top of page

ಪ್ರಸ್ತುತ ಭಾರತ ಸಂದರ್ಭದ 'ಶಸ್ತ್ರ ಸಂತಾನ'


ನಾಟಕಕಾರ ಗಿರೀಶ ಕಾರ್ನಾಡರ ಸ್ಮರಣಾರ್ಥ ಧಾರವಾಡದಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರದರ್ಶನವಾದ 'ಶಸ್ತ್ರ ಸಂತಾನ' ನಾಟಕವನ್ನು ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಿತ್ತು. ಕುರುಕ್ಷೇತ್ರ ಯುದ್ಧದ ಒಂದು ರಾತ್ರೆಯ ಚಿತ್ರಣದ ಮೂಲಕ ರಂಗದ ಮೇಲೆ ನಾಟಕ ಅಭಿವ್ಯಕ್ತಗೊಳ್ಳುತ್ತದೆ. ಸೈನಿಕರ ಪತ್ನಿಯರ ಮತ್ತು ಅವರ ಹಸುಮಕ್ಕಳ ಆಕ್ರಂದನ ಮಹಾಭಾರತ ಯುದ್ಧದಲ್ಲಿ ಕೇಳಿಸಿದ್ದೇ ಇಲ್ಲ. ಆದರೆ ಖ್ಯಾತ ರಂಗ ನಿರ್ದೇಶಕ ಶ್ರೀಪಾದ ಭಟ್ ಅದನ್ನು ರಂಗದ ಮೇಲೆ ಕೇಳಿಸಿದ್ದಾರೆ. ಇಡೀ ಜಗತ್ತು ಯುದ್ಧದಂತಹ ಕ್ರೌರ್ಯದಿಂದ ಹಿಂಸೆಯನ್ನೇ ಉಸಿರಾಡುತ್ತಿದೆ. ನೋಡುವ ಕ್ಷಣದಲ್ಲಿ ನಮ್ಮನ್ನು ಅವರಿಸಿಕೊಳ್ಳುವ ಪರಿಯಿಂದಲೇ ನಾಟಕ ಅನುಭವಕ್ಕೆ ಬರುತ್ತದೆ, ಯುದ್ಧದಿಂದಾಗುವ ಗಾಢ ದುಷ್ಪರಿಣಾಮದ ಚಿತ್ರಣವೇ 'ಶಸ್ತ್ರ ಸಂತಾನ' ರಂಗ ಪ್ರದರ್ಶನ. ಭೀಮನ ಮಗ ಘಟೋತ್ಕಚನ ಬಳಿಸಾರಿ ಅವನ ಮನಸ್ಸನ್ನು ಪರಿವರ್ತಿಸಿದ ಕೃಷ್ಣ, ಯುದ್ಧ ಭೂಮಿಗೆ ಆಗಮಿಸುವಂತೆ ಪ್ರೇರೇಪಿಸುತ್ತಾನೆ. ಅತ್ತ ಅವನ ತಾಯಿ ಹಿಡಿಂಬಾದೇವಿ ಮಗನ ಒತ್ತಾಯದ ಹಟಕ್ಕೆ ಮಣಿದು ಮನಸ್ಸಿಲ್ಲದ ಮನಸ್ಸಿನಿಂದ ಮಗನನ್ನು ಹಸ್ತಿನಾವತಿಗೆ ಕಳುಹಿಸಿಕೊಡುತ್ತಾಳೆ. ಹೀಗೆ ರಾಜತಾಂತ್ರಿಕ ವ್ಯವಸ್ಥೆಯು ಯುದ್ಧದಲ್ಲಿ ಬುಡಕಟ್ಟು ಯುವಕನೊಬ್ಬನ ಬಲಿಯನ್ನು ಹೇಗೆ ನಿರಾಯಾಸ ಪಡೆಯುತ್ತದೆ ಎಂಬುದನ್ನು ನಾಟಕ ಕರುಣಾಜನಕವಾಗಿ ಬಿಂಬಿಸಿದೆ.


ಕೌರವನ ತಂಗಿ ದುಶ್ಯಲೆಯ ಮೇಲೆ ನಡೆವ ಸಾಮೂಹಿಕ ಅತ್ಯಾಚಾರ, ಅಮಾಯಕ ಮಗನಿಗಾಗಿ ರೋಧಿಸುವ ಹಿಡಿಂಬಾ, ಕರ್ಣನ ಸಾವಾಗಲಿರುವ ಯುದ್ಧಭೂಮಿಗೆ ಬಂದು ಇಂದ್ರ ತಂದು ಕೊಟ್ಟ ಕವಚ ಕುಂಡಲ ಹಿಡಿದು ರೋಧಿಸುವ ಕುಂತಿ, ಮಕ್ಕಳ ಹೆಣಗಳನ್ನು ಹುಡುಕಿ ಅಲೆಯುವ ಗಾಂಧಾರಿ, ಮುರಿಯದೇ ಬಿದ್ದ ಆಯುಧಗಳನ್ನು ಒಟ್ಟಾಗಿಸಿ, ಸೈನಿಕರ ಒಡವೆ ವಸ್ತ್ರಗಳನ್ನು ದೋಚುವ ಕಳ್ಳರ ಗುಂಪು, ದುಷ್ಟ ಕಾವಲುಗಾರರಿಂದ ಅತ್ಯಾಚಾರಕ್ಕೊಳಗಾಗುವ, ಸತ್ತ ಸೈನಿಕ ಗಂಡಂದಿರ ಮುಖ ನೋಡಲು ಬಂದ ವಿಧವೆಯರು, ಇವೆಲ್ಲ ಮಹಾಭಾರತದಲ್ಲಿ ಬರುವ ಪಾತ್ರಗಳಾದರೂ ಪ್ರಸ್ತುತ ಭಾರತದ ಕತೆಯಾಗಿಯೂ ತೋರುತ್ತ ಯುದ್ಧಗಳ ಕುರಿತು ತಿರಸ್ಕಾರ ಹುಟ್ಟಿಸುತ್ತದೆ. ಹೆಣ್ಣಿನ ನಿಶ್ಯಕ್ತಿ ಮತ್ತು ವ್ಯಥೆಗಳ ಗುರುತುಗಳು ಅವಳ ನೆರಳುಗಳೇ ಆಗಿವೆ ಎಂಬಂತೆ ಇಲ್ಲಿ ಹೆಣ್ಣಿನ ನೆರಳು ಮಾತ್ರ ರಣಭೂಮಿಯಲ್ಲಿ ನಡೆದಾಡುವ ದೃಶ್ಯಕ್ಕೆ ಪ್ರೇಕ್ಷಕರ ಭಾವಕೋಶವನ್ನು ಪರಿಣಾಮಕಾರಿಯಾಗಿ ಪ್ರವೇಶಿಸುವ ಶಕ್ತಿಯಿದೆ, ಘನಘೋರ ಹಿಂಸೆಯನ್ನು ಸಹ್ಯವಾಗಿಸಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಯಾತನಾಮಯ ಬದುಕಿನಲ್ಲಿ ಹೆಣ್ಣು ಜೀವ ಒದ್ದಾಡುವದನ್ನು ರಣರಂಗ ಕಾಣಿಸುತ್ತದೆ, ಕ್ರೌರ್ಯ ಎಲ್ಲೆಡೆ ತನ್ನ ದುಷ್ಟ ನಾಲಿಗೆಯನ್ನು ಚಾಚಿದೆ, ಇಂದು ಇಡೀ ಜಗತ್ತು ಯುದ್ಧದ ಉನ್ಮಾದದಲ್ಲಿರುವುದು ನಮಗೆ ಕಾಣುತ್ತಿದೆ. ದೇಶದ ಮಾರುಕಟ್ಟೆಯು ಪ್ರಭುತ್ವದ ನೆರವಿನಿಂದ ಅಮಾನವೀಯ ಹಿಂಸೆಯ ಆನಂದವನ್ನು ಸದಾ ಜಾಗೃತ ಸ್ಥಿತಿಯಲ್ಲಿಡುತ್ತಿದೆ. ಶಸ್ತ್ರಗಳ ವ್ಯಪಾರವೇ ಉಪಜೀವನದ ಪ್ರಮುಖ ಆಕರವಾಗಿ ದೇಶ, ಭಾಷೆ, ಧರ್ಮ ಇವೆಲ್ಲದರ ಸಂಬಂಧಗಳನ್ನು ಛಿದ್ರಗೊಳಿಸುತ್ತಿದೆ. ಇಂಥ ದುರಿತ ಕಾಲದ ಸಂಕಷ್ಟವನ್ನು ಕಾಣ ಹೊರಡುವ ಒಂದು ಪ್ರಯತ್ನ ಈ ನಾಟಕದಲ್ಲಿದೆ.


ಕುರುಕ್ಷೇತ್ರದ ಭಿತ್ತಿಯೊಳಗೆ ಹೆಣ್ಣು ಮತ್ತು ದಲಿತರ ನೋವನ್ನು ವರ್ತಮಾನದ ಅಗತ್ಯಕ್ಕಾಗಿ ಕಾಣ ಹೊರಡುವ ಪ್ರಯತ್ನ ಈ ಪ್ರಯೋಗದ ಹಿಂದಿದೆ. ಅಂತೆಯೇ ಇದು ಕೇವಲ ಮಹಾಭಾರತದ ಕತೆಯಲ್ಲ, ಇದು ಭಾರತದ ಕತೆ, ಅಂತೆಯೇ ಇದು ವಿಶ್ವದ ಕತೆಯೂ ಹೌದು. ಪ್ರಸ್ತುತ ಸಂದರ್ಭದ ಭಾರತದ ಸ್ಥಿತಿಗತಿಯನ್ನು ನಾಟಕ ತುಂಬ ಚೆನ್ನಾಗಿ ಕಟ್ಟಿಕೊಟ್ಟಿದೆ. ಇಂಥ ಯುದ್ಧ ಭಾರತದ ಛಿದ್ರ ಪ್ರತಿಮೆಗಳಲ್ಲಿ 'ಎಲ್ಲವೂ ಸುರಕ್ಷಿತವಾಗಿದೆ' ಎಂಬ ಸಾಲು ಆಗಾಗ ಹಿನ್ನೆಲೆಯಲ್ಲಿ ಕೇಳಿಬರುವುದು ಪ್ರಸ್ತುತ ಭಾರತದ ಪ್ರಭುತ್ವ ಹೇಳುವ ಮಾತನ್ನು ಪದೇ ಪದೇ ನೆನಪಿಸುತ್ತದೆ. ಇಲ್ಲಿ ಯುದ್ಧ ಮಾಡಿ ಇನ್ನೊಂದು ಜೀವವನ್ನು ಕೊಲ್ಲಲು ಕೂಡ ಕೃಷ್ಣ 'ಗೀತೆಯಲ್ಲಿ ಏನು ಹೇಳಿದೆ ನೋಡು' ಎನ್ನುತ್ತ ಧರ್ಮರಾಯನಿಗೂ ಅರ್ಜುನನಿಗೂ ದಾರಿ ತೋರುತ್ತಾನೆ, ದುಷ್ಟರ ಶಿಕ್ಷೆ ಶಿಷ್ಟರ ರಕ್ಷೆಯ ಹೆಸರಿನಲ್ಲಿ ನಡೆವ ಹತ್ಯೆಯ ನಿರ್ಭಾವುಕತೆಯು ಇಂದಿನ ನಮ್ಮ ದೇಶದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.


ರಾಮೇಶ್ವರ ಪ್ರೇಮ್ ಅವರ ಮೂಲರಚನೆಯನ್ನು ಕನ್ನಡಕ್ಕೆ ತಂದವರು ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರು. ವಿನ್ಯಾಸ ಮಾಡಿದ ಕಲಾಕಾರ ಚೆನ್ನಕೇಶವ, ಸಹ ನಿರ್ದೇಶನ ಬಿಂದು ರಕ್ಷಿದಿಯವರದು, ಸಂಗೀತ ಸಾಂಗತ್ಯ ವಾಸುಕಿ ವೈಭವ್, ವಸ್ತ್ರ ವಿನ್ಯಾಸ ಮತ್ತು ನೃತ್ಯ ಸಂಯೋಜನೆ ಸ್ವರ್ಣ ಮಣಿಪಾಲ ಅವರದು, ರಂಗದ ಬೆಳಕನ್ನು ರವಿಶಂಕರ್ ನಿರ್ವಹಿಸಿದರೆ, ಸೆಟ್, ವಿಶ್ವನಾಥ ಮಂಡಿ ಹಾಗೂ ಗುರುರಾಜ್ ಅವರದು, ರಂಗ ಪರಿಕರ; ರಘುರಾಮ್ ಮತ್ತು ಮೋಹನ ಶೆಣೈ, ನಿರ್ವಹಣೆ; ಪ್ರಮೋದ ಭಾರದ್ವಾಜ್ ಮತ್ತು ನಾಗಲಕ್ಷ್ಮೀ, ಒಂದು ಅದ್ಭುತ ಲೋಕವನ್ನೇ ರಂಗಕ್ಕಿಳಿಸಿ ನಿರ್ದೇಶಿಸಿದವರು ಖ್ಯಾತ ರಂಗತಜ್ಞ ಡಾ. ಶ್ರೀಪಾದ ಭಟ್.


-ಸುನಂದಾ ಕಡಮೆತಮ್ಮದೇ ಆದ ವಿಶಿಷ್ಠ ಕಥಾಕುಸುರಿಯ ಮೂಲಕ ಗಮನ ಸೆಳೆದಿರುವ ಹೊಸತಲೆಮಾರಿನ ಕಥೆಗಾರ್ತಿಯರ ಪೈಕಿ ಸುನಂದಾ ಕಡಮೆ ಮುನ್ನೆಲೆಯಲ್ಲಿ ನಿಲ್ಲುತ್ತಾರೆ.ಮೂಲತಃ ಅಂಕೋಲಾದ ಅಲಗೇರಿಯವರಾದ ಇವರು ಸಣ್ಣಕತೆ, ಕವಿತೆ, ಕಾದಂಬರಿ, ನುಡಿಚಿತ್ರಗಳ ಸಂಕಲನ ಹೀಗೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೃಷಿ ನಡೆಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳ್ಲಲಿ ಛಂದ ಪುಸ್ತಕ ಪ್ರಶಸ್ತಿ, ಎಂ.ಕೆ.ಇಂದಿರಾ ದತ್ತಿ ಪ್ರಶಸ್ತಿ,ತ್ರಿವೇಣಿ ಕಥಾ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಬಿ.ಎಂ.ಶ್ರೀ ಕಥಾ ಪ್ರಶಸ್ತಿ , ಬಾಲ ಸಾಹಿತ್ಯಕ್ಕೆ ಕರ್ನಾಟಕ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿಮುಂತಾದವುಗಳು ಪ್ರಮುಖವಾಗಿವೆ. ಇವಲ್ಲದೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನಗಳು ದೊರಕಿವೆ. ಇವರ ಕೃತಿಗಳಲ್ಲಿ ಕಥಾಸಂಕಲನಗಳಾದ ‘ಪುಟ್ಟಪಾದದ ಗುರುತು’’, ಗಾಂಧಿಚಿತ್ರದ ನೋಟು’, ‘ಕಂಬಗಳ ಮರೆಯಲ್ಲಿ’, ಕಾದಂಬರಿಗಳಾದ ‘ಬರೀ ಎರಡು ರೆಕ್ಕೆ’, ‘ದೋಣಿ ನಡೆಸ ಹುಟ್ಟು’, ‘ಕಾದು ಕೂತಿದೆ ತೀರ’, ಕವಿತೆ ಸಂಕಲನ ‘ಸೀಳು ದಾರಿ’ ಹಾಗೂ ನುಡಿ ಸಂಕಲನ‘ಪಿಸುಗುಟ್ಟುವ ಬೆಟ್ಟಸಾಲು’ ಮುಂತಾದವು ಪ್ರಮುಖವಾಗಿವೆ. ಇವರ ಕಾದಂಬರಿ ‘ಬರೀ ಎರಡು ರೆಕ್ಕೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದ್ದು ಅದು ಮುಂಬೈ ವಿಶ್ವವಿದ್ಯಾಲಯದ ಎಮ್.ಎ. ತರಗತಿಗೆ ಪಠ್ಯವಾಗಿದೆ. ಮನೆವಾರ್ತೆಯ ಜೊತೆಗೆ ಬರವಣಿಗೆಯನ್ನು ಅಷ್ಟೇ ಸಮಚಿತ್ತದಿಂದ ನಿಭಾಯಿಸುವ ಶ್ರೀಮತಿ ಸುನಂದಾಕಡಮೆಯವರು ತಮ್ಮಅನುಭವದ ಅಡುಗೆಯನ್ನುತಮ್ಮ ಸಾಹಿತ್ಯದ ಮೂಲಕ ಓದುಗರಿಗೆ ಉಣಬಡಿಸುತ್ತಾ ಸರಳ ಮತ್ತು ಸಜ್ಜನಿಕೆಯ ಸಾಕಾರವಾಗಿ ನಮ್ಮೊಂದಿಗೆ ಇದ್ದಾರೆ.- ಸಂಪಾದಕ.

 

157 views0 comments

Comments


bottom of page