ಬಾನಲಿ ತೇಲುವ
ಹೊಳೆಯುವ ತಾರೆಗೆ
ಬೆಳಕನು ಕೊಟ್ಟವರಾರಮ್ಮ?
ಜಗವನು ಬೆಳಗುವ
ಸೂರ್ಯನ ಕಿರಣಕೆ
ಶಕ್ತಿಯ ಕೊಟ್ಟವರಾರಮ್ಮ?
ಜುಳುಜುಳು ಹರಿಯುವ
ನದಿಗಳ ಒಡಲಲಿ
ಮೀನನು ಬಿಟ್ಟವರಾರಮ್ಮ?
ಕಡಲಿನ ಒಡಲಲಿ
ಮುತ್ತು ರತ್ನಗಳ
ಅಡಗಿಸಿ ಇಟ್ಟವರಾರಮ್ಮ?
ಯಾವುದು ಕೆಡುಕನು
ಮಾಡದೆ ಇದ್ದರು
ಗೂಡಲಿ ಬಂಧಿಯು ಗಿಳಿರಾಮ
ಕಾಡಿನ ಪ್ರಾಣಿಯ
ತಿನ್ನುವ ಹುಲಿಗಳು
ಸ್ವತಂತ್ರ ಮೆರೆದಿವೆ ಗಿರಿಧಾಮ
ಪುಟ್ಟನ ಪ್ರಶ್ನೆಯ
ಕೇಳಿದ ಅಮ್ಮನು
ಬಾಯಲಿ ತುತ್ತನು ತೂರಿಸುತ್ತಾ
ಊಟವ ಮಾಡಿದ
ಕೂಡಲೆ ಹೇಳುವೆ
ಚಂದ್ರನ ಮೋರೆಯ ತೋರಿಸುತ್ತಾ.
ಮಂಜುನಾಥ ನಾಯ್ಕ ಯಲ್ವಡಿಕವೂರ