ಬಟ್ಟೆ ತೊಟ್ಟಿರುವ ಹೂವಿನ
ಎಸಳು ಬಿಚ್ಚಿ ಬೆತ್ತಲಿಸಿ
ನಶೆಏರಿ ಎಳೆದಾಡಿದಾಗ
ಉರುಳಿದ್ದು ಕೇವಲ
ಒಂದು ಜೀವವಲ್ಲ
ಹೆದರಿ ನಿಂತ ಅಗಣಿತ
ಅಸಾಹಯಕ ಕಂಗಳು
ಯಾಂತ್ರಿಕ ಬೆಳಕಲ್ಲಿ
ಎರಡು ದಿನದ ಸಂತಾಪ
ಹೊಯ್ದಾಟ ತಿರಸ್ಕಾರದ ರ‍್ಯಾಲಿಯಲ್ಲಿ
ಮಣ್ಣು ಮುಚ್ಚುವ
ಗುದ್ದಲಿಯ ಗುಸು ಗುಸು
ಇದರ ನಡುವೆ
ಸತ್ಯ ಹೇಳುವ ಎರಡು ಕಣ್ಣು ಬಿಟ್ಟರೆ
ಮುಕ್ಕಾಲು ಪೊರೆ ಮುಚ್ಚಿದೆ
ಬಿಸಿ ಎಣ್ಣೆಗೆ ಬಿದ್ದ ಸಾಸಿವೆಯಂತೆ
ಕೊಂಚ ಪಟಗುಟ್ಟು ಸದ್ದಿಲ್ಲದೆ
ತಣ್ಣಗಾಗುವ ನಿಮ್ಮ ಕೂಲಿಂಗ್
ಗ್ಲಾಸನಲ್ಲಿ ಇವೆಲ್ಲಾ ಅಸ್ಪಷ್ಟ
ಕ್ಯಾಂಡಲ್ ಹಣತೆ
ದುಬಾರಿ ನಿಮ್ಮ ಮೌನದ
ಬ್ಯಾನರ್ ಇಟ್ಟು ಕೊಂಡು
ಸಭ್ಯತೆ ತೋರುವ ಸಂತಾಪದ
ಸಭೆ ಹಗಲುಗುರುಡು
ಕಾಟಚಾರದ ತರ್ಕಕ್ಕೆ ಸುದ್ದಿಹಿಂಡು
ಉದ್ದಕ್ಕೂ ಇರುವುದು ನಿಮಗೂ ಗೊತ್ತು
ಕುತ್ತಿಗೆ ಬಿಗಿದು ನಾಲಿಗೆ ತುಂಡಾದ ಮೇಲೆ
ಸಾಕ್ಷಿ ಕೇಳಿದರೆ ಅನುಚಿತ
ಅಸ್ತ್ರಗಳ ಹಿಡಿದ ಬಲಿಷ್ಠರ ಮುಂದೆ
ಗಾಯಕ್ಕೆ ಮುಲಾಮು ಹಚ್ಚುವ
ನಿಮ್ಮ ಪ್ರತಿಭಟನೆ
ಎಷ್ಟು ದಿನ ನೆಡೆಸುವಿರಿ.....
ಎಂ.ಜಿ.ತಿಲೋತ್ತಮೆ
ಭಟ್ಕಳ
Comentarios