[ ಶ್ರೀಮತಿ ಹೊನ್ನಮ್ಮ ನಾಯಕ, ಅಂಕೋಲಾ ಇವರಿಂದ ವಿರಚಿತ ಚಿತ್ರಕವನ ತಮ್ಮ ಓದಿಗೆ - ಸಂಪಾದಕ]
ಹರಿದ ಅಂಗಿಯ ಹೆಗಲ ತೇರು
ಏರಿ ಕುಳಿತ ಕಳಸ ದಿಗಂಬರಿ!
ಬೆನ್ ಬಿಡದ ಬೇತಾಳ ಬಡತನ
ತಿರುಗಿ ನೋಡಲಿಚ್ಫಿಸದೆ
ನಡೆದಿರಲು ತಂದೆ ಮುಂದೆ,
ನಗ್ನ ಕುಡಿಯ ಆಸೆ ಕಂಗಳ
ಕಳವಳದ ನೋಟ ಹಿಂದೆ.
ತೇಪೆಗೆ ನಿಲುಕದ ರಂಧ್ರ
ಇಲ್ಲದ ಬದುಕಿನ ಅನಾವರಣ,
ಉಳ್ಳವರು ಅಲ್ಲಲ್ಲಿ ಹರಿದು
ತೊಟ್ಟು ಸಂಭ್ರಮಿಸುವ
ಶೋಕಿ ಉಡುಪಿನ ವ್ಯಂಗ್ಯ ಚಿತ್ರಣ!
ಕೃಶ ಶರೀರ ಕೆದರಿದ ಕೇಶದ
ಬೆತ್ತಲೆ ಬಾಲೆಗೆ ಅಪ್ಪನೇ ಅಂಬಾರಿ
ತಬ್ಬಿ ಹಿಡಿದ ತಲೆ ಕನಸಿನಾಸರೆ.
ಮಗಳೊಂದಿಗೆ ನಾಳಿನ ಬುತ್ತಿಗೆ
ಹೊತ್ತು ಹಲವು ಚಿಂತನೆಗಳ,
ಸಾಗಿದೆ ಹತ ಭಾಗ್ಯ ಪಿತನ
ಅಕ್ಕರೆಯ ಸೋತ ಪಾದ.
ಮಾಸಿದ ಮುದ್ದು ಮುಖದ
ಮಗಳೆ, ತಬ್ಬಲಿಯಾ ನೀನು?...
ಕಂಗೆಟ್ಟ ಕಡು ಬಡತನ
ಮನ ಮಿಡುಕುವ ನೈಜ ಚಿತ್ರಕೆ,
ಬಣ್ಣ ತುಂಬಿದರೇನು ಕಂದಾ
ಚಿತ್ತಾರದ ವಸನ ತನುವನಪ್ಪುವುದೇ?
ಮುಚ್ಚ ಬಲ್ಲದೇ ಅಪ್ಪನಂಗಿಯ ತೂತ?
ಕಳವಳದ ಕಣ್ಣಲ್ಲಿ ಉಕ್ಕುವುದೇ ಕಾಂತಿ?
ಬೇಗೆ ದೂರಾಗಿ ಬೆಳಗುವುದೆ ಬಾಳು?
ನನ್ನ ಬರೀ ಕವನ ಕಾವುದೇ ನಿನ್ನ?...
Comentários