“ಯಾಕಮ್ಮಾ, ಮಾತೇ ಆಡಲ್ಲ! ನನ್ಮೇಲೆ ಕೋಪಾನಾ?” –ಎಂದು ತುಂಬಾ ನೊಂದುಕೊಂಡಂತೆ ಕಂಡ ಚಿಕ್ಕ ಮಗ ರೋಹಿತ್‍ನ ಮಾತುಗಳು ಶೀಲಾಳ ಹೃದಯಕ್ಕೇ ನೇರವಾಗಿ ನಾಟಿದಂತಾಯ್ತು. ಅವಳು ಯೋಚಿಸತೊಡಗಿದಳು. ಏಕೆ ನಾನು ನನ್ನ ಮಾನಸಿಕ ಸ್ಥಿಮಿತವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೇನೆ! ಯಾವ ವಿಷಯಗಳಲ್ಲೂ ಮೊದಲಿನ ಆಸಕ್ತಿಯನ್ನು ಹೊಂದಲು ಸಾಧ್ಯವಾಗುತ್ತಲೇ ಇಲ್ಲ ! ತನ್ನ ಮಾನಸಿಕ ಸ್ಥಿತಿಯ ಏರುಪೇರಿನ ಸತ್ಯ ಏನೆಂದು ಅವಳಿಗೆ ಚೆನ್ನಾಗಿ ಗೊತ್ತಿದ್ದರೂ , ಮುದ್ದಾದ ಮಗನ ಮೊಗವನ್ನಾದರೂ ನೋಡಿ, ಎಲ್ಲ ನೋವು ಆಘಾತಗಳನ್ನು ಮರೆಯಬೇಕೆಂದುಕೊಳ್ಳುತ್ತಾಳೆ. ‘ ಅಂದುಕೊಳ್ಳುವುದು ಜೀವನವಲ್ಲ’ ಹೊಂದಿಕೊಳ್ಳುವುದು ಜೀವನ”-ಎಂದು ಪದೇ ಪದೇ ಕ್ಲಾಸಿನಲ್ಲಿ ಹೇಳುತ್ತಿದ್ದ ಅಧ್ಯಾಪಕರ ಮಾತುಗಳು ನೆನಪಾದವು. ಆ ಅಧ್ಯಾಪಕರ ನೆನಪಾದಂತೆ, ಹಿಂದೊಮ್ಮೆ ಒಂದು ಸಂದರ್ಭದಲ್ಲಿ ಅವರಾಡಿದ ಮಾತುಗಳು ನೆನಪಾಗಿ, ತುಂಬ ಗಂಭೀರವಾಗಿ ಮತ್ತೆ, ಮತ್ತೆ ಯೋಚಿಸುವಂತೆ ಮಾಡಿಬಿಟ್ಟವು. ಎಷ್ಟೆಲ್ಲಾ ವರ್ಷಗಳ ಹಿಂದಿನ ಘಟನೆಯದು! ಆದರೂ ಅದು ನನ್ನನ್ನು ಪದೇ ಪದೇ ವಿಚಿತ್ರವಾಗಿ ಕಾಡುತ್ತಿರುವುದೇಕೆಂದು ಅರ್ಥವಾಗದೇ ವಿಹ್ವಲ ಚಿತ್ತಳಾದಳು ಶೀಲಾ.
ಆ ವರ್ಷ ಕಾಲೇಜಿನ ಗೆದರಿಂಗ್‍ಗೆಂದು ನಾಟಕವೊಂದನ್ನು ಪ್ರದರ್ಶಿಸಬೇಕೆಂದು ತೀರ್ಮಾನಿಸಲಾಯಿತು. ಸಾಂಸ್ಕ್ರತಿಕ ವಿಭಾಗದ ಮುಖ್ಯಸ್ಥರೊಬ್ಬರು , ಒಂದು ಸುಂದರವಾದ ಏಕಾಂಕ ನಾಟಕವನ್ನು ಆರಿಸಿ, ತಂದಿದ್ದರು. ಐತಿಹಾಸಿಕ ನಾಟಕವದು. ಅದ್ಭುತವಾದ ಮೆಸೇಜ್ ಇತ್ತು. ಎಲ್ಲರೂ ತುಂಬ ಇಷ್ಟಪಟ್ಟು ಪಾತ್ರಗಳ ಹಂಚಿಕೆಗೆ ಒಟ್ಟಾಗಿ ಕುಳಿತಿದ್ದೆವು. ಆ ನಾಟಕದಲ್ಲಿಯ ನಾಯಕ, ನಾಯಕಿಯ ಪಾತ್ರಗಳ ಹಂಚಿಕೆಯನ್ನು ಮಾಡಿದ ನಂತರ, ಅಲ್ಲೊಂದು ವಿಧವೆಯ ಪಾತ್ರವನ್ನು ಯಾರಿಗೆ, ಕೊಡುವುದು –ಎಂದು ಚರ್ಚೆ ಆಗುತ್ತಲೇ ಇತ್ತು. ಪ್ರಬುದ್ಧ ಅಭಿನಯವನ್ನು ಬೇಡುವ, ಭಾವಾಭಿನಯಕ್ಕೆ , ಪ್ರಶಸ್ತವಾದ ಮುಖ್ಯವಾದ ಪೋಷಕ ಪಾತ್ರವದು. ಇದನ್ನು ಯಾರಿಗೆ ಕೊಡುವುದೆಂದು ಬಹಳ ತಲೆಕೆಡಿಸಿಕೊಂಡಂತೆ ಕಂಡ ನಮ್ಮ ನಾಟಕ ತಂಡದ ನಿರ್ದೇಶಕರಿಗೆ ಸಹಾಯ ಮಾಡಲೆಂಬಂತೆ, ಆ ಉಪನ್ಯಾಸಕರು ಆ ಪಾತ್ರವನ್ನು ಶೀಲಾಳಿಗೆ ಕೊಡಿ ಎಂದುಬಿಟ್ಟರು. ನಿರ್ದೇಶನ ಮಾಡುವ ಸರ್ ಕೇಳಿದರು, “ ಶೀಲಾ, ಈ ಪಾತ್ರ ತುಂಬ ಚಾಲೇಜಿಂಗ್ ಆಗಿರೋದು. ಪಾತ್ರ ಚಿಕ್ಕದಾದರೂ ನಾಟಕದ ಬಹುಮುಖ್ಯ ತಿರುವನ್ನು ಕೊಡುವ ಪಾತ್ರ. ಈ ವಿಧವೆಯ ಪಾತ್ರದಲ್ಲಿ ತುಂಬಾ ಇಮೋಶನಲ್ ಆಗಿ ಅಭಿನಯಿಸಬೇಕು. ನೀನು ಮಾಡ್ತಿಯಲ್ಲಾ ? ಆರ್ ಯು ಕಾನ್ಪಿಡೆಂಟ್ ಟು ಪ್ಲೇ ದ ರೋಲ್ ? ತುಂಬಾ ಗಂಭೀರವಾಗಿಯೇ ಕೇಳಿದರವರು. ಅವರಿಗೆ ಆ ಪಾತ್ರವನ್ನು ಸಮರ್ಥವಾಗಿ ಶೀಲ ಮಾಡಬಲ್ಲಳೆಂಬ ಸಂಪೂರ್ಣ ನಂಬಿಕೆ ಇದ್ದಂತಿರಲಿಲ್ಲವೇನೊ! ಆ ನಾಟಕದಲ್ಲಿ ಅತ್ಯಂತ ಮಾರ್ಮಿಕವಾದ ಮತ್ತು ಅಭಿನಯದ ಉತ್ತುಂದಗವನ್ನು ಬೇಡುವ ಪಾತ್ರವದು. ಅವರು ಆ ಪಾತ್ರದ ಕುರಿತು ಮತ್ತು ಆ ರೋಲ್‍ನ್ನು ಮಾಡುವ ವಿದ್ಯಾರ್ಥಿನಿಯ ಕುರಿತು ತುಂಬ ಯೋಚಿಸುತ್ತಿರುವಂತಿತ್ತು. ಆದರೆ, ಯಾವಾಗಲೂ ತುಂಬಾ ಹಾಸ್ಯವನ್ನೇ ತಮ್ಮ ಮಾತಗಳಲ್ಲಿ ಅಭಿವ್ಯಕ್ತಿಸುತ್ತಲೇ ಇರುವ ಆ ಭುವನ್ ಸರ್ ಮತ್ತೊಮ್ಮೆ ಹೇಳಿದರು, “ ಆ ವಿಧವೆಯ ಪಾತ್ರವನ್ನು ಶೀಲಾಳಿಗೆ ಕೊಡ್ರಿ. ಮತ್ತೇಕೆ ಬಹಳ ವಿಚಾರ ಮಾಡ್ತೀರಿ? ಅವಳು ಚೆನ್ನಾಗಿ ಮಾಡ್ತಾಳೆ, ಬಿಡ್ರಿ. ಡೊಂಟ್ ವರಿ.” ಎಂದಾಗ ಆ ಪಾತ್ರಕ್ಕೆ ಶೀಲಾ ಸಿದ್ಧಳಾದಳು. ನಿರ್ದೇಶಕರು ಹೇಳಿದಂತೆ ಆ ವಿಧವೆಯ ಪಾತ್ರದ ಭಾವಾಭಿವ್ಯಲಕ್ತಿ ಅಷ್ಟು ಸುಲಭವಾಗಿರಲಿಲ್ಲ. ಪ್ರೇಕ್ಷಕರ ಕಣ್ಣುಗಳಲ್ಲಿ ಕಂಬನಿಯನ್ನು ಜಿನುಗಿಸುವಂತೆ ಮಾಡಬಲ್ಲ, ಆದ್ರಕವಾದ, ಸಂಭಾಷಣೆಯ ಸಾಲುಗಳಿದ್ದವು. ಪ್ರಾರಂಭದಲ್ಲಿ ಶೀಲಾ ಏಕೊ, ತುಸು ಸಂಕೋಚದಿಂದ ಆ ರಿಹರ್ಸಲ್‍ನಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ಆದರೆ, ನಿರ್ದೇಶಕರು ಪಟ್ಟು ಬಿಡದೇ, ಅವಳಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದಿದ್ದರು. ಸಹಜವಾಗಿ, ಆ ಪಾತ್ರದೊಳಗೇ ತಲ್ಲೀನವಾಗುವಂತೆ ಪರಕಾಯ ಪ್ರವೇಶ ಮಾಡುವಂತೆ ಸಾಕಷ್ಟು ತರಬೇತಿ ನೀಡಿ, ಪ್ರೋತ್ಸಾಹಿಸಿದ್ದರು. ನಾಟಕ ಅದ್ಭುತ ಯಶಸ್ಸು ಕಂಡಿತ್ತು. ಆ ನಾಟಕವನ್ನು ಬರೆದ ಲೇಖಕರೂ ಆ ದಿನದ ಪ್ರದರ್ಶನಕ್ಕೆ ಬಂದು ಎಲ್ಲರನ್ನೂ ಅಭಿನಂದಿಸಿ ಹೋಗಿದ್ದರು. ನಾಟಕದ ಎಲ್ಲಾ ಪಾತ್ರಗಳೂ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಅದರಲ್ಲೂ ಶೀಲಾಳ ಅದ್ಭುತ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದರು. ಇಡೀ ನಾಟಕದ ಹೈಲೆಟ್ ಶೀಲಾಳ ಪಾತ್ರವಾಗಿ ಕಾಲೇಜಿನ ಎಲ್ಲರೂ ಮುಕ್ತ ಕಂಠದಿಂದ ಅಭಿನಂದಿಸಿ , ಪ್ರಶಂಸೆಗಳ ಸುರಿಮಳೆಯನ್ನೇ ಮಾಡಿದ್ದರು. ನಿರ್ದೇಶನ ಮಾಡಿದ ಹೇಮಂತ್ ಸರ್ ಅಂತೂ, “ ಶೀಲಾ, ಯುವರ್ ಪರ್‍ಫಾರ್ಮೆನ್ಸ್ ಇಸ್ ವಂಡರ್‍ಫುಲ್. ನಿನ್ನಲ್ಲಿ ಅದ್ಭುತ ಪ್ರತಿಭೆ ಇದೆ. ಮುಂದೆ, ಅವಕಾಶ ಸಿಕ್ಕಾಗ, ಇದನ್ನು ಹಾಬಿ ಆಗಿ ಮುಂದುವರಿಸು” –ಎಂದು ಸಲಹೆಯನ್ನು ಇತ್ತಿದ್ದರು. ಅಲ್ಲೇ, ಅವರ ಜತೆನೇ ಇದ್ದ ಭುವನ್ ಸರ್ ಮಾತ್ರ ಮತ್ತದೇ ತಮ್ಮ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಅಭಿಮಾನದಿಂದಲೇ ಹೇಳಿದ್ದರು; “ ನಾನು ಆ ದಿನಾನೇ ಹೇಳಿರಲಿಲ್ಲಾ? ಆ ವಿಧವೆಯ ಪಾತ್ರಾನಾ ಶೀಲಾಳಿಗೇ ಕೊಡಿ, ಅಂಥಾ. ಆ ಪಾತ್ರಕ್ಕೆ ಅವಳನ್ನು ಸೆಲೆಕ್ಟ್ ಮಾಡಿದ್ದು ನಾನೇ, ನನಗೊಂದು ಪಾರ್ಟಿ ಕೊಡಬೇಕು ನೀವು”- ಎಂದು ಹೇಳಿದ್ದರು.
ಶೀಲಾ ಈಗ ಏಕಾಂತದಲ್ಲಿ ಕುಳಿತು ಮತ್ತೆ, ಮತ್ತೆ ಅವರಾಡಿದ ಆ ಮಾತುಗಳ ಕುರಿತಾಗಿಯೇ ಯೋಚಿಸುತ್ತಾಳೆ!
ತನ್ನ ಇಂದಿನ ಬದುಕಿನ ಶೋಚನೀಯ ಸ್ಥಿತಿಗೂ, ಅಂದು ಅವರಾಡಿದ ಮಾತಿಗೂ ಎಂಥ ಸೋಜಿಗದ ಸಂಬಂಧ ಆಗಿ ಹೋಗಿದೆ! ಅನಿರೀಕ್ಷಿತವಾಗಿ ವೈಧವ್ಯದ ಶಿಕ್ಷೆ ತನಗೆ ಒದಗಿ ಬಂದದ್ದಕ್ಕೂ ಅಂದು ಭುವನ್ ಸರ್ ಪದೇ ಪದೇ ವಿಧವೆಯ ಪಾತ್ರ ಪೋಷಣೆಗೆ ಒತ್ತಾಯಿಸಿದ್ದಕ್ಕೂ ಏನಾದರೂ ಸಂಬಂಧವಿದ್ದೀತೆ ? ! ಇಲ್ಲವಾದರೆ, ಅಷ್ಟೆಲ್ಲಾ ವಿದ್ಯಾರ್ಥಿಗಳಿರುವಾಗ ಬೇರೆಲ್ಲಾ ಪಾತ್ರಗಳು ಉಳಿದವರ ಪಾಲಾದರೆ ಆ ಪಾತ್ರ ಮಾತ್ರ ತನ್ನರಸಿ ಬಂದದ್ದೇಕೆ ? ಅವರು ಮತ್ತೆ, ಮತ್ತೆ ಅದೇ ಪಾತ್ರಕ್ಕೆ ತನ್ನನ್ನು ಆರಿಸಿ ಮಾಡಲು ಒತ್ತಾಯಿಸಿದ್ದೇಕೆ?
ತನ್ನ ಬದುಕೊಂದು ಉತ್ತರ ಕಾಣದ ಪ್ರಶ್ನೆಯಾದದ್ದಾದರೂ ಏಕೆ? ಯೋಚಿಸುತ್ತಾ ಗೋಡ ಮೇಲೆ ಗಂಧದ ಹಾರದಲ್ಲಿ ಬಂಧಿಯಾದ ಗಂಡ ವಿಶಾಲ್‍ನ ಭಾವಚಿತ್ರವನ್ನು ದೃಷ್ಟಿಸುತ್ತಾಳೆ, ಶೀಲಾ ಎಂಥ ಹಸನ್ಮುಖಿ ವ್ಯಕ್ತಿತ್ವ ಅವರದು ! ಕಣ್ಣುಗಳಲ್ಲಿ ಎಂಥ ಕಾಂತಿ ! ಭಾವಪೂರ್ಣವಾದ ಆಕರ್ಷಕ ಮುಖಾರವಿಂದ . ಇದಕ್ಕಲ್ಲವೆ, ತಾನು ಸೋತಿದ್ದು? ಶೀಲಾಳ ಮನಸ್ಸು ಆರೇಳು ವರ್ಷ ಹಿಂದಕ್ಕೋಡಿತು. ಬಯಲು ಸೀಮೆಯ ತಾಲೂಕೊಂದರಲ್ಲಿ ಶಿಕ್ಷಕಿಯಾಗಿ ನೇಮಕಾತಿ ಆದಾಗ, ನೌಕರಿಯ ಸಂತೋಷವಿದ್ದರೂ ಹೊಸ ವಾತಾವರಣ ಹೊಸ ಊರಿನ ಆ ಪರಿಸರದಲ್ಲಿ ಹೊಂದಿಕೊಳ್ಳಲು ಪ್ರಯಾಸ ಪಡುತ್ತಿರುವಾಗಲೇ ಅಲ್ಲವೇ ವಿಶಾಲ್ ಪರಿಚಯವಾದದ್ದು! ತನ್ನೂರಿನ ಪಕ್ಕದೂರಿನವನೇ ಆದ ವಿಶಾಲ್‍ನನ್ನು ನೋಡಿದಾಗ ಯಾವುದೋ ಆಪ್ತತೆ, ಆತ್ಮೀಯತೆ ಉಂಟಾಗದಿರಲಿಲ್ಲ. ಜತೆಗೆ, ಆಕರ್ಷಕ ರೂಪಿನ ತನ್ನದೇ ಉದ್ಯೊಗವನ್ನು ಮಾಡುವ ಆತನ ಸುಶಿಕ್ಷಿತ ನಡವಳಿಕೆ, ಸ್ನೇಹಮಯ ವ್ಯಕ್ತಿತ್ವ ಅವಳ ಮನಸ್ಸಿನಲ್ಲಿ ಶಬ್ಧಗಳಲ್ಲಿ ಹೇಳಲಾರದ ಯಾವುದೊ ವಿಚಿತ್ರ ಆಕರ್ಷಣೆಗೆ ಒಳಗಾಗುವಂತೆ ಮಾಡಿತ್ತು. ಶೀಲಾ ತುಂಬ ಸುಸಂಸ್ಕ್ರತ ಮನಸ್ಸಿನ ಸಾತ್ವಿಕ ಸ್ವಭಾವದ ಶಿಕ್ಷಕಿ. ಒಂದು ದಿನ ಅನಿರೀಕ್ಷಿತವಾಗಿ ವಿಶಾಲ್ ಧೈರ್ಯ ಮಾಡಿ ಕೇಳೇ ಬಿಟ್ಟಿದ್ದ, ;” ಶೀಲಾ ಒಂದು ಮಾತು ಪರ್ಸನಲ್ ತುಂಬಾ ಪರ್ಸನಲ್ ಆದದ್ದು, ಕೇಳಲಾ?” ಅವಳು ಆಶ್ಚರ್ಯದಿಂದ ಅವಾಕ್ಕಾಗಿ, ಹೇಳಿದಳು. “ಕೇಳಿ, ಸರ್ ಅದರಲ್ಲೇನಿದೆ? ಇಲ್ಲಿ ದ್ದಷ್ಟು ವರ್ಷ, ನೀವಿದ್ದುದಕ್ಕೆ ನನಗೆಷ್ಟು ಹೆಲ್ಪ್ ಆಯ್ತು ಗೊತ್ತಾ? ಅದಕ್ಕೆ, ಎಷ್ಟು ಕೃತಜ್ಞತೆ ಹೇಳಿದ್ರೂ ಸಾಲದು. ಅದಕ್ಕೆ ಕಾದಿದ್ದವನಂತೆ ವಿಶಾಲ್ ಹೇಳಿದ್ದ. “ ನೀವೊಂದು ದಿನ ಹೇಳಿದ್ರಿ. ನಿಮ್ಮ ತಂದೆ-ತಾಯಿ ಎಲ್ಲಾ ತುಂಬಾ ಬ್ರಾಡ್‍ಮೈಂಡೆಂಡ್ ಅಂಥಾ, ಹಾಗಾಗಿ..... ಎಂದು ಅನುಮಾನಿಸುತ್ತಾ ಮಾತಿಗೆ ಬ್ರೇಕ್ ಹಾಕಿದ್ದ ವಿಶಾಲ. ಆಗ ಶೀಲಾ ನಗುತ್ತ, “ ಹೇಳಿ, ಏನ್ ವಿಷಯ. ಅದಕ್ಕೇಕೆ ಸಂಕೋಚ ಪಡ್ತೀರಿ?” ಎಂದು ಹುರಿದುಂಬಿಸಿದಾಗ, ಆತ ಕೇಳಿದ್ದ, “ ನಿಮಗಿಷ್ಟ ಇದ್ರೆ, ನಾವಿಬ್ಬರೂ ಏಕೆ ಮದುವೆ ಆಗಬಾರದು ? ಹೇಗೂ ಒಂದೇ ವೃತ್ತಿ; ಒಂದೇ ಊರಲ್ಲಿದ್ದೇವೆ.” ಶೀಲಾ ಅನಿರೀಕ್ಷಿತ ಪ್ರಶ್ನೆಯಾದರೂ ಗಾಬರಿಗೊಂಡಂತಿರಲಿಲ್ಲ. ಸ್ವಲ್ಪ ಗಂಭೀರಳಾಗಿ, “ ನಾನು ಈವರೆಗೆ ಈ ರೀತಿ ಯೋಚಿಸಿರಲಿಲ್ಲ. ನಮ್ಮನೇಲಿ ಕೇಳಿ ಹೇಳ್ತೀನಿ.” ಎಂದಾಗ, ವಿಶಾಲ್ ಮುಗುಳ್ನಗುತ್ತ, “ ಸರಿ” ಎಂದಿದ್ದ.
ಮುಂದಿನದ್ದೆಲ್ಲಾ ಯಾವ ತೊಂದರೆ ಇಲ್ಲದೇ, ಸರಳವಾದ ವಿವಾಹ ನಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಅನ್ಯೋನ್ಯವಾಗಿ ಬಾಳುತ್ತಿದ್ದರು. ಒಂದು ವರ್ಷದೊಳಗೆ ಮುದ್ದಾದ ಗಂಡು ಮಗು ರೋಹಿತ್ ಶೀಲಾಳ ಮಡಿಲು ತುಂಬಿದ್ದ. ಗಂಡನ ಮನೆಯಲ್ಲೂ ತನ್ನ ಸೌಜನ್ಯದ ನಡವಳಿಕೆಯಿಂದ ಎಲ್ಲರ ಪ್ರೀತಿ- ಗೌರವಕ್ಕೆ ಭಾಜನಳಾಗಿದ್ದಳು. ಆದರೆ, ಶೀಲಾಳ ಬದುಕಿನಲ್ಲಿ ಅವಳು ಕನಸಲ್ಲೂ ಎಣಿಸಿರದ ಬಿರುಗಾಳಿ ಬೀಸಿ, ಅವಳ ಪ್ರಶಾಂತ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಟ್ಟಿತ್ತು. ತೀವ್ರ ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ವಿಶಾಲ್ ಔಷಧದ ರಿಯಾಕ್ಷನ್‍ನಿಂದ ಅನಾರೋಗ್ಯದ ವಿಪರೀತ ಸ್ಥಿತಿಗೆ ಸಿಲುಕಿ, ಡಾಕ್ಟರರ ಎಣಿಕೆ ಚಿಕಿತ್ಸೆಗೂ ನಿಲುಕದಂತಾಗಿ ಅತ್ಯಶ್ಚರ್ಯವೆಂಬಂತೆ ಬಾಳಯಾತ್ರೆ ಮುಗಿಸಿ ನೇಪಥ್ಯಕ್ಕೆ ಜಾರಿದ್ದ. ಸುದ್ಧಿ ತಿಳಿದ ಶೀಲಾ ಸತ್ಯವನ್ನು ಅರಗಿಸಿಕೊಳ್ಳಲಾರದೇ ಮೌನಲೋಕಕ್ಕೆ ಜಾರಿದ್ದಳು. ಈ ಎಳೆಯ ವಯಸ್ಸಿನಲ್ಲಿ ಮುದ್ದಾದ ಚಿಕ್ಕ ಮಗುವನ್ನು ಬಿಟ್ಟು ಅಗಲಿ ಹೋಗಿದ್ದ ಆಘಾತವನ್ನು ಅವಳು ಸಹಿಸುವುದು ಅಸಾಧ್ಯವಾಗಿತ್ತು.
ಬದುಕಿನ ವ್ಯಂಗ್ಯವೊ, ಸಾವಿನ ನಿರ್ಧಯೆಯೊ ಅರ್ಥವಾಗದೇ, ಕಂಗಾಲಾದಾಗ ರೋಹಿತ್‍ನ ಮುಖವನ್ನು ನೋಡಿ ತನ್ನೆಲ್ಲ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದರೂ, ಥಟ್ಟನೆ, ಒಮ್ಮಿಂದೊಮ್ಮೆಲೆ ಕಣ್ಣೆದುರಿಗೆ ಬಂದು ಕಾಡುವ ವಿಶಾಲ್‍ನ ನೆನಪು ಅವಳ ಕಣ್ಣುಗಳನ್ನು ಒದ್ದೆಯಾಗಿಸುತ್ತಲೇ ಇತ್ತು. ಇಂದೂ ಕೂಡ ಹೀಗೆ, ಕಳೆದ ಮಧುರ ನೆನಪುಗಳೆಲ್ಲಾ ಒತ್ತರಿಸಿ ಬಂದು, ಇನ್ನು ಮುಂದೆ ಇದೆಲ್ಲಾ ಬರಿ ಕನಸೇ ಎಂದೆನಿಸಿ, ಮೌನಕ್ಕೆ ಜಾರಿ ಕಣ್ಣು ತೇವವಾದಾಗಲೇ ಮಗ ಬಂದು, ಸೆರಗನ್ನೆಳೆಯುತ್ತಾ ತನ್ನನ್ನು ಪ್ರಶ್ನಿಸಿದ್ದಲ್ಲವೆ?
ಶೀಲಾ ಶೂನ್ಯ ಮನಸ್ಕಳಾಗಿ ಆತನ ಪ್ರಶ್ನೆಗೆ ಉತ್ತರಿಸಲಾಗದೇ ರೋಹಿತ್‍ನನ್ನು ತನ್ನೆದೆಗೆ ಬರಸೆಳೆದು ಮುದ್ದಿಸುತ್ತಾ ಅಪ್ಪಿಕೊಂಡು ಬಿಕ್ಕಳಿಸತೊಡಗಿದಳು. ಆ ಅಳುವಿನಲ್ಲೂ ಅವಳನ್ನು ಕಾಡುತ್ತಿರುವುದು ಒಂದೇ ಪ್ರಶ್ನೆ: “ ಆ ಸರ್ ನನಗೆ ವಿಧವೆಯ ಪಾತ್ರಕ್ಕೆ ಏಕೆ ಒತ್ತಾಯಿಸಿದರು?!
ಯಾವ ಶಕ್ತಿ ತನ್ನಿಂದ ಆ ಪಾತ್ರ ಮಾಡಿಸಿತ್ತು? ಅವರು ನನಗೆ ಆ ಪಾತ್ರಕ್ಕಾಗಿ ಒತ್ತಾಯಿಸಲು, ವಿಧಿ ಮೊದಲೇ ನಿರ್ಧರಿಸಿ ಅವರಿಂದ ಆಯ್ಕೆ ಮಾಡಿಸಿತೆ? ನಮ್ಮ ವಿಧಿ ಪೂರ್ವನಿರ್ಧರಿತವೆ? ತಾನು ಆ ಪಾತ್ರ ಮಾಡುವುದಕ್ಕೂ , ತನ್ನ ಬದುಕು ಅಕಾಲಿಕವಾಗಿ ಹೀಗಾಗುವುದಕ್ಕೂ , ಯಾವುದಾದರೂ ಸಂಬಂಧ ಇದ್ದೀತೆ? ಯೋಚಿಸುತ್ತಾ ಹೋದಂತೆ ಎಲ್ಲವೂ ಅಯೋಮಯವಾದೆಂತೆನಿಸಿ ಮನಸ್ಸು ಪ್ರಕ್ಷುಬ್ಧಗೊಂಡು ಮಲಗಿದ ಮಗನ ಬೆನ್ನನ್ನು ತಟ್ಟುತ್ತ, ಕಣ್ಣು ಮುಚ್ಚಲು ಪ್ರಯತ್ನಿಸಿದರೂ ಅವಳ ಕಣ್ಣು ಮುಂದೆ, ಆ ನಾಟಕದಲ್ಲಿ ಶ್ವೇತವಸ್ತ್ರಧಾರಿಯಾಗಿ ಅವಳು ಅಭಿನಿಯಿಸಿದ ಆ ವಿಧವೆಯ ಪಾತ್ರವೇ ಬಂದು ಕಾಡುತ್ತಿರುವಂತೆ ಭಾಸವಾಯಿತು.
-ಹೊನ್ನಪ್ಪಯ್ಯ ಗುನಗ
ಶ್ರೀ.ಹೊನ್ನಪ್ಪಯ್ಯ ಎಸ್. ಗುನಗಾ ವೃತ್ತಿಯಲ್ಲಿ ಇಂಗ್ಲೀಷ ಉಪನ್ಯಾಸಕರಾದರೂ ಕನ್ನಡ ಸಾಹಿತ್ಯಾರಾಧನೆಯಲ್ಲಿ ಬಹುವಾಗಿ ತೊಡಗಿಕೊಂಡವರು. ಈಗಾಗಲೇ ಅವರು ‘ವಶವಾಗುವ ಮುನ್ನ’ ಎಂಬ ಕವನ ಸಂಕಲನ ಮತ್ತು ‘ ಅರ್ಥ’ ಎಂಬ ಕಥಾ ಸಂಕಲನ ಹಾಗೂ ‘ ಕೌತುಕದ ಕನ್ನಡಿ’ ಎಂಬಅಂಕಣ ಬರೆಹ ಸಂಕಲನವನ್ನು ಪ್ರಕಟಿಸಿದ್ದಾರೆ. ಬರೆವಣಿಗೆಯ ಜೊತೆಗೆ ಸಂಘಟನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ,ಆಲೋಚನಾ ವೇದಿಕೆಯ ಪದಾಧಿಕಾರಿಯಾಗಿ, ಶ್ರೀ ನಾರಾಯಣ ಪ್ರತಿಷ್ಠಾನದ ಪದಾಧಿಕಾರಿಯಾಗಿ ಇವುಗಳ ಜೊತೆಗೆ ಉತ್ತರ ಕನ್ನಡ ಪದವಿ ಪೂರ್ವ ನೌಕರರ ಸಂಘ ಹಾಗೂ ಉತ್ತರ ಕನ್ನಡ ಇಂಗ್ಲೀಷ ಉಪನ್ಯಾಸಕರ ಸಂಘಗಳ ಕಾರ್ಯದರ್ಶಿಯಾಗಿಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಶ್ರೀ.ಹೊನ್ನಪ್ಪಯ್ಯನವರು ಪತ್ರಿಕೆಗಳಿಗೆ ಲೇಖನ ಬರೆಯುವುದಲ್ಲದೆ ನಾಟಕ ಮತ್ತು ಯಕ್ಷಗಾನಗಳಲ್ಲಿಯೂ ಅಭಿನಯಿಸುವ ಮೂಲಕ ಸದಾ ಕ್ರಿಯಾ ಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Comments