top of page

ಪತ್ರಿಕಾ ರಂಗದ ನನ್ನ ೬೦ ವರ್ಷಗಳುಭಾಗ - ೧೯

ವರದಿಗಾರಿಕೆ : ನನ್ನ ಅನುಭವ

ನಾನು ಪತ್ರಿಕಾರಂಗಕ್ಕೆ ಕಾಲಿಟ್ಟ ೬೦ ವರ್ಷಗಳಲ್ಲಿ . ಸಾಕಷ್ಟು ಪತ್ರಿಕೆಗಳಿಗೆ ವರದಿ ಮಾಡಿದ್ದೇನೆ. ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಕರ್ನಾಟಕ ಮಲ್ಲ,ಮುಂಬಯಿ, ನವನಾಡು , ವಿಶಾಲ ಕರ್ನಾಟಕ, ವಿಶ್ವವಾಣಿ, ( ಹಿಂದಿನದು), ಲೋಕದರ್ಶನ, ಕನ್ನಡಮ್ಮ, ಹಸಿರುಕ್ರಾಂತಿ, ಸಮತೋಲ, ನಾಡೋಜ ಇತ್ಯಾದಿ ದಿನಪತ್ರಿಕೆಗಳಿಗೆ.

ಆದರೆ ಅಂದಿನ ನಮ್ಮ ವರದಿಗಾರಿಕೆ ಕ್ರಮಕ್ಕೂ ಇಂದಿನದಕ್ಕೂ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ‌. ಇಂದಿನವರಿಗಿರುವ ಯಾವ ಆಧುನಿಕ ಸೌಕರ್ಯಗಳೂ ನಮ್ಮ ಕಾಲದವರಿಗಿರಲಿಲ್ಲ. ವಾಹನ ಸೌಕರ್ಯವೂ ಇರುತ್ತಿರಲಿಲ್ಲ. ಆದರೆ ವರದಿಗಾರಿಕೆಯಲ್ಲಿ ಪ್ರಾಮಾಣಿಕತೆಯನ್ನು ಕಾದುಕೊಂಡಿದ್ದೆವು.

ವರದಿ ಸಮತೋಲವಾಗಿರಬೇಕು, ಪಕ್ಷಪಾತ ಮಾಡಬಾರದು, ವರದಿಯಲ್ಲಿ ನಿಮ್ಮ ಅಭಿಪ್ರಾಯ ಸೇರಿಸಬಾರದು, ಸುದ್ದಿ ಸುದ್ದಿಯಾಗಿರಬೇಕು, ಯಾವುದೇ ವಿಷಯದಲ್ಲಿರಲಿ ತೀರ್ಪು ನೀಡುವದು ನಿಮ್ಮ ಕೆಲಸವಲ್ಲ, ಯಾರ ತೇಜೋವಧೆ ಮಾಡಲು ಹೋಗಬಾರದು, ಕೆಟ್ಟ ಅಪಮಾನಾತ್ಮಕವಾದ ಶಬ್ದಗಳನ್ನು ಬಳಸಬಾರದು, ಎಂದೆಲ್ಲ ನಮ್ಮ ಹಿರಿಯರಾದ ಸಂಪಾದಕರು ನಮಗೆ ಸೂಚನೆ ನೀಡುತ್ತಿದ್ದರು. ಪಾಂಡೇಶ್ವರ , ಪ. ಲೋ. ಬಂಕಾಪುರ, ಪಾಟೀಲ ಪುಟ್ಟಪ್ಪ ಮೊದಲಾದವರ ಕೈಕೆಳಗೆ ನಾನು ಕೆಲಸ ಮಾಡಿದ್ದೇನೆ. ಅವರ ಮಾತು ಪಾಲಿಸಿದ್ದೇನೆ.

ಇಂದಿನವರ ಬಗ್ಗೆ ನಾನೇನೂ ಟೀಕೆ ಮಾಡಲು ಹೋಗುವದಿಲ್ಲ. ಇಂದೂ ನಾಡಿನ ಪತ್ರಿಕಾರಂಗದಲ್ಲಿ ದೊಡ್ಡ ಪತ್ರಿಕೆಗಳಲ್ಲಿ ನನ್ನ ಕೆಲವು ಶಿಷ್ಯರು ಇದ್ದಾರೆ. ಅವರು ಕೆಲಸ ಮಾಡುವ ರೀತಿನೀತಿಗಳ ಬಗ್ಗೆ ನನಗೆ ತೃಪ್ತಿ ಇದೆ.

ಆದರೆ ಒಂದು ವ್ಯತ್ಯಾಸವನ್ನು ನಾನು ಹೇಳಲೇಬೇಕು. ನಾನು ಸಾಮಾನ್ಯವಾಗಿ ಎಲ್ಲ ಪತ್ರಿಕೆಗಳನ್ನೂ ಗಮನಿಸುತ್ತಿರುತ್ತೇನೆ. ಹಿಂದೆ ಒಂದು ಕಾರ್ಯಕ್ರಮದ ವರದಿಯನ್ನು ಎಲ್ಲ ವರದಿಗಾರರೂ ಬೇರೆ ಬೇರೆ ರೀತಿಯಲ್ಲೇ ಸ್ವತಂತ್ರವಾಗಿ ಬರೆಯುತ್ತಿದ್ದರು. ಈಗ ಹಾಗಿಲ್ಲ. ಬಹಳಷ್ಟು ಕಡೆ ನಾನು ಗಮನಿಸಿದ ಹಾಗೆ ಎಲ್ಲ ವರದಿಗಳೂ ಮಕ್ಕೀಕಾಮಕ್ಕಿ ಕಾಪಿ ಅಂದರೆ ಬುಡದಿಂದ ತುದಿಯವರೆಗೆ ಒಂದೇ ಆಗಿರುತ್ತವೆ. ಯಾಕೆಂದರೆ ಯಾರೋ ಒಬ್ಬರು ಬರೆದುಕೊಟ್ಟಿದ್ದನ್ನೇ ಹೆಚ್ಚು ಕಡಿಮೆ ಎಲ್ಲರೂ ಬಳಸುತ್ತಾರೆ. ಅವರಿಗೆ ಸಮಯದ ಅಭಾವವಿರುವದೂ ಒಂದು ಕಾರಣವಾಗಿರಬಹುದು. ಎಲ್ಲ ಕಡೆಗೂ ಹೋಗಲು ಆಗಲಿಕ್ಕಿಲ್ಲ. ಆದರೂ‌ ಅದು ಸರಿ ಎಂದು ನನಗೆ ಅನಿಸುತ್ತಿಲ್ಲ. ಕಾರಣ ಏನೆಂದರೆ ಒಬ್ಬರು ಮಾಡುವ ತಪ್ಪು ಎಲ್ಲದರಲ್ಲೂ ಕಾಣುವ ಸಾಧ್ಯತೆಗಳು ಹೆಚ್ಚು.

ಎರಡನೆಯದಾಗಿ ಪತ್ರಿಕಾ ವರದಿಗಳಲ್ಲಿ ವರದಿಗಾರನ ವೈಯಕ್ತಿಕ ವಿಚಾರ, ಧೋರಣೆಗಳೂ ಪ್ರತಿಬಿಂಬಿಸುವದುಂಟು.

ಮೂರನೆಯದಾಗಿ ವರದಿ ಮಾಡುವಾಗ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವಂತೆ ಮತ್ತು ಪೂರ್ಣ ಸ್ವರೂಪದಲ್ಲಿ ಇರುವಂತೆ ನೋಡಿಕೊಳ್ಳುವದಗತ್ಯ. ಅಂದಾಗ ಮಾತ್ರ ಆ ವರದಿಯನ್ನೋದಿದಾಗ ವರದಿಯ ಬಗ್ಗೆ ಯಾರೂ ಅಸಂತೋಷ ವ್ಯಕ್ತ ಪಡಿಸುವ ಸಂದರ್ಭ ಬರುವದಿಲ್ಲ. ಅದಕ್ಕೆ ಒಂದು ಉದಾಹರಣೆ ಕೊಡುತ್ತೇನೆ.

ಒಂದು ಕಾರ್ಯಕ್ರಮ ನಡೆಯುತ್ತದೆ. ಮೂವರ ಉಪನ್ಯಾಸ ಇರುತ್ತದೆಂದುಕೊಳ್ಳೋಣ. ವರದಿಯಲ್ಲಿ ಯಾರೋ ಒಬ್ಬರ ಭಾಷಣ ಹೈಲೈಟ್ ಮಾಡಿ ಉಳಿದವರ ಭಾಷಣದ‌ ಒಂದೇ ಒಂದು ವಾಕ್ಯವೂ ಇಲ್ಲದೇ ಇದ್ದಾಗ ಅವರಿಗೆ ಬೇಸರವಾಗುವದು ಅಸಹಜವಲ್ಲ. ಎಲ್ಲರದೂ ಒಂದೊಂದು ಪ್ಯಾರಾವಾದರೂ ಹಾಕಬಹುದಲ್ಲವೇ? ಒಬ್ಬರಿಗೇ ಏಕೆ ಪ್ರಾಶಸ್ತ್ಯ? ಕೊನೆಗೆ ಅಧ್ಯಕ್ಷರಾದವರಂತೂ‌ ಎಷ್ಟೇ ಒಳ್ಳೆಯ ವಿಚಾರ ಮಾತಾಡಿರಲಿ , ಅವರು ಅಧ್ಯಕ್ಷತೆ ವಹಿಸಿದ್ದರು ಎಂದಷ್ಟೇ ಬಂದಾಗ ಅವರಿಗೆ ಪಿಚ್ಚೆನಿಸುವದಿಲ್ಲವೇ?

ಇದು ವರದಿಗಳ ದೋಷದ ಒಂದು ಭಾಗ. ನಾನು ಯಾರನ್ನೂ ಟೀಕಿಸಲು ಈ ಮಾತು ಹೇಳುತ್ತಿಲ್ಲ. ವರದಿಯಲ್ಲಿ ಸಮತೋಲ ಕಾದುಕೊಳ್ಳುವದು ಎಂದರೆ ಇದೇ. ಎಷ್ಟೋ ಸಲ ಮುಖ್ಯ ಭಾಷಣಕಾರರ ಮಾತು ಹಾಗಿರಲಿ, ಅವರು ಉಪಸ್ಥಿತರಿದ್ದರು ಎಂದಷ್ಟೇ ಬರುತ್ತದೆ. ಕೆಲವು ಸಲ ಅವರ ಹೆಸರೂ ಇರುವದಿಲ್ಲ. ( ನಾನೂ ಒಬ್ಬ ಪತ್ರಕರ್ತನಾಗಿರುವದರಿಂದ ನನ್ನ ಹೆಸರು ಬರದೇ ಇದ್ದಾಗ ನಾನು ಸಿಟ್ಟಿಗೇಳುವದಿಲ್ಲ. ಆದರೆ ಕೆಲವರು ಕೆಂಡಾಮಂಡಲವಾಗುವದನ್ನು ನೋಡಿದ್ದೇನೆ. ಅಷ್ಟೆಲ್ಲ ತಲೆಗೆ ಹಚ್ಚಿಕೊಳ್ಳಲು ಹೋಗಬಾರದು.)

ಇಂದು ಸೌಕರ್ಯಗಳು ಹೆಚ್ಚಿದಂತೆ ಕೆಲಸದ ಒತ್ತಡವೂ ಹೆಚ್ಚಿದೆ. ಅದನ್ನು ಅಲ್ಲಗಳೆಯಲು ಬರುವದಿಲ್ಲ. ಎಷ್ಟೋ ಕಾರ್ಯಕ್ರಮಗಳಿಗೆ ಹೋಗಲು‌ ಆಗುವದಿಲ್ಲ. ಆಗ‌ ಯಾರೋ ಒಬ್ಬರು ಬರೆದುಕಳಿಸಿದ್ದನ್ನು ಹಾಕಿಕೊಳ್ಳುವದೂ ಅನಿವಾರ್ಯ. ಆದರೂ ಬಹುಮಟ್ಟಿಗೆ ವರದಿಗಳಲ್ಲಿ ಪ್ರಾಮಾಣಿಕತೆ ಕಾದುಕೊಳ್ಳುವ ಕುರಿತೂ ಯೋಚಿಸಿದರೆ ಒಳಿತು.

ನಾನೂ ಕೆಲ ಸಂಘಟನೆಗಳನ್ನು ಹೊಂದಿದ್ದು‌ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತೇನೆ. ಆದ್ದರಿಂದ ಅವುಗಳ ಬಗ್ಗೆ ವರದಿ ಫೋಟೋ ಬರಬೇಕೆಂದು ಬಯಸುವದು ಸಹಜ. ಆದರೆ ಹೀಗೇ ಬರಬೇಕೆಂದು ಹೇಳುವ ಹಕ್ಕು ನನಗಿಲ್ಲ. ಅದು ಪತ್ರಿಕೆಯವರಿಗೆ ಬಿಟ್ಟ ವಿಷಯ. ಆದ್ದರಿಂದ ನಾನು ಈ ವಿಷಯದಲ್ಲಿ ನಿರ್ಲಿಪ್ತ ಮನೋಭಾವ ಹೊಂದಿರುತ್ತೇನೆ. ಯಾರಿಗೂ ನಮ್ಮ ಸುದ್ದಿ‌ ಹಾಕಿ ಎಂದು ಒತ್ತಾಯಿಸುವದಿಲ್ಲ. ಬರಲಿಲ್ಲವೆಂದಾಗಲೂ ತಣ್ಣಗಿರುತ್ತೇನೆ. ಮತ್ತೇನು ಮಾಡಲು ಸಾಧ್ಯ? ಈಚೆಗಷ್ಟೇ‌ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿ ನನ್ನ ವಿಶೇಷ ಉಪನ್ಯಾಸ ಇತ್ತು. ಕೆಲವು ದೊಡ್ಡ ಪತ್ರಿಕೆಗಳಲ್ಲಿ ಅದರ ಕುರಿತು ಒಂದು ವಾಕ್ಯವೂ ಬರಲಿಲ್ಲ. ಅವರಿಗೆ ಅದು ಮಹತ್ವದ ಸುದ್ದಿ ಅನಿಸಿರಲಿಕ್ಕಿಲ್ಲ. ರಾಜಕಾರಣಿಗಳದಾಗಿದ್ದರೆ ಓಡಿಹೋಗಿ ದೊಡ್ಡ ಸುದ್ದಿ ಹಾಕುವ ಭಟ್ಟಂಗಿತನವನ್ನು ನಾವಿಂದು‌ ಪತ್ರಕರ್ತರು ಕಲಿತುಬಿಟ್ಟಿದ್ದೇವೆ. ದುಷ್ಟರ ಭ್ರಷ್ಟರ ವೈಭವೀಕರಣ, ಇತರರ ಚಾರಿತ್ರ್ಯವಧೆ, ಅತಿರಂಜಿತ ವರದಿಗಳು ಅಭ್ಯಾಸವಾಗಿವೆ. ವರದಿಗಾರರೇ ತೀರ್ಪುಗಾರರಾಗಿಯೋ, ನ್ಯಾಯಾಧೀಶರಂತೆಯೋ ಕಾರ್ಯ ನಿರ್ವಹಿಸುವದೂ ಉಂಟು. ಯಾರು‌ ಕೊಟ್ಟಿದ್ದಾರೋ ಅವರಿಗೆ ಆ ಅಧಿಕಾರವನ್ನು ನನಗೆ ಗೊತ್ತಿಲ್ಲ. ಕೆಲವು ಟಿವಿ ಚಾನೆಲ್ ನವರಂತೂ ಮನೆ - ಸಂಸಾರ ಒಡೆಯುವ ಕೆಲಸವನ್ನೂ ಮಾಡುತ್ತಾರೆ ಎನ್ನುವ ಆರೋಪ ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಇಂತಹ ಅಧಿಕ ಪ್ರಸಂಗಗಳನ್ನು ‌ಮಾಡಲು ನಮಗೆ ಯಾರೂ ಅನುಮತಿ ಕೊಡುತ್ತಿರಲಿಲ್ಲ. ಮಾಧ್ಯಮದವರಿಗೂ ಒಂದು ಸಾಮಾಜಿಕ ಹೊಣೆಗಾರಿಕೆ, ಬದ್ಧತೆ ಇರಬೇಕೆಂಬುದನ್ನೇ ಕೆಲ ಪತ್ರಕರ್ತರು ಮರೆತುಬಿಡುತ್ತಿದ್ದಾರೆಂಬುದು ಬೇಸರದ ವಿಷಯ. ಯಾರೋ ಬೆಂಕಿ ಹಾಕಿಕೊಂಡು ಸಾಯಲು ಹೊರಟಿದ್ದರೆ ಅದನ್ನು ತಪ್ಪಿಸುವ ಬದಲು ಅದರ ಫೋಟೋ ತೆಗೆದು ವರದಿ ಮಾಡುವಂತಹ ಅಮಾನವೀಯ ವರ್ತನೆಯನ್ನೆಲ್ಲ ಯಾರು ತಾನೇ ಸಮರ್ಥಿಸಲು ಸಾಧ್ಯ.?

ಆದ್ದರಿಂದಲೇ ಮಾಧ್ಯಮದವರಿಗೂ ಒಂದು ಸ್ವಯಂ ನಿರ್ಬಂಧದ ನೀತಿ ಸಂಹಿತೆಯ ಅಗತ್ಯ ಇದೆ ಎಂದು ನನ್ನ ಅನಿಸಿಕೆ. ಹೆಚ್ಚಿನ ರಾಜಕಾರಣಿಗಳಂತೆ ನಾವೂ ನೈತಿಕ ದಾರಿಯನ್ನು ಬಿಟ್ಟು ಹೊರಟರೆ ಅವರಿಗೆ ಬುದ್ಧಿ ಹೇಳುವ ಹಕ್ಕು ನಮಗೆಲ್ಲಿರುತ್ತದೆ? ನಾವು ಹೇಗೆ ಅವರಿಗಿಂತ ಭಿನ್ನವೆನಿಸುತ್ತೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕಾಗಿದೆ.

‌‌ ‌‌

- ಎಲ್. ಎಸ್. ಶಾಸ್ತ್ರಿ

1 view0 comments

Comments


bottom of page