top of page

ಪತ್ರಿಕಾರಂಗದ ನನ್ನ ೬೦ ವರ್ಷಗಳುಭಾಗ -೧೫

ಅನುಭವವಿರುವಲ್ಲಿ ಅಮೃತತ್ವವಿದೆ"

‌ ಇದು ಪಾಟೀಲ ಪುಟ್ಟಪ್ಪನವರ ಮಾತು. ಕಹಿಯೋ ಸಿಹಿಯೋ , ಎಲ್ಲವನ್ನೂ ಒಂದು ಅನುಭವವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಂಡರೆ ಕಹಿಯೂ ನಮಗೆ ಕಷ್ಟ ಕೊಡುವದಿಲ್ಲ. ಯಾವಾಗಲೂ ಪರಿಸ್ಥಿತಿಗಿಂತ ಮನಸ್ಥಿತಿ ಮುಖ್ಯ. ಮನಸ್ಥಿತಿ ಪರಿಸ್ಥಿತಿಯ ಭಾರವನ್ನು ಕಡಿಮೆ ಮಾಡುತ್ತದೆ. "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋ:", ಅಲ್ಲವೆ.

ರಾಜಕೀಯ ಯಾವ ಕ್ಷೇತ್ರದಲ್ಲಿಲ್ಲ ಹೇಳಿ ಇಂದು. ಅದು‌ ಪತ್ರಿಕಾ ಕ್ಷೇತ್ರದಲ್ಲೂ ಇರುವದು ಅಚ್ಚರಿಯೇನಲ್ಲ. ನನಗೆ ಬಹಳ ಜನ ಕೇಳುತ್ತಾರೆ -" ನಿಮಗೆ ಅಪಾರ ಜ್ಞಾನಾನುಭವ ಇದೆ. ನೀವೇಕೆ ದೊಡ್ಡ ಪತ್ರಿಕೆ ಸೇರಿಕೊಂಡಿಲ್ಲ?'"

‌‌‌ಪ್ರಶ್ನೆ ಸಹಜ. ಆದರೆ ಸೇರಿಸಿಕೊಂಡರೆ ತಾನೇ ಸೇರುವದು? ರಾಜಧಾನಿಯಲ್ಲಿ ಕೇಂದ್ರೀಕೃತವಾಗಿರುವ ಹಲವು ದೊಡ್ಡ ಪತ್ರಿಕೆಗಳು ಕೆಲವೇ ಕೆಲವು‌ ಪಟ್ಟಭದ್ರರ ಕೈಯಲ್ಲಿವೆ. ಅಲ್ಲಿ ಅವರು ತಮಗಿಂತ ಬುದ್ಧಿವಂತರಿಗೆ ಅಥವಾ ಸಮರ್ಥರಿಗೆ ಕಾಲಿಡಲು ಬಿಡುವದಿಲ್ಲ. ಅವರ ಕುರ್ಚಿಗೆ ಸಂಚಕಾರ ಬಂದೀತೆಂಬ ಹೆದರಿಕೆಯೂ ಇರಬಹುದು. ತಪ್ಪೇನಿಲ್ಲ. ರಾಜಕಾರಣಿಗಳಿಗಷ್ಟೇ ಕುರ್ಚಿ ವ್ಯಾಮೋಹ ಇರಬೇಕೆಂದೆಲ್ಲಿದೆ? ಪತ್ರಕರ್ತರಿಗೆ ಇರಬಾರದೆ?

ಒಂದೂವರೆ ದಶಕಕ್ಕೂ ಹಿಂದೆ ಒಂದು ದೊಡ್ಡ ದಿನಪತ್ರಿಕೆ ಆರಂಭವಾಗುವದಿತ್ತು. ಸಂಗಡ ಒಂದು ಸಾಪ್ತಾಹಿಕ ಮತ್ತು ಒಂದು ಮಾಸಪತ್ರಿಕೆ. ಸಾಪ್ತಾಹಿಕಕ್ಕೆ ಶಾ. ಮಂ. ಕೃಷ್ಣರಾಯರು ಮತ್ತು ಮಾಸಪತ್ರಿಕೆಗೆ ಜಯಂತ ಕಾಯ್ಕಿಣಿ ಸಂಪಾದಕರಾಗಿ ನೇಮಕಗೊಂಡಿದ್ದರು. ಕೃಷ್ಣರಾಯರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವರು ನನ್ನನ್ನು ತಮ್ಮ ಪತ್ರಿಕಾ ಬಳಗಕ್ಕೆ ಸೇರಿಸಿಕೊಳ್ಳಲು ಇಚ್ಛಿಸಿದ್ದರು. ದಿನಪತ್ರಿಕೆಗೆ ಆಗ ಬೇರೆಯವರೊಬ್ಬರು ಪ್ರಧಾನ ಸಂಪಾದಕರು. ಕೃಷ್ಣರಾಯರು ನನಗೆ ಬೆಂಗಳೂರಿಗೆ ಬಂದು ಅವರನ್ನು ಭೆಟ್ಟಿಯಾಗಿ ಎಂದು ಕರೆ ಮಾಡಿದರು. ನಾನು ಹೋದೆ. ಭೆಟ್ಟಿಯಾದೆ. ಆದರೆ ಆ ಸಂಪಾದಕ ಮಹಾಶಯ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮನಸ್ಸೂ ಇದ್ದಂತಿರಲಿಲ್ಲ. ನನ್ನ ಅನುಭವದ ಬಗ್ಗೆ ಕೇಳುವ ಆಸಕ್ತಿಯೂ ಇರಲಿಲ್ಲ. ನಾನು ಹೊರಬಂದು ಕೃಷ್ಣರಾಯರಿಗೆ ತಿಳಿಸಿ ವಾಪಸು ಬೆಳಗಾವಿಗೆ ಬಂದೆ. ಮುಂದೆ ಆ ಸಂಪಾದಕನನ್ನೇ ಕೆಲಸದಿಂದ ತೆಗೆದು ಹಾಕಲಾಯಿತು ಬಿಡಿ. ಸಾಪ್ತಾಹಿಕ , ಮಾಸಿಕಗಳೂ ನಿಂತವು. ಪತ್ರಿಕೆಯ ಮಾಲಕರು ಬಂಡವಾಳಶಾಹಿ ವ್ಯಾಪಾರಿ ಮನೋಭಾವದವರಾದ್ದರಿಂದ ಸಂಪಾದಕರು ವಾರಕ್ಕೊಮ್ಮೆ ಬದಲಾದರೂ ಆಶ್ಚರ್ಯವೇನಿಲ್ಲ.

ಇನ್ನೊಮ್ಮೆ ರಾಜ್ಯ ಮಟ್ಟದ ಒಂದು ಸಾಪ್ತಾಹಿಕಕ್ಕೆ ಉಪಸಂಪಾದಕರು ಬೇಕೆಂಬ ಪ್ರಕಟನೆ ಬಂದಾಗ ನಾನೂ ಒಂದು ಅರ್ಜಿ ಹಾಕಿದೆ. ಹುಬ್ಬಳ್ಳಿಯಲ್ಲೇ ಇಂಟರ್ ವ್ಯೂ. ಬೆಂಗಳೂರಿಂದಲೇ ಯಾರೋ ಒಬ್ಬ ಸಂದರ್ಶನ ತೆಗೆದುಕೊಳ್ಳಲು ಹುಬ್ಬಳ್ಳಿಗೆ ಬಂದಿದ್ದ. ಒಂದಿಷ್ಟು ಪ್ರಶ್ನೆಗಳು. ಹೆಚ್ಚಾಗಿ ಎಲ್ಲವೂ ಸಿನೆಮಾರಂಗಕ್ಕೆ ಸೇರಿದ್ದೇ. ಅವನಿಗೆ ಅದನ್ನು ಬಿಟ್ಟು ಬೇರೇನೂ ಗೊತ್ತಿದ್ದಂತಿರಲಿಲ್ಲ. ಸುಮ್ಮನೇ ಕಾಟಾಚಾರಕ್ಕೆ ಇಂಟರವ್ಯೂ ಮಾಡಿದಂತೆನಿಸಿತು. ನಮ್ಮ ಯಾವ ಅನುಭವಗಳೂ ಅವನಿಗೆ ಬೇಕಾದಂತೆನಿಸಲಿಲ್ಲ.

ಇವೆಲ್ಲ ನಮ್ಮ ದೊಡ್ಡ ಪತ್ರಿಕೆಗಳಲ್ಲಿ ನಡೆಯುವ ಪ್ರಹಸನಗಳು. ನಿಜವಾಗಿಯೂ ಈ ಕೆಲ ದೊಡ್ಡ ಪತ್ರಿಕೆಗಳ ಸಂಪಾದಕರಿಗೆ ಏನು ಬೇಕು ಎನ್ನುವದೇ ನನಗಿನ್ನೂ ಅರ್ಥವಾಗಿಲ್ಲ. ಮತ್ತು ಈಗ ಅರ್ಥ ಆಗಬೇಕಾಗಿಯೂ ಇಲ್ಲ. ಅವರ ಆಯ್ಕೆಯ ಮಾನದಂಡಗಳೇನೋ ನನಗೆ ಗೊತ್ತಿಲ್ಲ. ಬಹುಶಃ ಯಾವ ಮಾನವೂ ಇಲ್ಲ , ದಂಡವೂ ಇಲ್ಲ. ಸದ್ಯ‌ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬಗ್ಗೆ ನಾನು ಟೀಕೆ ಟಿಪ್ಪಣೆ ಮಾಡುವದು ಸರಿಯಲ್ಲ. ಅವರ ಹೊಟ್ಟೆಪಾಡಿನ ಪ್ರಶ್ನೆ ಅದು. ಕೈತುಂಬ ಸಂಬಳ ಸವಲತ್ತಾದರೂ ಕೊಡ್ತಾರಲ್ಲ. ಜ್ಞಾನ ಅನುಭವ ಎಲ್ಲ ಆ ಮೇಲೆ. ಬಂಡವಳದಾರ ಮಾಲಕರಿಗೆ ಸಂಬಂಧಪಟ್ಟ ವಿಷಯ ಅಲ್ಲ ಅದು. ಅವರು ಲಾಭಕ್ಕಾಗೇ ಪತ್ರಿಕೆ ಮಾಡುವದು. ಏಕೆಂದರೆ ಅದು ಉದ್ಯಮ.

ಚಮಚಾಗಿರಿ, ಕಾಲೆಳೆಯುವಿಕೆ, ಮತ್ಸರ, ರಾಜಕೀಯ ಎಲ್ಲವೂ ಇವೆ ಮಾಧ್ಯಮ ಕ್ಷೇತ್ರದಲ್ಲಿ. ನಾನು ಪತ್ರಿಕಾ ರಂಗಕ್ಕೆ ಕಾಲಿಟ್ಟ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಅಜಗಜಾಂತರ ಇದೆ. ಅಗಾಧ ಬೆಳವಣಿಗೆ ಆಗಿದೆ. ಅದು ಸಂತೋಷವೆ. ಕಾಲ ಬದಲಾದ ಹಾಗೆ ಮೌಲ್ಯಗಳೂ ಬದಲಾಗುತ್ತವೆ. ಒಳ್ಳೆಯ ಮೌಲ್ಯಗಳ ಜಾಗವನ್ನು ಕೆಟ್ಟ ಮೌಲ್ಯಗಳು ಆಕ್ರಮಿಸಿಕೊಳ್ಳಬಲ್ಲವು. ಕಾಲಾಯ ತಸ್ಮೈ ನಮ:. ಬದಲಾದ ಕಾಲಕ್ಕೆ ನಾವೇ ಹೊಂದಿಕೊಳ್ಳಬೇಕು. ಇಲ್ಲದಿದ್ದರೆ ದೂರವಿಡಬೇಕು. ಬದುಕು ಮುಖ್ಯ ತಾನೆ.

ಆತ್ಮಗೌರವ, ಸ್ವಾಭಿಮಾನ , ಪ್ರಾಮಾಣಿಕತೆ ಇತ್ಯಾದಿಗಳೊಂದಿಗೆ ಬಾಳಿದ ಒಂದು ಹಿರಿಯರ ಪೀಳಿಗೆ ಹಿಂದೆ ಸರಿದುಹೋಗಿದೆ. ಲಕ್ಷ ರೂಪಾಯಿ ಕೊಡುತ್ತೇನೆಂದರೂ ಬೀಡಿ ಸಿಗರೇಟು ಮದ್ಯಗಳ ಜಾಹೀರಾತು‌ ನನ್ನ ಪತ್ರಿಕೆಯಲ್ಲಿ ಪ್ರಕಟಿಸಲಾರೆ ಎನ್ನುತ್ತಿದ್ದ ಪಾಂಡೇಶ್ವರರಂತೆ ಬದುಕುತ್ತೇನೆ ಎಂದು ಇಂದು‌ ಯಾರಾದರೂ ಹೇಳುವ ಧೈರ್ಯ ತೋರಿಸಬಲ್ಲರೇ? ಮುಖಪುಟದ ತುಂಬ ಚಪ್ಪಲಿ ಜಾಹೀರಾತು ಹಾಕಿ ಓದುಗರ ಮುಖಕ್ಕೆ ಹಿಡಿಯುವವರ ಕಾಲದಲ್ಲಿ ನಾವಿದ್ದೇವೆ. ದುಡ್ಡು ಸ್ವಾಮೀ ದುಡ್ಡು.....

- ಎಲ್. ಎಸ್. ಶಾಸ್ತ್ರಿ

5 views0 comments

Comments


bottom of page