top of page

ಪಾಟಿ - ಕಡ್ಡಿ

ಬಾಲ್ಯದ ಅಂಗಳದಲ್ಲಿ ಮರಳಿ ನೆನಪಿನೊಡನೆ ಕಾಲಿಡುವಾಗ ಪ್ರತಿಯೊಬ್ಬರಿಗೂ ಪಾಟಿ ಕಡ್ಡಿ ನೆನಪಾಗಲೇಬೇಕು. ಅವು ಬಾಲ್ಯದ ಅಂಗಳದ ಅಂತಃಸತ್ವ, ಜೀವನಾಡಿ, ಬಾಲ್ಯದ ನೆನಪಿನ ದಿಬ್ಬಣ. ಹಳ್ಳಿಯಲ್ಲಿ ಬಾಲ್ಯವನ್ನು ಕಳೆದವರಿಗಂತೂ ಪಾಟಿ ಕಡ್ಡಿ ಬಾಲ್ಯದ ಮೈಲುಗಲ್ಲಿನ ಮೆಟ್ಟಿಲುಗಳೆಂದರೆ ತಪ್ಪಾಗಲಾರದೇನೋ? " ಯಾವ ಶಾಲೆಗೆ ಹೋಗುತೆ ತಮಾ" ಎಂದು ಯಾರಾದರೂ ಕೇಳಿದರೆ "ಕನ್ನಡ ಶಾಲೆಗೆ" ಅಂತ ಉತ್ತರಿಸುವ ಮುಗ್ಧ ಪರಿಪಾಠವೊಂದು ಮನೆಮಾತಾಗಿರುವ ಕಾಲಮಾನದ ಗಡಿ ದಾಟಿ ಬಂದ ಉತ್ತರಗಳು ಈಗೀಗ ತಮ್ಮ ಒರಸೆಯನ್ನು ಬದಲಿಸಿಕೊಂಡಿವೆ. ಆದರೂ ಕನ್ನಡ ಶಾಲೆಯ ಪಾಟಿ ಕಡ್ಡಿಯು ಇಂದು ಬಹುತೇಕರ ಭವಿಷ್ಯವನ್ನು ರೂಪಿಸಿದ ಒಡನಾಡಿ ಜೀವನಾಡಿ ಕೂಡ.


ಪಾಟಿಯಲ್ಲಿ ವಿವಿಧ ಬಗೆ- ಪ್ಲಾಸ್ಟಿಕ್ ಅಂಚನ್ನು ಹೊಂದಿರುವ ಪಾಟಿ, ಫೈಬರ್ ತರದ ಅಂಚನ್ನು ಹೊಂದಿರುವ ಪಾಟಿ, ಮರದ ಪಾಟಿ, ಕಲ್ ಪಾಟಿ, ಮಣಿ ಪಾಟಿ ಇತ್ಯಾದಿ. ಮಣಿ ಪಾಟಿ ಇಟ್ಟುಕೊಂಡವ ತರಗತಿಯಲ್ಲಿ ಕೊಂಚ ಆಕರ್ಷಣೀಯವಾಗಿಯೇ ಇರುತ್ತಿದ್ದ. ನನ್ನಂತವರಿಗೆ ಈ ಪಾಟಿ ಹೊಸದೇ ಇರಬೇಕೆಂದೇನಿಲ್ಲ. ಮೇಲಿನ ತರಗತಿಗೆ ಹೋದ ಮಕ್ಕಳ ಹಳೆ ಪಾಟಿ, ತಾಯಿ ಕೂಲಿಗೆ ಹೋದಾಗ ಯಜಮಾನರ ಮಕ್ಕಳ ಹಳೆ ಪಾಟಿ ಹೀಗೆ ಪಾಟಿಗಳನ್ನು ವಿಂಗಡಿಸಿಕೊಂಡಿದ್ದೂ ಇತ್ತು. ಆದರೆ ಪಾಟಿ ಪಾಟಿಯೇ. ಅದರ ಪ್ರೀತಿ ಮತ್ತು ರೀತಿಯೇ ನಿತ್ಯ ಹೊಸತನದ ಖುಷಿ ಕೊಡುವುದು. ಆದರೆ ಈ ಪಾಟಿ ಮನೆಯಿಂದ ಶಾಲೆಗೆ ಖಾಲಿ ಪಾಟಿಯಾಗಿ ಬಂದದ್ದು ವಿರಳ. ಸದಾ ಪಾಟಿಯೊಳಗೆ ಶಿಕ್ಷಕರು ಹೇಳಲಿ ಬಿಡಲಿ ಅಂಕಿಗಳು, ಮಗ್ಗಿ, ವರ್ಣಮಾಲೆ, ಶಬ್ದ ಹೀಗೆ ಸದಾ ಏನಾದರೊಂದನ್ನಾದರೂ ಬರೆದುಕೊಂಡೆ ಬರುವ ರೂಢಿಯಿತ್ತು. ಶಾಲಾ ಪ್ರಾರ್ಥನೆ ಆದ ನಂತರ, ಹಾಜರಿ ಹೇಳಿದ ಮೇಲೆ, ಮನೆಯಿಂದ ಬರೆದುತಂದ ಪಾಟಿಯನ್ನು ಶಿಕ್ಷಕರಿಗೆ ತೋರಿಸಿ ಅವರಿಂದ ಅಚ್ಚರಿ, ಶಬ್ಬಾಶ್ ಗಿರಿ ತೆಗೆಂದುಕೊಂಡರೆ ಆ ದಿನ ಪೂರಾ ಖುಷಿ. ಕೆಲವೊಮ್ಮೆ ಮಳೆ ಹನಿಗೋ, ಮಗ್ಗಿ ಪುಸ್ತಕದ ಮುತ್ತಿನ ಮತ್ತಿಗೋ ಪಾಟಿಯಲ್ಲಿನ ಬರಹಗಳು ಅಳಿಸಿ ಹೋದಾಗ ಗುರುಗಳೆದರು ಪಾಟಿ ಹಿಡಿದು ನಿಲ್ಲುವಾಗ ಸಣ್ಣ ಭಯವಿದ್ದರೂ ದಪ್ಪನೆಯ ಸೀಮೆಸುಣ್ಣ ದಿಂದ ಸರಿ ಗುರುತು ಹಾಕಿದರೆ ನಿರಾಳ. ಈ ಪಾಟಿಯು ನನ್ನಂತವರೊಡನೆ ದೀರ್ಘವಾಗಿ ಬಾಳಿದರೆ ಕೇಲವರೊಡನೆ ಕೇಲ ದಿನಗಳಷ್ಟೇ ಬಾಳಿಕೆ ಬರುತ್ತಿತ್ತು. ಪಾಟಿಯಲ್ಲಿ ಬರೆದ ಬರಹವನ್ನು ಅಳಿಸುವಾಗ ಎಂಜಲು ಹಾಕಿ ಒರೆಸುವುದರಿಂದ, ತಲೆಗೆ ಹಾಕಿದ ಎಣ್ಣೆ ತೆಗೆದು ಒರೆಸಿದರಿಂದ ಅಕ್ಷರ ಮೂಡದ ಪಾಟಿ ಒಂದು ಕಡೆಯಾದರೆ, ಪಾಟಿಯ ಅಂಚನ್ನು ಕಚ್ಚಿ ಕಚ್ಚಿ ನಾಲ್ಕು ಮೂಲೆಯ ಪಾಟಿ ಮೂರು ಮೂಲೆಯಾಗುವ ಸಂದರ್ಭವೂ ಸೃಷ್ಟಿಯಾಗುತ್ತಿತ್ತು.


ಕನ್ನಡದಲ್ಲಿ ಕಡ್ಡಿ ಪದ ಬಳಕೆ ನಾನಾರ್ಥಗಳಿಂದ ಕೂಡಿದ್ದರೂ ಪಾಟಿಯೊಂದಿಗೆ ಜೊತೆಯಾಗಿ ಬರುವ ಕಡ್ಡಿ ಪದವು ವಿಶೇಷ. ಈ ಕಡ್ಡಿ ಪಾಟಿಯ ಆಪ್ತ ಜೊತೆಗಾರ. ಬೆಳ್ಳಗೆ ಮೈಗೆ ಪೌಡರನ್ನು ತಾಗಿಸಿಕೊಂಡ ಈ ಕಡ್ಡಿಅಂಗಡಿಯಿಂದ ಒಂದು ಗೇಣಾಗಿ ಕೈಗೆ ಬಂದರೆ ಅದು ಕೆಲ ದಿನಗಳಲ್ಲಿಯೇ ಬೆರಳಿಗೂ ಸಿಗದೆ ಮೋಟಾಗಿ ಇರುತ್ತಿತ್ತು. ಅದಕ್ಕೆ ಹಲವು ಕಾರಣ ಅವರವರ ಅನುಭವದ ಎಲ್ಲೆಮೀರಿ ಇದು ಸಣ್ಣ ಆಗುವುದರ ಹಿಂದೆ ಅಲಿಖಿತ ಇತಿಹಾಸವಿದೆ. ಎಷ್ಟೋ ಮಕ್ಕಳ ಹೊಟ್ಟೆಯಲ್ಲಿ ಹಿಟ್ಟಾಗಿ ಈ ಕಡ್ಡಿ ಇಳಿದಿದ್ದು, ಮೋಟಾದ ಕಡ್ಡಿ ಮೂಗಿನೊಳಗೆ ಸಿಕ್ಕಿಸಿಕೊಂಡ ಸಾಕಷ್ಟು ನೆನಪಿನ ಚೀಲಗಳೂ ಜೀವಂತವಾಗಿಯೇ ಇವೆ‌. ಈ ಪಾಟಿ ಕಡ್ಡಿಯೊಂದಿಗೆ ಸಂಪೂರ್ಣ ಮರೆತೆ ಹೋದಂತೆ ಘಟನೆಯೊಂದಿದೆ. ಅದೇನೆಂದರೆ ಮಳೆಗಾಲದ ಸಮಯದಲ್ಲಿ ಶಾಲೆಯಲ್ಲಿ ಪಾಟಿಯಲ್ಲಿ ಬರೆದು ಅಳಿಸಿ ಹೊಸತೊಂದನ್ನು ಬರೆವಾಗ "ಅಕ್ಕೋರೆ ಪಾಟಿಗೆ ಹೊರಗೆ ಹೋಗಿ ನೀರು ಹಾಕಿಕೊಂಡು ಬರ್ತೇನೆ" ಅಂತ ಹೇಳಿ, ಶಾಲೆಯ ಹಂಚಿನಿಂದ ಉದುರುವ ಹನಿಗಾಗಿ ಕಾಯುತ್ತ, ರಸ್ತೆಯಲ್ಲಿ ಹೋಗುವವರನ್ನು, ಸೈಕಲ್, ಬಸ್ಸುಗಳನ್ನು ನೋಡುವ ರೂಢಿಯೂ ಇತ್ತು. ಇದು ಅಲ್ಲಿ ಮುಖ್ಯವೇನಲ್ಲ. ಆದರೆ ಮಣ್ಣು ಕಲ್ಲಿನ ಪಾಗರ, ಗೊಬ್ಬರದ ಗುಂಡಿ ಹಾಗೂ ಇನ್ನೂ ಮಧ್ಯಮ ತೇವಾಂಶದ ಜಾಗದಲ್ಲಿ ಹುಲುಸಾಗಿ ಬೆಳೆದ ನಮ್ಮಗಳ ಭಾಷೆಯ 'ಪಾಟಿ ಗಿಡ' ಒಂದಿತ್ತು. ಅದನ್ನು ಕಿತ್ತು ಬುಡ, ತಲೆ, ಕೈಗಳನ್ನು ತೆಗೆದು ಉದ್ದನೆಯ ಮೈನ ಆ ಗಿಡದ ಕಾಂಡ ಶಾಲೆಯಲ್ಲಿ ಒಂದು ಇಡೀ ಪಾಟಿಗಿಡದ ಕಾಂಡವನ್ನು ಒಂದು ಪೂರ್ಣ ಪಾಟಿ ಕಡ್ಡಿಗೆ ಮಾರಲಾಗುತ್ತಿತ್ತು. ತನ್ನ ಕಾಂಡದೊಳಗೆ ಸಂಪೂರ್ಣ ನೀರಿನ ಅಂಶ ಹೊಂದಿರುವ ಈ ಗಿಡ ಪಾಟಿ ಒರೆಸಲು ನೀರಿನಂತೆ ಕೆಲಸ ಮಾಡುತ್ತಿತ್ತು.


ಈ ಪಾಟಿ ಕಡ್ಡಿಯೊಂದಿಗೆ ಇನ್ನೊಂದು ನೆನಪು ಪಾಟಿಚೀಲ. ಅಮಾವಾಸ್ಯೆ, ಹಬ್ಬಗಳಿಗೆ ಸ್ವಲ್ಪ ದೊಡ್ಡ ಪ್ಲಾಸ್ಟಿಕ್ ಕವರನಲ್ಲಿ ಸಾಮಾನು ಕಟ್ಟಿಸಿಕೊಂಡು ಬಂದರೆ ಆ ದೊಡ್ಡ ಪ್ಲಾಸ್ಟಿಕ್ ಚೀಲವೇ ನಮಗೆ ಪಾಟಿಚೀಲವಾದದ್ದು ಇದೆ. ಪ್ಲಾಸ್ಟಿಕ್ ಕವರನ ಎರಡು ಹಿಡಿಕೆಗಳನ್ನು ಎರಡು ತೋಳುಗಳಿಗೆ ಸಿಕ್ಕಿಸಿಕೊಂಡು ಹೊಸ ಆವಿಷ್ಕಾರ ಮಾಡಿದಂತೆ ಶಾಲೆಗೆ ಬರುವುದೊಂದು ಹೊಸ ಖುಷಿ. ಮೇಲಿನ ತರಗತಿಗೆ ಹೋದಂತೆ ಬೆಲ್ಟಗಳಲ್ಲಿ ಪುಸ್ತಕ ಪಟ್ಟಿಯನ್ನು ಹಾಕಿ ಬಿಗಿದು, ಒಂದು ಹೆಗಲಿಗೆ ಏರಿಸಿಕೊಂಡು, ಅದರಲ್ಲೂ ಮುಂದಿನ ತರಗತಿಯವರ ಹಳೆ ಪುಸ್ತಕದ ಪಟ್ಟಿಯನ್ನು ಸಹ ನಮ್ಮ ಪಠ್ಯ ಪುಸ್ತಕದೊಂದಿಗೆ ಸೇರಿಸಿ ಹೆಚ್ಚು ಪುಸ್ತಕ ಪಟ್ಟಿ ಕಾಣಲೆಂದು ಬಯಸುವುದರ ಹಿಂದೆ ಇಂದಿನ ಬ್ಯಾಗ್ ರಹಿತ ದಿನದ ನಿಯಮ ನೆನಪಾಗುತ್ತದೆ. ಅಲ್ಲದೇ ಮದುವೆಮನೆಯಲ್ಲಿ ಅಜ್ಜಿಯರಿಗೆ ಉಡುಗೊರೆ ಮಾಡಲು ತಂದ ಸೀರೆಗೆ ಸುತ್ತಿದ ಕವರ್ ಪೇಪರ್ ಮಾತ್ರ ನಮ್ಮ ನೆಚ್ಚಿನ ಶಿಕ್ಷಕರ ವಿಷಯಗಳ ಪಠ್ಯ ಪುಸ್ತಕಕ್ಕೆ ಬೈಂಡಿಂಗ್ ಆಗಿರುತ್ತಿತ್ತು.


ಇಂದು ಎಲ್ಲವೂ ಡಿಜಿಟಲೀಕರಣ. ಅಂಗೈನಲ್ಲಿ ಎಲ್ಲವೂ ಸಿಕ್ಕುವ ಕಾಲಮಾನ. ಆನ್ಲೈನ್ ಶಿಕ್ಷಣ, ಟ್ಯೂಷನ್, ಸಾಲು ಸಾಲು ಖಾಸಗಿ ಶಾಲೆ, ವಿವಿಧ ಕ್ಲಾಸುಗಳು ಎಲ್ಲವೂ ಮಗುವಿನ ಪ್ರಾಥಮಿಕವಾದ ಬೌದ್ಧಿಕ ಬೆಳವಣಿಗೆಯನ್ನು ಕಸಿದುಕೊಂಡು,ಪರಿಸರ ಪ್ರಕೃತಿಯಿಂದ ಅನಾಥನನ್ನಾಗಿಸುತ್ತಿದೆ.

ನೂರಾರು ಹಳ್ಳಿಯ ಆಟಗಳು ಇಂದು ಕಣ್ಮರೆಯಾಗಿವೆ. ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಬಾಲ್ಯ ಮಾತ್ರ ಅವನ ಬದುಕಿನ ಅಚ್ಚರಿಯ, ಖುಷಿಯ, ಆತ್ಯಂತಿಕ ಕ್ಷಣ. ಈ ಬಾಲ್ಯದ ಅಂಗಳ ಪ್ರತಿ ಮನುಜನ ಇತಿಹಾಸದ ಮೂಲಪ್ರತಿ. ಬಾಲ್ಯಕ್ಕೆ ಅದರದೇ ಆದ ಬೆಳವಣಿಗೆ ಅಗತ್ಯ. ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿಯ ನಿಯಮಗಳು. ಆದರೆ ಅದರ ವಿಧಿವಿಧಾನ ಮಾತ್ರ ಮನುಷ್ಯ ತನಗೆ ಬೇಕಾದಂತೆ ಬದಲಾಯಿಸಲು ಹೋಗಿ ಸಾಕಷ್ಟು ಸಲ ವಿಫಲನಾಗಿದ್ದಾನೆ. ಪ್ರತಿ ಮಗುವಿಗೂ ಸುತ್ತಲಿನ ವ್ಯಕ್ತಿ ಪರಿಸರದಿಂದ ಬಾಲ್ಯದ ಅನುಭವವಾಗಬೇಕು.

ಬಾಲ್ಯವೆಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮುಗಿಯದ ಅಧ್ಯಾಯ. ಆದರೆ ಈ ಬಾಲ್ಯದಲ್ಲಿ ಜೊತೆಯಾದ ಜಾಗ, ಒಡನಾಡಿದ ಒಡನಾಡಿಗಳು, ಆಡಿದ ತರಲೆ, ತುಂಟಾಟ, ಹರಟೆ, ಹುರುಪು, ಅಲೆದಾಟ ಇವುಗಳ ಸುತ್ತ ಒಮ್ಮೆ ಹಾಗೆ ಅಡ್ಡಾಡಿ ಬನ್ನಿ. ಅಲ್ಲಿ ಸಿಗುವ ಮಜವೇ ಬೇರೆ..


✍️ ಮೋಹನ್ ಗೌಡ ಹೆಗ್ರೆ, ಅಂಕೋಲಾ


ಮೋಹನ್ ಗೌಡ, ಹೆಗ್ರೆ,ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹೆಗ್ರೆ ಗ್ರಾಮದವರು. ವೃತ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇವರು ಓದು-ಬರಹಗಳಲ್ಲಿ ಅಪಾರ ಆಸಕ್ತಿ ಹೊಂದಿದವರು. ಈಗಾಗಲೇ ಅವರ ಕವನ ಮತ್ತು ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಮಾಜ ಮುಖಿಯಾಗಿ ಚಿಂತಿಸುವ ಇವರ ಬರವಣಿಗೆಯ ದಾಟಿ ಹೊಸ ಭರವಸೆಯನ್ನು ಹುಟ್ಟಿಸುತ್ತದೆ. ಅವರ ಈ ಕವನ ತಮ್ಮ ಓದಿಗಾಗಿ -ಸಂಪಾದಕ

246 views1 comment
bottom of page