ಅಣ್ಣನ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ಹೇಳಹೊರಟರೆ ನನಗೆ ಕಾಣುವುದು ಅವರ ದೈವ ಶ್ರದ್ಧೆ , ಗುರುಭಕ್ತಿ , ಸ್ವಪಾಕ ಪ್ರಯೋಗ ಪ್ರೀತಿ , ಹೋಮಿಯೋಪಥಿ - ಜ್ಯೋತಿಷ್ಯಗಳ ಕುರಿತಾದ ಅಧ್ಯಯನಾಸಕ್ತಿ , ಕಾವ್ಯಾತ್ಮಕವಾದ ರೂಪಕ ಶಕ್ತಿ ಮತ್ತು ಅಭಿವ್ಯಕ್ತಿ ಮತ್ತು ಯೋಗ ಸಾಧನೆ. ತನ್ನ ಜೀವನವನ್ನು ಮುನ್ನಡೆಸುತ್ತಿರುವ ಶಕ್ತಿ ಅವರ ಆರಾಧ್ಯ ದೈವ ಶ್ರೀ ಕ್ಷೇತ್ರ ಇಡಗುಂಜಿ ಗಣಪತಿ ಹಾಗು ಕುಲದೈವ ಕಾವೂರ ಗಣಪತಿ ಎಂಬುದು ಅವರ ಧೃಢವಾದ ನಂಬಿಕೆ. ಕಾವೂರ ದೇವಸ್ಥಾನಕ್ಕೆ ದಾರಿ ಮಾಡುತ್ತಿದ್ದ ವೇಳೆ , ದೊಡ್ಡ ಬಂಡೆಯೊಂದು ಉರಳಿ ಅವರ ತಲೆಯ ಮೇಲೆ ಬಿದ್ದು , ಅವರ ದೃಷ್ಟಿ ಶಕ್ತಿಯ ಬಹಳಷ್ಟು ಭಾಗವನ್ನು ಕಳೆದುಕೊಂಡರೂ , ಇಲ್ಲಿಯವರೆಗೂ ಹೇಗೋ ಅಧ್ಯಯನ ಆಧ್ಯಾಪನ ಓದು ಬರಹ ಇವುಗಳನ್ನು ನಡೆಸಿಕೊಂಡು ಹೋಗಲು ದೈವ ಕರುಣೆಯೇ ಕಾರಣವೆಂಬುದು ಅವರ ದೈವ ಶ್ರದ್ಧೆಯ ಮೂಲಾಧಾರವಾಗಿರಬಹುದು. ಹಾಗಲ್ಲವಾದರೂ ದೈವ ಶ್ರದ್ಧೆ ನಮ್ಮ ಮನಸ್ಸನ್ನು ಒಳಿತಿನ ಕಡೆಗೆ ಪ್ರೇರೇಪಿಸುತ್ತದೆ , ನಮ್ಮ ಮನಸ್ಸಿನ ಕೊಳೆಯನ್ನು ತೊಳೆಯುತ್ತದೆ ನಮ್ಮನ್ನೂ ಆ ದೈವ ಕರುಣೆ ಇತರರ ಕುರಿತಾಗಿ ಕರುಣೆಯಿಂದ ಪ್ರೀತಿಯಿಂದ ಹಾಗೂ ಸಹನೆಯಿಂದ ನೋಡುವಂತೆ ಮಾಡುತ್ತದೆ ಎಂಬುದು ಅವರು ಬಲವಾಗಿ ನಂಬಿದ್ದಿರಬೇಕೆಂದು ಕೊಳ್ಳುತ್ತೇನೆ. ಯಾಕೆಂದರೆ ನಾನು ಪಿಯುಸಿ ಮುಗಿಸಿ ಮನೆಯಿಂದ ಮುಂದೆ ಓದಲು ಹೊರಹೊರಡುತ್ತೇನೆ ಎನ್ನುವ ವೇಳೆ, ಅವರ ಜೊತೆ ದಿನಾ ಸಂಜೆ ವಾಕ್ ಮಾಡುವ ಸಂದರ್ಭ, ಅದೂ ಇದೂ ಮಾತಾಡುವಾಗ ಅವರು, ನೀನು ಇಷ್ಟ ಬಂದವರನ್ನು ಮದುವೆಯಾಗು ಆದರೆ ದೈವ ಶ್ರದ್ಧೆ ಇರುವವರನ್ನು ಆಗು, ಕ್ರಿಶ್ಚಿಯನ್ ನೊಬ್ಬನನ್ನು ಮದುವೆಯಾಗುವುದಾದರೆ ಚರ್ಚ್ ಗೆ ಹೋಗುವವನ್ನು ಆಗು, ಮುಸ್ಲಿಮ್ ನನ್ನು ಮದುವೆಯಾಗುವುದಾದರೆ ೫ ಬಾರಿ ನಮಾಜ್ ಮಾಡುವವನ್ನು ಆಗು ಎಂದು ಅಪ್ಪಣೆ ಕೊಡಿಸಿದ್ದರು. ಅವರು, ದೈವ ಶ್ರದ್ಧೆ ಯಾವ ಧನಾತ್ಮಕವಾದ ಗುಣಗಳನ್ನು ಪ್ರಚೋದಿಸುತ್ತದೆ ಎಂದು ನಂಬಿದ್ದರೋ ಅಂಥ ನಂಬಿಕೆ ನನಗೆ ಸಾಹಿತ್ಯವನ್ನು ಓದುವವರ ಕುರಿತಾಗಿ ಇತ್ತು. ಬಹುಶಃ ಈಗ ಇಂಥಾ ನಂಬಿಕೆಗಳನ್ನು ಇಬ್ಬರೂ ಹಿಂದಕ್ಕೆ ಬಿಟ್ಟುಬಿಟ್ಟಿದ್ದೇವೆ ಎನ್ನಿಸುತ್ತದೆ, ಅದು ಬೇರೆ ವಿಚಾರ.
ಅಣ್ಣನಿಗೆ , ನಮ್ಮಮ್ಮನ ಕುರಿತಾಗಿ ಬಹಳ ಭಯ ಭಕ್ತಿ ಇದೆ. ಅಂದರೆ ಅಮ್ಮನನ್ನು ಕಂಡರೆ ಹೆದರಿ ನಡುಗುತ್ತಾರೆ ಅಂತಲೋ, ಅವರು ಹೇಳಿದ ಹಾಗೆಲ್ಲಾ ಕೇಳಿ ಚಾಚೂ ತಪ್ಪದೆ ನಡೆಸಿಕೊಡುತ್ತಾರೆ ಅಂತಲೋ, ಅವರಿಗೆ ಎಂದೂ ಒಂದು ಎದುರು ಮಾತನ್ನೂ ಅನ್ನುವುದಿಲ್ಲ ಅಂತಲೋ ಅಲ್ಲ. ಜಗಳ ಆಡುವುದೇ ಇಲ್ಲ ಎಂದಂತೂ ಅಲ್ಲವೇ ಅಲ್ಲ. ದಿನಾ ಅವರ ಜಗಳವನ್ನು ತೀರ್ಮಾನಿಸುವ ನ್ಯಾಯಾಧೀಶೆ ನಾನೇ ಆಗಿರುವುದರಿಂದ ಈ ಮಾತನ್ನು ಧೈರ್ಯವಾಗಿ ಹೇಳಬಲ್ಲೆ. ಆದರೆ ತನ್ನಾಕೆ , ನನ್ನ ಅಮ್ಮ ,ತನಗೆ ದೇವರು ಕೊಟ್ಟ ವರ, ಆಕೆ ನನ್ನ ಜೀವನದ ಶಕ್ತಿ , ತನಗೆ ಕಾಣದ್ದನ್ನು ತೋರುವ ದೃಷ್ಟಿ ಭಾಗ್ಯ ಎಂದು ಅಣ್ಣ ಭಾವಿಸಿದ್ದಾರೆ. ಹಾಗಾಗಿ 'ಸತಿ ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ' ಎನ್ನುವ ಬಸವಣ್ಣನವರ ವಚನದಂತೆ ಬದುತ್ತಿರುವ ಅವರೀರ್ವರ ಸಾಂಗತ್ಯ ನನ್ನ ಮೇಲೆ ಬೀರಿದ ಪ್ರಭಾವ ಬಹಳಷ್ಟು. ಸಾಹಿತ್ಯವೋ, ಜೀವನ ದರ್ಶನವೋ, ನಡೆ ನುಡಿಯೋ ಎಲ್ಲವೂ ಅವರ ಬದುಕಿನಲ್ಲಿ ಬದುಕಾಗಿ ಪುಟ್ಟ ನಂತರ ದೊಡ್ಡ ದೃಷ್ಟಿಯಲ್ಲಿ ಕಂಡ ಕಾಣ್ಕೆಗಳಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
ಅಣ್ಣ ತಮ್ಮ ಊರು, ಕಪ್ಪೆಕೆರೆ (ಹಡಿನಬಾಳು , ಹೊನ್ನಾವರ ತಾ, ಉತ್ತರ ಕನ್ನಡ ಜಿಲ್ಲೆ) ಅನ್ನು ಓದುವ ಹಂಬಲದಿಂದ ಬಿಟ್ಟು , ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿರುವಾಗ , ಹಣವಿಲ್ಲದೆ ಹೋಟೆಲುಗಳಲ್ಲಿ ಮಾಣಿಯಾಗಿ ಹೊಟ್ಟೆಯನ್ನೂ, ಓದನ್ನೂ ನಿರ್ವಹಿಸುತ್ತಿದ್ದರು. ಹೋಟೆಲುಗಳಲ್ಲಿ ಬೈಸಿಕೊಂಡು ಬೈಸಿಕೊಂಡು ಬೇಜಾರಾಗಿ ತುಂಗೆಯ ಸೇತುವೆಯ ಬಳಿ ದುಖಿತನಾಗಿ ನಿಂತಿದ್ದಾಗ , ಅವರಿಗೆ ಪಾಠ ಮಾಡುತ್ತಿದ್ದ ಶ್ರೀ ಸಿದ್ಧಲಿಂಗಯ್ಯನವರು ಅವರನ್ನು ತಮ್ಮ ಮನೆಗೆ ಕರೆದೊಯ್ದು ಅವರ ಕಥೆ ಕೇಳಿ ತಮ್ಮಲ್ಲೇ ಉಳಿಸಿಕೊಂಡರು, ಅವರೂ ಅವರ ಶ್ರೀಮತಿ ಲಲಿತಮ್ಮನವರೂ ಅಣ್ಣನನ್ನು ತಮ್ಮ ಮಗಂತೆ ಮಮತೆಯಿಂದ ಕಂಡರು. ಈ ಕಥೆ ಗೊತ್ತಿಲ್ಲದ ನಮಗೆ ಮೊದ ಮೊದಲು ವಿಸ್ಮಯ. ಶ್ರೀ ಸಿದ್ಧಲಿಂಗಯ್ಯನವರು ನಮ್ಮ ಮನೆಗೆ ಬರುತ್ತಾರೆ ಎಂದರೆ ಏಕಷ್ಟು ಸಂಭ್ರಮ ಪಡುತ್ತಾರೆ ಎಂದು. ನಮ್ಮ ಮನೆಯಲ್ಲಿ ಇಲ್ಲದ ಸ್ಟೀಲ್ ಕುರ್ಚಿಗಳು, ಮೆತ್ತಗಿನ ದಿಂಬುಗಳು , ಹಾಸಿಗೆಗಳು , ಬೆಡ್ ಶೀಟುಗಳು ನಮ್ಮ ಮನೆಗೆ ಮೊದ ಮೊದಲು ಬರುವುದಕ್ಕೆ ಅವರೇ ಕಾರಣ ಎನ್ನಬಹುದು. ನಾವು ಕಾಣದ ಸಂಭ್ರಮದಿಂದ ನಮ್ಮ ಅಣ್ಣ ಓಡಾಡುತ್ತಿದ್ದಾರೆ ಎಂದರೆ, ನಮಗೆ ಗೊತ್ತು ಬಹುಷಃ ಸಿರಿಗೆರೆಯ ಮಠದ ಕಾರ್ಯಕ್ರಮವೊಂದಕ್ಕೆ ಶ್ರೀ ಸಿದ್ಧಲಿಂಗಯ್ಯ ನಮವರು ಬಂದಿರಬಹುದು ಎಂದು. ಅಷ್ಟು ಅವರಲ್ಲಿ ಭಕ್ತಿ ಇತ್ತು ನಮ್ಮ ತಂದೆಯವರಿಗೆ. ಅದೇ ಪ್ರೀತಿ ಭಕ್ತಿಯನ್ನು ಗುರು ಶಿಶ್ಯರಿಬ್ಬರೂ ಉಳಿಸಿಕೊಂಡಿದ್ದಾರೆ ಎಂಬುದು ನಮಗೂ ಕಣ್ಣು ಒದ್ದೆ ಮಾಡುವ ಸಂಗತಿ. ಆ ಗುರು ತೋರಿದ ಪ್ರೀತಿಯ ಋಣವನ್ನು ಅಣ್ಣ , ತಾವೂ ಸಹ ಒಂದಿಷ್ಟು ಜನರಿಗೆ ಆಸರೆಯಾಗುವ ಮೂಲಕ ತೀರಿಸಬೇಕು ಎಂದು ಭಾವಿಸಿದರು ಎಂದು ಅನಿಸುತ್ತದೆ , ನಾವು ಚಿಕ್ಕವರಿತ್ತಾ ನಮ್ಮ ಮನೆಯಲ್ಲಿ ಬಹಳ ಜನ ಅವರ ಶಿಷ್ಯರು ಬಂದು ಹೋಗುತ್ತಿದ್ದರು. ನಮ್ಮ ನೆಚ್ಚಿನ ಮಸಾಲಿ ಅವರೊಲ್ಲೊಬ್ಬರು. ಅದೇ ರೀತಿ ಅವರ ತಮ್ಮ, ನಮ್ಮ ಮಹಾಬಲ ಚಿಕ್ಕಪ್ಪ , ಬಂಧು ಶಂಭು ಮಾಮ, ದೊಡ್ಡಪ್ಪನ ಮಗಳು ಅಕ್ಕ ರಾಜೇಶ್ವರಿ, ಅತ್ತೆ ಮಗಳು ಸವಿತಕ್ಕ ಎಲ್ಲರೂ ನಮ್ಮ ಮನೆಯಲ್ಲಿ ಕೆಲ ವರ್ಷ ತಮ್ಮ ಓದನ್ನು ಮುಂದುವರೆಸಿದರು ಅಷ್ಟೆ ಅಲ್ಲದೆ ತಮ್ಮ ಪ್ರೀತಿಯ ಧಾರೆಯನ್ನು ನಮ್ಮ ಮೇಲೆ ಹರಿಸಿ ಗಟ್ಟಿಯಾದ ಬಾಂಧವ್ಯವನ್ನು ನಮಗೆ ಕರುಣಿಸಿದರು.
ನಮ್ಮ ಅಣ್ಣನ ಗುರುಭಕ್ತಿಯಂತೆಯೇ ಅವರ ಭಾತೃ ಪ್ರೀತಿಯೂ ನಮಗೇ ಎದ್ದು ತೋರುವ ವಿಚಾರವಾಗಿತ್ತು. ಚಿಕ್ಕವರಿದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡ ಅಣ್ಣನಿಗೆ ಅವರ ಅಣ್ಣ ಗೋವಿಂದ ಹೆಗಡೆ ಅವರೇ ತಂದೆ ಸಮಾನರಾಗಿದ್ದರು. ನಮ್ಮ ಸಿರಿಗೆರೆಯ ಜಗತ್ತಿಗೆ ಫೋನ್ ಬಂದ ಮೇಲಂತೂ ಗಜಾನ್ನ ಅಂತ ಅವರೂ , ಅಣ್ಣ ಅಂತ ಇವರೂ ಮಾತಾಡಿಕೊಳ್ಳುವುದು ಸಾಮಾನ್ಯವೇ ಆಗಿತ್ತು. ಅದರಲ್ಲಿ ನಮಗೆ ಕೊಂಚ ಕಿರಿ ಕಿರಿ ಆಗುವ ವಿಚಾರ ಒಂದಿತ್ತು. ಅದೇನೆಂದರೆ ದೊಡ್ಡಪ್ಪನ ಮಗ ವಾಸಿಷ್ಟನಿಗೆ ಹೆಣ್ಣು ನೋಡುವ ಸಂದರ್ಭ , ಜಾತಕ ಆಗುತ್ತೋ ಇಲ್ಲವೋ ಎಂದು ಇಬ್ಬರೂ ಮಾತಾಡಿಕೊಳ್ಳುವ ವಿಚಾರ.
ಬೇಗ ಮದುವೆ ಮಾಡದೆ ಇದೆಂತ ಜಾತಕದ ಚರ್ಚೆ ಅಂತ ನಮಗೆ ಅನ್ನಿಸುತ್ತಿತ್ತು. ಹವ್ಯಕರಲ್ಲಿ ಇರುವ ಮದುವೆ ಕುರಿತಾದ ಸಮಸ್ಯೆ ಗೊತ್ತಿರುವವರಿಗೆ ನಮಗ್ಯಾಕೆ ಹಾಗೆ ಅನ್ನಿಸುತ್ತಿತ್ತು ಎಂದು ಗೊತ್ತಾಗುತ್ತದೆ, ಇರಲಿ.
ಈ ಜ್ಯೋತಿಷ್ಯದ ಕುರಿತು ಒಲವು ಅಣ್ಣನಿಗೆ ಹೇಗೆ ಅಂಟಿಕೊಂಡಿತೊ ಗೊತ್ತಿಲ್ಲ. ಆದರೆ ಸಾಕಷ್ಟು ಪುಸ್ತಕಗಳನ್ನು ತಂದುಕೊಂಡು ಸ್ವಯಮಾಚಾರ್ಯರಾಗಿ ಬಹಳ ವರ್ಷಗಳಿಂದ ಅಧ್ಯಯನ , ಈಗೆ ಕೆಲ ದಿವಸಗಳಿಂದ ಅಧ್ಯಾಪನವನ್ನೂ ನಡೆಸುತ್ತಿರುವುದಂತೂ ನಿಜ. ಜ್ಯೋತಿಷ್ಯದ ತಿಳುವಳಿಕೆಯ ದಸೆಯಿಂದ ಅಣ್ಣನಿಗೆ ಆಕಾಶ ಜ್ಞಾನ ಗ್ರಹ ಗತಿಗಳ ಕುರಿತಾದ ತಿಳುವಳಿಕೆ ಚೆನ್ನಾಗಿ ಇದೆ. ಆಕಾಶವನ್ನು ನೋಡದೆಯೂ ಯಾವ ಗ್ರಹ ಎಲ್ಲಿದೆ ಎಂದು ಅವರು ಹೇಳುತ್ತಿದರು. ನಾವು ಚಿಕ್ಕವರಾಗಿದ್ದಾಗ ಎಂಬಿಆರ್ ಕಾಲೇಜಿನ ತಾರಸಿಯ ಮೇಲೆ ಕರೆದೊಯ್ದು , ಗ್ರಹಗಳ ,ನಕ್ಷತ್ರಗಳ, ತಾರಾ ಪುಂಜಗಳ, ಆಕಾಶಗಂಗೆಯ ಪರಿಚಯ ಮಾಡಿಕೊಟ್ಟಿದ್ದರು. ಮಾಲಿನ್ಯದ ಸೋಂಕಿಲ್ಲದ ಅಂದಿನ ಸಿರಿಗೆರೆಯಲ್ಲಿ , ಎದ್ದು ಕಾಣುವ ಗುರು ಶುಕ್ರಗಳ ಜೊತೆಗೆ ಬುಧ , ಮಂಗಳ , ಶನಿ ಗ್ರಹಗಳನ್ನು ನೋಡಿದ್ದು , ಕೆಲವು ನಕ್ಷತ್ರ , ತಾರ ಪುಂಜಗಳನ್ನು ಗುರುತಿಸಲು ಕಲಿತದ್ದು ಇನ್ನೂ ಹಸಿರಾಗಿರುವ ನೆನಪಾಗಿದೆ. ಇದೆಲ್ಲಕ್ಕಿಂತ ಫಳ ಫಳನೆ ಹೊಳೆಯುವ ಆ ನಕ್ಷತ್ರ ಲೋಕದ ಅಡಿಯಲ್ಲಿ ಕುಳಿತು , ಮನುಶ್ಯ ಲೋಕವೆಷ್ಟು ಸಣ್ಣದೋ, ನಾವೆಷ್ಟು ಸಣ್ಣವರೋ ಎಂದು ಅರಿವಾಗುವ ಅನುಭವದ ಕ್ಷಣ ನನ್ನ ಪಾಲಿಗೆ ವಿಶೇಷವಾದದ್ದಾಗಿದೆ.
ಸಿರಿಗೆರೆಯ ಶಿವನಾಗಪ್ಪ ಡಾಕ್ಟರ್ ಅಣ್ಣನಿಗೆ ಅದು ಹೇಗೋ ಸ್ನೇಹಿತರು. ಹೋಮಿಯೋಪಥಿಯ ಕುರಿತಾದ ಆಸಕ್ತಿ ಬಹುಷಃ ಅಣ್ಣನಿಗೆ ಅವರ ಮೂಲಕ ಬಂದಿರಬೇಕು. ಜ್ಯೋತಿಷ್ಯದಂತೆಯೇ ಹೋಮಿಯೋ ಅಧ್ಯಯನವನ್ನೂ ಸ್ವಯಮಾಚಾರ್ಯರಾಗಿ ನಡೆಸಿ , ಮನೆ ಮಂದಿಯ ಮೇಲೆ ಔಷಧ ಪ್ರಯೋಗವನ್ನು ನಡೆಸಿಕೊಂಡು ಬಂದಿದ್ದಾರೆ. ಜ್ಯೋತಿಷ್ಯ ಜ್ಞಾನ ಮತ್ತು ಹೋಮಿಯೋಪಥಿ ಔಷಧಿಗಳ ಕಾರಣ ಅವರು ಬಹಳಷ್ಟು ಜನರ ಸ್ನೇಹ ಸಂಪಾದಿಸಿದರು ಎಂದರೆ ತಪ್ಪಾಗಿಲಿಕ್ಕಿಲ್ಲ.
ಇನ್ನು ಅವರ ಪಾಕ ಪ್ರಯೋಗಗಳನ್ನು ಕುರಿತು ಹೇಳುವುದು ಕಷ್ಟ. ಅವರ ಅಸಂಖ್ಯಾತ ಪಾಕ ಪ್ರಯೋಗಗಳಲ್ಲಿ ಕೆಲವು ಸುಖಾಂತ್ಯ ಕಂಡರೆ ಕೆಲವು ತಿಪ್ಪೆಗುಂಡಿಯ ಮುಖವನ್ನು ಕಂಡಿವೆ. ಉಪ್ಪಿನಕಾಯಿ , ಲೇಹ್ಯ , ಜಾಮ್ ಅಣ್ಣ ಚೆನ್ನಾಗಿ ಮಾಡುತ್ತಾರೆ. ಅದೇ ಅವರು ಮಾಡಿದ ತಿಪ್ಪೆ ಸೇರಿದ ಮೆಮ್ತ್ಯ ಹಾಕಿದ ಉದ್ದಿನ ಹಪ್ಪಳದ ಕಥೆ ದಂತಕಥೆಯೇ ಆಗಿದೆ. ನಾನು ನನ್ನ ತಮ್ಮ ದಾವಣಗೆರೆಯಲ್ಲಿ ಇಂಜಿನೀರಿಂಗ್ ಮಾಡುತ್ತಿದ್ದ ಸಮಯ ನಮ್ಮಿಬ್ಬರಿಗೆ ಅಂತ ಅಣ್ಣ ಅಡಿಗೆ ಸಾಮಾನನ್ನು ಸಿರಿಗೆರೆಯ ರೇಶನ್ ಅಂಗಡಿಯಿಂದ ಹೊತ್ತು ತರುತ್ತಿದ್ದರು. ಮತ್ತು ನಮ್ಮ ರೂಮಲ್ಲಿ ಉಳಿದಾಗ ಅಡಿಗೆಯನ್ನೂ ಮಾಡಿ ಹಾಕುತ್ತಿದ್ದರು. ನನ್ನ ತಮ್ಮನ ಸ್ನೇಹಿತ ರಾಜು ಅಂತ. ಅವನನ್ನು ಕಂಡರೆ ಅಣ್ಣನಿಗೆ ಇಷ್ಟ. ಅವನೊಮ್ಮೆ ಅಣ್ಣನ ತಂಬುಳಿಯನ್ನು ಹೊಗಳಿದ. ಸರಿ ಅವನು ಬಂದಾಗಲೆಲ್ಲ ಇವರು ತಮ್ಮ ತಂಬುಳಿಯನ್ನು ಅದರ ಸತ್ವಗಳನ್ನು ಅದರ ಓಷಧೀಯ ಗುಣಗಳನ್ನು ವರ್ಣಿಸಿ ಕುಡಿಯಲು ಕೊಡುವುದು ನಡೆಯಿತು. ಪರಿಣಾಮದಲ್ಲಿ ಅವನು ವರ್ಧಮಾನ ನಿಮ್ಮಣ್ಣ ಇದ್ದಾರೇನೋ ಅಂತ ಕೇಳಿ ಕೇಳಿ ಬರುವಂತಾಯಿತು.
ಕನ್ನಡ ಪ್ರಾಧ್ಯಾಪಕರಾಗಿದ್ದ ಅಣ್ಣನಿಗೆ ಕಾವ್ಯ ಶಕ್ತಿ ದೇವರು ಕೊಟ್ಟ ವರ. ಯಾರಿಗೂ ಅರ್ಥವಾಗದ ಹಾಗೆ ಕವನ ಬರೆಯುತ್ತೀಯೆಂದು ದೂಷಿಸಿದರೂ ಅವರ ರೂಪಕಗಳು ನಮ್ಮ ಕಣ್ಣೆದುರಿಗೆ ಕುಣಿದು ತೆರೆಯುತ್ತಿದ್ದುದು ಒಂದು ವಿಸ್ಮಯ ಪ್ರಪಂಚ. ಅವರ ಕಾವ್ಯಾರ್ಥಗಳದ್ದು ,ವ್ಯಾಖ್ಯಾನಗಳದ್ದು ಒಂದು ಸುಂದರ ರಸ ಪ್ರಪಂಚ. ಅವರ ಲೇಖನಗಳಿಗೆ, ಕವನಗಳಿಗಿದ್ದ ರಚನಾ ಶಕ್ತಿ ಮತ್ತು ರೂಪಕಗಳ ಗಾಢ ದೀಪ್ತಿ ನನಗೆ ಬಹಳ ಇಷ್ಟ. ಹೊಳಲ್ಕೆರೆ ಯಲ್ಲಿ ಅಮ್ಮ ಪ್ರಾಂಶುಪಾಲರಗಿದ್ದು ಮಕ್ಕಳಾದ ನಾವೆಲ್ಲ (ನಾನು, ವರ್ಧಮಾನ , ಪ್ರಕೃತಿ) ದೂರವಿದ್ದ ಸಂದರ್ಭ ಅವರು ರಸ ರಾಮಾಯಣವನ್ನು ಬರೆದರು. ಆ ಕಾವ್ಯವು ಮೈಸೂರಿನಲ್ಲಿ ಜನ ಪ್ರೀತಿಯನ್ನು , ಹಲವರ ಸ್ನೇಹ ಸೌಭಾಗ್ಯವನ್ನು ಅಣ್ಣ ಅಮ್ಮನಿಗೆ ದೊರೆಕಿಸಿಕೊಟ್ಟಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅಣ್ಣ ಇಷ್ಟೆಲ್ಲಾ ಬದುಕನ್ನು ಬದುಕುತ್ತಿದ್ದಾಗ , ನನ್ನ ಅಮ್ಮ ಹಿಂದೆ ಬಿದ್ದವರಲ್ಲ. ಎಲ್ಲದಕ್ಕೂ ಅವರಿಗೂ ಮುಂದಾಗಿ , ಜೊತೆಯಾಗಿ , ಸಮ ಸಮಕ್ಕೆ ಹೆಗಲುಗೊಟ್ಟವರು. ಮೊದ ಮೊದಲು ವಿರೋಧಿಸಿದರೂ ತಾವೂ ಜ್ಯೋತಿಷ್ಯವನ್ನು , ಹೋಮಿಯೋಪಥಿಯನ್ನು ಅಣ್ಣನಿಗಾಗಿ ತಿಳಿದುಕೊಂಡರು. ಅವರ ಕಾವ್ಯವನ್ನೆಲ್ಲಾ ಕಂಪ್ಯೂಟರ್ ಬರಹದ ರೂಪಕ್ಕೆ ಇಳಿಸಿಕೊಟ್ಟರು. ಅವರ ವ್ಯಕ್ತಿತ್ವದ ಗಟ್ಟಿತನವನ್ನು ವರ್ಣಿಸಲು ನನಗೇ ಸಾಮರ್ಥ್ಯವಿದೆಯೋ ಇಲ್ಲವೋ!!.
ಇನ್ನು ನಮ್ಮಪ್ಪ ಅಮ್ಮನ ಜೊತೆ ನನಗಿರುವ ಜಗಳಗಳ, ವಿರೊಧಗಳ ಕುರಿತಾಗಿಯೂ ಹೇಳಬೇಕು. ಅವರು ದೇವಸ್ಥಾನಗಳಲ್ಲಿ , ಮತ್ತು ಬಂದ ಜನಗಳ ಮುಂದೆಲ್ಲಾ ಹಾಡು ಹಾಡು ಎನ್ನುತ್ತಿದ್ದುದು ನನಗೂ ನನ್ನ ತಮ್ಮನಿಗೂ ಆಗುತ್ತಿರಲಿಲ್ಲ. ದೇವರು ಎಲ್ಲಾ ಕಡೆ ಇದ್ದಾನೆ ಆದುದರಿಂದ ಅಲ್ಲೇ ಹಾಡಬೇಕಾಗಿಲ್ಲ ಎಂದೋ , ಬಂದ ಜನರಿಗೆಲ್ಲಾ ನಮ್ಮ ಹಾಡು ಕೇಳುವ ಸಂಕಷ್ಟ ಯಾಕೆ ಕೊಡಬೇಕು ಎಂದೋ ವಾದಿಸುತ್ತಿದ್ದೆವು. ಯಾವ ಕೆಲಸಕ್ಕೂ ಅವರು ಅಮೃತಸಿದ್ಧಿ ಘಳಿಗೆಗಳಿಗೆ ಕಾದು ನೋಡಿ ಮಾಡುವ ಕುರಿತಾಗಿ ನಮ್ಮ ವಿರೋಧ ಇದ್ದೇ ಇತ್ತು. ಅವರ ಅರ್ಥವಾಗದ ಕವನಗಳನ್ನು ಹಾಸ್ಯ ಮಾಡಿ ಪ್ರತಿ ಕವನ ಗಳನ್ನು ಬರೆದದ್ದು ಇದೆ. ಅವರ ಸ್ತ್ರೀವಾದದ ಕುರಿತಾಗಿಯಂತೂ ನನ್ನ ಬಲವಾದ ವಿರೋಧವೆ ಇತ್ತು. ಆಗಾಗ ನನಗೆ ಅಮ್ಮನಿಗೆ , ಕೂದಲು ಕತ್ತರಿಸಿಕೊಳ್ಳುವಂತೆಯೂ ಮಾಂಗಲ್ಯವನ್ನು ತೆಗೆಯುವಂತೆಯೂ ಹಾಗೆ ಪ್ರಗತಿಪರರಾದರೆ ತಮ್ಮ ಅಭ್ಯಂತರ ವಿಲ್ಲವೆಂದು ಹೇಳುತ್ತಿದ್ದರು. ನಾನು ಅಣ್ಣ ನೀನೇ ಮಾಗಲ್ಯ ಕಟ್ಟಿಕೋ, ನೀನೇ ಆಭರಣ ಹಾಕಿಕೋ , ನೀನೇ ಉದ್ದ ಕೂದಲು ಬಿಡು ಎಂದರೆ ಅಮ್ಮ ನಿಮ್ಮ ಮಾತನ್ನು ಕೇಳಿ ನಾವು ಅದರಂತೆ ನಡೆದರೆ ಅದೆಂಥ ಸ್ತ್ರೀವಾದವೆಂದು ಹೇಳುತ್ತಿದ್ದರು. ಇನ್ನು ತಮ್ಮ ಪ್ರಯೋಗ ಪರಾಕ್ರಮಗಳನ್ನು ತಾವೇ ಹೇಳಿಕೊಳ್ಳುವ ಕುರಿತಾಗಿಯೂ ನಮ್ಮ ತಕರೀರು ಇದ್ದೇ ಇತ್ತು ಮತ್ತು ಇದೆ. ಇಷ್ಟಾಗಿಯೂ ಅಣ್ಣ ನಮ್ಮ ಬಲವಾದ ಯಾವ ಟೀಕೆಗಳಿಗೆ ಸಿಟ್ಟು ಮಾಡಿದವರಲ್ಲ. ತಮ್ಮ ಅಭಿಪ್ರಾಯಗಳನ್ನು ಖಡಾ ಖಂಡಿತವಾಗಿ ನಮ್ಮ ಮೇಲೆ ಹೇರಿದವರಲ್ಲ. ಅವರ ಪ್ರಿಯ ಸೊಸೆ ಲಕ್ಷ್ಮಿ , ಅವರಂತೆಯೇ ದೈವ ಶ್ರದ್ಧೆಯುಳ್ಳ ಅಳಿಯ ಅನಂತ, ಕವಿ ಹೃದಯಿ ಎಂದು ಅವರು ಭಾವಿಸಿರುವ ಅಳಿಯ ಪ್ರಶಾಂತ , ಅವರ ಪ್ರೀತಿಯ ೫ ಜನ ನಾದಿನಿಯರು, ಭಾವಂದಿರು ,ಅವರ ಪ್ರೀತಿಯ ೫ ಜನ ತಮ್ಮಂದಿರು - ನಾದಿನಿಯರು, ತಂಗಿ ಮಾಹಾದೇವಿ ಭಾವ ಶೀಪಾದ ಭಟ್ಟರು, ಇವರೆಲ್ಲರ ಮಕ್ಕಳು ಮೊಮ್ಮಕ್ಕಳು ಹಾಗೂ ನಿತ್ಯ ಸಾಂಗತ್ಯದಲ್ಲಿ ನನ್ನ ಅತ್ತೆ ಮಾವ , ಶ್ರೀಮತಿ ಲಕ್ಶ್ಮಿ ಮತ್ತು ಶ್ರೀ ರಾಮಂದ್ರರಾಯರು , ಬಂಧು ಬಾಂಧವರು, ಅವರ ಕಾವ್ಯ - ಸಾಹಿತ್ಯಾಸಕ್ತ ಬಳಗಗಳ ಜೊತೆ ಅವರ ಸುಖ ಸಂವಹನ , ಸಂವಾದ ನಿತ್ಯ ನೂತನವಾಗಿ ನಿರಂತರವಾಗಿ ಸಾಗುತ್ತಿರಲಿ ಎಂಬುದಷ್ಟೆ ನನ್ನ ಹಾರೈಕೆ. ಅಂತೆಯೇ ೮೦ ದಾಟುತ್ತಿರುವ ಅಣ್ಣ ನಿಗೆ ಹಾಗೂ ೭೦ ರ ಹೊಸ್ತಿಲಲ್ಲಿರುವ ಅಮ್ಮನಿಗೆ ದೇವರು ಸಕಲ ರೀತಿಯಲ್ಲಿ ಸೌಭಾಗ್ಯಗಳನ್ನು ಕರುಣಿಸಿ ಆಯು ಆಯೋಗ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. 🙏🙏🙏
ಯಶಸ್ವಿನಿ ಹೆಗಡೆ
Comments