top of page

ಪತ್ರಿಕಾರಂಗದ ನನ್ನ ೬೦ ವರ್ಷಗಳು ಭಾಗ-೬

ಪತ್ರಕರ್ತನ ಕಣ್ಣಲ್ಲಿ

ಹೈದರಾಬಾದ ಕರ್ನಾಟಕ


ಒಬ್ಬ ಪತ್ರಕರ್ತನಾಗಿ ಹೈದರಾಬಾದ್ ಕರ್ನಾಟಕ ( ಈಗ ಕಲ್ಯಾಣ ಕರ್ನಾಟಕ) ಪ್ರದೇಶವನ್ನು ಗಮನಿಸಿದಾಗ ಅರ್ಧಶತಮಾನಕ್ಕೂ ಹೆಚ್ಚು ಕಾಲ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಕಾರಣ ಏನು, ಕಾರಣರು ಯಾರು ಎನ್ನುವ ವಿಚಾರದಲ್ಲಿ ನಿಶ್ಚಿತ ಅಭಿಪ್ರಾಯಕ್ಕೆ ಬರಲು ಕಷ್ಟವೇನೂ ಆಗಲಾರದು. ಚಿಂಚೋಳಿಯವರಾದ ವೀರೇಂದ್ರ ಪಾಟೀಲರು ಎರಡು ಸಲ ಮುಖ್ಯಮಂತ್ರಿ ಆಗಿದ್ದರು, ಅನೇಕ ಸಲ ಮಂತ್ರಿ ಆಗಿದ್ದರು. ಜೇವರ್ಗಿಯವರಾದ ಧರ್ಮಸಿಂಗ್ ಮುಖ್ಯಮಂತ್ರಿ ಮತ್ತು ಹಲವು ಸಲ ಮಂತ್ರಿಗಳಾಗಿದ್ದರು. ಶಾಸಕರಾಗಿ ಸತತ ಆಯ್ಕೆಯ ದಾಖಲೆ ಮಾಡಿದವರು. ಇಲ್ಲಿಯೇ ಗುರುಮಿಟಕಲ್ ನ ಮಲ್ಲಿಕಾರ್ಜುನ ಖರ್ಗೆಯವರೂ ದೀರ್ಘಕಾಲ ಶಾಸಕರಾಗಿ ಹಲವು ಸಲ ಮಂತ್ರಿಯಾಗಿ , ನಂತರ ಸಂಸದರೂ ಆದವರು. ಇನ್ನೂ ಹಲವರಿದ್ದಾರೆ.

ಈ ಅತಿರಥ ಮಹಾರಥರೆಲ್ಲ ಮೂರು ನಾಲ್ಕು ದಶಕ ರಾಜ್ಯದ ಆಡಳಿತದ ಪ್ರಮುಖ ಸ್ಥಾನಗಳಲ್ಲಿದ್ದೂ ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದ್ದರೆ ಅದಕ್ಕೆ ಯಾರು ಹೊಣೆ? ಏನು ಕಾರಣ? ಸಹಜವಾಗಿಯೇ ಊಹಿಸಬಹುದಲ್ಲವೇ? ಇನ್ಯಾರು ಬಂದು ಈ ಭಾಗವನ್ನು ಉದ್ಧರಿಸಬೇಕಿತ್ತು? ಆ ಭಗವಂತನೇ ಭೂಮಿಗಿಳಿದು ಬರಬೇಕಿತ್ತೆ?

ರಾಜ್ಯದ ಪ್ರತಿಯೊಂದು ಮತಕ್ಷೇತ್ರದ ಶಾಸಕನೂ ತನ್ನ ಮತಕ್ಷೇತ್ರದ ಅಭಿವೃದ್ಧಿ ಮಾಡಿಕೊಂಡರೆ ಸಾಕು, ಇಡೀ ರಾಜ್ಯ ತನ್ನಿಂದ ತಾನೇ ಉದ್ಧಾರವಾಗಬಲ್ಲದು. ಅದರಲ್ಲೂ ಮುಖ್ಯಮಂತ್ರಿ , ಮಂತ್ರಿಗಳಾದವರೇ ಇದ್ದಾಗ ಅಭಿವೃದ್ಧಿಗೆ ಬೇಕಾದಷ್ಟು ಅವಕಾಶವಿರುತ್ತದೆ. ಒಂದು ಮತಕ್ಷೇತ್ರ ಪ್ರಗತಿ ಕಂಡಿಲ್ಲವೆಂದರೆ ಅಲ್ಲಿಯ ಜನಪ್ರತಿನಿಧಿ ಕೆಲಸ ಮಾಡುತ್ತಿಲ್ಲವೆಂದೇ ಅರ್ಥ ತಾನೆ? ವೀರೇಂದ್ರ ಪಾಟೀಲ, ಧರ್ಮಸಿಂಗ್ , ಖರ್ಗೆ ಮೊದಲಾದವರು ಮನಸ್ಸು ಮಾಡಿದ್ದರೆ , ಮಾಡಬೇಕೆಂಬ ಇಚ್ಛಾಶಕ್ತಿ ಅವರಲ್ಲಿದ್ದಿದ್ದರೆ ಹೈ. ಕ. ಪ್ರದೇಶ ಹಿಂದುಳಿಯುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲವಷ್ಟೇ? ಇದು ಸಾಮಾನ್ಯ ವ್ಯಕ್ತಿಗೂ ಅರಿವಾಗುವಂತಹ ವಿಷಯ.

ಒಮ್ಮೆ ವೀರೇಂದ್ರ ಪಾಟೀಲರು ಚುನಾವಣೆಗೆ ನಿಂತಾಗ ಚಿಂಚೋಳಿಯಿಂದ ಕಲಬುರ್ಗಿಗೆ ಕಾರಿನಲ್ಲಿ ಬರಲು ಕಷ್ಟವಾದ ಬಗ್ಗೆ ಹೇಳಿಕೊಂಡಿದ್ದರು. ಹಾಗಿದ್ದರೆ ಅಲ್ಲಿ ಒಳ್ಳೆಯ ರಸ್ತೆ ಮಾಡಲು ಇನ್ಯಾರು ಬರಬೇಕಿತ್ತು ಅವರೇ ಜನಪ್ರತಿನಿಧಿಯಾಗಿರುವಾಗ?

ಅಂದರೆ ಶಾಸಕರಾದವರು ಮಂತ್ರಿಯಾದವರು ನಿಷ್ಕ್ರಿಯರಾದಾಗ ಆ ಪ್ರದೇಶ ಹಿಂದುಳಿಯುವದೇನೂ ವಿಶೇಷವಲ್ಲ. ನಾನು ಕಲಬುರ್ಗಿಯಲ್ಲಿದ್ದಾಗ ಹಲವು ಸ್ಥಳಗಳಿಗೆ ಭೆಟ್ಟಿ ನೀಡಿದ್ದೇನೆ. ತೀರಾ ಈಚಿನವರೆಗೂ ಪರಿಸ್ಥಿತಿ ಕೆಟ್ಟದ್ದಾಗಿಯೇ ಇತ್ತು. ಕಳೆದ ಒಂದು ದಶಕದಲ್ಲಿ ಸ್ವಲ್ಪ ಬದಲಾವಣೆ ಕಂಡಿದೆ.

*

ನವಕಲ್ಯಾಣ ಸಾಪ್ತಾಹಿಕ ನನಗೆ ಸಾಕಷ್ಟು ದೊಡ್ಡ ಅನುಭವಗಳ ಬುತ್ತಿ ಕಟ್ಟಿಕೊಟ್ಟಿತು. ಆದರೆ ಅಲ್ಲಿಯ ಹವೆ ಆಹಾರಗಳ ಕಾರಣದಿಂದ ನನ್ನ ಆರೋಗ್ಯ‌ಕೆಟ್ಟಿತು. ಅಷ್ಟರಲ್ಲೇ ಪತ್ರಿಕೆಯ ಆಡಳಿತ ವ್ಯವಸ್ಥೆಯೂ ಕೆಟ್ಟಿತ್ತು. ಮ್ಯಾನೇಜರ್ ಬಲದೇವ ವರ್ಮಾ ಎಂಬಾತ ಸಿಂಧೀ‌ಮನುಷ್ಯ. ಕನ್ನಡವೂ ಬರುತ್ತಿರಲಿಲ್ಲ. ಹಣದ ಅಪರಾತಪರಾವೂ ಮಾಡಿರಬೇಕು. ಇದರಿಂದ ಮಾಲಕರಿಗೂ ಅವನಿಗೂ ಮನಸ್ತಾಪ ಉಂಟಾಯಿತು. ಹಣ ಬರುವದು ಕಡಿಮೆ ಆಯಿತು. ಇದರಿಂದಾಗಿ ನನಗೂ ಅಲ್ಲಿಂದ ಹೊರಡುವದು ಉತ್ತಮವೆನಿಸತೊಡಗಿತು.

ನಾನು ಕಲಬುರ್ಗಿ ಬಿಟ್ಟು ಹುಬ್ಬಳ್ಳಿಗೆ ಬಂದೆ. ಕಲಬುರ್ಗಿ ಬೀದರ ಇವೆಲ್ಲ ಉತ್ತರ ತುದಿ. ನಮ್ಮ ಜಿಲ್ಲೆಗೂ ಬಹಳ ದೂರ. ಅದೇ ವೇಳೆಗೆ ಹುಬ್ಬಳ್ಳಿಯ ವಿಶಾಲ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲವು ಸ್ಥಾನ ತುಂಬಿಕೊಳ್ಳುವವರಿದ್ದರು. ಅದು ಆಗಿನ ಮಂತ್ರಿ ಕೆ. ಎಚ್. ಪಾಟೀಲರದು. ಪ. ಲೋ. ಬಂಕಾಪುರರು ಸಂಪಾದಕರು. ನನಗೆ ಮೊದಲೇ ಅವರ ಪರಿಚಯ ಇತ್ತು. ಸುದ್ದಿ ಸಂಪಾದಕನೆಂದು ಆಯ್ಕೆಯಾಗಿ ೧೯೬೭ ರ ಅಂತ್ಯದಲ್ಲಿ ಆ ಪತ್ರಿಕೆ ಸೇರಿದೆ. ಮೊದಲ ಸಲ ದಿನಪತ್ರಿಕೆಯಲ್ಲಿ ಕೆಲಸ ಮಾಡಿ ಅನುಭವ ಪಡೆಯಲು ಅದರಿಂದ ಅನುಕೂಲವಾಯಿತು. ಕೆರೆ ಬಾವಿಗಳಲ್ಲಿ ಈಜುತ್ತಿದ್ದವ ಈಗ ಸಮುದ್ರದಲ್ಲಿ ಈಜುವಂತಾಯಿತು.

- ಎಲ್. ಎಸ್. ಶಾಸ್ತ್ರಿ

5 views0 comments
bottom of page