top of page

ಪ್ರಶ್ನೆಯಾದೆ.....?

ಬದುಕಿನ ಬೇರುಗಳಲ್ಲೇ


ಬಿರುಕುಬಿದ್ದ ಭಾವ


ಭಾಷೆಗಳಲ್ಲಿ ಬಂಧಿಸಲಾಗದ


ಅನಿರ್ವಚನೀಯ ತಳಮಳ


ಯಾವುದೊ ಅಭದ್ರತೆಯ


ಆತಂಕದ ಅನಿಶ್ಚಿತ ಛಾಯೆ!


ಮುಂದೇನಾಗಬಹುದೆಂದು


ಊಹಿಸಲಾರದ ಸಂಕೀರ್ಣ ಮನಸ್ಥಿತಿ !


ಹೀಗೊಂದು ದಿನ ಬಂದೀತೆಂಬ


ಯಾವ ಕುರುಹನ್ನೂ ನೀಡದ


ಈ ಬದುಕು , ಇಷ್ಟು ಕ್ರೂರವಾಗಿದ್ದೇಕೆ ?


ಪ್ರಕೃತಿಯ ಮುನಿಸೊ


ಮಾನವರ ದೌರ್ಜನ್ಯದ ಅತಿರೇಕವೊ


ಹೊಣೆಗೇಡಿ ದೇಶದ ಅಚಾತುರ್ಯವೊ


ಅಥವಾ, ಕಾಲದ ಕಾರ್ಯದ ತಂತ್ರಗಾರಿಕೆಯೊ


ಬದುಕೆಂದರಿಷ್ಟೆ !


ಯಾವುದು ವಾಸ್ತವ, ಯಾವುದು ಭ್ರಮೆ


ಎಂದರಿಯಲಾಗದ ವಿಲಕ್ಷಣ ಸೋಜಿಗ !


ಪ್ರಕೃತಿ ಮಾನವಕೇಂದ್ರಿತವಲ್ಲವೆಂಬ ಸತ್ಯದರ್ಶನ ;


ಬಾಳಿನ ಅಸ್ಪಷ್ಟತೆಯನ್ನು


ಸ್ಪಷ್ಟಪಡಿಸಲಾದೀತೆ, ನಿಖರವಾಗಿ !?


ವಿವರಣೆಗೆ ನಿಲುಕದ ಸತ್ಯವನ್ನು


ಎಷ್ಟು ಶೋಧಿಸಿದರೂ


ಪ್ರಶ್ನೆಯಾಗಿಯೇ ಉಳಿದು ಬಿಡುವ


ಬಾಳಿನ ಈ ನಿಗೂಢ ನಡೆಯನ್ನು


ಉತ್ತರ ಕಾಣದ ಈ ವಿಸ್ಮಯತೆಯನ್ನು


ಭೇದಿಸಲಾರದ ಈ ಮಹಾಜೀವನರಹಸ್ಯವನು


ಜಟಿಲತೆಯ ಈ ಜಿಗುಟನ್ನು


ಜೀರ್ಣಿಸಿಕೊಳ್ಳುವ ಬಗೆಯನ್ನು


ದೇನಿಸುತ್ತಾ, ನಾನೇ ಒಂದು ಪ್ರಶ್ನೆಯಾದೆ ?!


ಆಶಾವಾದದ ಉತ್ತರದ ಜಿನುಗುವಿಕೆಗಾಗಿ


ಹಪಹಪಿಸುತ್ತಾ !


- ಹೊನ್ನಪ್ಪಯ್ಯ ಗುನಗಾ


ಶ್ರೀ.ಹೊನ್ನಪ್ಪಯ್ಯ ಎಸ್. ಗುನಗಾ ವೃತ್ತಿಯಲ್ಲಿ ಇಂಗ್ಲೀಷ ಉಪನ್ಯಾಸಕರಾದರೂ ಕನ್ನಡ ಸಾಹಿತ್ಯಾರಾಧನೆಯಲ್ಲಿ ಬಹುವಾಗಿ ತೊಡಗಿಕೊಂಡವರು. ಈಗಾಗಲೇ ಅವರು ‘ವಶವಾಗುವ ಮುನ್ನ’ ಎಂಬ ಕವನ ಸಂಕಲನ ಮತ್ತು ‘ ಅರ್ಥ’ ಎಂಬ ಕಥಾ ಸಂಕಲನ ಹಾಗೂ ‘ ಕೌತುಕದ ಕನ್ನಡಿ’ ಎಂಬಅಂಕಣ ಬರೆಹ ಸಂಕಲನವನ್ನು ಪ್ರಕಟಿಸಿದ್ದಾರೆ. ಬರೆವಣಿಗೆಯ ಜೊತೆಗೆ ಸಂಘಟನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ,ಆಲೋಚನಾ ವೇದಿಕೆಯ ಪದಾಧಿಕಾರಿಯಾಗಿ, ಶ್ರೀ ನಾರಾಯಣ ಪ್ರತಿಷ್ಠಾನದ ಪದಾಧಿಕಾರಿಯಾಗಿ ಇವುಗಳ ಜೊತೆಗೆ ಉತ್ತರ ಕನ್ನಡ ಪದವಿ ಪೂರ್ವ ನೌಕರರ ಸಂಘ ಹಾಗೂ ಉತ್ತರ ಕನ್ನಡ ಇಂಗ್ಲೀಷ ಉಪನ್ಯಾಸಕರ ಸಂಘಗಳ ಕಾರ್ಯದರ್ಶಿಯಾಗಿಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಶ್ರೀ.ಹೊನ್ನಪ್ಪಯ್ಯನವರು ಪತ್ರಿಕೆಗಳಿಗೆ ಲೇಖನ ಬರೆಯುವುದಲ್ಲದೆ ನಾಟಕ ಮತ್ತು ಯಕ್ಷಗಾನಗಳಲ್ಲಿಯೂ ಅಭಿನಯಿಸುವ ಮೂಲಕ ಸದಾ ಕ್ರಿಯಾ ಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

61 views1 comment
bottom of page