ಪ್ರಾಣ ಉಳಿಸಿದ ಪ್ರತಿಭೆ [ ಮಕ್ಕಳ ಕತೆ]
- ಆಲೋಚನೆ
- Aug 12, 2020
- 1 min read
Updated: Aug 14, 2020
ಭಾರ್ಗವ ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲಕ. ಅವನ ಊರು ಮಲೆನಾಡಿನ ಮಡಿಲಲ್ಲಿರುವ ಒಂದು ಸುಂದರ ಹಳ್ಳಿ. ಅವನ ಮನೆಯ ಸುತ್ತ ಮುತ್ತ ಮುಗಿಲೆತ್ತರಕ್ಕೆ ಬೆಳೆದ ಮರಗಳು, ಜುಳು ಜುಳು ಎಂದು ಹರಿಯುವ ತೊರೆಗಳು, ಪ್ರಾಣಿಗಳ ಘರ್ಜನೆ, ಹಕ್ಕಿಗಳ ಚಿಲಿಪಿಲಿ ಕಲರವ , ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿತ್ತು.
ಭಾರ್ಗವನು ಕಾಡಿನ ಪರಿಸರದಲ್ಲಿ ವಾಸ ಮಾಡುತ್ತಿರುವುದರಿಂದ ಸಹಜವಾಗಿಯೇ ಹಕ್ಕಿಗಳ ಕೂಗು, ಪ್ರಾಣಿಗಳ ಕೂಗನ್ನು ಅನುಕರಿಸಲು ಪ್ರಯತ್ನಿಸಿದನು. ಸತತ ಪ್ರಯತ್ನದಿಂದ ಅವನು ಹಲವಾರು ಪ್ರಾಣಿಗಳು, ಪಕ್ಷಿಗಳು ಕೂಗುವಂತೆ ಕೂಗಲು ಕಲಿತನು. ಅವನು ಕೂಗಿದರೆ ಸಿಂಹವೇ ಕೂಗುತ್ತಿದೆ, ಹುಲಿಯೇ ಕೂಗುತ್ತಿದೆ , ಎಂದು ಅನಿಸುತ್ತಿತ್ತು. ಮೊದ ಮೊದಲು ಅವನು ತನ್ನ ಈ ಪ್ರತಿಭೆಯನ್ನು ಶಾಲಾ ಮಟ್ಟದಲ್ಲಿ ಸ್ನೇಹಿತರ ಎದುರಿಗೆ ಪ್ರದರ್ಶಿಸಿದನು. ಅವರಿಂದ ಉತ್ತಮ ಪ್ರೋತ್ಸಾಹ ದೊರಕಿದ ಮೇಲೆ ಅವನು ತನ್ನ ಪ್ರತಿಭೆಯನ್ನು ಪ್ರತಿಭಾ ಕಾರಂಜಿಯ, ಮಿಮಿಕ್ರಿ ಸ್ಪರ್ಧೆಯಲ್ಲಿ ಪರೀಕ್ಷಿಸಲು ಯೋಚಿಸಿದ. ಇದಕ್ಕೆ ಅವನ ಶಿಕ್ಷಕರಿಂದ, ಗೆಳೆಯರಿಂದ ಉತ್ತಮ ಪ್ರೋತ್ಸಾಹ ದೊರಕಿತು. ಅವನು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಂತರ, ಇನ್ನೂ ಹೆಚ್ಚಿನ ಅಭ್ಯಾಸ ನಡೆಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಸಿದ್ಧನಾದನು. ಎಲ್ಲರ ಹಾರೈಕೆಯಂತೆ ಅಲ್ಲಿಯೂ ಪ್ರಥಮನಾಗಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಎಲ್ಲರಿಂದ ಮೆಚ್ಚುಗೆ ಗಳಿಸಿದನು.
ಹೀಗೆಯೇ ಕೆಲವು ದಿನಗಳು ಕಳೆದ ಮೇಲೆ ಭಾರ್ಗವನು ಒಂದು ದಿನ ಸಾಯಂಕಾಲ ತನ್ನ ತಂದೆಯ ಜೊತೆ ಕಾಡಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದನು. ಅದು ನಿರ್ಜನವಾದ ಪ್ರದೇಶವಾಗಿತ್ತು. ಸುತ್ತಮುತ್ತ ಪ್ರಾಣಿಗಳ ಕೂಗು ಕೇಳಿ ಬರುತ್ತಿತ್ತು. ನಿಧಾನವಾಗಿ ಕತ್ತಲೆ ಆವರಿಸತೊಡಗಿತು. ಇವರಿಬ್ಬರೂ ಭಯದಿಂದಲೇ ಸಾಗುತ್ತಿದ್ದರು. ದೂರದಲ್ಲಿ ಕರಡಿಯೊಂದು ಇವರ ಕಡೆಗೇ ಬರುವುದು ಕಾಣಿಸಿತು.ಇಬ್ಬರೂ ಪ್ರಾಣಭಯದಿಂದ ನಡುಗತೊಡಗಿದರು. ಒಂದು ಕ್ಷಣ ಏನು ಮಾಡಬೇಕೆಂದು ಹೊಳೆಯಲಿಲ್ಲ. ತಕ್ಷಣ ಭಾರ್ಗವ ತಂದೆಯನ್ನು ಕರೆದುಕೊಂಡು ಮರದ ಮರೆಯಲ್ಲಿ ನಿಂತ. ನಂತರ ಸಿಂಹ ಘರ್ಜಿಸಿದಂತೆ ದೊಡ್ಡದಾಗಿ ಘರ್ಜಿಸಿದನು. ನಿಜವಾಗಿಯೂ ಸಿಂಹವೇ ಕೂಗುತ್ತದೆ ಎಂದುಕೊಂಡು ಕರಡಿಯು ಹೆದರಿ, ಬಂದ ದಾರಿಯಲ್ಲಿಯೇ ಹಿಂತಿರುಗಿ ಓಡಿಹೋಯಿತು. ನಂತರ ಅಪ್ಪ ಮಗ ಸುಧಾರಿಸಿಕೊಂಡು ಕ್ಷೇಮವಾಗಿ ಮನೆ ತಲುಪಿದರು. ತಂದೆಯು ಮಗನ ಪ್ರತಿಭೆಯನ್ನು ಕೊಂಡಾಡಿದನು. ಊರ ತುಂಬಾ ಭಾರ್ಗವನ ಸಾಹಸ ಕತೆಯ ಸುದ್ದಿ ಹರಡಿತು. ಎಲ್ಲರೂ ಅವನನ್ನು ಅಭಿನಂದಿಸಿದರು.
ನೀತಿ: ಕಷ್ಟಕಾಲದಲ್ಲಿ ನೆರವಾಗುವ ಪ್ರತಿಭೆಯೆ ನಿಜವಾದ ಪ್ರತಿಭೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿಯ ಬಾಲಚಂದ್ರ ಆರ್.ಪಟಗಾರ ಅವರು ತಮ್ಮ ವ್ಯಂಗ್ಯ ಚಿತ್ರ,ಹನಿಗವನ,ಮಕ್ಕಳ ಕವನ ಮತ್ತು ಕತೆಗಳಿಂದ ಚಿರ ಪರಿಚಿತರು. ವೃತ್ತಿಯಿಂದ ಶಿಕ್ಷಕರಾಗಿರುವ ಅವರು ಪ್ರವೃತ್ತಿಯಿಂದ ಕವಿ ಮತ್ತು ಕಲಾವಿದರು.ಅವರು ಬರೆದ ಮಕ್ಕಳ ಕತೆ ನಿಮ್ಮ ಓದಿಗಾಗಿ. ಸಂಪಾದಕ.
Comments