top of page

ಪರಿವರ್ತನೆ

ದ್ರೌಪದಿಯಾಗಲಾರೆ ನಾನು

ಪಾಂಡವರ ಹಳವಂಡಗಳಿಗೆಲ್ಲ

ಮುಡಿಯ ಬಿಚ್ಚಿಡಲಿಕ್ಕೆ

ಹಚ್ಚಿಡಬಲ್ಲೆ ಕಿಡಿಯ

ಹೊತ್ತುರಿಯಲಿ ಹಾಗೆ ಕುರುಕ್ಷೇತ್ರ


ಶಬರಿಯಾಗುವಂತ 

ಜರೂರತ್ತುಗಳಿಲ್ಲ ನನಗೆ

ಕೂದಲು ನೆರೆಯುವವರೆಗಿನ

ಕತೆ ಹೇಳುತ್ತ ಕೂಡಲಿಕ್ಕೆ

ಹದವಾಗುವವರೆಗೂ ಕಾದು

ಕಾವಲಿಯಿಂದ ಜಿಗಿಯಬೇಕು

ಸೀದ ನಭದ ಅಂಗಳಕ್ಕೆ


ಸೀತೆಯಾದೆನೆಂದರೆ ನೋಡಿ

ಸಾಬೀತುಪಡಿಸಬೇಕಂತೆ ಪಾವಿತ್ರ್ಯ

ಕಿಚ್ಚಿನೊಳಗೆ ಉರಿದು

ಬೂದಿಯಾಗುವವರೆಗೂ

ಸೋಜಿಗವ ನೋಡುವ ಜಗಕ್ಕೆ

ಸುಡಲೇಕೆ ಬಾಳು

ಬೆಳಗಲಾರೆನೇ ಹಣತೆ?


ಸಾವಿತ್ರಿಯಾಗುವ ಹಂಬಲಕ್ಕೆ

ಯಮನ ಬೆನ್ನಟ್ಟಿದವಳಲ್ಲ

ಆದರೂ ಬದುಕಿಸಬಲ್ಲೆ

ಹೆಣವಾದವರ

ಹೆಣ್ಣಾಗಿದ್ದಕ್ಕೆ ಕಲ್ಲಾಗಲಿ ಏಕೆ

ನಾನೂ ಶಾಪವನಿಡಬಲ್ಲೆ ರಾಮಾ

ಅಹಲ್ಯೆಯ ತಲ್ಲಣಗಳಿಗೆ

ಉತ್ತರವಾಗದ ಮುನಿಗೆ


ಕಂಡವರ ಪಾಪಗಳ ತೊಳೆದು

ಗಂಗೆಯಾಗುವುದಿಲ್ಲ

ಕೊಳೆಯಾಗುವ ಮುನ್ನ

ಹೊಳೆದೇನು ನಾನು...


ಸಂಧ್ಯಾ ನಾಯ್ಕ ಅಘನಾಶಿನಿ


ಸಂಧ್ಯಾ ನಾಯ್ಕಅಘನಾಶಿನಿ... ವೃತ್ತಿಯಿಂದ ಶಿಕ್ಷಕಿ ಎಂ.ಎ ಎಂ.ಎಡ್ ಶಿಕ್ಷಣ ಕಡಲ ತಡಿ ತದಡಿಯಲ್ಲೇ ಹುಟ್ಟಿ , ಅಲ್ಲೇ ಬೆಳೆದು ಮತ್ತೊಂದು ದಡ ಅಘನಾಶಿನಿಯ ಸೇರಿದ ಬದುಕು...  ಓದು, ಹಾಡು , ಬರಹ, ನಾಟಕ , ಚಿತ್ರಕಲೆ  ಹವ್ಯಾಸಗಳು

268 views1 comment

1 Comment


sunandakadame
sunandakadame
Jun 17, 2020

ಜಗದ ಕೋಟಿ ಕೋಟಿ ಹೆಣ್ಣುಗಳ ಮನಸ್ಸು ಹೀಗೆ ಪರಿವರ್ತನೆಯಾಗಬೇಕು ಸಂಧ್ಯಾ, ಒಳ್ಳೆಯ ಕವಿತೆ.


Like
bottom of page