ಐದ್ ಪಾಸು ಆರು ಬಾಲೆ
ಆಗಲೆ ಒಂದಿನ ಯೋನಿ
ತುಂಬಾ ಕೆಂಪು ಸ್ರಾವ!
ಕಂಗಾಲಾದ ಹಸುಳೆ
ಅಳುತ್ತಲೇ ಕರೆದಳು
ಅಮ್ಮನ ಹಾವು ನೋಡಿದ
ಹರಿಣಿಯಂತೆ ಬೆದರುತ್ತ
ಬಂದವಳೆ ಮಗಳ ಅವತಾರವ
ಕಂಡು ಒಮ್ಮೆಲೆ ಶುರುವಿಟ್ಟಳು
ಹೆಣ್ಣು ಜನ್ಮಕೆ ಹಿಡಿಶಾಪವ
ಪಾಪದ ಕಂದಮ್ಮ ಕೇಳಿದಳು
' ಯಾಕಮ್ಮ ಏನಾಯ್ತು'?
'ಇನ್ನೇನಾಗಬೇಕು ಈಗಲೇ
ನೀ ದೊಡ್ಡಾಕಿ ಆಗಿದ್ದೀ'
' ಅರೆ ನಿನ್ನೆ ವರೆಗೆ ನಾ
ಸಣ್ಣಾಕಿ, ಬೆಳಗಾಗತ್ತಲೆ
ಹೆಂಗೆ ದೊಡ್ಡಾಕಿ ಆಗೀನಿ?'
'ತಲಿ ತಿನ್ನಬೇಡ ;ಅದು ಮುಟ್ಟಬೇಡ
ಒಳಗೆ ಬರಬೇಡ' ' ಯಾಕಮ್ಮ
ನಂಗೆ ಕಾಗೆ ಮುಟ್ಟಿಲ್ಲಮ್ಮ'
' ಸಾಕು ನಿಲಿಸು ನಿನ್ನ ತಲೆ ಹರಟೆ'
ಬಿರಬಿರನೆ ಎಳೆತಂದು ತೆಂಗಿನ
ಮರದಡಿ ನಿಲಿಸಿ ಅವ್ವನಿಂದ
ಬಳುವಳಿಯಾಗಿ ಬಂದ ಶಾಸ್ತ್ರ
ವನೆಲ್ಲವ ಮಾಡಿಸಿದಳು ಡಿಗ್ರಿ
ಮುಗಿಸಿದ ಪದವೀಧರ ಅಮ್ಮ!
ಸಾಥ್ ನೀಡಿದ ಅಜ್ಜಿ
ನೆರೆಮನೆ ಮುತ್ತೈದೆಯರು
ತಲೆಗೊಂದೊಂದು ಉಪದೇಶ!
'ಬಿಟ್ಟು ಬಿಡಿ ಹಾರಿ ಬಿಡುವೆ
ಆಕಾಶದೆತ್ತರಕೆ ಎಂಬ
ಆಸೆಯ ಕಂಗಳಿಂದ
ಅಪ್ಪನ ಮುಖ ನೋಡಿದರೆ
ಅಸಹಾಯಕ ವಿಜ್ಞಾನ ಪಾಠ
ಹೇಳುವ ಲೆಕ್ಚರರ್ ಪಪ್ಪ!
ಮಗಳ ಕೈಗೆ ಬಂತು ಚೊಂಬು
ತಾಟು ತಟ್ಟೆ ಚಾಪೆ ದಿಂಬು
ಸೇರಿದಳು ಮುಟ್ಟಿನ ಕೋಣೆ
ಉತ್ತರವಿಲ್ಲದ ಪ್ರಶ್ನೆಗಳ
ಸುಳಿಯೂಳಗೆ ನಾಲ್ಕು
ಗೋಡೆಯ ಬೇಲಿಯೊಳಗೆ
ಕುಗ್ಗದಿರು ಸಂಪ್ರದಾಯದ
ಬಂಧನವ ಜಿಗಿದು ಬಾ ಹೊರಗೆ
ಸುವಿಧಾ ಹಡಿನಬಾಳ
೯೪೮೧೧೧೧೧೯೩
Comentarios