ಹಠ ಛಲದಿಂದ ಬದುಕನ್ನೇ
ಬರಡಾಗಿಸಿಕೊಂಡಳು ಅಂಬೆ!
ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ
ಸಾಲ್ವ ಸುಖವಾಗಿ ಬಾಳಿದ!!
ಕ್ಷಣ ಕಾಲದ ಚಿತ್ತ ಇನಿಯನತ್ತ ಇತ್ತ
ಶಕುಂತಲೆ ಪರಿತಪಿಸಿದಳು ನೊಂದು!
ಮುದ್ರೆ ಉಂಗುರ ದೊರಕುವವರೆಗೂ,
ಮನಕ್ಲೇಶವಿಲ್ಲದೆ ಮುದದಿಂದಿದ್ದ ದುಷ್ಯಂತ!!
ಜಮದಗ್ನಿಯ ಕೋಪ ತಾಪಕೆ
ಮಗನಿಂದಲೇ ಹತಳಾದ ರೇಣುಕೆ!
ಬದುಕಿ ಬಂದರೂ ದಿಗ್ ಭ್ರಮೆ!!
ಸಂಬಂಧಗಳ ಸಂಕೀರ್ಣತೆ ಹೃದಯ ಕಲಕಿತೆ???
ಪಂಚಪಾಂಡವರ ಹೇಡಿತನಕ್ಕೆ
ಹೊಣೆಯಾಗಿ ನಿಂತಳು ಪಾಂಚಾಲಿ!
ಮರಳಿದ ಸೀತೆಗೆ
ಅಗ್ನಿಪರೀಕ್ಷೆಯ ಅನಿವಾರ್ಯತೆ!!
ವಿವೇಕ -ವಿವೇಚನೆ ಮರೆತು ವಿನಾಶವನ್ನೇ ಆಹ್ವಾನಿಸಿದ ದುರುಳರು!
ಧರ್ಮ ನಿಷ್ಠೆ ಸತ್ಯದ ಪಥದಲ್ಲಿ
ಮತ್ತೆ ಮತ್ತೆ ಪರೀಕ್ಷೆ.....!!
ಸ್ತ್ರೀಯನ್ನು ಗೌರವಿಸಿದರೆ??
ಅವಹೇಳನಕ್ಕೀಡು ಮಾಡಿದರೆ??
ಗೊಂದಲ - ದ್ವಂದ್ವ.....!
ಮನದಲ್ಲಿ ಮೂಡಿ ಮಥಿಸಿ,
ತರ್ಕಕ್ಕೆ ನಿಲುಕದ ಪ್ರಶ್ನೆಗಳು!!
ಪುರುಷರ ಆಟಾಟೋಪಕ್ಕೂ
ಮಹಿಳೆಯರ ಸಂಕಷ್ಟಗಳಿಗೂ
ಏಕ ಮುಖದ ಸಮರ್ಥನೆ !!
ಧರ್ಮ ಕರ್ಮ ಸುಯೋಗವೆಂಬ ಹೇಳಿಕೆ - ಸಿದ್ಧಾಂತ!!
ಅರಿಷಡ್ವರ್ಗಗಳೆಲ್ಲವೂ ವಿಜೃಂಭಿಸಿದ ಆ ಕಾಲ!
ಅಧಹಃ ಪತನದ ನಂತರವೂ ಮತ್ತದೇ ಅದರದೇ ಪುನರಾವರ್ತನೆ!
ಅಕ್ಷದ ಸುತ್ತ ನಿರಂತರ
ಭೂಮಿ ಚಲಿಸುವಂತೆ
ತಿರುತಿರುಗಿ ಅಲ್ಲಿ ಗೆ....!
ಸಾತ್ವಿಕ ತಾಮಸ ರಾಜಸಗಳ ಮಿಶ್ರಣ!
ಮಾನವೀಯತೆ ಮರೆಯುತ್ತಿರುವ ಪರಿಣಾಮ!
ಪ್ರಕೃತಿ ವಿಕೋಪವೇ ನಿದರ್ಶನ!!!!
ಸಾವಿತ್ರಿ ಶಾಸ್ತ್ರಿ, ಶಿರಸಿ.
Comments