top of page

ಪಿ.ಕಾಳಿಂಗರಾಯರು

ಅಗಸ್ಟ್ ೩೧ ಅವರ ಜನ್ಮದಿನ

  • "***********************

ನವೋದಯದ ಕವಿಗಳಿಗೆ ದನಿಯಾದ

ಪಿ. ಕಾಳಿಂಗರಾಯರು

  • ********************

ಕನ್ನಡದ ನವೋದಯ‌/ ರಮ್ಯ ಕಾವ್ಯ ಇಂದಿಗೂ ಕನ್ನಡ ಕಾವ್ಯಾಸಕ್ತರಿಗೆ, ಕಾವ್ಯರಸಿಕರಿಗೆ ಬಹಳ ಪ್ರಿಯವಾಗಿರುವದಕ್ಕೆ, ಅವುಗಳ ಸತ್ವಸೌಂದರ್ಯಗಳು ಕಾರಣವಾದಂತೆ , ಅವುಗಳಿಗೆ ದನಿಯಾಗಿ ಅವನ್ನು ಜನರ ಮನಸ್ಸಿನಲ್ಲಿ ಇಂದಿಗೂ‌ಉಳಿಯುವಂತೆ ಮಾಡಿದ ಸುಗಮ ಸಂಗೀತಕಾರರೂ ಅಷ್ಟೇ ಕಾರಣ ಎಂದು ನನ್ನ ಭಾವನೆ. ಬಿಎಂಶ್ರೀ, ಬೇಂದ್ರೆ, ಕುವೆಂಪು, ಪುತಿನ,‌ ಕೆ. ಎಸ್. ನ. ಡಿವಿಜಿ, ಆನಂದಕಂದ ಮೊದಲಾದ ಕವಿಗಳು ಬರೆದ ಹಾಡುಗಳನ್ನು ಹಾಡುತ್ತ ಕನ್ನಡ ಮನಸ್ಸುಗಳಿಗೆ ಹಿತ ನೀಡಿದ ಆ ಗಾಯಕರನ್ನೂ ನಾವು ನೆನಪಿಸಿಕೊಳ್ಳುವದಗತ್ಯ.

ಅವರಲ್ಲಿ ಪಿ. ( ಪಾಂಡೇಶ್ವರ) ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ಹುಕ್ಕೇರಿ ಬಾಳಪ್ಪ , ಅನುರಾಧಾ ಧಾರೇಶ್ವರ ನಂತರದ ಪೀಳಿಗೆಯಲ್ಲಿ ಶಿವಮೊಗ್ಗಾ ಸುಬ್ಬಣ್ಣ, ರಾಜು ಅನಂತಸ್ವಾಮಿ, ಕಿಕ್ಕೇರಿ ಕೃಷ್ಣಮೂರ್ತಿಯವರಿಂದ ಇನ್ನೂ ಹಲವು ಹಾಡುಗಾರರು ತಮ್ಮ ಸುಗಮ ಸಂಗೀತದೊಡನೆ ಕನ್ನಡದ ಸುಂದರ ಭಾವಗೀತೆಗಳನ್ನೂ ಉಳಿಸಿಕೊಂಡುಬಂದಿದ್ದನ್ನು ಮರೆಯುವಂತಿಲ್ಲ.

ಪಿ. ಕಾಳಿಂಗರಾಯರು ಸುಮಾರು ನಲವತ್ತರ ದಶಕದಿಂದ ತಮ್ಮ ಕಾವ್ಯಸಂಗೀತ ಪಯಣ ಆರಂಭಿಸಿ ಕರ್ನಾಟಕದಾದ್ಯಂತ ಸಂಚರಿಸಿ ತಮ್ಮ ಕಾರ್ಯಕ್ರಮಗಳನ್ನು ನೀಡಿದವರು. ಸಿನಿಮಾ ಸಂಗೀತದ ಆರ್ಕೆಸ್ಟ್ರಾಗಳ ಅಬ್ಬರದ ನಡುವೆಯೇ ಕಾಳಿಂಗರಾಯರು ಮಿಹನಕುಮಾರಿ, ಸೋಹನಕುಮಾರಿ ಸಹೋದರಿಯರೊಡನೆ ತಮ್ಮದೇ ಸಂಗೀತ ತಂಡ ಕಟ್ಟಿಕೊಂಡು , ದುಡ್ಡು ಕೊಟ್ಟರೂ ಕೊಡದಿದ್ದರೂ‌ ಕನ್ನಡದ ಮೇಲಿನ ಪ್ರೀತಿಯಿಂದ ಹಾಡಿದವರು, ಅಷ್ಟೇ ಕಷ್ಟ ಪಟ್ಟವರು.

ಉಡುಪಿ ಹತ್ತಿರದ ಆರೂರನಲ್ಲಿ ೧೯೧೪ ರಲ್ಲಿ ಜನಿಸಿದ ಕಾಳಿಂಗರಾಯರು ಪಡೆದದ್ದು ಪ್ರಾಥಮಿಕ ಶಾಲಾ ಶಿಕ್ಷಣವನ್ನಷ್ಟೆ. ಆದರೆ ಆರು ಭಾಷೆಗಳಲ್ಲಿ ಅವರು ಪರಿಣತಿ ಪಡೆದಿದ್ದರು. ಸಂಗೀತ ನಾಟಕಗಳೆಂದರೆ ಪಂಚಪ್ರಾಣ. ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲೂ ಹಾಡುಗಳಿಗೆ ರಾಗನಿರ್ದೇಶನ ಮಾಡಿದ್ದರು. ವಸಂತಸೇನಾ ಸಿನಿಮಾದಲ್ಲಿ ನಟನೆ ಸಂಗೀತ ಸಂಯೋಜನೆ ಮಾಡಿದ್ದರು. ಅವರ ಸಾಕಷ್ಟು ಹಾಡುಗಳು ಗ್ರಾಮೋಫೋನ್ ರೆಕಾರ್ಡುಗಳಾಗಿ ಹೊರಬಂದವು. ಆಕಾಶವಾಣಿಯಲ್ಲಿ ಹಾಡಿದರು. ಜಿ. ಕೆ. ವೆಂಕಟೇಶ್ ನಿರ್ದೇಶನದಲ್ಲಿ ಅವರು ಸಿನಿಮಾಕ್ಕೆಂದು ಹಾಡಿದ ಕೆ. ಎಸ್. ನರಸಿಂಹಸ್ವಾಮಿಯವರ " ಅಂಥಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಬೇರಿಲ್ಲ" ಎಂಬ ಪದ್ಯ ಆ ಕಾಲದಲ್ಲಿ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು.

ಕಾಳಿಂಗರಾಯರಿಗೆ ಕುವೆಂಪು ಬೇಂದ್ರೆ ಮೊದಲಾದ ಕವಿಗಳ ಹಾಡುಗಳ ರಸಭಾವಗಳನ್ನರಿತು ಅದಕ್ಕೆ ತಕ್ಕಂತೆ ರಾಗ ಸಂಯೋಜಿಸಿ ಹಾಡುವ ಶಕ್ತಿ ಇತ್ತು. ಕವಿಮನವನ್ನೇ ಹೊಗಬಲ್ಲವರಾಗಿದ್ದರು ಅವರು. ಅತ್ಯಂತ ಸ್ಫುಟವಾದ ಉಚ್ಚಾರ, ಕವಿತೆಯ ಅರ್ಥ ಅರಿತುಕೊಳ್ಳುವ ಶಕ್ತಿ ಅವರಲ್ಲಿದ್ದುದರಿಂದಲೇ ಅವರು ಯಶಸ್ವಿ ಗಾಯಕರೆನಿಸಿದ್ದರು.

‌ ಅವರು ಹಾಡುತ್ತಿದ್ದ ಜನಪ್ರಿಯ ಹಾಡುಗಳಲ್ಲಿ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು,ಏರಿಸಿ,ಹಾರಿಸಿ ಕನ್ನಡದ ಬಾವುಟ, ರಾಜರತ್ನಂ ಅವರ ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನ, ಬೇಂದ್ರೆಯವರ ಇಳಿದು ಬಾ ತಾಯಿ ಇಳಿದು ಬಾ, ಮುಗಿಲ ಮಾರಿಗೆ ರಾಗರತಿಯಾ ನಂಜ ಏರಿತ್ತ, ಕುವೆಂಪು ಅವರ ಬಾಗಿಲೊಳು ಕೈಮುಗಿದು , ಮೂಡಲ್ ಕುಣಿಗಲ್ ಕೆರೆ ಜಾನಪದ ಹಾಡು, ಮಾಡು ಸಿಕ್ಕದಲ್ಲಾ, ನಗೆಯು ಬರುತಿದೆ ಮೊದಲಾದ ದಾಸರ ಪದಗಳು ಮೊದಲಾದವುಗಳನ್ನು ನಾವು ನೆನಪಿಸಿಕೊಳ್ಳಬಹುದು.

*

ನಾನು ಪಿ. ಕಾಳಿಂಗರಾಯರನ್ನು ನೋಡಲು ಒಮ್ಮೆ ಬೆಂಗಳೂರಿನಲ್ಲಿ ಅವರಿದ್ದ ಮನೆ ಹುಡುಕಿಕೊಂಡು ಹೋಗಿದ್ದೆ. (೫೦ ವರ್ಷಗಳ ಹಿಂದೆ) ಸಂಪಂಗಿರಾಮನಗರ ಎಂದು ನೆನಪು. ಒಂದು‌ ಹಳೆಯ ಕಟ್ಟಡದ‌ ಅಟ್ಟದ ಮೇಲೆ ಒಂದೇ ಕೊಠಡಿಯಲ್ಲಿ ಅವರು ಅನಾರೋಗ್ಯದಿಂದ ಮಲಗಿದ್ದರು. ಅವರ ಆ ಸ್ಥಿತಿ ನೋಡಿ ನನ್ನ ಮನಸ್ಸು ತಳಮಳಿಸಿಹೋಯಿತು. ಎಂತಹ ಗಾಯಕನಿಗೆ ಎಂತಹ ಸ್ಥಿತಿ! ಕನ್ನಡ ಕನ್ನಡ ಎಂದು ಹಾರಾಡುವ ಜನ ಅವರಿಗೆ ಒಂದು ಒಳ್ಳೆಯ ಬದುಕನ್ನು ಕೊಡಬಾರದಿತ್ತೇ ಅನಿಸಿತು.

ಕನ್ನಡಿಗರು ಎಂದೂ ಮರೆಯಬಾರದ ಕಲಾವಿದರು ಪಿ. ಕಾಳಿಂಗರಾಯರು.


- ಎಲ್. ಎಸ್. ಶಾಸ್ತ್ರಿ


ಸ್ವತಹ ಸಾಹಿತಿಗಳಾಗಿರುವ ಎಲ್.ಎಸ್.ಶಾಸ್ತ್ರಿ ಯವರು ಗಮಕಿಗಳು ಹೌದು. ಸಾಹಿತಿ, ಸಂಗೀತಗಾರರು,ಯಕ್ಷಗಾನ ಭಾಗವತರು, ಕಲಾವಿದರ ಒಡನಾಟದಿಂದ ತಮ್ಮ ವ್ಯಕ್ತಿತ್ವಕ್ಕೆ ಹೊಳಪನ್ನು‌ ಕೊಟ್ಟುಕೊಂಡವರು‌ ಅವರು. ಹೆಸರಾಂತ ಗಾಯಕ ಪಾಂಡೇಶ್ವರ (ಪಿ)ಕಾಳಿಂಗರಾಯರ ಬಗ್ಗೆ ಅವರು ಬರೆದ ಹೃದಯಸ್ಪರ್ಶಿಯಾದ ಈ ಲೇಖನ ಓದುಗರನ್ನು ತಲುಪಿದರೆ ಲೇಖಕರ ಮತ್ತು ಶ್ರಮ ಸಾರ್ಥಕ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
42 views0 comments

Comments


bottom of page