top of page

ಪ್ರೊ.ಜಗಜಂಪಿ- ಯುರೋಪ ಸಾಂಸ್ಕೃತಿಕ ವೈಭವ


ಡಾ. ಬಸವರಾಜ ಜಗಜಂಪಿಯವರು ಬರೆದ

ಯುರೋಪ್ ಪರಿಚಯ ನೀಡುವ ಕೃತಿ

*******************************

ಪ್ರವಾಸ ಬಹುತೇಕ ಎಲ್ಲರಿಗೂ ಪ್ರಿಯವೆ. ನಾನೂ ಪ್ರವಾಸಪ್ರಿಯನೆ. ವಿದೇಶ ಪ್ರವಾಸವನ್ನೂ ಮಾಡಿದ್ದೇನೆ. ಆದರೆ ಅವು ನಮ್ಮ ಏಶ್ಯಾದೊಳಗಿನವೆ. ಯುರೋಪ್ ಖಂಡದ ಪ್ರವಾಸ ನಮ್ಮಂಥವರ ಕೈಗೆ ನಿಲುಕದಂತಹದು. ಥೈಲ್ಯಾಂಡ್ , ಮಲೇಶ್ಯಾ ಮತ್ತು ಇಂಡೋನೇಷ್ಯಾ ದೇಶದ ಬಾಲಿಗೆ ಹೋಗಿ ಬಂದಿರುವ ನಾನು ಈಗಾಗಲೆ ಥೈಲ್ಯಾಂಡ್ ಬಗ್ಗೆ ಒಂದು ಅಧ್ಯಯನ ಕೃತಿ ಬರೆದಿದ್ದೇನೆ. ಅದೀಗ ಮರುಮುದ್ರಣಕ್ಕೆ ಹೋಗುತ್ತಿದೆ.

ಪ್ರವಾಸದಂತೆಯೇ ಪ್ರವಾಸ ಕೃತಿಗಳೂ ನನಗೆ ಬಹಳ ಇಷ್ಟವಾದವು. ಕಾರಂತರ " ಅಪೂರ್ವ ಪಶ್ಚಿಮ" ಅನೇಕ ಸಲ ಓದಿದ್ದೇನೆ. ಹಾಗೆಯೇ ಅಮೆರಿಕೆಯ ಕುರಿತಾದ ಕೃಷ್ಣಾನಂದ ಕಾಮತ, ಗೋರೂರು, ಮೋಹನ್ ಅವರ ಕ್ಯೂಬಾ ಸಹಿತ ನೂರಾರು ಪ್ರವಾಸ ಕಥನಗಳನ್ನು ಓದಿ ನಾನೇ ನೋಡಿದಷ್ಟು ಖುಷಿ ಪಟ್ಟಿದ್ದೇನೆ. ಕೆಲವರ ಪ್ರವಾಸ ಕೃತಿಗಳಿಗೆ ಮುನ್ನುಡಿಯನ್ನೂ ಬರೆದಿದ್ದುಂಟು.

ಈಗ ನನ್ನ ಕೈಲಿರುವುದು ಬಹುಶ್ರುತ ವಿದ್ವಾಂಸ, ವಾಗ್ಮಿ ಡಾ. ಬಸವರಾಜ ಜಗಜಂಪಿ ಅವರ " ಯುರೋಪ್ ಸಾಂಸ್ಕೃತಿಕ ಸೌರಭ" . ಪ್ರಬುದ್ಧ ವ್ಯಕ್ತಿತ್ವದ ಜಗಜಂಪಿಯವರ ಬರೆಹಗಳೂ , ಭಾಷಣಗಳೂ ಅಷ್ಟೇ ಪ್ರಬುದ್ಧವಾದವು. ಎಲ್ಲದರಲ್ಲೂ ಒಂದು ಶಿಸ್ತು , ಅಚ್ಚುಕಟ್ಟುತನ ಇರಿಸಿಕೊಂಡಿರುವ ಜಗಜಂಪಿಯವರಲ್ಲಿರುವ ಸಾಂಸ್ಕೃತಿಕ ಅಭಿರುಚಿಗೆ ತಕ್ಕಂತೆ ಈ ಪ್ರವಾಸಾನುಭವ ಕೃತಿಯೂ ರೂಪುಗೊಂಡಿದೆ. ಹನ್ನೆರಡು ದಿವಸಗಳ ಯುರೋಪ್ ಪ್ರವಾಸಕ್ಕೆ ಹೊರಡುವ ಮೊದಲೇ ಅವರು ಆ ದೇಶಗಳ ಇತಿಹಾಸ, ಜನಜೀವನ ಸಂಸ್ಕೃತಿಗಳ ಕುರಿತು ಪೂರ್ವಾಭ್ಯಾಸದೊಂದಿಗೆ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದರು.

ಪ್ರವಾಸಿಗರಲ್ಲಿ ಸಾಮಾನ್ಯವಾಗಿ ಎರಡು ವಿಧದ ಜನ ಇರುತ್ತಾರೆ. ಕೇವಲ ರಂಜನೆಗಾಗಿ ಪ್ರವಾಸ ಮಾಡುವವರು ಮತ್ತು ಅಧ್ಯಯನದ ದೃಷ್ಟಿಯಿಟ್ಟು ಮಾಡುವವರು. ನಾನು ಥೈಲ್ಯಾಂಡ್ ಕುರಿತು ಬರೆದ ಅಧ್ಯಯನ ಕೃತಿ ಕುರಿತು ಡಾ. ಜಗಜಂಪಿಯವರೆ ಒಂದು ಉತ್ತಮ ಪರಿಚಯ ಲೇಖನ ಬರೆದಿದ್ದಾರೆ. ಹನ್ನೆರಡು ದಿನಗಳಲ್ಲಿ ಹತ್ತು ದೇಶಗಳನ್ನು ನೋಡುವದೆಂದರೆ ಸ್ವಲ್ಪ ಒತ್ತಡದ ವಿಷಯವೇ ಆದರೂ‌ ಆ ದೇಶಗಳ ಒಳನೋಟ ಕಟ್ಟಿಕೊಡುವಲ್ಲಿ ಈ ೧೬೦ ಪುಟಗಳ ಕೃತಿ ಯಶಸ್ವಿಯಾಗಲು ಕಾರಣ ಜಗಜಂಪಿಯವರ ಆಸಕ್ತಿ ಅಭಿರುಚಿಗಳು, ಅವರ ನಿರೂಪಣಾ ಶೈಲಿ. ಆ ದೇಶಗಳ ವೈಶಿಷ್ಟ್ಯಗಳನ್ನು ಹೇಳುತ್ತಲೆ ನಮ್ಮ ದೇಶದಲ್ಲಿ ಆ ಶಿಸ್ತು , ಆ ಸ್ವಚ್ಛತೆ, ಆ ಪ್ರಾಮಾಣಿಕತೆ ಮೊದಲಾದವುಗಳನ್ನು ಕಾಣಲಾಗದ ವ್ಯಥೆಯೂ ಅವರದಾಗಿದ್ದು ಈ ವಿಷಯದಲ್ಲಿ ನನ್ನ ಮತ್ತು ಅವರ ವಿಚಾರಗಳು ಒಂದೇ ಆಗಿರುವದಂತೂ ನಿಜ.

‌ಐರೋಪ್ ನೆಲದಲ್ಲಿ ಕಾಲಿಟ್ಟ ಕ್ಷಣದಿಂದ ಅಲ್ಲಿಯ ಹೊಟೆಲುಗಳು,ಪ್ರವಾಸಿ ಮಾರ್ಗದರ್ಶಿ, ರಸ್ತೆಗಳು, ಕೋಚ್ ಚಾಲಕರ ಸಹಿತವಾಗಿ ಸಣ್ಣಪುಟ್ಟ ಸಂಗತಿಗಳನ್ನೂ ಲಕ್ಷಿಸುತ್ತ, ಪ್ರವಾಸೀ ತಾಣಗಳ ವಿಶೇಷಗಳನ್ನು ಬಣ್ಣಿಸುತ್ತ, ಅಲ್ಲಿಯ ಪರಿಸರ, ಸಂಸ್ಕೃತಿ, ಜೀವನ ಶೈಲಿ, ಆಕರ್ಷಣೆಗಳು, ಎಲ್ಲವನ್ನೂ ಸಂಕ್ಷಿಪ್ತವಾಗಿ , ಆದರೆ ಅಷ್ಟೇ ಮನಂಬುಗುವಂತೆ ಹೇಳುತ್ತ ಹೋಗಿರುವ ಜಗಜಂಪಿಯವರು ನಮ್ಮಂಥವರಲ್ಲಿ ಅವನ್ನು ನೋಡಬೇಕೆಂಬ ಆಸೆ ಹುಟ್ಟಿಸುವ ಅಪ್ರಿಯವಾದ ಕೆಲಸವನ್ನೂ ಮಾಡುತ್ತಾರೆ. ಅಲ್ಲಲ್ಲಿ ನಮ್ಮ ದೇಶವನ್ನೂ ನೆನಪಿಸಿಕೊಳ್ಳುತ್ತಾರೆ. ಉದಾಹರಣೆಗೆ ಆಸ್ಟ್ರಿಯಾದ ಸ್ವರೋಸ್ಕಿ ಮ್ಯೂಜಿಯಂ ಬಗ್ಗೆ ಹೇಳುತ್ತ ರಾಮೇಶ್ವರದ ಸ್ಫಟಿಕ ಲಿಂಗವನ್ನೂ ಉಲ್ಲೇಖಿಸುತ್ತಾರೆ. ಜರ್ಮನಿಯಲ್ಲಿದ್ದಾಗ ಕನ್ನಡದ ಕೆಲಸ ಮಾಡಿದ ಮೊಗ್ಲಿಂಗ್ ಮತ್ತು ಕಿಟೆಲ್ ರನ್ನು ಸ್ಮರಿಸುತ್ತಾರೆ.

ಜಗಜಂಪಿಯವರ ಬರೆಹದ ಶೈಲಿಯ ಆಕರ್ಷಣೆ ಪುಸ್ತಕದುದ್ದಕ್ಕೂ ಎದ್ದು ಕಾಣುತ್ತದೆ.

"ಸ್ವಿಜರ್ಲ್ಯಾಂಡ್ ವರ್ಷದ ತುಂಬ ಹಸಿರನ್ನೇ ಉಸಿರಾಡುತ್ತದೆ..ಪ್ರಕೃತಿಯಂತೆ ಹಚ್ಚಹಸಿರಿನ ಮಕ್ಮಲಿನಿಂದ ವಿನ್ಯಾಸಗೊಳಿಸಿದ ಉಡುಗೆಯನ್ನುಟ್ಟು, ಹಸಿರನ್ನೇ ಹೊದ್ದು ಮಲಗಿದಂತೆ ತೋರುವ ಆಹ್ಲಾದಕರ ದೃಶ್ಯಾವಳಿಗಳನ್ನು ನೋಡುತ್ತ....ಸ್ವರ್ಗದಾ ಒಂದು ತುಣುಕು , ಅದು ಭೂಮಿಗೆ ಬಂದು ಬಿತ್ತು ಎಂಬ ಕನ್ನಡ ಕವಿವಾಣಿ ಸ್ಮರಣೆಗೆ ಬಂತು" ಇಂತಹ ವರ್ಣನೆಗಳು ಪುಸ್ತಕದ ತುಂಬ ಸಿಗುತ್ತವೆ.

ಅಕಸ್ಮಾತ್ ನಾವು ಯುರೋಪ ಪ್ರವಾಸಕ್ಕೆ ಹೋದರೆ ಅಲ್ಲಿ ಏನು ನೋಡಬೇಕು, ಹೇಗೆ ನೋಡಬೇಕು , ಯಾಕೆ ನೋಡಬೇಕು ಎಂದು ಅರಿಯಲು ಈ ಪುಸ್ತಕ ಬಹಳ ಉಪಯುಕ್ತವಾಗಿದೆ. ಪ್ರವಾಸೀ ಕೃತಿ ಇರಬೇಕಾದ್ದೇ ಹೀಗೆ. ಈ ದೃಷ್ಟಿಯಿಂದ ಜಗಜಂಪಿಯವರ ಈ ಪುಸ್ತಕವನ್ನು ಯುರೋಪ ಪ್ರವಾಸದ ಮಾರ್ಗದರ್ಶಿಕೆ ಎಂದು ಕರೆಯಬಹುದು. ಆದರೆ ಪುಸ್ತಕದ ವಿಷಯಗಳನ್ನು ಓದಿ ಆಗುವ ಖುಷಿಯಲ್ಲಿ ಸ್ವಲ್ಪ ಪಾಲನ್ನು ಅಕ್ಷರ ದೋಷಗಳು ಕಸಿದುಕೊಳ್ಳುತ್ತವೆನ್ನುವದು ಬೇಸರದ ಸಂಗತಿ. ಮುದ್ರಕ ಪ್ರಕಾಶಕರು ಈ ಬಗ್ಗೆ ಎಚ್ಚರ ವಹಿಸುವದಗತ್ಯ.

ನೀವೂ ಒಮ್ಮೆ ಓದಿ. ಯುರೋಪಿಗೆ ಹೋಗಿಬರುವ ಆಸೆ ನಿಮ್ಮಲ್ಲಿ ಮೂಡಿದರೆ ಅದಕ್ಕೆ ಜಗಜಂಪಿಯವರೇ ಹೊಣೆ.

ಬೆಂಗಳೂರಿನ ನಿವೇದಿತ ಪ್ರಕಾಶನದಿಂದ ಇದು ಹೊರಬಂದಿದೆ. ೧೫೦ ರೂ. ಬೆಲೆ.


- ಎಲ್. ಎಸ್. ಶಾಸ್ತ್ರಿ







23 views0 comments

Comments


©Alochane.com 

bottom of page