top of page

ಪಾಳು ಭೂಮಿಯ ಕೃಷಿಕ

ಕತ್ತಲ ಕೇರಿಯ ಕುರುಡು ಗುಡಿಸಲಲಿ

ಥಳ ಥಳ ಹೊಳೆವ ಸೂರ್ಯ

ಹುಟ್ಟಿದ ಕೂಡಲೆ ಕೊಟ್ಟಿ ಕತ್ತಲೆಯು

ನಿಂತಿತು ಊದುತ ರಣತೂರ್ಯ


ಬಾಲ್ಯದಲ್ಲಿಯೇ ಕೆಟ್ಟ ಗ್ರಹಗಳವು

ಅಡ್ಡಗಟ್ಟಿದರನು

ಅಪಮಾನಗಳ ಚಕ್ರವ್ಯೂಹವನು

ಸೀಳಿ ಬಂದನೊ ಭೀಮನು


ಅಸ್ಪೃಶ್ಯನೆಂದು ವಾಕರಿಸಿದವರನು

ಕೊಚ್ಚೆಯಲ್ಲಿಯೇ ಬಿಟ್ಟು

ಶಿಖರಗಳಿಗೆ ಹೆದ್ದಾರಿಯ ಕೊರೆದನೊ

ಅರಿವಿನ ಬೆಳಕನು ತೊಟ್ಟು


ಪಾಳುಗೆಡುವಿದ ಫಲವತ್ತು ಭೂಮಿಯನು

ಸಾಗುವಳಿ ಮಾಡಿ

ಸಮೃದ್ಧ ಫಸಲಿಗೆ ದಾರಿ ತೋರಿದನೊ

ಸ್ವಯಂ ನಾಂದಿಯ ಹಾಡಿ


ಸಾವಯವದ ಸಹಜ ಕೃಷಿಗೆ ತಾ

ವಕ್ತಾರನಾಗಿ ಜಗಕೆ

ಹೂತಚಕ್ರಗಳ ಬಂಡಿಯನೆಳೆದನೊ

ಹೆಗಲಾಗಿ ತಾನೆ ನೊಗಕೆ


ಹುಟ್ಟಿದ ಜಾತಿಗೆ ಕಟ್ಟಳೆ ಎಲ್ಲಿದೆ

ಬೆಳೆಯಲಿಕ್ಕೆ ಫಸಲು

ಮಣ್ಣು ನೀರು ಗಾಳಿ ಬಿಸಿಲು

ಒಂದೆ ಎಲ್ಲರಿಗೂ ಅಸಲು


ಸಾಕ್ಷಿಯಾದನೊ ತನಗೆ ತಾನೇ

ಮಾಡಿ ಸತ್ಯವನು ಬಯಲು

ಅಡÀಗಿಕೊಂಡವೊ ಕೆಂಡದೆದರು

ಕಪಟ ಸೂತ್ರಗಳ ಹುಯಿಲು



-ಪ್ರೊ. ನಿಜಲಿಂಗಪ್ಪಮಟ್ಟಿಹಾಳ

ಅಧ್ಯಕ್ಷರು

ಡಾ. ಆರ್.ಸಿ. ಹಿರೇಮಠಕನ್ನಡಅಧ್ಯಯನಪೀಠ

ಕರ್ನಾಟಕವಿಶ್ವವಿದ್ಯಾಲಯ, ಧಾರವಾಡ




15 views0 comments
bottom of page