ಒಂದೇ ಒಂದು ಮೆಲುದನಿ ಸಾಕು ಪ್ರಿಯೆ ಚಾರುಲತೆ
ಬಿಡು ಬಿಗುಮಾನ
ನನ್ನ ನಿನ್ನ ಹೆಗಲ ಮೇಲೆ
ಕೂರಿಸಿಕೊಂಡ
ಆ ಬೆಟ್ಟದ ಬಂಡೆ
ಕಾದು ಕಾದು ಸೊರಗಿದೆ
ನದಿ ದಂಡೆ
ನಿನ್ನ ಬೆಚ್ಚನೆಯ ಕಾಲುಗಳ
ಬೆವರ ಹನಿಗಳ ಸ್ಪರ್ಶ ಕಾಣದೆ
ನಿನ್ನ ಬಳುಕುವ ನಡುವಿನ ವೈಯ್ಯಾರಕೆ ತೊನೆದಾಡಿದ ತೆಳ್ಳನೆಯ ಗಿಡಮರಗಳು
ಜಾರಿಕೊಂಡಿದ್ದಾನೆ ಜೋಂಪು ನಿದ್ದೆಗೆ ಆ ಆಗಸದ
ಪೂರ್ಣ ಚಂದಿರ
ನಿನ್ನ ಮುಂಗುರುಳಿನ ಹಾರಾಟಕ್ಕೆ ಮರುಳಾಗಿ
ಚಿಗುರೊಡೆದ ತಂಗಾಳಿಯಿರದೆ
ಸೊರಗಿಕೊಂಡಿರುವೆ ಸಖಿ
ಈ ಇನಿಯಳ ಅರಳಿದ
ಮುಖಾರವಿಂದದ
ಹನಿ ಸುಳಿವಿಲ್ಲದೆ
ಕುಳಿತು ನದಿಯ ತೀರದಲ್ಲಿ
ಅಮ್ಮನ ತೊಡೆಯ ಮೇಲೆ
ಕೂತು ಕಲರವ ಮಾಡುವ
ಕಂದನ ಕಾಲಂತೆ
ಚಾಚಿದ ನಿನ್ನ ಕಾಲುಗಳ
ತುಂಟತನದ ಮೇಲೆ
ತಣ್ಣನೆಯ ಹನಿಗಳ ಮೆಲ್ಲಗೆ
ಸುರಿದ ನನ್ನೀ ಕೈಗಳು
ನಾದ ತಪ್ಪಿದ ತಂಬೂರಿಯಂತೆ
ಮೀಟುತ್ತಿವೆ ವಿರಹದ ಸ್ವರಗಳ
ಗೊತ್ತು ನನಗೆ
ನೀನು ಯಾರಿಗೂ ಎಟುಕದೆ
ನನಗೆ ಮಾತ್ರ ದಕ್ಕಿದ
ಚಂದಿರನ ಮಗಳೆಂಬ
ಮಿಂಚುಳ್ಳಿ ಚೆಲುವೆಯೆಂದು
ನಾನಿಲ್ಲಿ ಬೆಳದಿಂಗಳ ಮುಷ್ಟಿಯಲ್ಲಿ ಹಿಡಿದು
ನನ್ನ ಹೃದಯದ ಕವಾಟದೊಳಗೆ
ನಿನ್ನ ಬಿಸಿಯುಸಿರು ಸೋಕಿ
ಕಾಯುತ್ತಿದ್ದೇನೆ ಎದೆ
ಹಾರುವ ಹಗುರ ಗಾಳಿಪಟದಂತಾಗಲು
ನಿನ್ನ ನಿಟ್ಟುಸಿರು ಒಂದು
ದೀರ್ಘ ವಿರಹವನ್ನು ಕೊಲ್ಲಬಹುದೆಂಬ
ಅಮಿತ ಹಂಬಲದಿಂದ
ಪ್ರಿಯೆ ಚಾರುಲತೆ
ಪಟದಷ್ಟೇ ಹಗುರವಾಗು
ದೂರವಿದ್ದರೂ ನಾಳೆಗಾಗಿ
ಕಾಯುವೆ
ನನ್ನ ಹೃದಯದ ಗೂಡಿಗೆ
ಮರಳುವೆಯೆಂಬ ನಿರೀಕ್ಷೆಯೊಂದಿಗೆ
ಕಲ್ಲು ಮುಳ್ಳು ಹುಲಿ ಸಿಂಹಗಳ
ದಟ್ಟ ಕೈಗೆಟುಕದ ಬೆಟ್ಟವಾಗಬೇಡ
ಮೊಲದ ಮರಿಯಂತ
ಈ ನಿನ್ನ ನಲ್ಲನ ಮೈದಡವಿ ಹಗುರಾಗು
ದುಗುಡದ ಈ ನನ್ನ ಕಣ್ಣಿನಲಿ
ನಿನ್ನ ಕಣ್ಣನಿಟ್ಟು ನೋಡು ಅರೆಕ್ಷಣ
ತೇಲಿಸಿಬಿಡು ಸಖಿ
ಒಂದೇ ಒಂದು ಕಿರುನಗೆಯ
ಸಾವಿರ ನೋವುಗಳೆಲ್ಲಾ
ಬರ್ಪದಂತೆ ಕರಗಿ
ಕಣ್ಣೀರು ನದಿಯಾಗಲಿ
ಮಂಜುನಾಥ ನಾಯ್ಕ ಯಲ್ವಡಿಕವೂರ
Комментарии