"ಪುರಾಣಮಿತ್ಯೇವ ನ ಸಾಧು ಸರ್ವಮ್"
*************************
(ವಿವಾದಕ್ಕಲ್ಲ, , ವಿಷಯಜ್ಞಾನಕ್ಕಾಗಿ)
ಪುರಾಣ ಪುಣ್ಯಕಥೆಗಳು ಎಂದಾಕ್ಷಣ ಧಾರ್ಮಿಕ ಮನೋಭಾವದ ಜನ ಭಕ್ತಿಶ್ರದ್ಧೆಗಳಿಂದ ನತಮಸ್ತಕರಾಗುತ್ತಾರೆ. ಪುರಾಣಕಥೆಗಳು ಸೃಷ್ಟಿಯಾದ ಉದ್ದೇಶವೂ ಅದೇ. ಆದರೆ ಹಿರಿಯರೇ ಹೇಳಿದಂತೆ ಅವೆಲ್ಲವನ್ನೂ ಎಷ್ಟು ನಂಬಬೇಕು, ಎಷ್ಟು ಒಪ್ಪಿಕೊಳ್ಳಬೇಕು , ಅವುಗಳಲ್ಲಿ ಎಷ್ಟು ಸತ್ಯ, ಎಷ್ಟು ಮಿಥ್ಯ ಎಂದೆಲ್ಲ ಯೋಚನೆ ಮಾಡಬೇಕಾದವರು ನಾವೇ. ಎಲ್ಲವನ್ನೂ ಕುರುಡಾಗಿ ಒಪ್ಪಿಕೊಳ್ಳುವುದು, ಅಂಧಾನುಸರಣೆ ಮಾಡುವದು ವಿವೇಕವಂತರ ಲಕ್ಷಣ ಅಲ್ಲ.
ವೇದೋಪನಿಷತ್ತುಗಳು ಜ್ಞಾನ ಭಾಂಡಾರವಿದ್ದಂತೆ. ಅವುಗಳನ್ನು ಓದುವದು ಜ್ಞಾನಾರ್ಜನೆಗಾಗಿ. ಪುರಾಣಗಳನ್ನು ಓದುವದು ಪುಣ್ಯಸಂಪಾದನೆಗಾಗಿ. ಪಾಪಪುಣ್ಯ, ಧರ್ಮ ಅಧರ್ಮ, ನೀತಿ ಅನೀತಿ, ಸ್ವರ್ಗ ನರಕ, ದೇವರುದಿಂಡಿರು ಇವುಗಳಲ್ಲಿ ನಂಬಿಕೆ ಹುಟ್ಟಿಸುವದೇ ಪುರಾಣ ಪುಣ್ಯಕಥೆಗಳ ಮೂಲ ಉದ್ದೇಶ. ಉದ್ದೇಶ ಒಳ್ಳೆಯದೇ. ಸಮಾಜಕ್ಕೆ ನೈತಿಕ ಬೇಲಿಯನ್ನು ಕಟ್ಟಿ ಜನರನ್ನು ಪುಣ್ಯಕಾರ್ಯದಲ್ಲಿ ತೊಡಗಿಸುವದು ನಮ್ಮ ಹಿರಿಯರ ಆಶಯ. ಆದರೆ ಅವನ್ನೆಲ್ಲ ಸಾರಾಸಾರ ವಿವೇಚನೆಯಿಲ್ಲದೆ ಒಪ್ಪಿಕೊಂಡು , ಅವೆಲ್ಲ ಸತ್ಯ ಎಂದುಕೊಳ್ಳುವದು ಸರಿಯಲ್ಲ.
ವೇದಗಳು ಪವಿತ್ರ, ವೇದವಾಕ್ಯ ಅನುಲ್ಲಂಘನೀಯ ಎಂದೆಲ್ಲ ಹೇಳುವ ನಾವೇ ಎಷ್ಟರಮಟ್ಟಿಗೆ ವೇದದಲ್ಲಿ ಹೇಳಲಾದದ್ದನ್ನು ಪಾಲಿಸುತ್ತೇವೆ ಎನ್ನುವದು ಪ್ರಶ್ನಾರ್ಹ. ವೇದೋತ್ತರ ಕಾಲದಲ್ಲಿ ನಿರ್ಮಾಣವಾದ ಸಾಹಿತ್ಯವನ್ನು ನಾವು ಸರಿಯಾಗಿ ಗಮನಿಸಿದರೆ ವೇದಗಳಲ್ಲಿ ಹೇಳಲಾದದ್ದನ್ನೆಲ್ಲ ಅಲಕ್ಷಿಸಿದ್ದು, ಭಿನ್ನವಾದ ಸಾಮಾಜಿಕ ಆಚರಣೆಗಳನ್ನು ಅನುಸರಿಸಿದ್ದು ಕಂಡುಬರುತ್ತದೆ. ಇದು ವೇದಗಳಿಗೆ ತೋರಿಸುವ ಗೌರವವೇ? ವೇದಗಳಲ್ಲಿ ಎಲ್ಲ ರೀತಿಯಿಂದ ಪೂಜಾರ್ಹನಾದ ಇಂದ್ರನ ಕುರಿತಾಗಿಯೇ ಬೇಕಾದಷ್ಟು ಸ್ತುತಿಮಂತ್ರಗಳಿವೆ. ವರುಣ, ವಾಯು, ಅಗ್ನಿ ಮೊದಲಾದವರಿಗೂ ಬಹಳ ಮಹತ್ವ ನೀಡಲಾಗಿದೆ. ಅದು ಸರಿಯೂ ಹೌದು. ಈ ಸೃಷ್ಟಿಯ ಮೂಲ ಶಕ್ತಿಗಳವು.
ಆದರೆ ಮುಂದಿನ ಕಾಲಘಟ್ಟದಲ್ಲಿ ಇಂದ್ರಾದಿಗಳ ಮಹತ್ವ ಕಡಿಮೆ ಮಾಡಲಾಯಿತು. ಪುರಾಣ ಕಥೆಗಳಲ್ಲಂತೂ ಇಂದ್ರ ವಿಷಯಲಂಪಟನಾಗಿ, ಅತಿಕಾಮಿಯಾಗಿ, ಅವಿವೇಕಿಯಾಗಿ , ಹೇಡಿಯಾಗಿ ಚಿತ್ರಿಸಲ್ಪಟ್ಟದ್ದನ್ನು ಕಾಣುತ್ತೇವೆ. ರಾಮಾಯಣದ ಅಹಲ್ಯೆಯ ಪ್ರಕರಣಸಹಿತ ಅನೇಕ ಪ್ರಕರಣಗಳಲ್ಲಿ ದೇವೇಂದ್ರ ದೇವತೆಗಳ ರಾಜನಾಗಲು ಎಷ್ಟರ ಮಟ್ಟಿಗೆ ಯೋಗ್ಯ ಎಂದು ಜನರಿಗೆ ಸಂದೇಹವುಂಟಾಗುವಷ್ಟು ಕೀಳಾಗಿ ಅವನನ್ನು ಚಿತ್ರಿಸಲಾಯಿತು. ಯಾಕೆ?
ಯಾಕೆಂದರೆ ಆಗ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಮಹತ್ವ ನೀಡುವ ಕಾಲ ಬಂದಿತ್ತು. ಬ್ರಹ್ಮಕಪಾಲದ ಕತೆಯೊಂದಿಗೆ ಬ್ರಹ್ಮನೂ ಪೂಜಾರ್ಹನಾಗಿ ಉಳಿಯಲಿಲ್ಲ. ಆಗ ವಿಷ್ಣು ಶಿವ ಇವರಲ್ಲಿ ಮೇಲಾಟ ಸುರುವಾಯಿತು. ವಿಷ್ಣುವನ್ನು ಮೇಲಾಗಿಸಲು ವಿಷ್ಣು ಭಕ್ತರು ಒಂದಿಷ್ಟು ಕತೆಗಳನ್ನು ಕಟ್ಟಿದರೆ , ಶಿವನನ್ನು ಮೇಲಾಗಿಸಲು ಶಿವಭಕ್ತರು ಬೇರೆ ಕತೆ ಕಟ್ಟಿದರು. ವಿಷ್ಣು ಶಿವನನ್ನು ಪೂಜೆ ಮಾಡಿದ ಅಂದರೆ ವಿಷ್ಣುವಿಗಿಂತ ಶಿವ ಮೇಲಾದಂತಾಯಿತಲ್ಲವೇ? ಹಾಗೇ ಶಿವನಿಗಿಂತ ವಿಷ್ಣುವನ್ನು ಶ್ರೇಷ್ಠ ಎಂದು ಬಿಂಬಿಸಲೂ ಕತೆಗಳು ಹುಟ್ಟಿಕೊಂಡವು. ಇದು ಎಷ್ಟು ಅಸಂಬದ್ಧ ಎನ್ನುವದನ್ನು ಸ್ವಲ್ಪ ಯೋಚಿಸಿ.
ನಾವೇ ನಂಬಿಕೊಂಡು ಬಂದ ಹಾಗೆ ಬ್ರಹ್ಮ , ವಿಷ್ಣು, ಮಹೇಶ್ವರರದು ಸೃಷ್ಟಿ ,ಸ್ಥಿತಿ ಲಯಗಳ ಸಮಾನ ಜವಾಬ್ದಾರಿ. ಅಲ್ಲಿ ಮೇಲು ಕೀಳು ಎನ್ನುವದಿಲ್ಲ. ಮೂವರದೂ ಒಂದೇ ಗ್ರೇಡು. ಯಾರನ್ನು ಯಾರೂ ಪೂಜೆ ಮಾಡುವ ಪ್ರಶ್ನೆ ಬರುವದೇಇಲ್ಲ. ಇವೆಲ್ಲ ಅವರವರ ಭಕ್ತರು ಸೃಷ್ಟಿಸಿಕೊಂಡ ಕಟ್ಟುಕತೆ.
ಅದೇನೇ ಇರಲಿ, ಪುರಾಣಗಳ ಕತೆಯಲ್ಲಿ ಯಾವುದು / ಎಷ್ಟು ಸತ್ಯ , ಎಷ್ಟು ಮಿಥ್ಯ ಎನ್ನುವದರ ಬಗ್ಗೆ ಯೋಚಿಸದೇ ಅವನ್ನು ಸಾರಾಸಗಟಾಗಿ ಒಪ್ಪಿಕೊಳ್ಳುವದು ಎಷ್ಟರಮಟ್ಟಿಗೆ ಸರಿ? ಅನೇಕ ಅಸಂಬದ್ಧ, ನಂಬಲಾಗದ ಅಂಶಗಳು ಈ ಕತೆಗಳಲ್ಲಿವೆಯೆನ್ನುವದನ್ನು ಅಲ್ಲಗಳೆಯಲಾದೀತೇ? ಪುರಾಣಗಳು ಎಂದತಕ್ಷಣ ಭಕ್ತಿಯಿಂದ ಕೈಮುಗಿದು ಕಣ್ಣು ಮುಚ್ಚಿಒಪ್ಪಿಕೊಳ್ಳಬೇಕೇ? ಅಥವಾ ಅವುಗಳ ಸತ್ಯಾಸತ್ಯತೆಯ ಬಗ್ಗೆ ಯೋಚಿಸಬೇಕೇ?
ನನ್ನ ವಿಚಾರಗಳು ಕೆಲವರಿಗೆ ಹಿಡಿಸಲಿಕ್ಕಿಲ್ಲ. ಪಥ್ಯವಾಗಲಿಕ್ಕಿಲ್ಲ. ಅರಗಲಿಕ್ಕಿಲ್ಲ. ಆದರೆ ನಾನು ವೇದೋಪನಿಷತ್ತು ಪುರಾಣಗಳನ್ನೆಲ್ಲ ಓದಿದ್ದು ಅವುಗಳನ್ನು ಕುರುಡಾಗಿ ನಂಬಿ ಅನುಸರಿಸಲಿಕ್ಕಲ್ಲ. ಜ್ಞಾನಾರ್ಜನೆಗಾಗಿ. ಯಾವುದನ್ನೇ ಆಗಲಿ, ಮಥನ ಮಾಡಿ ನನಗೆ ಪೂರ್ಣ ಮನವರಿಕೆಯಾದಾಗಲೇ ನಾನು ಅದನ್ನು ಒಪ್ಪಿಕೊಳ್ಳುವ ಅಭ್ಯಾಸವಿರಿಸಿಕೊಂಡವನು. ಹಿಂದೂ ಧರ್ಮದ ಹಲವು ಪರಂಪರಾಗತ ಆಚರಣೆಗಳ ವಿಷಯದಲ್ಲೂ ಅಷ್ಟೇ. ಅಜ್ಜ ಆಲದ ಮರ ನೆಟ್ಟಿದ್ದಾನೆಂಬ ಕಾರಣಕ್ಕೆ ನೇಣು ಹಾಕಿಕೊಳ್ಳುವವನಲ್ಲ. ವೇದೋಪನಿಷತ್ತುಗಳ ಬಗ್ಗೆ ನನಗೆ ಗೌರವವಿದೆ. ಸಾಮವೇದ ಅಥರ್ವವೇದ ಗಳನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಸಾಮವೇದ ಅನೇಕ ವಿಷಯಗಳ ಜ್ಞಾನವನ್ನು ನಮಗೆ ನೀಡುತ್ತದೆ. ಋಗ್ವೇದದಲ್ಲಿ ಹೇಳಲಾದ ಹಲವು ಸಾಮಾಜಿಕ ಸಂಗತಿಗಳು, ನೀತಿ ನಿಯಮಗಳನ್ನು ನಂತರದ ಅವಧಿಯಲ್ಲಿ ಬದಿಗೆ ಸರಿಸಲಾಗಿದೆ. ಅಲ್ಲಿ ಕಂಡುಬಂದಂತಹ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅಂದರೆ ನಿಜವಾದ ಜ್ಞಾನ ಅಡಗಿರುವದು ವೇದೋಪನಿಷತ್ತುಗಳಲ್ಲೇ. ವೇದೋತ್ತರ ಕಾಲದಲ್ಲಿ ಬದಲಾದ ಸಾಮಾಜಿಕ ವ್ಯವಸ್ಥೆ ಅನೇಕ ಅಪಸವ್ಯಗಳಿಂದ ಕೂಡಿದೆ. ಅದಕ್ಕೆ ತಕ್ಕಂತೆ ಸಾಹಿತ್ಯವೂ ರೂಪುಗೊಂಡಿದೆ.ಹಾಗಿದ್ದರೆ ನಾವೇಕೆ ವೇದವನ್ನು ಅಲಕ್ಷಿಸಿದ್ದು?
- ಎಲ್. ಎಸ್. ಶಾಸ್ತ್ರಿ
Comments