಾಗ

ಅಂತೇ ಸುದ್ದಿ ....! ಬಿಲಿಯಾ..!!"

ಹೇಳಿ... ಎಲೆಗೆ ಸುಣ್ಣ ಉದ್ದಿಕೋಂ~~ಡು... 

"ನಾನೆಂತ ಹೇಳುಕೆ ಹೊರ್ಟದ್ದು ಹೇಳಿದ್ರೆ, 

ಗಣ್ಪಯ್ನ ಸೊಸೆ ಒಳ್ಳೆತ

ಉಶಾರಿ ಅದೆ ಬಿಲ್ಯಾ !! ... 

ನಮ್ಮ ಹೋಗುಕೆ ಬರುಕೆ

ಲಾಯ್ಕ ಮಾತಾಡ್ತೇಳಿ..!! 

ಕುಂಬ್ಳೆ ಸೀಮೆದು ಇಲ್ಲಿ ಬಂದು 

ಇಷ್ಟು ಬೇಗ ಕಲ್ತದ್ದು ಸಾಕು..! 

ನನಿಗೆ ಖುಶಿ ಆಯ್ತಿಕೊ..! 

ತಡಿಯದ್ದೆ ಗಣ್ಪಯ್ನತ್ರೆ

ಹೇಳಿಯೂ ಬಿಟ್ಟೆ. ..... 

ಅವ್ನೂ ಸೊಸೆಯ ಹೊಗ್ಳಿದ... 

ಅತ್ತೆಯನ್ನೂ ಮಾವ್ನನ್ನೂ 

ಎಂತ ಮಾಡುಕೂ ಬಿಡುದಿಲ್ಲಂತೆ. 

’ನೀವೆಂತದಿಕ್ಕೆ ಇನ್ನೂ

ಬಂಙ ಬರುದು? 

ನೀವು ಸ್ವಸ್ಥ ಕೂತುಕೊಂಡು, 

ಮಾಡ್ಬೇಕಾದ್ದು ಎಂತರಾಳಿ 

ನವುಗೆ ಹೇಳಿದ್ರಾಯ್ತು...’ ಹೇಳ್ತಂತೆ...." 

ಹೇಳಿ .... ಮತ್ತೆ ... 

ಸುಣ್ಣ ಉದ್ದಿದ ಎಲೆಯ ಮಡ್ಸಿ ಬಾಯಿಗೆ ಹಾಕಿ, 

ಸ್ವಲ್ಪ ಹೊತ್ತು ಜಗ್ದು.. 

"ಗೋಪಾಲ, ಹೇಳಿದಾಂಗೆ ನಾಳೆ ಅಜ್ಜಯ್ನ ತಿಥಿ ಇಕೋ...! 

ಬಂದ್ಬಿಡಿ ಬಿಲಿಯಾ, 

ಅಮ್ನತ್ರವೂ ಹೇಳಿಬಿಡು.." ಹೇಳಿದ್ರು.  

ಗೋಪಾಲ ಆಯ್ತು ಹೇಳುವಾಗ .....

ಚಿಕ್ಕಯ್ಯ ಅಂಗ್ಳಕ್ಕಿಳ್ದಾಗ್ಯದೆ. .... 

ನಾಕೆಜ್ಜೆ ಹೋದವ್ರು ತಿರ್ಗಿ ಬಂದು ಸ್ವಲ್ಪ ಸಣ್ಣಕ್ಕೆ.. 

"ಹೇಳಿದಾಂಗೆ ಗೋಪಾಲಾ ... 

ನಾಡ್ದಿಗೆ ಒಂದೆರ್ಡ್ಸಾವಿರ

ಇದ್ರೆ ಬೇಕಾಯ್ತು .... 

ಪೋಕು ಮುಟ್ಟಿಹೋಗ್ಯದೆ  ...... 

ವಕೀಲ್ರಿಗೆ ಕೊಡ್ತೇನೆ ಹೇಳಿಬಿಟ್ಟಿದ್ದೇನೆ...  

ಎಂಟು... ತಪ್ಪಿದ್ರೆ ಹತ್ತೇ ದಿನಲ್ಲಿ 

ವಾಪಾಸು ಕೊಟ್ಟೇನು...! ಮೋಸಾವ್ಕಿಲ್ಲ .... 

ನಾಡ್ದು ಬೆಳಿಗ್ಗೆ ಸಿಕ್ಕಿದ್ರೆ ಸಾಕು!.... 

ಬರ್ತೇನೆ ಬಿಲ್ಯಾ.. …" ಹೇಳಿ ನಡ್‌ದ್ರತ್ಲಾಗಿ. 

ಗಣ್ಪಯ್ನ ಮನೆ ಸುದ್ದಿ

ನನ್ನತ್ರ ಯಾಕೆ ಹೇಳಿದ್ದಿವ್ರೂ ... !!

ಹೇಳಿ ಗೋಪಾಲ್ನಿಗೆ ಒಂದ್ಸರ್ತಿ ಕಂಡೋಯ್ತು. 

ಮತ್ತೆ, ವಿಷ್ಯ ಅಲ್ಲಿಗೇ ಮರ್ತೋದ್ರೂ ....... 

ಮನ್ಸಿನ ಮೂಲೆಲಿ ಇತ್ತೋ..? 

ಹಾಂಗಾಗಿ ರಾತ್ರೆ ಸರೀ ನಿದ್ದೆ ಬಾರದ್ದೋ ...?? .... 

ಹೌದೊ ಕಡೆಗೆ....!! 

ಹಾಂಗೆ ... ಬೆಳಿಗ್ಗೆ ಏಳ್ವಾಗ

ಮನ್ಸಿಗೆ ಕಿರಿಕಿರಿ ಆದ್ದು 

ಯಾಕೆ ಹೇಳಿ... ಅರ್ಥ ಆದ್ದು   

ರಾಧೆಯ ಸ್ವರ ಕೇಳಿ ಆಗ್ವಾಗ. 

ಓ...! ಇದು ಚಿಕ್ಕಯ್ಯ

ಬೇಕೂಳಿಯೇ ಹೇಳಿದ್ದು.. 

ಹೇಳಿ ನಿಶ್ಚಯ ಆಯ್ತು ಗೋಪಾಲ್ನಿಗೆ.

 

ಓ....! ನಿವುಗೆ ಇನ್ನೂ 

ವಿಷ್ಯ ಎಂತಾಳಿಯೇ ಗೊತ್ತಾಗಲ್ಲ ಕಾಣ್ತೆ ಅಲ್ವೋ..? 

ಹೇಂಗೆ ಗೊತ್ತಾಗುದು ..? 

ನಾನೇ ಹೇಳ್ಬೇಕಷ್ಟೆ .. ಹೇಳ್ತೇನೆ ಕೇಳಿ …

ಗೋಪಾಲ ಪಂಜ ಸೀಮೆಯಂವ

"ಹೋವ್ಕೆ ಬರುಕೆ... " ಹೇಳಿ

ಮಾತಾಡುವ ಮನೆ.

ಈ ರಾಧೆ ಅದಿಯಲ್ಲ

ಅದು ಪುತ್ತೂರು ಸೀಮೆದು.

"ಹೋಪಲಿದ್ದು... ಬಪ್ಪಲಿದ್ದು.."

ಮಾತಾಡುವ ಮನೆ.

ರಾಧೆ ಗೋಪಾಲ್ನ

ಸೋದರಮಾವ್ನ ಮಗ್ಳೇ...! 

ಇವಂದ ನಾಕು ವರ್ಷಕ್ಕೆ ಸಣ್ಣ. 

ರಾಧೆಯ ಅಣ್ಣ ಶಿವಶಂಕರನಿಗೆ 

ಗೋಪಾಲಂದೇ ಪ್ರಾಯ. 

ಮೂರು ಜನವೂ ಸಣ್ಣಾಗಿರುವಾಗಂದ್ಲೂ 

ಒಟ್ಟಿಗೇ ಆಡಿಕೊಂಡಿದ್ದವು.            

ರಾಧೆ ಡಿಗ್ರಿ ಮುಗ್ಸುವಾಗ 

ಅದಿಕ್ಕೆ ಒಂದು ’ಪೊದು’ ಬಂತು. 

ಆಗ ಶಿವಶಂಕರ್ನೇ

ಅವ್ನ ಅಪ್ಪಮ್ನತ್ರ ಹೇಳಿದ್ದು ... 

"ಇದಾ...ನಮ್ಮ ರಾಧೆಗೂ

ಈ ಗೋಪಾಲಂಗೂ   

ಒಂದು ರಜಾ ತೆಳ್ಳವು ಇದ್ದು...!  

ಬೇರೆ ಪೊದು ಎಂತದಕ್ಕೆ...?" ಹೇಳಿ. 

ರಾಧೆಯ ಅಮ್ನಿಗೆ

ಪಕ್ಕ ಗೊತ್ತಾಗದ್ದೇ 

"ಎಂತರ ಹಾಂಗೇಳಿದರೆ... ?"

ಹೇಳಿ ...ಸ್ವಲ್ಪ ಗಾಬ್ರಿಲಿ ಕೇಳಿತ್ತು 

"ಏ...! ಅದು ದೊಡ್ಡಕ್ಕೆಲ್ಲಾ

ಆಯ್ದಿಲ್ಲೆ ಅಮ್ಮಾ..!! 

ಒಂದು ’ತೆಳುವಾದ ಲವ್’ ಅಷ್ಟೇ…"  ಹೇಳಿದಾಗ, 

ಅಮ್ನಿಗೂ ನೆಗೆ ಬಂತು. 

"ಎಂತಾ ಖರ್ಮದ ಲವ್ವೋ ..! 

ಸಿನೇಮ ಹೆಚ್ಚು ನೋಡಿದರೆ 

ಹೀಂಗೇ ಅಪ್ಪದು.."

ಹೇಳಿದ್ರು ಅಪ್ಪ. ....

"ನಾವು ಮೊದಲು ಭಾರಿ

ಸಿನೇಮಾ ನೋಡಿದ್ದಾಯಿಕ್ಕು..! "

ಹೇಳಿ ಅಮ್ಮ ಹೇಳಿದಾಗ  

ಈ ಮಕ್ಳ ಕಣ್ಣು ಅರ್ಳಿತ್ತು..!! ... 

ಅವ್ವು ... ಮೋರೆ ಮೋರೆ ನೋಡಿ ನೆಗೆ ಮಾಡ್ವಾಗ, ರಾಧೆಯ ಅಪ್ನಿಗೆ ....

ಎಂತದೋ ಎಲ್ಲ ಆಯ್ತು ...  

"ಆತಾತು... ಯಾವುದಕ್ಕೂ

ಮೌಢ್ಯ ಕಳಿಯಲಿ..". 

ಹೇಳಿ ತೋಟಕ್ಕೆ ಹೋದ್ರು. 

ಅಲ್ಲಿಗೆ ಎಲ್ಲಾ

ಸುಖಾಂತ್ಯ ಆದಾಂಗೆ ಕಂಡ್‌ತ್ತೋ..!!

ಆದ್ರೆ .... 

ಮತ್ತೆ ಒಂದೇ ತಿಂಗ್ಳಿಲಿ 

ಗೋಪಾಲ್ನ ಅಪ್ಪಯ್ನಿಗೆ ಹಾರ್ಟ್ ಎಟ್ಯಾಕ್ ಆಗಿ 

ಅವ್ರ ದಿನ ಕಳುತ್ತು.

ಅಮ್ಮ ಜಾರಿಬಿದ್ದು

ಕಾಲು ಮುರ್ಕೊಂಡುತ್ತು.

ಒಟ್ಟಾರೆ ಗ್ರಾಚಾರ ಸರಿ ಇಲ್ಲ

ಹೇಳಿ ಆಯ್ತು. 

ಗೋಪಾಲ್ನ ಕುಟುಂಬದವ್ವೆಲ್ಲಾ

"ನಮ್ಮ ಗೋಪಾಲ್ನಿಗೆಂತ

ಬೇರೆ ಸಿಕ್ಕುಕಿಲ್ವೋ..? 

ಆ ಮಗು ಯಾಕೆ, ಅದ್ರ ಜಾತ್ಕವೇ ಸರಿ ಇರುಕಿಲ್ಲ …".     

ಹೇಳಿ ಕೊಂಕು ತೆಗ್‌ದ್ರೂ, 

ಗೋಪಾಲ್ನ ಅಮ್ಮ ಗಟ್ಟಿ ನಿತ್ತದ್ರಿಂದ ಮದುವೆ ಆಯ್ತು.

 

ಮದುವೆ ಆಗಿ ಬಂದ ಮೇಲೆ.... 

ರಾಧೆಗೆ ಅಭ್ಯಾಸ ಇಲ್ಲ ಹೇಳಿ ... 

ಗೋಪಾಲ, ಮೊದ್ಲಾಣಾಂಗೆ 

"ಹೋಪಲೆ ಬಪ್ಪಲೆ..."ಲಿಯೇ ಮಾತಾಡಿಕೊಂಡಿದ್ದ. 

ಕೆಲುವ್ದಿನ ಕಳ್ದು ಗೋಪಾಲ ರಾಧೆಯತ್ರ 

"ನೀನು ಇಲ್ಯಾಣ ಭಾಷೆ ಕಲಿವಲಿಲ್ಲೆಯೋ ....?" 

ಹೇಳಿ ಕೇಳಿದಾಗ ರಾಧೆ ..... 

"ಎಂತದಕ್ಕೇಳಿ ಬೇಕನ್ನೆ ..? 

ಅತ್ತೆ ಹೇಂಗೂ ಮೊದಲು 

"ಹೋಪಲೆ ಬಪ್ಪಲೆಯೇ" ಮಾತಾಡಿಕೊಂಡಿದ್ದದು ... 

ನಿಂಗೊಗುದೇ ಅದು ಬತ್ತು... 

ಇನ್ನು ಆನು ಅದರ

ಸುರುವಿಂದ ಕಲಿವದೆಂತಕೆ ..? 

ಮತ್ತೆ, ಅದೆಂತರ

ಲಾಯ್ಕ ಭಾಷೇಳಿ ಬೇಕನ್ನೆ. .. 

"ಹೋಗುಕದೆ.. ಬರುಕದೆ...".... 

’ಅದೆ..’ ಎಂತ

ಕಪಾಟಿನ ಅದೆಯೋ...?" 

ಹೇಳಿ ನೆಗೆ ಮಾಡಿತ್ತು. ... 

ಗೋಪಾಲ್ನಿಗೆ ಒಂದ್ನಮೂನೆ ಆದ್ರೂ 

ರಾಧೆಗೆ ಬೇಜಾರು ಮಾಡುದೆಂತದಿಕ್ಕೇಳಿ ಸುಮ್ಮ್‌ಗಾದ.

ಗೋಪಾಲ್ನಿಗೆ "ರೊಟ್ಟಿ, ಮುದ್ದೆಹುಳಿ"

ಹೇಳಿದ್ರೆ... ಉಬ್ಬುರೊಟ್ಟಿಯೂ, ಅಲಸಂಡೆ ಕಾಳು ಮುದ್ದೇಹುಳಿಯೂ

ಹೇಳಿದ್ರೆ ಭಾರೀ ಪ್ರೀತಿ. 

ಉಬ್ಬುರೊಟ್ಟಿ  ರಾಧೆಯೂ

ಲಾಯ್ಕ ಮಾಡ್ತೆ.. 

ಆದ್ರೆ ಒಟ್ಟಿಗೆ

ಜೀರಿಗೆ ಹಾಕಿದ

ಬಸಳೆ ಚಪ್ಪೆಬೆಂದಿಯೇ

ಆಗ್ಬೇಕು ಅದಿಕ್ಕೆ.  

"ಎನ್ನ ಅಮ್ಮ ಹೀಂಗೇ ಮಾಡುದು.."

ಹೇಳುವಾಗ

ಗೋಪಾಲ್ನ ಅಮ್ನೂ

"ಅಕ್ಕು ಹಾಂಗೇ ಮಾಡ್ಲಕ್ಕು.."

ಹೇಳಿಯಾರು... ಮತ್ತೆ...

ಅಲಸಂಡೆ ಬಿತ್ತು ರಾಧೆಗೆ ಅಷ್ಟಕ್ಕಷ್ಟೆ. 

"ಅದೆಂತರ  ...?

ಮುದ್ದೆಹುಳಿ ಹೇಳಿದರೆ..? ...    

ಮುದ್ದೆಮುದ್ದೆ ಇರ್ತೋ ಹೇಂಗೇ...?"

ಹೇಳಿ ತಮಾಷೆ ಮಾಡ್ತಿತ್ತು ರಾಧೆ. 

ಮತ್ತೆ ಅವ್ಕೊಬ್ಬ ಮಗ ಹುಟ್ಟಿದ. 

ಪುಳ್ಳಿಗೆ ಅಜ್ಜಯ್ನ ಹೆಸ್ರು ಇಟ್ರಾದೀತೂಳಿ 

ಅಮ್ನಿಗೂ, ಗೋಪಾಲ್ನಿಗೂ ಇತ್ತು. 

ರಾಧೆಗೆ ’ಕಿಶೋರ್ ಕುಮಾರ್ನ ಪದ್ಯ’ ಹೇಳಿದ್ರೆ ಆಯ್ತು.

ಹಾಂಗಾಗಿ ಕಿಶೋರ್ ಹೇಳಿ ಇಡುವ ಹೇಳಿ ರಾಧೆ. 

ಅಂತೂ ಅಜ್ಜಯ್ನ ಹೆಸರಿನ

ಅರ್ದ ಸೇರ್ಸಿ 

’ಕೃಷ್ಣ ಕಿಶೋರ’ ಹೇಳಿ ಇಟ್ರೂ, 

ಕರಿಯುದು ಮಾತ್ರ

ಕಿಶೋರ ಹೇಳಿಯೇ.

ಈ ಕಿಶೋರ .... ಅಮ್ನತ್ರ, 

ಅಮ್ನ ಭಾಷೆ ಮಾತಾಡಿದ್ರೂ... 

ಅಪ್ಪಯ್ನತ್ರವೂ, ಅಜ್ಜಮ್ನತ್ರವೂ 

"ಹೋಗುಕೆ ಬರುಕೆ "ಲಿಯೇ ಮಾತಾಡುದು.

ಈ ಗೋಪಾಲ್ನ ತಂಗಿ ಶಾರದೆಯ 

ಕುಂಬ್ಳೆ ಸೀಮೆಗೆ ಕೊಟ್ಟದ್ದು.

ಅದು ಅಲ್ಲಿಗೋಗಿ, 

ಹಠಲ್ಲಿ ಅಲ್ಯಾಣ ಭಾಷೆಯ ತಕ್ಕಮಟ್ಟಿಗೆ ಕಲ್ತದೆ... 

’ಹೇದೆ...’ ’ಕೇಟ್ಟಂ..’ಎಲ್ಲಾ

ಅದಿಕ್ಕೆ ತಲೆಗೋಗುದಿಲ್ಲ. 

ಕೆಲವೆಲ್ಲಾ ತಟಪಟ ಆದ್ರೂ, ಮಾತಾಡದ್ದೇ ಬಿಡುದಿಲ್ಲ. 

ಅದ್ರ ಮಗ, ಗೋವಿಂದ ಪ್ರಸಾದ್ನೂ, ಕಿಶೋರ್ನೂ ....

ಸಾಧಾರ್ಣ ಒಂದೇ ಪ್ರಾಯದವ್ವು. 

ಶಾರದೆ ಮಗ್ನ ಕರ್ಕೊಂಡು ....

ಅಪ್ನ ಮನೆಗೆ ಬಂದ್ರೆ ... 

ಅತ್ತಿಗೆಯತ್ರವೂ ...

"ಹೋಗುಕೆ ಬರುಕೆ.."

ಮಾತಾಡಿ ನೋಡುದೂ ಹೇಳಿ ಅದೆ. 

ರಾಧೆ ಮಾತ್ರ ...

"ಹೋಪಲೆ ಬಪ್ಪಲೆಯೇ." 

"ಅತ್ತಿಗೆ ನೀನಿನ್ನೂ ಈ ಭಾಷೆ ಕಲಿಯಲ್ವೋ..?" ಹೇಳಿ 

ಶಾರದೆ ಕೇಳದ್ದಿರುದೂಳಿಲ್ಲ. 

"ನೀನು ಮೊದಲಾಣಾಂಗೆ ಮಾತಾಡ್ಲಾಗದೋ 

ಶಾರದೆ..! ರಗಳೆ ಇಲ್ಲೆ…" ಹೇಳಿ 

ರಾಧೆ ಹೇಳದ್ದಿರುದೂಳಿಯೂ ಇಲ್ಲ. 

ಈ ಮಕ್ಳು ಸಹ

"ಹೋಗುಕೆ ಬರುಕೆ" ಮಾತಾಡ್ವಾಗ 

ರಾಧೆಗೆ ’ಒಂದ್ನಮೂನೆ ...’

ಆಗುದೂ ಅದೆ. 

ಅದು ಕಿಶೋರ್ನತ್ರ ... 

"ಪುಟ್ಟೂ.. ಪ್ರಸಾದಂಗೆ .....

ನಿನ್ನ ಅಜ್ಜನ ಮನೆ ಭಾಷೆಯೇ ಲಾಯ್ಕ ಬಪ್ಪದು ..". 

ಹೇಳಿ ಹೇಳಿದ್ರೆ.. .... ಕಿಶೋರ... 

"ಅಮ್ಮ .. ಬಾಯ್ಯ ಇಲ್ಲಿಗೆ ಬಂದಾಗ, ಇಲ್ಯಾಣ ಭಾಷೆ,

ನಾನು ಬಾಯ್ಯನ ಮನೆಗೆ ಹೋದ್ರೆ 

ಅಲ್ಯಾಣ ಭಾಷೆ... ಮಾತಾಡುದು... 

ನವುಗೆ ಹಾಂಗೆ ಲಾಯ್ಕಾಗ್ತಮ್ಮ…" ಹೇಳಿ ಅಮ್ನ ಮಂಕಾಡ್ಸಿಯಾನು..

ಹೀಂಗೆಲ್ಲಾ ಸಂಗತಿ ಆದ್ರೂ, ...... 

ಮನೆಲಿ ಯಾರೂ....

ಈ ’ಭಾಷೆ’ಯ.....  

ಒಂದು ದೊಡ್ಡ ರಂಪ ಮಾಡಲ್ಲ ಹೇಳುವ.

ಈ ಗೋಪಾಲ ಕಾಲೇಜಿಗೆ ಹೋಯಿಕೊಂಡು 

ಇರುವಾಗ ….

ಒಂದು ಸೆಮಿನಾರಿಲಿ.... 

"ಇವತ್ತು ಪ್ರಪಂಚದ

ಎಷ್ಟೋ ಭಾಷೆಗಳು

 ಸಾಯ್ತಾ ಇವೆ, ….

ಮಾತಾಡುವ

ಜನಾಂಗವೇ ನಾಶವಾಗಿ 

ಭಾಷೆ ಸಾಯುವುದು ಒಂದಾದರೆ.... 

ಮಾತಾಡುವವರಿದ್ದೂ

ಭಾಷೆ ಸಾಯುವುದು 

ಇನ್ನೊಂದು. 

ಈ ಇಂಗ್ಲಿಷ್ ಮೀಡಿಯಂ ಮತ್ತು 

ಟಿವಿಚ್ಯಾನೆಲ್‌ಗಳ ಮೂಲಕ 

ಹಿಂದಿ ಹೇರಿಕೆ ಆಗ್ತಾ ಇದೆ .. 

ಇದರಿಂದ ಪ್ರಾದೇಶಿಕ ಭಾಷೆಗಳೆಲ್ಲಾ ಸಾಯುತ್ತಾ ಇವೆ. 

ನಮ್ಮ ನಮ್ಮ ಪ್ರಾದೇಶಿಕ ಭಾಷೆಯನ್ನು 

ಉಳಿಸಬೇಕಾದದ್ದು ನಮ್ಮ ಕರ್ತವ್ಯ, 

ಯಾಕೆಂದರೆ ಬಹುತ್ವ ಎನ್ನುವುದೇ ನಮ್ಮ ಸಂಸ್ಕೃತಿ…"

ಹೀಂಗೆಲ್ಲಾ ಮಾತಾಡಿ....

ಎಲ್ಲವೂ ಭೇಶ್ ಹೇಳಿದ್ವು. 

ಅದು ಗೋಪಾಲ್ನಿಗೆ

ಅವಗವಗ ನೆನ್ಪಾಗಿ ... 

ಕಿರಿಕಿರಿ ಆಗುದೂಳಿಯೂ ಅದೆ. ...   

                       

ಆದ್ರೆ .... ಗೋಪಾಲ್ನಿಗೆ 

ಈಗೀಗ  ಕಾಣುಕೆ ಸುರುವಾಗ್ಯದೆ .... 

ಎಂತಾಳಿದ್ರೆ ...       

"ಇದೆಲ್ಲಾ ಒತ್ತಾಯಲ್ಲಿ

ಆಗುವ ಕೆಲ್ಸ ಅಲ್ಲ .... 

ಅವ್ಕವ್ಕೇ ಕಾಣ್ಬೇಕಷ್ಟೆ... " ಹೇಳಿ.     

ಹಾಂಗಾಗಿ ಗೋಪಾಲ .... 

ರಾಧೆಗೆ ಹೆಚ್ಚೆಂತ ಹೇಳುಕೋಗಿರಲ್ಲ.

ಅಲ್ಲ ...!! ಇದೆಲ್ಲಾ ಎಂತ 

ದೊಡ್ಡ ವಿಷ್ಯಾಳಿ ಹೇಳುದಪ್ಪಾ ಇಂವಾ ...!! 

ಹೇಳಿ ನಿವುಗೆ ಕಾಣ್ತೋ ಏನೋ...!. 

ನನಿಗೆ ನಿವುಗೆ ದೊಡ್ಡ ವಿಷ್ಯ ಅಲ್ಲದ್ದಿರುಕೂ ಸಾಕು, 

ಆದ್ರೆ ಗೋಪಾಲ್ನಿಗೆ 

ಅವ್ನ ಮನ್ಸಿನ ಮೂಲೆಲೆಲ್ಯೋ, ಸಣ್ಣಕ್ಕಿದ್ದದ್ದು ... 

ನಿನ್ನೆಂದ ಮತ್ತೆ ... 

ಚೂರು ಹೆಚ್ಚೇ ಆದಾಂಗೆ ಕಾಣ್ತಪ್ಪ...!!...

ಹಾಂಗಾಗಿ ಇದ್ರ ಎಲ್ಲಾ ಸವಿವರವಾಗಿ 

ನಿವುಗೆ ಹೇಳಿದ್ದು..

                  

ಹಾಂ...!! ಗೋಪಾಲ್ನಿಗೆ 

ಕಾಪಿ ಕುಡ್ದು ಆಯ್ತು ಕಾಣ್ತೆ. ......!!

ಕಾಪಿ ಕುಡ್ದಾಗಿ ಗೋಪಾಲ

ಆಳುಗ್ಳಿಗೆ ಕೆಲ್ಸ ಹೇಳಿ, 

ಮಗ್ನ ಶಾಲೆಗೆ ಬಿಟ್ಟುಬರುಕೋದ. 

ಅಲ್ಲೇ ಹತ್ರದ

ಗವರ್ಮೆಂಟು ಶಾಲೆಯೇ..! 

ಇವ್ನ ಪುಣ್ಯಕ್ಕೆ

ಇಂಗ್ಲಿಷ್ ಮೀಡಿಯಮ್ಮಿನ 

ಏವ್ರ ರಾಧೆಗೂ ಇರಲ್ಲ...! 

ಹಾಂಗಾಗಿ ಗೋಪಾಲ್ನಿಗೂ ಖುಶಿಯೇ ಆಗಿತ್ತು ಹೇಳ್ವ.

ಮಗ್ನ ಶಾಲೆಗೆ ಬಿಟ್ಟುಬಂದು, 

ಆಳುಗ್ಳು ಎಂತ ಮಾಡ್ತಾವೆ ನೋಡ್ವಾಳಿ .... 

ತೋಟಕ್ಕೆ ಹೋದವ್ನಿಗೆ 

ಆಚೆಕರೆ ಚಿಕ್ಕಯ್ಯನಲ್ಲಿ

ತಿಥಿ ಹೇಳಿ ನೆನ್ಪಾಯ್ತು.  

ಅಲ್ಲಿಯೂ ಇಲ್ಯಾಣಾಂಗೆ 

ಚಟ್ಕ ತಿಥಿ,

ಹನ್ನೆರಡುವರೆ ಒಂದು ಗಂಟೆಗೆಲ್ಲ 

ಬಾಳೆ ಹಾಽಕುದೇ .... ಹೇಳುದೂ ನೆನ್ಪಾಗಿ ......

ಸೀದಾ ಮನೆಗೆ ಬಂದು,

ಬಚ್ಲಿಗೋಗಿ

ಮಿಂದು ಬಂದ.                    

ಬೆಳಿವಸ್ತ್ರ ಉಟ್ಟು, ಒಂದು

ಟೀ ಶರ್ಟು ಸುರ್ಕೊಂಡು, 

ಹೆಗ್ಲಿಗೊಂದು ಬೆಳೀ ಚಂಡಿತುಂಡು ಹಾಯ್ಕೊಂಡು 

ಚಿಕ್ಕಯ್ಯನಲ್ಲಿಗೆ ಹೋದ. .... 

ಬರ್ಬೇಕಾದವೆಲ್ಲಾ ಬಂದಿದ್ವು. 

ಒಂದು ಎಂಟತ್ತು ಜನ ಅಷ್ಟೆ.

"ಊಟಾಗಿ ನಾಕಾಟ

’ಓಕ್ಷನ್’ ಆಡದ್ರೆ 

ಸತ್ತವ್ನ ಆತ್ಮ ಇಲ್ಲೇ ಸುಳ್ಕೊಂಡಿದ್ದೀತು." 

ಹೇಳಿ ಚಿಕ್ಕಯ್ಯ, 

ತಿಥಿಗೆ ಇವ್ರ ಎಲ್ಲ ಕರಿಯುಕದೆ. 

ಅವ್ವು ಸಾ ತಪ್ಸುದೂಳಿ ಇಲ್ಲ.

ಗೋಪಾಲ್ನ ಕಂಡ ಕೂಡ್ಲೇ 

ಶಂಭಯ್ಯ ಮಾವಯ್ಯ ಹೇಳಿದ್ರು...            

"ಗೋಪಾಲ ಬಂದ ಅಕೊ

ಅವ್ನಿಗೆ ಗೊತ್ತಿದ್ದೀತು.. "

"ಎಂತ ವಿಷ್ಯ ಮಾವಯ್ಯ .. ?"

ಹೇಳಿ ಗೋಪಾಲ ಕೇಳಿದಾಗ ...               

"ನಿನ್ನ ಜೋಸ್ತಿ ಇದ್ದಾನಲ್ಲ ಶ್ರವಣ !! 

ಅಂವ  ಅವ್ನ ಅಪ್ಪಯ್ನ 

ವೃದ್ಧಾಶ್ರಮಕ್ಕೆ ಸೇರ್ಸಿದ್ದಾನಂತೆ !! 

ಹೌದೋ ಅದು..?  ...... " ಕೇಳಿದ್ರು.

ಗೋಪಾಲ್ನಿಗೂ ಯಾರೋ ಹೇಳಿದಾಂಗಾಗಿತ್ತು ಅಷ್ಟೆ. 

ಹಾಂಗಾಗಿ ... 

"ಹೌದಂತೆ ... ಸರೀ ಗೊತ್ತಿಲ್ಲ ಮಾವಯ್ಯಾ...." 

ಹೇಳಿದ...ಗೋಪಾಲ.                  "ಒಳ್ಳೆ ಹೆಸ್ರಿಟ್ಟಿದ್ದಾವಕೋ ಅವ್ನಿಗೆ..! 

ಸಾರ್ಥಕ ಆಯ್ತು ..!"

ಹೇಳಿದ್ರು ಮಾವಯ್ಯ. 

"ಈಗೆಲ್ಲಾ ಹಾಂಗೆ

ಶಂಭಯ್ಯ ಭಾವಾ ... 

ಬಪ್ಪ ಕೂಸಿಗೆ, ಮನೆಲಿ …

"ಓಲ್ಡ್ ಫರ್ನಿಚರ್ಸ್" ಇಪ್ಲೆಡಿಯಾ; 

ಸಂಸಾರ ಹೇಳಿದ್ರೆ

ಗಂಡ ಹೆಂಡ್‌ತಿ ಮಕ್ಳು ಮಾತ್ರ....  ಮುದುಕ್ರಿದ್ರೆ ಕಷ್ಟ ಅಲ್ದೋ...? 

ಕಪ್ಪು ಕನ್ನಡ್ಕ ಹಾಯ್ಕೊಂಡು ... ಎ.ಸಿ.ಕಾರಿಲಿ .... 

ಗಂಡ್ನೊಟ್ಟಿಗೆ ಎದ್ರಾಣ ಸೀಟಿಲಿ ಕೂತುಕೊಂಡು, 

ಊರೂರು ತಿರುಗುದೇಂಗೇ ...? "

ಹೇಳಿ ಕೆರೆಹಿತ್ಲು ಗೋವಿಂದಣ್ಣಂದಾಯ್ತು....

"ಎಂತಾದ್ರೂ ...

ಈ ವೃದ್ಧಾಶ್ರಮ ಇದ್ರಲ್ವೋ .... ! 

ಮಕ್ಳು, ಅಪ್ಪಮ್ನ ಅಲ್ಲಿಗೆ

ಸಾಗ ಹಾಕುದು..! ..... "

"ನನ್ನತ್ರ ಕೇಳಿದ್ರೆ ಈ ವೃದ್ಧಾಶ್ರಮಕ್ಕೆ 

ಸರ್ಕಾರ ಪರ್ಮೀಟೇ ಕೊಡುಕಾಗ್ದು. 

ಅದು ನಮ್ಮ ಸಂಸ್ಕೃತಿಯೇ ಅಲ್ಲ " 

ಅಲ್ವೋ ಶಂಭಯ್ಯ ...?" ಹೇಳಿ 

ನೀರಮೂಲೆ ಕಿಟ್ಟಣ್ಣಜ್ಜ. 

"ಹೌದೌದು .." ಹೇಳಿ 

ಶಂಭಯ್ಯ ಮಾವಯ್ಯ

ತಲೆ ಆಡ್ಸಿದ್ರು.      

ಅಲ್ಲಿದ್ದವೆಲ್ಲಾ ...

ಕೂಡಿದಷ್ಟು ಒಗ್ಗರಣೆ ಹಾಕಿದ್ವು. 

"ಈ ಮಕ್ಳೇ ಹಾಂಗೆ...! 

ಕೃತಜ್ಞತೆ ಹೇಳುದು

ಲವಲೇಶವೂ ಇಲ್ಲ !! 

ಹೆತ್ತು ಹೊತ್ತವ್ರ

ನೆನ್ಪೇ ಬೇಡ ಇವುಕ್ಕೆ ...!     

ಕಲಿಕಾಲ ಹೇಳಿ

ಸುಮ್ನೇ ಹೇಳ್ತಾವೋ...? "....... 

ಹೀಂಗೆಲ್ಲಾ ಮಾತು ಬಂತು. ......... 

ಗೋಪಾಲ್ನಿಗೆ

ಸ್ವಲ್ಪ ಹೇಳ್ಬೇಕೂಳಿ ಕಂಡ್‌ತ್ತು.

"ನೋಡಿ ಮಾವಯ್ಯಾ ... 

ನಾನು ನಿಮ್ಮಂದೆಲ್ಲ ಸಣ್ಣಂವ... 

ಹೀಂಗೇಳ್ತಾನೇಳಿ ಗ್ರೇಸುಕಾಗ್ದು. 

’ವೃದ್ಧಾಶ್ರಮ ಸರಿ’ ಹೇಳಿ

ಹೇಳುದಲ್ಲ ನಾನು. .... 

ಮತ್ತೆ ನೀವೆಲ್ಲಾ ಹೇಳಿದ್ರಲ್ಲಿ ....

ಸತ್ಯ ಇಲ್ಲಾಳಿಯೂ ಅಲ್ಲ. .. 

ಎಲ್ಲಾ ಸಂದರ್ಭಲ್ಲಿಯೂ 

ಮಕ್ಳದ್ದೇ ತಪ್ಪು ಹೇಳುಕಾಗ್ತೋ..? 

ಯಾಕೇಳಿದ್ರೆ....

ಈಗ ಮೊದ್ಲಾಣಾಂಗಲ್ಲ; 

ಎಲ್ಲಾ ಮನೆಲಿಯೂ ಮಕ್ಳು ಕಲ್ತು 

ದೊಡ್ಡ ಕೆಲ್ಸಲ್ಲಿರುವವ್ವು. 

ಅಮೇರಿಕಲ್ಲಿಯೋ, ಬೆಂಗ್ಳೂರ್ಲಿಯೋ, 

ಬೊಂಬಾಯ್ಲಿಯೋ ಇರುವವ್ವು, 

ಇರುವ ಕೆಲ್ಸವ ಬಿಟ್ಟು

ಊರಿಗೆ ಬರುಕಾಗ್ತೋ...? 

ಆಯ್ತು ಒಂದು ವೇಳೆ .....

ಬನ್ನಿ ನಮ್ಮೊಟ್ಟಿಗಿರಿ...

ಹೇಳಿ ಮಕ್ಳು ಕರ್ದ್ರೂ ...

ಅಪ್ಪ ಅಮ್ಮ ಎಷ್ಟು ಜನ

ಹೋಗುಕೆ ತಯಾರಿದ್ದಾವೆ. 

ಪೇಟೆ ... ಆವ್ಕೇ ಇಲ್ಲ...

ಇಲ್ಲೇ ಸಾಯುದು.! .... 

ಹೇಳುವವ್ರ ....

ಎಂತ ಮಾಡುಕಾಗ್ತೆ...? 

ಮಕ್ಳಾದ್ರೂ ಎಂತ ಮಾಡುದು...? 

ಅಪ್ಪಮ್ನ ಕೈಕಾಲು

ಗಟ್ಟಿ ಇರುವಷ್ಟು ದಿನ... 

ಹೋಯ್ಕೊಂಡು ಬಂದ್ಕೊಂಡು ಇರ್ತಾವೆ ... 

ಮತ್ತೆ ಯಾವುದಾದ್ರೂ

ಆಶ್ರಮಕ್ಕೆ ಸೇರ್ಸದ್ದೆ 

ಅವ್ವಾದ್ರೂ

ಎಂತ ಮಾಡುದು....? .." 

ಹೇಳಿ ಗೋಪಾಲ ಹೇಳ್ವಾಗ.....

 

"ಎಂತಾದ್ರೂ ...

ಕಿಟ್ಟಣ್ಮಾವ ಹೇಳಿದಾಂಗೆ 

ಅದು ನಮ್ಮ ಸಂಸ್ಕೃತಿ ಅಲ್ಲ... 

ಅಷ್ಟು ಹೇಳಿಯೇನು ನಾನು... "

ಹೇಳಿ ನಡುಮನೆ ನಾರ್ಣಪ್ಪಯ್ಯ. 

ಗೋಪಾಲ

ನೆಗೆ ಮಾಡಿಕೊಂಡು ಹೇಳಿದ. 

"ಸಂಸ್ಕೃತಿ ಎಲ್ಲಾ ಹೌದು... 

ಇದೊಂದು ಹೇಳ್ತೇನೆ ಕೇಳಿ ... 

ನನ್ನ ಭಾವ್ನ ಕ್ಲಾಸುಮೇಟು

ಒಬ್ಬ ನಮ್ಮವ್ನೇ ... 

ಎಂ.ಎಸ್.ಡಬ್ಲ್ಯೂ ಕಲ್ತು, 

ಒಂದು ವೃದ್ಧಾಶ್ರಮ

ಮಾಡಿದ್ರೆ ಹೇಂಗೇ .... 

ಹೇಳಿ ಅವ್ನ ಅಪ್ನತ್ರ ಕೇಳಿದ ಅಂತೆ. 

ಅಪ್ಪ ... ಸಂಸ್ಕೃತಿ ಗಿಂಸ್ಕೃತಿ

ಹೇಳಿ ಹೇಳಲ್ಲ. 

"ಇಕೋ...! ನೋಡು ...

ಬಂಙ ಅದೆ...!! 

ನಿನ್ನಪ್ಪಯ್ನಿಗೆ ಈಗ

ಪ್ರಾಯ ಅಷ್ಟು ಹೆಚ್ಚಾಗಲ್ಲ... 

ಹೆಚ್ಚಾಗುವಾಗ

ನಿನಿಗೇ ಗೊತ್ತಾದೀತು.... 

ಒಬ್ನ ಸುದಾರ್ಸುದೇ ಕಷ್ಟ..... 

ಇನ್ನು..... ಅವ್ರ ನಡುವೆಯೇ ಇರುದು ಹೇಳಿದ್ರೆ .....!! 

ಹೇಂಗಾದೀತು...?

ಯೋಚ್ನೆ ಮಾಡು.. 

ತೀರ್ಮಾನ ನಿಂದೇ..." ಹೇಳಿ ಹೇಳಿದ್ರಂತೆ.  

ಮಗ ಧೈರ್ಯ ಮಾಡಿ

ವೃದ್ಧಾಶ್ರಮ ಮಾಡಿದ. 

ಒಳ್ಳೆದದೆ ಹೇಳಿ,

ಹೆಸ್ರೂ ಬಂದದೇಳ್ವ. 

ಅಲ್ಲಿ ಎಂತಾಯ್ತು ಹೇಳಿದ್ರೆ ...  

ಒಬ್ಬ ಜವ್ವನಿಗ, ಅವ್ನ ಅಮ್ನ ಸೇರ್ಸುಕೇಳಿ ಬಂದ. 

ಅವನತ್ರ ಎಂತದೋ ಮಾತಾಡುವಾಗ 

ಇಂವ ಹೇಳಿದ .... 

"ಇದೆಲ್ಲಾ ನಮ್ಮ ಸಂಸ್ಕೃತಿ ಅಲ್ಲಾ..." ಅಂತ ತುಂಬಾ ಜನ ನನ್ನನ್ನು

ಆಕ್ಷೇಪ ಮಾಡಿದ್ರು... !"ಹೇಳಿ. 

ಅದಿಕ್ಕೆ ಆ ಬಂದಂವ ... 

"ಎಂತ ಮಾಡುದು ಅಣ್ಣ,

ವಿಷಯ ಹೌದು .. 

ನೋಡೀ  ನಾನು

ಸಂಘದ ಪ್ರಚಾರಕ್ ಆಗಿ 

ಕೆಲಸ ಮಾಡುದು. 

ಊರೆಲ್ಲಾ ತಿರುಗಾಡ್ತಾ ...

ಸಂಸ್ಕೃತಿ ಬಗ್ಗೆ ನಾನೂ ಬೇಕಾದಷ್ಟು 

ಭಾಷಣ ಮಾಡಿದ್ದೇನೆ... 

ಆದ್ರೆ ... ಈಗ ಅರ್ಥ ಆಗಿದೆ .... 

ನಾನು ಊರೂರು ತಿರುಗುವಾಗ 

ನನ್ನ ಅಮ್ಮನ ಗತಿ ಎಂತ...?" ಹೇಳಿ ಹೇಳಿದ ಅಂತೆ....

ಅಷ್ಟಾಗುವಾಗ

ಸುಬ್ರಾಯ ಚಿಕ್ಕಯ್ನ ಬಾವ, 

ಎಡೇಲಿ ಹೇಳಿದ್ರು ..... 

ಓ ಆ ಮಾಣಿ ... ಎನ್ನ ಮಗ್ನ

ಕ್ಲಾಸು ಮೇಟೋ 

ಹೇಳಿ ಕಾಣ್ತು ... !! 

ಅಂವ, ಕಲ್ತೆಲ್ಲ ಆದ್ಮೇಲೆ ....

ಒಂದು ದಿನ, 

ಕಲ್ತ ಸಂಸ್ಥೆಯ ಅಧ್ಯಕ್ಷರ

ಕಂಡು ಬಪ್ಪೋ ಹೇಳಿ ... 

ಅಲ್ಲಿಗೆ ಹೋದ್ನಡ. ... 

ಅಲ್ಲಿ ಆ ದಿನ ಎನ್ನ ಮಗ್ನೂ ಹೋಗಿತ್ತಿದ್ದ.... 

ಅವ್ನೇ ಹೇಳಿದ್ದು .... 

ಆ ಮಾಣಿ,

ಸಂಸ್ಥೆಯ ಅಧ್ಯಕ್ಷರತ್ರೆ... .....

"ಒಂದು ವೃದ್ಧಾಶ್ರಮ

ಮಾಡಿದ್ರಕ್ಕೂಳಿ ಇದ್ದು, 

ನಿಂಗ್ಳ ಆಶೀರ್ವಾದ ಬೇಕು..."

ಹೇಳಿ ಹೇಳ್ವಾಗ .... 

ಅಧ್ಯಕ್ಷರು ಹೇಳಿದ್ವಡ 

"ಓಯ್..!

ಬೇಡ ಮಾರಾಯ್ನೆ.. ಬೇಡ ... 

ನೀನು ಬೇಕಾದ್ರೆ

ಅನಾಥಾಶ್ರಮ ಮಾಡು, 

ಈ ಪರಬ್ಬಂಗ್ಳ ವೈವಾಟಾಗ...." ಹೇಳಿ. 

ಅಧ್ಯಕ್ಷರು ಜವ್ವನಿಗ ಏನೂ ಅಲ್ಲ; 

ವರ್ಷ ಎಂಬತ್ತು ಕಳ್ತು ...!! 

ಆದ್ರೆ, ಅವ್ವು ಲೋಕವ ಕಂಡದ್ದು ಸೊಲ್ಪವೋ !! 

ಆ ಅನುಭವಂದ್ಲೇ ಅಲ್ದೋ

ಬೇಡ ಹೇಳಿದ್ದು. 

ಆದ್ರೂ ... ಮತ್ತೆ ಒಂದೇ ವರ್ಷಲ್ಲಿ 

ಇವ್ನ ವ್ಯವಹಾರ, ಕ್ರಮ ಖುಶಿಯಾಗಿ ....      ಅವ್ವೇ, ಶಾಬ್ಭಾಸ್ ಹೇಳಿ

ಬೆನ್ನುತಟ್ಟಿದ್ದುವಡ…                       ಎಂತಾದ್ರೂ ಇಂದ್ರಾಣ ಕಾಲಲ್ಲಿ 

ಅದೊಂದು

ಪುಣ್ಯದ ಕಾರ್ಯವೇ ಹೇಳ್ವ...."

ಗೋಪಾಲ ಹೇಳಿದ..

"ಪುಣ್ಯ ಎಲ್ಲ ಹೌದು ... 

ಭಾರೀ ಕಷ್ಟ ಆಗ್ತಂತೆ

ಮುದುಕ್ರ ವೈವಾಟು. 

ಎಂತದೂ ಗೊತ್ತಾಗದ್ದವ್ರದ್ದು

ದೊಡ್ಡ ಸಂಗ್ತಿ ಅಲ್ಲಂತೆ; 

ತಲೆ ಎಲ್ಲ ಸರಿ ಇರ್ವವ್ರದ್ದೇ ರಗ್ಳೆಗಳಂತೆ. 

ಎಂತೆಂತಾ ವಿಚಿತ್ರದವ್ವೆಲ್ಲಾ ಇರ್ತಾವೇಳಿ ಹೇಳುದಂವ. 

ಇಕೊಳ್ಳೀ ..! ಅಲ್ಲಿ ಒಬ್ಬ ರಿಟಾಯರ್ಡ್ ಮಾಸ್ಟ್ರು ... 

ಮನೆಯವ್ರತ್ರ ಸರಿ ಇಲ್ಲ...   

ಕೈಲಿರುವ ದುಡ್ಡಿನ ಬೇಂಕಿಲಿ ಇಡಿ ಹೇಳಿದ್ರೆ ಕೇಳುಕಿಲ್ಲ.. 

ಕೈಲೇ ಬೇಕು ಹೇಳಿ…!!!! 

ಆಯ್ತೋ..! ಈ ದುಡ್ಡಿನ ಪಕೀಟಿನ 

ಎಲ್ಯಾರು ಅಡ್‌ಗ್ಸಿಟ್ಟು ..

ನರ್ಸುಗ್ಳು ಪಕೀಟು ಕದ್ದಿದ್ದಾವೆ ಹೇಳಿ 

ಪೋಲೀಸ್ ಕಂಪ್ಲೈಂಟು ಕೊಡುದು ... 

ಅವ್ಕೆ ಬಾರದ್ದೆ ಗೊತ್ತದಿಯೋ...? 

ಎಸ್.ಐ. ಬಂದು ... 

’ಹೀಗೆ ಸುಮ್ನೆ ಕಂಪ್ಲೇಂಟು ಕೊಟ್ರೆ ....

ನಿಮ್ಮನ್ನೇ ಒಳಗೆ ಹಾಕ್ತೇನೆ..’ ಹೇಳಿ 

ಹೇಳಿದ ಮೇಲೆ, ಸ್ವಲ್ಪ ಸರಿಯಾದ್ದಂತೆ."

"ಇನ್ನೊಬ್ಬ ಅಜ್ಜ. ... 

ಅವ್ನಿಗೆ ಹೆಂಡ್ತಿ ಮಕ್ಳು

ಯಾರೂ ಇಲ್ಲ.. ಆಸ್ತಿ ಅದೆ .. 

ಅಜ್ಜನ ಕೈಲಿ ಸ್ವಲ್ಪ ದುಡ್ಡೂ ಅದೆ ... 

ನೆಂಟ್ರ ಹತ್ರೆ ಯಾರತ್ರವೂ

ಸರಿ ಇಲ್ಲ. ..... 

ಈ ಅಜ್ಜನೇ ಎಲ್ಲಾ ಕಡೆ ಹೋಗುದು... 

ಅಲ್ಲಿ ಆ ಮನೆಯವ್ರ ಎಲ್ಲಾ ಹಂಗ್ಸುದು. 

ಏನಾದ್ರೂ ಸಣ್ಣ ನೆವ್ನ ಹಿಡ್ದು

ಜಗ್ಳ ಮಾಡುದು... 

ಹಾಂಗಾಗಿ ತಡಿಯುಕೆ ಕೂಡದ್ದೇ 

ಯಾರೂ ಮನೆಗೆ ಸೇರ್ಸ್ತಿರಲ್ವಂತೆ....                       ಮತ್ತೆ ಈ ಅಜ್ಜ, ಯಾರದ್ದೋ ಒತ್ತಾಯಕ್ಕೆ  ...

ಇವ್ನ ಆಶ್ರಮಕ್ಕೆ ಬಂದು ಸೇರಿದ.

ಇಲ್ಲಿಯೂ ಸರಿ ಇಲ್ಲ.... 

ಅನ್ನ ಬೇಡ, ಚಪಾತಿ ಹೇಳುದು ... 

ಚಪಾತಿ ಕೊಟ್ರೆ ಅನ್ನಕೊಡಲ್ಲ ಹೇಳುದು ... 

ಒಂದಿನ ಅನ್ನ ಬಲಿಕ್ಕೆ ಹೇಳುದು... 

ಒಂದಿನ ಇದೆಂತ ಮಡ್ಡಿಯೋ..? ಕೇಳುದು ... 

ಒಟ್ಟಾರೆ ಸರಿ ಆಗುಕೇಳಿ ಇಲ್ಲ. ... 

ಇಷ್ಟೇ ಆದ್ರೆ ತೊಂದ್ರೆ ಇಲ್ಲಪ್ಪಾ ... 

ನಿತ್ಯದ ಕೆಲ್ಸ ಮಾಡಿಕೊಳ್ಳುಕೆ ಕೂಡಿದ್ರೂ ... 

ಏನೂ ಕೂಡುದಿಲ್ಲ ಹೇಳಿ, 

ಮಲಮೂತ್ರ ಎಲ್ಲ ಹಾಸಿಗೆಲೇ ಮಾಡುದು. ....!!

’ಎಂತಜ್ಜ ಇದೂ...!!’ ಹೇಳಿ ನರ್ಸುಗ್ಳು ಕೇಳಿದ್ರೆ... 

’ತೆಗಿರಿ ಬೇಗ.. ಎಂತ ಸಂಕಟ ನಿಮಿಗೆ

 ಕ್ಲೀನ್ ಮಾಡ್ಲಿಕೆ.... 

ಸಂಬ್ಳ ಕೊಡುದಿಲ್ವೋ..?’ ಹೇಳುದು .... 

ಎಂತ ಹೇಳ್ತೀರಿ ಇದಿಕ್ಕೆ .... 

ಇದು ಒಂದೆರಡು ಸ್ಯಾಂಪಲ್ ಅಷ್ಟೆ ... 

ಸುಮಾರು ಅದೆ ಇಂತಾದ್ದು....’  

ಹೇಳಿ ಹೇಳ್ತಾನಂತೆ ಅಂವ...                  

’ಇವ್ನಿಗೆ ಬೇಕಿತ್ತೋ ಈ ಕೆಲ್ಸ...’ ಹೇಳಿ 

ನನ್ನ ಭಾವ ಹೇಳುದು…."

ಶಂಭಯ್ಯ ಮಾವಯ್ಯನಿಗೆ 

ವಿಷ್ಯ ಸೊಲ್ಪ ಅರ್ಥಾದಾಂಗೆ ಕಂಡ್‌ತ್ತು...                

"ಗೋಪಾಲ ಹೇಳಿದ್ದು ಸಮ. 

ನಾವು ನಮ್ಮ ದೃಷ್ಟಿಲಿ ನೋಡಿ ... 

ಲೋಕ ಇರುದೇ ಹೀಂಗೆ ಹೇಳಿ ಹೇಳುದು.......  

ಇನ್ನೊಬ್ನ ದೃಷ್ಟಿಲಿ ಲೋಕ

ಬೇರೆಯೇ ಅಲ್ವೋ...? 

’ಜಗನ್ಮಿತ್ಯ’ ಹೇಳಿ 

ಶಂಕರಾಚಾರ್ಯರು ಹೇಳಿದ್ದಲ್ವೋ...? 

ನೀನು ನಿನ್ನ ಕಣ್ಣಿಲಿ

ಜಗತ್ತಿನ ನೋಡ್ತಿ ಅಕೋ ...!  

ಅದು ಸುಳ್ಳು.... ಹೇಳುವ ಅರ್ಥ ಆಗಿದ್ದೀತು ಅದಿಕ್ಕೆ ...."

ಅಷ್ಟೊತ್ತಿಗೆ ಊಟಕ್ಕೆ

ಬಾಳೆಲೆ ಹಾಕಿದ್ವು. 

ಊಟ ಆಗಿ ಕಳ ತಯಾರಾಯ್ತು. 

ಇಸ್ಪೇಟು ಪಿಡಿ ಐದಾರು ಕಟ್ಟು ಕಿಟ್ಟಣ್ಣಜ್ನ ಹೆಗ್ಲಿನ ಚೀಲಲ್ಲಿ ಯಾವಾಗ್ಲೂ ಇರ್ತೆ. 

ಆಕ್ಷನ್ ಆಟ

ಎರ್ಡು ರೌಂಡು ಆಗ್ವಾಗ, 

ಗೋಪಾಲ್ನ ಮನೆ ಆಳು ಸಂಕಪ್ಪು

 ಓಡಿಕೊಂಡು ಬಂತು...         

"ಅಣ್ಣೇರೆ ಅಣ್ಣೇರೆ... ಬರೋಡುಗೆ ... 

ಅಳ್ಪ ಮಲ್ಲಕ್ಕೆ  ಜಾಲ್‌ಡ್

ಜಾರ್ದ್ ಬೂರಿಯೆರ್... 

ಮೆಲ್ಲ,  ಜಗಲಿಡ್ ಜೆಪ್ಡಾತೊ ... 

ಅಕ್ಕೆ ಡಾಕುಟ್ರೇಗ್

ಪೋನ್ ಮಾಲ್ತೇರ್... "

ಹೇಳಿ ಒಂದೇ ಉಸುರ್ಲಿ ಹೇಳಿತ್ತು.

ಗೋಪಾಲ ಗಾಬ್ರಿ, ಗಡಿಬಿಡಿಲಿ ಎದ್ದ. 

ಎಲ್ಲವೂ ಆಟ ನಿಲ್ಸಿ ಗೋಪಾಲನೊಟ್ಟಿಗೆ 

ಅವನಲ್ಲಿಗೆ ಬಂದ್ವು. .. 

ರಾಧೆ ಹೇಳಿತ್ತು ….

"ಅತ್ತೆ ಉಂಡಿಕ್ಕಿ ಹೆರ ಕೂದುಕೋಂಡಿತ್ತಿದ್ದವು. 

ಆನು ಆಳುಗೊಕ್ಕೆ ಬಳ್ಸಿಕೊಂಡಿತ್ತಿದ್ದೆ. 

ಬೊಬ್ಬೆ ಕೇಳಿತ್ತು ಹೇಳಿ,

ಓಡಿ ಹೆರ ಬಪ್ಪಾಗ... 

ಅತ್ತೆ ಹೂಗಿನ ಸೆಸಿಬುಡ ಬಿದ್ದಿದವು. 

ಕೈ ಹಿಡ್ದು ನೆಗ್ಗಿದರೆ

ಅತ್ತೆಗೆ ನಿಂಬಲೆಡಿತ್ತಿಲ್ಲೆ. 

ಮುಟ್ಟುವಾಗ

ಬೊಬ್ಬೆ ಹೊಡೆತ್ತವು...." 

ಹೇಳುವಾಗ

ದುಃಖ ದುಃಖ ಬರ್ತೆ ಪಾಪ…

"ಎಂತ ಮಾಡಿದ್ದಮ್ಮ ನೀನು.. 

ಎಲ್ಲಿಗೆ ಎದ್ದು ಹೊರ್ಟದ್ದು ...? "

ಹೇಳಿ ಗೋಪಾಲ  ಪರ್ಚಿದ. 

"ನಾನೆಂತ ಮಾಡಲ್ಲ ಮಗಾ ..

ಆ ದನದ ಕರು

ತಪ್ಸಿಕೊಂಡು ಬಂತು ... 

ಆಳುಗ್ಳು ಉಂಡುಕೊಂಡಿದ್ದಾವಲ್ಲ ... ಹೇಳಿ ಬಳ್ಳಿ ಹಿಡ್ಕೊಳ್ಕೋದ್ದು ... 

ಅದು ಪೆರ್ಚಿಗಟ್ಟಿ

ನನ್ನನ್ನೇ ನೂಕಿ ಹಾಕಿತ್ತತ್ಲಾಗಿ. 

ಸೊಂಟ ಒಳ್ಳೆತ ಬೇನೆ ಅದೆ. 

ಅ ಕಡೆಂಜದೆಣ್ಣೆ ತಂದು

ಸೊಲ್ಪ ಉದ್ದಿಬಿಡು 

ನಾಳೆಗೆ ಕಮ್ಮಿ ಆದೀತು….". ಹೇಳಿ ಅಮ್ಮಂದಾಯ್ತು.

ಅಷ್ಟೊತ್ತಿಗೆ ಡಾಕ್ಟ್ರು ಬಂದ್ರು.

ಪರೀಕ್ಷೆ ಎಲ್ಲಾ ಮಾಡಿ ... 

ಗಾಬರಿ ಏನೂ ಇದ್ದ ಹಾಗೆ ಕಾಣುದಿಲ್ಲ. 

ಬೇನೆಗೆ ....

ಒಂದು ಇಂಜಕ್ಷನ್ ಕೊಡ್ತೇನೆ... 

ಯಾವುದಕ್ಕೂ ನೀವೊಮ್ಮೆ 

ದೊಡ್ಡ ಡಾಕ್ಟ್ರಿಗೆ

ತೋರಿಸುವುದು ಒಳ್ಳೆದು, 

ರಿಸ್ಕ್ ಯಾಕೆ..? 

ಮಂಗ್ಳೂರೇ ಆದೀತು... 

ನಾನು ಚೀಟಿ ಬರ್ದು ಕೊಡ್ತೇನೆ... ಈಗ್ಲೇ ಹೋಗಿ.... 

ಹೇಳಿ ಇಂಜಕ್ಷನ್ ಕೊಟ್ಟು... ಚೀಟಿಯನ್ನೂ ಬರ್ಕೊಟ್ಟು 

ಡಾಕ್ಟ್ರು ಹೋದ್ರು.

ಅಂಬುಲೆನ್ಸಿಗೆ ಫೋನ್ ಮಾಡಿ ತರ್ಸಿ

ಮಂಗ್ಳೂರಿಗೆ ಹೊರಟಾಯ್ತು.

ಶಾಲೆ ಬಿಡುವ ಹೊತ್ತಾದ ಕಾರಣ 

ರಾಧೆ ಮಂಗ್ಳೂರಿಗೆ ಹೊರಡಲ್ಲ. 

ಗೋಪಾಲ, ರಾಧೆಯ ಹತ್ರೆ ... 

ಶಾರದೆಗೆ ಫೋನ್ ಮಾಡುಕೆ ಹೇಳಿದ.

ಇವು ಮಂಗ್ಳೂರಿಗೆ ತಲ್ಪುವಾಗ 

ಶಾರದೆಯೂ ಬಂದು ತಲ್ಪಿಯದೆ. 

ಗಾಬ್ರಿ ಆಗಿದ್ರೂ ...

ಅಮ್ಮ ಮಾತಾಡುದು ನೋಡಿ ಸಮಾಧಾನ ಆಯ್ತು.  

"ಗಾಬ್ರಿ ಎಂತ ಇಲ್ಲಂತೆ…"

 ಹೇಳಿ ಗೋಪಾಲ ಹೇಳಿದ್ರೂ ...

ಒಳ್ಽಽಗಂದ ಸ್ವಲ್ಪ ಅಳ್ಕಿಲ್ಲದ್ದೇ ಇರ್ತೋ...? 

ಡಾಕ್ಟ್ರು ಎಲ್ಲಾ ಟೆಸ್ಟ್ ಮಾಡಿ, 

"ಗಾಬರಿ ಏನೂ ಇಲ್ಲ; ಕೂದಲೆಳೆಯಷ್ಟು 

ಸಣ್ಣ ಸೆರೆ ಬಿಟ್ಟಿದೆ ಅಷ್ಟೆ.

ಅದಿಕ್ಕೆ ರೆಸ್ಟೇ ಮುಖ್ಯ. 

ಒಂದು ಮೂರು ತಿಂಗಳು ಮಲಗಿದಲ್ಲಿಂದ ಏಳ್ಬಾರ್ದು, 

ಬೇರೆ ಮದ್ದೇ ಬೇಡ. 

ಬೇನೆಗೆ ಮಾತ್ರೆ ಕೊಡ್ತೇನೆ ... ಜೋರಿದ್ರೆ ಕೊಡಿ... 

ಇವತ್ತು ನಾಳೆ ಇಲ್ಲಿರಲಿ,

 ನಾಡಿದ್ದು ಡಿಸ್ಚಾರ್ಚ್ ಮಾಡ್ತೇನೆ.. "

ಹೇಳಿ ಹೇಳಿದಾಗ

ಇಬ್ರಿಗೂ ಸಮಾಧಾನ ಆಯ್ತು.

"ನೀನು ಮನೆಗೆ ಹೋಗಣ್ಣಯ್ಯ, 

ಅತ್ತಿಗೆ ಒಂದೇ ಅಲ್ವೋ..? 

ಅಮ್ಮನ ಸಂಗತಕ್ಕೆ ನಾನಿದ್ದೇನೆ…"  ಹೇಳಿ ಶಾರದೆ ಹೇಳಿತ್ತು. 

"ಹೌದು ನೀನು ಹೋಗಿ,

ಡಿಸ್ಚಾರ್ಜ್ ಮಾಡುಕಾಗ್ವಾಗ 

 ಬಂದ್ರೆ ಸಾಕು. …..

ಅಲ್ಲಿ ರಾಧೆ ಒಂದೇ

ಎಂತೆಲ್ಲ ಮಾಡಿಕೊಳ್ಳುದು. ..!!

ಶಾರದೆಗಾದ್ರೆ ...  

ಅದ್ರ ಮೈದುನಂದ್ರ ಹೆಂಡ್ತಿಯಕ್ಳು ಇದ್ದಾವಲ್ವಾ…!!" 

ಹೇಳಿ.... ಅಮ್ಮನೂ ಹೇಳಿತ್ತು ...  

 ಗೋಪಾಲ ಮನೆಗೆ ಹೊರ್ಟ. 

ಗೋಪಾಲ ಮನೆಗೆ ಬಂದು, 

ರಾಧೆಗೆ ವಿಷಯ ಎಲ್ಲಾ ಹೇಳಿದ. 

"ಮೂರು ತಿಂಗಳು

ಮನ್ಗಿದಲ್ಲೇ ಹೇಳಿ ಆದರೆ... 

ಮನೆಲಿ ಬಂಙ ಆಗದೋ...? 

ಅಣ್ಣನ ಫ್ರೆಂಡಿನ ವೃದ್ಧಾಶ್ರಮಲ್ಲಿ 

ಜಾಗೆ ಇದ್ದೋ ಕೇಳ್ಲಕ್ಕೋಳಿ..!! "

ಹೇಳಿ ರಾಧೆ ಹೇಳ್ವಾಗ 

"ಹೇಕ್... ಅದಾಗ…" ಹೇಳಿದ ಗೋಪಾಲ.                           

"ಅಲ್ಲ... ಇಲ್ಲಿ ಆದರೆ

ಅತ್ತೆಗೂ ಬಂಙವೇ... 

ಅವ್ವೇ ಎರಡು ಮೂರು ಸರ್ತಿ ಹೇಳಿತ್ತಿದ್ದವು. 

ಎನಗೆಂತಾದರೂ

ಕೈಕಾಲು ಬಾರದ್ದೇ ಆದರೆ ... 

ಎನ್ನ ಒಂದು ಆಶ್ರಮಕ್ಕೆ ಸೇರ್ಸಿ, 

ಇಲ್ಲಿ ನಿಂಗಳಂದ ಎಡಿಯ

ಚಾಕ್ರಿ ಮಾಡ್ಲೆ... 

ಕೋಪಲ್ಲಿ ಹೇಳಿದ್ದೂಳಿ ಗ್ರೇಶೆಡ...! 

ಬಾಯಿಲಿ ಹೇಳ್ಲಕ್ಕು

ಆಶ್ರಮ ಬೇಡ ಹೇಳಿ... ! 

ಪರಿಸ್ಥಿತಿ ಎಂತ ಹೇಳಿ ನೋಡೆಕ್ಕನ್ನೆ..!" 

ಹೇಳಿ ಎನ್ನತ್ತರೇ ಹೇಳಿದ್ದವು. .... 

ಆ ಮಟ್ಟಿಂಗೆ ಅತ್ತೆ ತುಂಬಾ ಫಾರ್ವರ್ಡ್…"

ಹೇಳಿತ್ತು ರಾಧೆ.          

ಹೇಳುಕೆ ಅಮ್ಮ

ಗೋಪಾಲ್ನ ಹತ್ರವೂ 

ಕೆಲುವು ಸರ್ತಿ ಹೇಳಿಯದೆ. 

ಹಾಂಗಾಗಿ ರಾಧೆ ಹೇಳಿದ್ದು ಸುಳ್ಳಲ್ಲ ಹೇಳಿ ಗೊತ್ತಾದ್ರೂ. 

ನಿನ್ನೆ ಅಷ್ಟೇ ಎಲ್ಲವೂ ಮಾತಾಡುದ್ರ ಕೇಳಿದವ್ನಿಗೆ 

ಇದು ಸ್ವಲ್ಪ ಪ್ರೆಸ್ಟೀಜಿನ ವಿಷಯ ಹೇಳಿ ಕಂಡದ್ದೋ...! 

ಅಲ್ಲ ರಾಧೆ ಸ್ವಲ್ಪ ಪೊಸ್ಸೆಸ್ಸಿವ್

ಹೇಳಿ ಕಂಡದ್ದೊ ...!! 

ಅಂತೂ ಸ್ವಲ್ಪ

ಕೋಪ ಬಂದದ್ದು ಹೌದು. 

ದೊಡ್ಡ ಸ್ವರಲ್ಲಿ ... 

"ಅಮ್ಮನ ವೃದ್ದಾಶ್ರಮಕ್ಕೆ ಸೇರ್ಸುದಾದ್ರೆ ... 

ನನ್ನನ್ನೂ ಅಲ್ಲಿಗೇ ಸೇರ್ಸುದೊಳ್ಳೆದು ...." 

ಹೇಳಿ ಎದ್ದು ತೋಟಕ್ಕೋದ.... 

ಸ್ವಲ್ಪ ಹೊತ್ತಾದ್ಮೇಲೆ ...

"ಛೆ..! ಯಾಕಪ್ಪಾ ರಾಧೆಯ ಹತ್ರ ಕೋಪ ಮಾಡಿದ್ದು.

ಈ ಚಾಕ್ರಿ ಮಾಡಿ ನನಿಗಂತೂ ಅಭ್ಯಾಸವೇ ಇಲ್ಲ; 

ಸೆಗ್ಣಿ ಮುಟ್ಟುಕೇ ನನ್ನಂದಾಗ್ದು; 

ಇನ್ನು ಇದು ಹೌದೋ...!! 

ಮಗ್ನಿಗೇ ಕಷ್ಟಾಳಿ ಇರುವಾಗ 

ಸೊಸೆ ಮಾಡ್ಬೇಕೂಳಿ ಗ್ರೇಶುದೇ ತಪ್ಪಲ್ವೋ..?... 

ಪಾಪ ರಾಧೆಗೂ ಕಷ್ಟ....!" ಹೇಳಿ.... 

ಅವ್ನಿಗೆ ಕಂಡ್‌ತ್ತು.

ಇಷ್ಟ್ರವರೆಗೆ ಗೋಪಾಲ್ನಿಗೆ

ಹೀಂಗೆ ಸಿಟ್ಟು ಬಂದದ್ರ 

ರಾಧೆ ನೋಡದ್ದ ಕಾರಣ,

ಮತ್ತೆ ಆ ಸುದ್ದಿಯೇ ತೆಗಿಯಲ್ಲ. 

ಸುದಾರ್ಸುದೇಂಗೇಳಿ

ತಲೆಬಿಸಿಯೂ ಆಯ್ತು.

ಆಸ್ಪತ್ರೆಂದ

ಅಮ್ನ ಕರ್ಕೊಂಡು ಬರ್ವಾಗ, 

ಯಾವ್ದೋ ಏಜೆನ್ಸಿಯತ್ರ ಮಾತಾಡಿ, 

ಒಂದು ನರ್ಸನ್ನೂ

ಕರ್ಕೊಂಡು ಬಂದ ಗೋಪಾಲ. 

ರಾಧೆಗೂ ಒಳ್ಗೊಳ್ಗೇ

ಸ್ವಲ್ಪ ಖುಶಿಯೂ ಆಯ್ತು. 

ಶಾರದೆಯೂ ಬಂದಿತ್ತು... 

"ನೀನಿನ್ನು ಮನೆಗೆ ಹೋಗು..  

ಅಲ್ಲಿ ನೀನಿಲ್ಲದ್ದೇ ನಿನ್ನ ಗಂಡ್ನಿಗೂ, 

ಮಗ್ನಿಗೂ ಬಂಙ ಆದೀತು ... "

ಹೇಳಿ ಅಮ್ಮ ಹೇಳಿತ್ತು 

ಹಾಂಗೆ ... ಒಂದು ದಿನ ಇದ್ದು 

ಶಾರದೆ ಅದ್ರ ಮನೆಗೆ ಹೋಯ್ತು. 

ಬಂದ ಹೋಮ್ ನರ್ಸ್ ಕಮಲಕ್ಕ ... 

ಪೆರ್ಲ ಪಡ್ರೆ ಹೊಡೆಯಾಣದ್ದಂತೆ. 

ಪ್ರಾಯ ಐವತ್ತಾದೀತು.    

ಒಳ್ಳೆ ಹೆಂಗ್ಸು.

ಗುಡ್ಸಿ ಉದ್ದಿ ಮಾಡುಕೂ, 

ಅಡಿಗೆ ಕೆಲ್ಸಕ್ಕೂ ರೆಡಿಯೇ. 

ಹಾಂಗಾಗಿ ರಾಧೆಗೂ

ಕತೆಪುಸ್ತಕ ಓದುಕೆ 

ಸ್ವಲ್ಪ ಪುರುಸೊತ್ತು ಸಿಕ್ಕಿತ್ತು.... 

ಅತ್ತೆಗೂ ಓದಿ ಹೇಳಿಕೊಂಡಿತ್ತು. 

ಮತ್ತೆ ... ಟಿವಿ, ವಾಟ್ಸಾಪ್ ಎಲ್ಲ 

ರಾಧೆಗೆ ಅಷ್ಟು ಖಾಯ್ಸಿಲ್ಲ.

ಹೀಂಗಿರ್ವಾಗ... ...... 

ಈ ಕತೆ ಇನ್ನೆಂತ ಟರ್ನ್ ತೆಕ್ಕೊಳ್ತೆ ನೋಡುವ ಹೇಳಿ

ಕಾಣ್ತೋ ಏನೋ ನಿವುಗೆ...! ....... 

ಇಲ್ಲಪ್ಪ...!

ಹಾಂಗೆಂತ ಸಸ್ಪೆನ್ಸು ಇಲ್ಲ.....!!

ಹಾಂ...! ಅದ್ರೆಡೆಲಿ

 ರಾಧೆಯ ಅಪ್ನ ಮನೆ ಸುದ್ದಿ

ಸ್ವಲ್ಪ ಅದೆ. ..... 

ರಾಧೆಯ ಅಣ್ಣ ಶಿವನ ಹೆಂಡ್‌ತಿ ಸಾಗರದ ಹೊಡೆದು. 

ಬೆಳ್ದೆಲ್ಲಾ ಬೊಂಬಾಯಿಲಿ. 

ಶಿವನ ಹಾಂಗೆ ಅದೂ

ಯಾವುದೋ ದೊಡ್ಡಕೆಲ್ಸಲ್ಯದೆ. 

ಅವ್ವೀಗ ಇರುದೂ ಬೊಂಬಾಯಿಲೇ. 

ಇಲ್ಲಿ ಅಪ್ಪಮ್ನಿಗೆ

ಈಗೀಗ ಏನೂ ಕೂಡುದಿಲ್ಲ. 

ತೋಟದ ಕೆಲ್ಸಕ್ಕೆ

ಜನವೂ ಸರಿ ಸಿಕ್ಕುದಿಲ್ಲ. 

ಹತ್ತಿಪ್ಪತ್ತು ಖಂಡಿ

ಅಡಿಕ್ಕೆ ಆಗ್ವ ಜಾಗೆ, 

ತೆಂಗಿನಕಾಯಿ, ಒಳ್ಳೆಮೆಣ್ಸು, ಕೊಕ್ಕೊ, ರಬ್ಬರು ಹೇಳಿ 

ಧಾರಾಳ ಉತ್ಪತ್ತಿಯೂ ಅದೆ .... 

ಬೇಕಾದ ಎಲ್ಲ ಸೌಕರ್ಯವೂ ಅದೆ. 

ಮಗ ಕೆಲ್ಸ ಬಿಟ್ಟು ಬಂದ್ರಾದೀತು ಹೇಳಿ ಅವ್ಕದೆ. 

"ಮತ್ತಾರಿಂಗೆ ಇದು…" ಹೇಳಿ 

ಅಪ್ಪ ಓರೆಲಿ

ಒಂದೆರ್ಡ್ಸರ್ತಿ ಹೇಳಿದ್ರು. 

ರಾಧೆಯೂ ಒಂದೆರಡು ಸರ್ತಿ 

ಫೋನ್ ಮಾಡಿ

ಹೇಳಿ ನೋಡಿತ್ತು.                     

"ಇನ್ನೊಂದು ವರ್ಷಲ್ಲಿ ಎನಗೆ 

ಪ್ರಮೋಶನ್ ಡ್ಯೂ ಇದ್ದು ರಾಧೆ. 

ನಿನ್ನ ಅತ್ತಿಗೆ ಸಣ್ಣಾಗಿಪ್ಪಾಗಂದಲೇ 

ಬಾಂಬೆಲಿ ಬೆಳದ ಕಾರಣ ಅದಕ್ಕೆ 

ನಮ್ಮಭಾಷೆ ಅರಡಿತ್ತಿಲ್ಲೆ... 

ಮತ್ತೆ ಮಕ್ಕಳ ಸ್ಕೂಲು...!! 

ಅವಕ್ಕೆ ಕನ್ನಡವೂ ಬತ್ತಿಲ್ಲೆ. 

ನಮ್ಮ ಭಾಷೆಯೇ ಬಂಙಲ್ಲಿ ಮಾತಾಡುದು. 

ಅವರ ಫ್ರೆಂಡ್ಸುಗಳ ಬಿಟ್ಟು ಬಪ್ಪಲೆ ಅವು ಕೇಳವು. 

ಮತ್ತೆ ಈ ಬಾಂಬೆಲಿ

ಎಕ್ಸ್‌ಪೋಶರ್ ಹೆಚ್ಚಿಗೆ; 

ಮಕ್ಕೊಗೆ ಬೇಕಾದ ಎಲ್ಲಾ ಅವಕಾಶಂಗೊ ಇರ್ತು. 

ಅಲ್ಲಿ ಊರಿಲಿ ಎಂತ ಇದ್ದು....? 

ನಾವು ಮಕ್ಕಳ ಲೈಫ್

ಹಾಳು ಮಾಡ್ಲಾಗ ಅಲ್ಲದೋ..? 

ಅಪ್ಪಂಗೂ ಅಮ್ಮಂಗೂ ಎಡಿಯದ್ದರೆ 

ಎಲ್ಲಿಯಾದರೂ ಒಳ್ಳೆ ಜಾಗೆಲಿ ವ್ಯವಸ್ಥೆ ಮಾಡುಂವ. 

ಈಗೆಲ್ಲ ಸೀನಿಯರ್ ಸಿಟಿಸನ್‌ಗೊಕ್ಕೇಳಿಯೇ 

ಟೌನ್‌ಶಿಪ್‌ಗೊ ಬೇಕಾದಷ್ಟು ಇದ್ದು. 

ಎಽಲ್ಲ ಅವ್ವೇ ನೋಡಿಕೊಳ್ತವು. ಮತ್ತೆಂತಾಯೆಕ್ಕು....? 

ಒಂದು ವೇಳೆ ಅವಕ್ಕೆ

ಪೇಟೆ ಬೇಡದ್ದರೆ, 

ಅಲ್ಲೇ ಪುತ್ತೂರತ್ತರೆ ಶಾಂತಿಗೋಡಿಲಿ 

ಒಂದು ಸುರುವಾಯಿದಡ...! 

ನಾವು ಅವಗವಗ 

ಹೋಯ್ಕೊಂಡು ಬಂದುಕೊಂಡು ಇದ್ದರಾತನ್ನೆ..".  

ಹೇಳಿ ರಾಧೆಯ ಮಂಕಾಡ್ಸಿದ್ದ. 

ಹಾಂಗೆ ಶಿವ ಒಂದ್ಸರ್ತಿ ರಾಧೆಗೆ ಫೋನ್ ಮಾಡಿದ. 

"ನಾಳೆ ಊರಿಂಗೆ ಬತ್ತಾ ಇದ್ದೆಯೋಂ .. 

ಮದುವೆ ಆಗಿ ಹೋದಮೇಲೆ ... 

ಅತ್ತಿಗೆ ಊರಿಂಗೆ

ಬಂದದೂಳಿಯೇ ಇಲ್ಲೆ, 

ಹಾಂಗಾಗಿ ಆನುದೇ ಬತ್ತೆ ಹೇಳಿತ್ತು. 

ಈ ಸರ್ತಿ ನಿಂಗಳಲ್ಲಿಗೆಲ್ಲಾ

ಬಪ್ಪಲೆ ರಜೆ ಇಲ್ಲೆ. .... 

ಅತ್ತೆ ಉಶಾರಿದ್ದವಲ್ಲದೋ...? 

ಗೋಪಾಲನನ್ನುದೇ .. ಕಿಶೋರನನ್ನುದೇ 

ಕರಕೊಂಡು ನೀನೆ

ಮನೆಗೆ ಬಾ...  !         

ನಿನ್ನತ್ತರೆ ಒಂದು ವಿಷಯ ಮಾತಾಡ್ಲೂ ಇದ್ದು.." 

ಹೇಳಿ ಹೇಳಿದ.

ಗೋಪಾಲ್ನಿಗೆ

ಯಾಕೋ ಹೋಗುಕೆ ಮನ್ಸಿಲ್ಲ. 

ಗೋಪಾಲ್ನೂ ಶಿವನೂ .... ಸಣ್ಣಾಗಿರುವಾಗಂದ್ಲೇ ... 

ಜೋಸ್ತಿಗ್ಳು...

"ಕುಳ್ಕುಂದದ ಜೊತೆ" ಹೇಳಿ ಹೆಸರಾದವ್ವು....           

ಶಿವ ಈಗ ಮೊದ್ಲಾಣ ಶಿವ ಅಲ್ಲ ಹೇಳಿ ಗೋಪಾಲ್ನಿಗೆ

ಕಾಣುಕೆ ಸುರುವಾಗ್ಯದೆ. 

ಮೊದ್ಲೆಲ್ಲಾ ವಾರಕ್ಕೊಂದು

ಕಾಗ್ದ ಬರಿತಾ ಇದ್ದಂವ 

ಕೆಲ್ಸಕ್ಕೇಳಿ ಪೇಟೆ ಸೇರಿದ್ಮೇಲೆ, 

ಕಾಗ್ದ ಹೋಗ್ಲಿ, ಫೋನು ಮಾಡುದೂಳಿಯೂಇಲ್ಲ.             "ಏನೋ ಅವನ ತಾಪತ್ರಾಯ ಇದ್ದೀತು... 

ತಪ್ಪು ಗ್ರೇಸುಕಾಗ್ದು..." ಹೇಳಿ 

ಬಾಯಿಲಿ ಎಷ್ಟೇ ಹೇಳಿಕೊಂಡ್ರೂ ... 

ಮನ್ಸಿಗೆ ಕಾಣದ್ದೇ ಇರ್ತೋ...? 

ಹಾಂಗಾಗಿ ..... 

"ಅವ್ನಿಗೆ ಬೇಕೂಳಿ ಇಲ್ಲದ್ದರೆ ನನಿಗೇನು.. ! "

ಹೇಳಿ ಕಂಡು, ರಾಧೆಯ ಹತ್ರೆ …

 "ನೀನು ಹೋಗು, 

ಪುಟ್ಟಂಗೆ ಶಾಲೆಯೂ ಇದ್ದೂ, 

ನಾಳೆ ಮತ್ತೆ ...ಅಡಕ್ಕೆ ತೆಗವದು

ಬತ್ತೆ ಹೇಳಿದ್ದು, 

ಬಂದಿಪ್ಪಾಗ ಹಿಡ್ಕೊಳ್ಳದ್ದರೆ

ಅವು ಮತ್ತೆ ಸಿಕ್ಕುಗೋ...? 

ಮತ್ತೆ ಅಮ್ಮನ ಬಿಟ್ಟಿಕ್ಕಿ

ಇಬ್ರೂ ಹೋಪದು ಸರಿ ಅಲ್ಲ. 

ನೀನು ಬೇಕಾದರೆ ಎರಡು ದಿನ ನಿಂದಿಕ್ಕಿ ಬಾ .... 

ಹೆಜ್ಜೆ ಮಡುಗುಲೆ

ಕಮಲಕ್ಕ ಇದ್ದನ್ನೆ...!" ಹೇಳಿದ. 

ರಾಧೆಗೂ ಮೊದಲಾಣ

ಅಣ್ಣ ಅಲ್ಲ ಹೇಳಿ 

ಕಾಣುಕೆ ಸುರುವಾಗಿತ್ತು. ಹಾಂಗಾಗಿ... 

"ಎನ್ನ ಗೆಂಡ ಅವನ ಕಾಂಬಲೇಳಿ ಎಂತಕೋಯೆಕ್ಕು 

ಬೇಕಾದರೆ ಅವನೇ ಇಲ್ಲಿಗೆ ಬರಲಿ"... ಹೇಳಿ ಕಂಡು .... 

ರಾಧೆ ಒಂದೇ

ಅಪ್ಪನ ಮನೆಗೆ ಹೋಯ್ತು.

ಆ ದಿನವೇ ರಾಧೆ

ವಾಪಾಸೂ ಬಂತು. 

ಎಂತ ನಿಲ್ಲದ್ದೇ ಸೀದಾ ಬಂದದು... 

ಹೇಳಿ ಗೋಪಾಲ ಕೇಳಿದಾಗ .....

"ಅಣ್ಣ ಅತ್ತಿಗೆ

ನಾಳೆ ಹೋವುತ್ತವಡ ... 

ಅವು ಹೋಗಿ ಆಗಲಿ….

ಆನು ...

ನಾಡ್ತೋ ಆಚ ನಾಡ್ತೊ ಹೋಗಿ, 

ನಾಕು  ದಿನ ನಿಂದಿಕ್ಕಿ ಬಪ್ಪೆ.... " ಹೇಳಿತ್ತು ರಾಧೆ.  

’ಸರಿ’ ಹೇಳಿದ ಗೋಪಾಲ. ... 

ಯಾಕೋ ಏನೋ..! 

ರಾತ್ರಿ ಗೋಪಾಲ್ನಿಗೆ

ಒಳ್ಳೆ ನಿದ್ದೆ ಬಂದದ್ದು ಹೌದು.

ಬೆಳಿಗ್ಗೆದ್ದು ನಿತ್ಯ ಕೆಲ್ಸ ಎಲ್ಲಾ ಆಗಿ 

ಪ್ರಾಣಾಯಾಮ ಮಾಡಿಕೊಂಡಿರುವಾಗ ...  

ಒಳ್ಗಂದ ರಾಧೆಯ ಸ್ವರ ಕೇಳಿತ್ತು. 

"ಪುಟ್ಟೂ, ಅಪ್ಪಯ್ನ

ಬಾಯ್ರಿಕೆ ಕುಡಿಯುಕೆ

 ಕರಿ ಮಗಾ ...! 

ನೀನೂ ಬಾ...!

ಬರಿಯಕ್ಕಿ ದೊಸೆಯೂ, 

ಬೆಲ್ಲ ಕಾಯಿಸುಳಿಯೂ ಮಾಡಿದ್ದೇನೆ ...! 

ನೀನು ನಿನ್ನೆ ಹೇಳಿದ ಉಬ್ಬುರೊಟ್ಟಿ 

ಈಗ ಮಾಡುಕಾಗಲ್ಲ ಪುಟ್ಟೂ..!! 

ಅಪ್ಪಯ್ನ ಹತ್ರ ಮತ್ತೆ ಪೇಟೆಂದ 

ಅಲಸಂಡೆ ಬಿತ್ತು ತರುಕೆ ಹೇಳುವ. 

ರಾತ್ರೆಗೆ ರೊಟ್ಟಿ ಮುದ್ದೆಹುಳಿ ಮಾಡ್ತೇನೆ ಆಯ್ತೋ...!!" ............

ಗೋಪಾಲನಿಗೆ ಆದ ಆಶ್ಚರ್ಯಲ್ಲಿ ... 

ಪ್ರಾಣಾಯಾಮ ಅರ್ದಕ್ಕೇ ನಿತ್ತ್‌ತ್ತು.  

"ಬಂದೇ…" ಹೇಳುಕೂ ನೆನ್ಪಾಗಲ್ಲ.... 

ಹಾಂಗೆ .. ಗೋಪಾಲ ಒಳ್ಗೋಗ್ವಾಗ ಕಿಶೋರ ಹೇಳ್ತಿದ್ದ.. 

ಓ... ಅಮ್ನಿಗೂ

’ಹೋಗುಕೆ ಬರುಕೆ ’ ಬರ್ತೆ..!! 

ಅಮ್ಮ, ಇನ್ನು ಹೀಂಗೇ ಮಾತಾಡಾಯ್ತೋ..! 

ಅಜ್ನ ಮನೆಗೆ ಹೋದಾಗ 

ಅಲ್ಯಾಣ ಭಾಷೆ ಮಾತಾಡುವ ...

ನನಿಗೆ ಎರಡೂ ಲಾಯ್ಕಾಗ್ತೆಮ್ಮ ..." ಹೇಳಿ.

 ಗೋಪಾಲ

ಒಳ್ಗೆ ಹೋದ ಕೂಡ್ಲೇ ...ರಾಧೆ ... 

"ಇಕೊಳ್ಳಿ .. ಕಮಲಕ್ಕ ಬಂದು 

ಇವತ್ತಿಗೆ

ಒಂದು ತಿಂಗ್ಳಾಯ್ತಲ್ವೋ...? 

ನಾಳೆಂದ

ಬೇಡಾ ಹೇಳ್ವೋದೋಳಿ....! 

ಅತ್ತೆಯ

ನಾನೇ ನೋಡಿಕೊಂಡೇನು ...! 

ಎಂತಾಗ್ಬೇಕು ......? 

ಹೇಳಿದಾಂಗೆ ಪೇಟೆಂದ 

ಒಂದೊಳ್ಳೆ ಸೀರೆ ತನ್ನಿ ಆಯ್ತೋ.. ಕಮಲಕ್ಕನಿಗೆ.   ... 

ಪಾಪ ...! 

ಅತ್ತೆಯ ....ಮಗ್ಳ ಹಾಂಗೆ ನೋಡಿಕೊಂಡದೆ; ..... 

ಅದ್ರ ಋಣ ದೊಡ್ಡ್‌ದಲ್ವೋ...!!" ಹೇಳಿತ್ತು.

ಗೋಪಾಲ್ನಿಗೆ

ಆಶ್ಚರ್ಯದ ಮೇಲೆ ಆಶ್ಚರ್ಯ....!! 

"ಅಪ್ನ ಮನೆಂದ ಬಂದ ಮೇಲೆ .. 

ಎಂತಾಯ್ತು ಈ ರಾಧೆಗೆ ... ಹೇಳಿ ... !! 

ನೋಡುವಾ ಎಂತ ಇದ್ರೂ ಮತ್ತೆ ಅದೇ ಹೇಳೀತಲ್ಲ ... 

ಅಂಸರ ಎಂತ...? " ಹೇಳಿ, 

ಗೋಪಾಲ ಬಾಯ್ರಿಕೆ ಕುಡ್ದು, 

ಆಳುಗ್ಳ ವಿಚಾರ್ಸುಕೇಳಿ .... ಹೊರ್ಗೋದ.

ಆಕಾಶಲ್ಲಿ ತೇಲಿಕೊಂಡು

ಹೋಗ್ತಾ ಇರುವಾಂಗೆ

 ಅವ್ನ ಮನ್ಸಿಗಾಯ್ತು.  


‌‌ **********

(ದ.ಕ.ದ ಸುಳ್ಯ ತಾಲೂಕಿನ

ಪಂಜ ಸೀಮೆಯ

ಕೆಲವು ಮನೆಗಳಲ್ಲಿ ಮಾತ್ರ ಉಳಿದಿರುವ

ಹವಿಗನ್ನಡ ಭಾಷೆಯ

ಒಂದು ಪ್ರಭೇದ.)


ಮೂರ್ತಿ ದೇರಾಜೆ, ’ಸಮಸಾಂಪ್ರತಿ’, ವಿಟ್ಲ,ದ.ಕ.










88 views2 comments

2 Comments


Chennai Bhaava
Chennai Bhaava
Jun 17, 2023

ಒಪ್ಪ ಆಯಿದು ಇದು. ನಮಸ್ಕಾರಂಗೊ

Like

shreepadns
shreepadns
Jun 16, 2023

ಮೂರ್ತಿ ದೇರಾಜೆಯವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಸೀಮೆಯ ಹವಿಗನ್ನಡವನ್ನು ಈ ಕತೆಯಲ್ಲಿ ಕಲಾತ್ಮಕವಾಗಿ ಬಳಸಿದ್ದಾರೆ. ನಾನು ಅದನ್ನು ಕಾಸರಗೋಡು ಪರಿಸರದ ಹವಿಗನ್ನಡ ಎಂದು ತಪ್ಪಾಗಿ ಬರೆದಿರುವೆ. ಓದುಗರು ದಯಮಾಡಿ ಮನ್ನಿಸ ಬೇಕಾಗಿ ವಿನಂತಿ. ಸಂಪಾದಕ ಆಲೋಚನೆ.

Like
bottom of page