top of page

ಪತ್ರಿಕಾರಂಗದ ನನ್ನ ೬೦ ವರ್ಷಗಳು (ಭಾಗ - ೨೦)

ಪತ್ರಿಕೆಗಳು ಇರುವದು ಯಾರಿಗಾಗಿ?


ಈಗಷ್ಟೇ ಇನ್ನೊಬ್ಬ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರು ಬರೆದ " ಇನ್ನು ಮುಂದೆ ಜರ್ನಾಲಿಸಂ ಇರುವದಿಲ್ಲ" ಎಂಬ ಲೇಖನ ಓದಿದೆ. ಅದನ್ನು ನನ್ನ ಎಫ್. ಬಿ‌. ಯಲ್ಲಿ ಮರುಪ್ರಕಟನೆ ಮಾಡಿ ಇತರರ ಅಭಿಪ್ರಾಯವನ್ನೂ ಕೇಳಿದೆ. ಬಹಳಷ್ಟು ಜನ ಅವರ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಅರ್ಧ ಶತಮಾನದ ಹಿಂದೆ ನಾನು ಮತ್ತು ನನ್ನ ಸಮಕಾಲೀನರು ಈ ರಂಗಕ್ಕೆ ಬಂದಾಗ ಅದು‌ ಕೇವಲ "ಪತ್ರಿಕಾ ರಂಗ"ವಾಗಿತ್ತು. ಕ್ರಮೇಣ ಅದು "ಪತ್ರಿಕೋದ್ಯಮ" ಆಯಿತು. ನಂತರ ಇಲೆಕ್ಟ್ರಾನಿಕ್ ವಿಭಾಗವೂ ಸೇರಿ "ಮಾಧ್ಯಮ ಕ್ಷೇತ್ರ" ವಾಯಿತು. ತಾಂತ್ರಿಕ ಬದಲಾವಣೆಗಳು ಸಾಕಷ್ಟು ಆದವು. ಅಂತಹ ಬೆಳವಣಿಗೆ ಸಹಜ ಮತ್ತು ಆಗಲೂಬೇಕು. ನಮ್ಮಂತಹ ಹಳಬರೂ ಆ ಬದಲಾವಣೆಗೆ ಹೊಂದಿಕೊಳ್ಳಬೇಕು ಇಲ್ಲವೇ ಆ ಕ್ಷೇತ್ರದಿಂದ ದೂರವಿರಬೇಕು.

ಹಾಗಿದ್ದರೆ ಟಿವಿ ಚಾನೆಲ್ ಗಳು ( ವಾರ್ತೆ ಮತ್ತು ರಂಜನೆ ) ಬಂದನಂತರ ಪತ್ರಿಕೆಗಳ ಓದುಗರು ಕಡಿಮೆಯಾದರೆ? ಕೆಲವರು ಹಾಗೆ ಭಾವಿಸಿದ್ದಾರೆ. ಅದು ಪೂರ್ತಿ ಸತ್ಯವಲ್ಲ. ಟಿವಿಯಲ್ಲಿ ಸುದ್ದಿಗಳನ್ನು ನೋಡುವವರಿಗೂ ಮರುದಿನ ಪತ್ರಿಕೆಯನ್ನೋದದಿದ್ದರೆ ಸಮಾಧಾನ ಆಗುವದಿಲ್ಲ. ಹಾಗೆ ಹೇಳುವವರು ಹಲವರಿದ್ದಾರೆ. ಒಂದು ವರ್ಷದ ಹಿಂದೆ ಕೊರೋನಾ ಬಂದ ನಂತರ ಪತ್ರಿಕೆಗಳು ಸ್ವಲ್ಪ ಮಟ್ಟಿಗೆ ಸೊರಗಿರುವದು ನಿಜವಾದರೂ ಅದಕ್ಕಿಂತ ಮೊದಲು ಪತ್ರಿಕೆ ಓದುಗರ ಸಂಖ್ಯೆ ಹೆಚ್ಚುತ್ತ ಬಂದಿದ್ದನ್ನೂ ಅಲ್ಲಗಳೆಯುವಂತಿಲ್ಲ. ಅದಕ್ಕೆ ಅಂಕೆಸಂಖ್ಯೆಗಳ ಆಧಾರವಿದೆ. ಮಲೆಯಾಳಿ ಮತ್ತು‌ಇತರ ಕೆಲ ಭಾಷೆಗಳಿಗೆ ಹೋಲಿಸಿದಲ್ಲಿ ಕನ್ನಡದ ಓದುಗರ ಪ್ರಮಾಣ ಕಡಿಮೆ ಎನ್ನುವದು ನಿಜವಾದರೂ ಕನ್ನಡ ಪತ್ರಿಕೆಗಳ ಒಟ್ಟಿನ ಪ್ರಸಾರ ಸಂಖ್ಯೆ ಹೆಚ್ಚಾಗಿದೆ.

ಆದರೆ ಹಣವಂತ ಮಾಲಕರ ಕೈಗೆ ಸಿಲುಕಿರುವ ಪತ್ರಿಕೆಗಳು ಕ್ರಮೇಣ ಸಾಮಾನ್ಯ ಓದುಗರಿಂದ ದೂರ ಸರಿಯುತ್ತಿರುವದೂ ಸುಳ್ಳಲ್ಲ. ಪತ್ರಿಕೆಯ ಧ್ಯೇಯ ಧೋರಣೆಗಳನ್ನು ನಿರ್ಧರಿಸುವವರು ಅವರೇ ಆದ್ದರಿಂದ ಅವರ ತಾಳಕ್ಕೆ ತಕ್ಕಂತೆ ಕುಣಿಯುವದು ಸಂಪಾದಕರಾದವರಿಗೆ ಅನಿವಾರ್ಯ‌. ಜನರ ಆಸಕ್ತಿ ಅಭಿರುಚಿಗಳಿಗೆ ಮಹತ್ವ ಉಳಿದಿಲ್ಲ. ಈಚೆಗಂತೂ ಎಡಿಶನ್ ಹಾವಳಿ. ಗಲ್ಲಿಗೊಂದು ಆವೃತ್ತಿ. ಇದರ ಪರಿಣಾಮವಾಗಿ ನೆರೆಯ ತಾಲೂಕಿನ ಎಷ್ಟೋ ಸುದ್ದಿಗಳು ಸಹ ನಮಗೆ ತಿಳಿಯದಂತಾಗಿದೆ. ಅವು ಆ ಭಾಗದ ಆವೃತ್ತಿಯಲ್ಲಿ ಮಾತ್ರ ಬಂದು ಮಾಯವಾಗುತ್ತವೆ. ಉದಾಹರಣೆಗೆ, ನಾವು ಬೆಳಗಾವಿಯಲ್ಲಿ ಮಾಡಿದ ಕಾರ್ಯಕ್ರಮ ಹುಕ್ಕೇರಿ ಚಿಕ್ಕೋಡಿಯವರನ್ನೂ ತಲುಪುವದಿಲ್ಲ. ಅಲ್ಲಿ ಮಾಡಿದ್ದು ಇಲ್ಲಿ ನಮಗೆ ತಿಳಿಯುವದಿಲ್ಲ. ಇದು ನಮ್ಮ ಪತ್ರಿಕೆಗಳು ಸಾಹಿತ್ಯ ಸಂಸ್ಕೃತಿ ಕ್ಷೇತ್ರಕ್ಕೆ ಮಾಡುತ್ತಿರುವ ಅನ್ಯಾಯ. ಅದರ ಬಗ್ಗೆ ಹಣವಂತ ಮಾಲಕನೇಕೆ ತಲೆ ಕೆಡಿಸಿಕೊಳ್ಳುತ್ತಾನೆ? ಅವನಿಗೆ ಬೇಕಾದ್ದು ಲಾಭ. ಅವರಿಗೆ ಯಾವ ಬದ್ಧತೆಯೂ ಇರುವದಿಲ್ಲ. ಒಂದು ಪತ್ರಿಕೆ ಬೆಳೆಸಿ ಅದನ್ನು ಮಾರಾಟ ಮಾಡಿ ಮತ್ತೊಂದು ಪತ್ರಿಕೆ ತೆರೆಯುತ್ತಾರೆ. ಅದನ್ನೂ ಮಾರಿ ಲಾಭ ಗಳಿಸಿ ಇನ್ನೊಂದು ಪತ್ರಿಕೆ ಆರಂಭಿಸುತ್ತಾರೆ. ಎಷ್ಟೆಂದರೂ ಅದು ಉದ್ಯಮ ತಾನೆ? ಧ್ಯೇಯ, ತತ್ವ, ಧರ್ಮ , ನೀತಿ ಕಟ್ಟಿಕೊಂಡು ಅವರಿಗೆ ಆಗಬೇಕಾದದ್ದಾದರೂ ಏನು , ಅಲ್ಲವೇ?

ವಿಶೇಷವಾಗಿ ನಮ್ಮ ಪತ್ರಿಕೆಗಳಿಗೆ ಮತ್ತು ಪತ್ರಕರ್ತರಿಗೆ ರಾಜಕಾರಣಿಗಳೇ ಬಹಳ ದೊಡ್ಡ ಆಕರ್ಷಣೆ. ಅವರು ಎಷ್ಟೇ ದುಷ್ಟರೂ ಭ್ರಷ್ಟರೂ ಆಗಿದ್ದರೂ ಅವರನ್ನು ವೈಭವೀಕರಿಸುವಲ್ಲಿ ಪೈಪೋಟಿಯಿರುತ್ತದೆ‌ . ಬೇರೆ ದೇಶದಲ್ಲಿ ಪತ್ರಿಕೆಗಳು ರಾಜಕೀಯ ನಾಯಕರ ಸುದ್ದಿಗಳಿಗೆ ನಮ್ಮಷ್ಟು ಮೊದಲ ಪುಟದ ಪ್ರಾಶಸ್ತ್ಯ ನೀಡುವದಿಲ್ಲ. ಇದೇ ಕಾರಣದಿಂದಲೇ ನಮ್ಮ ರಾಜಕಾರಣಿಗಳು ತಾವೇನೋ ಮಹಾಭಯಂಕರ ನಾಯಕರು ಎಂಬ ಭ್ರಮೆಗೊಳಗಾಗುತ್ತಾರೆ. ಆ ರೀತಿ ಅವರ ನಡೆನುಡಿ ರೂಪುಗೊಳ್ಳುತ್ತದೆ. ದುರಹಂಕಾರ ತಲೆಗೇರುತ್ತದೆ. ಇದಕ್ಕೆ ಮಾಧ್ಯಮದವರ ಅತಿ ಪ್ರಚಾರವೂ ಕಾರಣ ಎನ್ನುವದನ್ನು ಅಲ್ಲಗಳೆಯಲು ಬರುವದಿಲ್ಲ. ಎದೆ ಸೀಳಿದರೆ ನಾಲ್ಕಕ್ಷರ ಇಲ್ಲದವರೂ , ಯಾವ ವಿಷಯಜ್ಞಾನವಿಲ್ಲದವರೂ ಇಲ್ಲಿ ಸಚಿವರಾಗಿ‌ ಮೆರೆಯುತ್ತಾರೆ. ಅವರಿಗೆ ನಮ್ಮ ಮೂಢಮತಿಗಳು ಸೇರಿ ಸೇಬು ಹಣ್ಣಿನ ಹಾರದೊಡನೆ ಭೋಪರಾಕ್ ಹಾಕುತ್ತಾರೆ. ಅಪರಾಧಿಗಳನ್ನೂ ಮೆರವಣಿಗೆ ಮಾಡಿ ಮೆರೆಸುತ್ತಾರೆ.

ನಮ್ಮ ಇಂದಿನ ಮಾಧ್ಯಮದವರ ಪಾಲುಗಾರಿಕೆಯೂ ಇದರಲ್ಲಿದ್ದೇಇದೆ. ಇಲ್ಲ ಎನ್ನುವ ನೈತಿಕತೆ ನಮ್ಮಲ್ಲಿದೆಯೇ?

- ಎಲ್. ಎಸ್. ಶಾಸ್ತ್ರಿ

6 views0 comments

Comments


©Alochane.com 

bottom of page