top of page

ಪ್ರಸವ ಕಾಲ

ಬಿರಿದ ಬಸಿರಿನೊಡಲಿನಿಂ

ಸಿರಿಯ ಫಲವು ಫಲಿಸಿದಂದ

ಕರುಳ ಬಳ್ಳಿ ಮೊಳೆತು ಬದುಕ ನೋಡಲಿಣುಕಿದೆ

ಬಿರಿದ ಹೂವು ಫಲವ ಬಿಡದೆ

ಸುರಿದ ಬುದ್ಧಿ ಬದುಕ ಕೊಡದೆ

ಕರೆದು ತಂದ ಭವದ ಬಂಧ ಹಸಿರು ನೀಡಿದೆ//


ಕರುಳ ಕುಡಿಯ ಧರೆಗೆ ತರಲು

ಕರುಳು ತರಿದು ನೋವನಿಡಲು

ಧರಣಿ ಬಾಯಿ ತೆರೆದು ನುಂಗಲೆಂಬ ಚಣವದು

ಮರೆತು ನೋವ ಜೀವ ಕೊಡುವ

ತರುಣಿ ಬಾಳು ಧನ್ಯಪಡುವ

ಸರಿಯ ಸಾಟಿಯಿರದ ಸಹನೆಗಡಲ ತೇರದು//


ತರುವ ಬೀಜದಿಂದ ಮರಿಯು

ಧರೆಯ ಗರ್ಭ ಸೀಳಿ ಬರಲು

ಕರುಣಿ ಜನನಿಯಡಿಗೆ ಮಗುವಿನಂತೆ ಯೆರಗಿದೆ

ನೆರೆದ ಬಸಿರು ಭವಿಸಿ ಬರಲು

ಹರಿಯುತಿರಲು ಜೀವ ರಸವು

ಹರನ ಹರಕೆಯಿರಲು ಹರಣದಂತೆ ಚಿಗುರಿದೆ//


ಬಿರಿಯುವಂತೆ ಭೂಮಿಯೊಡಲು

ಸುರಿಯುವಂತೆ ಮೇಘ ಮುಗಿಲು

ತರುಣಿ ಜೀವವಿತ್ತು ಮತ್ತೆ ಜನಿಸಿ ಬಂದಳು

ಮೊರೆದು ಗುಡುಗು ಸಿಡಿಲಿನಂತೆ

ತೆರೆದ ಬಾನ ಮುತ್ತುವಂತೆ

ಪೊರೆವ ಪಂಚಭೂತವಿರುವ ಮನೆಗೆ ತಂದಳು//


ಚರವದಿನಿತು ಸರಿಯಲಿಲ್ಲ

ನರವದಿನಿತು ಮುರಿಯಲಿಲ್ಲ

ವರವು ದೇವನಿತ್ತ ಜನಿಪ ನೇಮ ಸೋಜಿಗ

ನಿರಗದಂತ ಮನಸಿನವಳು

ನಿರತ ನೋವನುಂಬುವವಳು

ನಿರುತ ಬಿಡದೆ ಪೂಜಿಸಿರಲು ಬೇಕು ಮೂಜಗ//


ಹೆರುವೆನೆಂಬ ಗರ್ವವಿರದ

ಪೊರೆವೆನೆಂಬ ಸೋಗದಿರದ

ಕರುವನೆತ್ತ ಕಾಮಧೇನುವಂತೆ ಮಾತೆಯು

ತರುವೆನೆಂಬ ತಮಟೆಯಿಲ್ಲ

ಕರುಬುವಂತ ದನಿಯದಿಲ್ಲ

ವಿರಮಿಸದಲೆ ತಿರುಗೊ ಧರಣಿಯಂತೆ ದಾತೆಯು//


- ಭವಾನಿ ಗೌಡ

15 views0 comments

Commenti


bottom of page