top of page

ಪತ್ರಿಕಾರಂಗದ ನನ್ನ ೬೦ ವರ್ಷಗಳುಭಾಗ -೧೪

ಭಾಷೆ ಉಳಿಸುವ ಎಚ್ಚರ ಮಾಧ್ಯದವರಿಗೂ ಬೇಕು

**************

ಭಾಷೆ ಉಳಿಸಿಬೆಳೆಸುವ ಕೆಲಸ ಕೇವಲ ಹೋರಾಟಗಾರರದೋ, ಸಾಹಿತಿಗಳದೋ, ಸರಕಾರದ್ದೋ ಅಲ್ಲ. ಪತ್ರಿಕೆ ಟಿವಿ ಮಾಧ್ಯಮದವರ ಜವಾಬ್ದಾರಿಯೂ ಇದೆ. ಅಷ್ಟೇ ಅಲ್ಲ, ಮನಸ್ಸು ಮಾಡಿದರೆ ಉಳಿದವರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಧ್ಯಮದವರು ಮಾಡಬಹುದು. ಆದರೆ ಬೇಸರದ ಸಂಗತಿ ಎಂದರೆ ಇದ್ದ ಕನ್ನಡವನ್ನೂ ಕೆಡಿಸುವ ಕೆಲಸ ಮಾಡುತ್ತಿವೆ.

‌ ನಿನ್ನೆಯಷ್ಟೇ ನಾನು ಒಂದು ದೊಡ್ಡ ಪತ್ರಿಕೆಯಲ್ಲಿ ಆಗುತ್ತಿದ್ದ ತಪ್ಪುಗಳ ಬಗ್ಗೆ ಹೇಳಿದೆ. ಈಚೆಗೆ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ತಪ್ಪುಗಳಾಗುತ್ತಿವೆ. ಶ್ರೀಯುತ ವಿಶ್ವೇಶ್ವರ ಭಟ್ಟರು ತಾವು ಇದ್ದ ಪತ್ರಿಕೆಯಲ್ಲಿ " ತಪ್ಪಾಯ್ತು, ತಿದ್ಕೋತೀವಿ" ಅಂತಾನೇ ಒಂದು ಕಾಲಂ ಇಟ್ಟಿದ್ದು ನಿಮಗೂ ಗೊತ್ತಿರಬಹುದು. ಅಷ್ಟಾದರೂ ಎಚ್ಚರ ಬೇಕು. ಆದರೆ ತಿದ್ದಿಕೊಳ್ಳಬೇಕಾದವರು ಓದುಗರಲ್ಲ, ಪತ್ರಿಕಾ ಕಾರ್ಯಾಲಯಗಳಲ್ಲಿ ಕೆಲಸ ಮಾಡುವವರು. ಬರೆಯುವವರ / ಡಿಟಿಪಿ ಮಾಡುವವರ ಕನ್ನಡವೇ ಶುದ್ಧವಾಗಿಲ್ಲದಿದ್ದರೆ ತಪ್ಪುಗಳಾಗುವದು ಸಹಜ. ದುಡ್ಡು ಕೊಟ್ಟು ಓದುವ ವಾಚಕರಿಗೆ ಅದನ್ನು ತಿದ್ದಿಕೊಳ್ಳುವ ಕಿರಿಕಿರಿಯನ್ನೂ ಕೊಡುವದು ಸರಿಯಲ್ಲ. ಹಿಂದೆ ಕರಡಚ್ಚು ತಿದ್ದುವವರು / ಪ್ರೂಫ್ ರೀಡರರು ಇರುತ್ತಿದ್ದರು‌ . ಈಗ ಬಹುಶಃ ಬರೆದವರೇ ತಿದ್ದಿಕೊಳ್ಳಬೇಕೇನೊ. ತಮ್ಮ ತಪ್ಪು ತಿಳಿದರೆ ತಾನೇ ತಿದ್ದಿಕೊಳ್ಳೋದು? ಓದುವ ಹವ್ಯಾಸ ಹೆಚ್ಚಿನವರಲ್ಲಿ ಇಲ್ಲ. ಭಾಷೆ ಹೇಗೆ ಸುಧಾರಿಸಬೇಕು? ಭಾಷೆ ಸರಿಯಾಗಿ ಬರದವರನ್ನು ಪತ್ರಿಕೆಗೆ ತೆಗೆದುಕೊಂಡವರ ತಪ್ಪೂ ಇದೆ.

ಈ ವಿಷಯದಲ್ಲಿ ಪತ್ರಿಕೆಗಳು ಬೇಕು, ಟಿವಿ ಚಾನೆಲ್ನೋರು ಬೇಡ ಎಂಬ ಸ್ಥಿತಿ ಇದೆ. ನಮಗೆ ಬರುವ ಕನ್ನಡವನ್ನೂ ಹಾಳು ಮಾಡುವ ಥಾಕತ್ತು ಈ ಟೀವಿಯವರಿಗಿದೆ. ಒಂದನೆಯದಾಗಿ ತಪ್ಪು ತಪ್ಪು ಕನ್ನಡ ಶಬ್ದಗಳನ್ನು ಬರೆಯುವದು, ಎರಡನೆಯದು ಒಂದು ವಾಕ್ಯದ ಆರು ಶಬ್ದಗಳಲ್ಲಿ ನಾಲ್ಕು ಇಂಗ್ಲಿಷ್ ಶಬ್ದ, ಎರಡು ಕನ್ನಡ ಶಬ್ದ. ಯಾರಿಗಾಗಿ ಇವರು ಇಂಗ್ಲೀಷನ್ನು ಅಷ್ಟು ಧಾರಾಳವಾಗಿ ಬಳಸುತ್ತಾರೆ? ಇಂಗ್ಲಿಷ ಭಾಷೆ ಬೆಳೆಸುವ ಜವಾಬ್ದಾರಿ‌ ಇವರಿಗೆ ಕೊಟ್ಟಿದ್ದಾರೆಯೆ? ಕಾರಣ ಅದಲ್ಲ. ಕನ್ನಡ ಸರಿಯಾಗಿ ಬರಬೇಕಲ್ಲ ಇವರಿಗೆ? ಕನ್ನಡ ಹಾಳುಮಾಡುವ ಜವಾಬ್ದಾರಿ ಹೊತ್ತಿದ್ದಾರೆಯೇ ಇವರು. ನಿಜ, ಕನ್ನಡದಲ್ಲಿಂದು ಸಾಕಷ್ಟು ಇಂಗ್ಲಿಷ್ ಶಬ್ದಗಳು ಕನ್ನಡದ್ದೇ ಎನ್ನುವಂತೆ ಸೇರಿಕೊಂಡಿವೆ. ಆದರೆ ಅವನ್ನು ಬಳಸುವಾಗ ಎಲ್ಲೋ ಒಂದೆಡೆ ಅಪರೂಪಕ್ಕೆ ಇಂಗ್ಲಿಷ್ ಶಬ್ದ ಬಂದರೆ ಸಹಿಸಿಕೊಳ್ಳಬಹುದು. ಇಂಗ್ಲೀಷ್ ನಡುವೆ ಎಲ್ಕೋ ಒಂದು ಕಡೆ ಆಕಸ್ಮಿಕವಾಗಿ ಕನ್ನಡ ಶಬ್ದ ಕಾಣಿಸಿಕೊಂಡರೆ ಅದು ಕನ್ನಡಿಗರ ಪುಣ್ಯ ಎಂಬಂತಾಗಿದೆ.

ಟಿವಿಯವರಿಗೆ ಟಿ ಆರ್ ಪಿ ಮುಖ್ಯ ಎನ್ನೋದು ಸರಿ. ಆದರೆ ಅವರು ಮಾಡುವ ಕನ್ನಡದ ಕಗ್ಗೊಲೆಯನ್ನು ಸಹಿಸಿಕೊಳ್ಳಬೇಕೆ? ಕೆಲವೊಂದು ಪತ್ರಿಕೆಗಳಲ್ಲೂ ಈಚೆಗೆ ಇಂಗ್ಲಿಷ್ ಶಬ್ದಗಳ ಬಳಕೆ ಹೆಚ್ಚಾಗಿದೆ. ಇವೆಲ್ಲ ಕನ್ನಡ ಹೋರಾಟಗಾರರಿಗೆ ತಿಳಿದೇಇಲ್ಲವೇ? ಅವರ ಹೋರಾಟ ಹಣ ಸಿಗುವಲ್ಲಿ ಮಾತ್ರವೇ? ಮಾಧ್ಯಮದ ಈ ಆಂಗ್ಲಭಾಷಾ ಮೋಹದ ವಿರುದ್ಧ ಈಗ ಕನ್ನಡಿಗರು ಎಚ್ಚತ್ಕೊಳ್ಳದಿದ್ದರೆ ಇವರು ಎಲ್ಲವನ್ನೂ ಇಂಗ್ಲಿಷಮಯವಾಗಿ ಮಾಡಿಬಿಡುವ ದಿನಗಳು ದೂರವಿಲ್ಲ.

*

ಪತ್ರಕರ್ತರಿಗೆ ಭಾಷೆಯ ಸಂಗಡ ಸಾಮಾನ್ಯ ಜ್ಞಾನವೂ ಬೇಕು. ಪುಸ್ತಕ ಓದುವ ಅಭ್ಯಾಸ ಇಲ್ಲದವರಲ್ಲಿ ಅಂತಹ ಜ್ಞಾನ ಬೆಳೆಯುವದು ಹೇಗೆ ಸಾಧ್ಯ? ನಾನು ಈ ಹಿಂದೆ ಒಮ್ಮೆ ಬರೆದಿದ್ದೆ. ಒಂದು ದೊಡ್ಡ ದಿನಪತ್ರಿಕೆಯಲ್ಲಿ ಒಮ್ಮೆ ಹೆಡ್ಡಿಂಗ್ ಹೀಗಿತ್ತು:

" ಸಂಗೀತ ವಿದೂಷಕಿ ಗಂಗೂಬಾಯಿ ಹಾನಗಲ್ಲರಿಗೆ ಸನ್ಮಾನ"

ವಿದುಷಿಯನ್ನು ವಿದೂಷಕಿಯನ್ನಾಗಿ ಮಾಡಿದ ಇವರಿಗೆ ಏನನ್ನೋಣ?

ಇನ್ನೊಂದು ದೊಡ್ಡ ಪತ್ರಿಕೆಯಲ್ಲಿ -

" ವಸುದೇವ ಕುಟುಂಬಕಮ್" ಎಂದುತಲೆಬರೆಹ ಇತ್ತು.

ಅದು " ವಸುಧೈವ ಕುಟುಂಬಕಂ" ಎಂಬ ಶಬ್ದ. ಆ ವ್ಯತ್ಯಾಸ ಗೊತ್ತಿರಬೇಕಲ್ಲ. ಇಂತಹ ಅಸಹನೀಯವಾದ ತಪ್ಪುಗಳು ಇಂದು ಸರ್ವೇಸಾಮಾನ್ಯ ಎನ್ನುವಂತಾಗಲು ಕಾರಣ ಮಾಧ್ಯಮ‌ಕ್ಷೇತ್ರ ಗಾತ್ರದಿಂದ ಬೆಳೆಯುತ್ತಿದೆ ಹೊರತು ಗುಣದಿಂದ ಅಲ್ಲ. ಕೆಲಸಗಾರರನ್ನು ತೆಗೆದುಕೊಳ್ಳುವಾಗ ಅವರ ಜ್ಞಾನ ಎಷ್ಟು ಏನು ಎನ್ನುವ ಸರಿಯಾದ ಮಾಹಿತಿ ಪಡೆದುಕೊಳ್ಳದೇ ಸಿಕ್ಕಸಿಕ್ಕವರನ್ನೆಲ್ಲ ತೆಗೆದುಕೊಂಡರೆ ಇನ್ನೇನಾಗಲು ಸಾಧ್ಯ? ಹಾಗಿದ್ದರೆ ಈ‌ ಕ್ಷೇತ್ರಕ್ಕೆ ಬರಲು ಅರ್ಹತೆಯ ಯಾವ ಕನಿಷ್ಠ ಮಾನದಂಡಗಳೂ ಇಲ್ಲವೇ? ಸಂಪಾದಕರುಗಳನ್ನೇ ಕೇಳಬೇಕಾಗುತ್ತದೆ.

ಕನ್ನಡ ಪತ್ರಿಕಾರಂಗದ ಪ್ರಾರಂಭಿಕ ಕಾಲದಲ್ಲಿ ಇಂದಿನ ಹಾಗೆ ಯಾರು ಯಾರೋ ಸಂಪಾದಕರಾಗುತ್ತಿದ್ದಿಲ್ಲ. ಕನ್ನಡ ಪಂಡಿತರು, ಶಿಕ್ಷಕರು, ವಿದ್ವಾಂಸರು ಮಾತ್ರ ಸಂಪಾದಕರಾಗುತ್ತಿದ್ದರು. ಭಾಷೆ ಮತ್ತು ವಿಷಯ ಜ್ಞಾನ ಮುಖ್ಯವಾಗಿತ್ತು. ಎರಡನೇ ಒಂದು ಹಂತದಲ್ಲಂತೂ ಡಿವಿಜಿ, ತಿ. ತಾ. ಶರ್ಮಾ, ಸಿದ್ಧವನಹಳ್ಳಿ ಕೃಷ್ಣ ಶರ್ಮಾ, ಕಡೆಂಗೋಡ್ಲು, ಪಾಂಡೇಶ್ವರ ಮೊದಲಾದವರು, ಅನಕೃ, ಕಾರಂತ, ಆನಂದಕಂದ, ಕಟ್ಟೀಮನಿ, ಮೊದಲಾದ ಸಾಹಿತಿಗಳೂ ಪತ್ರಿಕೆ ಹೊರತಂದರು.

ಕ್ರಮೇಣ ಮಾಧ್ಯಮ ಕ್ಷೇತ್ರ ಬೆಳೆಯಿತು. ಬಂಡವಳದಾರರ ಕೈಗೆ ಸಿಕ್ಕು ಅದು ಉದ್ಯಮ ಆಯಿತು. ಪತ್ರಿಕಾ ಧರ್ಮ, ಧ್ಯೇಯನಿಷ್ಠೆ ಎಲ್ಲ ಹಿಂದೆ ಸರಿದವು. ತಾಂತ್ರಿಕವಾಗಿ ಅದ್ಭುತ ಬೆಳವಣಿಗೆ ಕಂಡ ಕ್ಷೇತ್ರ ತಾತ್ವಿಕ- ಸಾತ್ವಿಕ - ನೈತಿಕ ಗುಣಗಳನ್ನು ಕಳೆದುಕೊಂಡಿತು. ಈಗ ಯಾರು ಬೇಕಾದರೂ ಪತ್ರಿಕೆ ಹೊರಡಿಸಬಹುದು, ಟಿವಿ ಚಾನೆಲ್ ಮಾಡಬಹುದು. ಹಣವಿದ್ದರಾಯಿತು. ಬರೆಯುವವರನ್ನು ಕೊಂಡುಕೊಳ್ಳುವ ಶಕ್ತಿ ಇದ್ದರಾಯಿತು. ಭಾಷೆ ಸಾಹಿತ್ಯ ಗುಣಮಟ್ಟ ಇವೆಲ್ಲ ಇಲ್ಲದಿದ್ದರೂ ನಡೆಯುತ್ತದೆ.

"ಎಲ್ಲಿಗೆ ಬಂತೋ ಸಂಗಯ್ಯ" ಅಂದರೆ " ಕುತ್ತಿಗೆ ಮಟ ಬಂದೈತಿ, ಇನ್ನೂ ಮುಳುಗಿಲ್ಲ" ಅಂದರಂತೆ. ಹಾಗಿದೆ ನಮ್ಮ ಸ್ಥಿತಿಗತಿ! ಇದನ್ನೆಲ್ಲಾ ಹೇಳಿದವರೇ ಹಾಳು ಅಷ್ಟೇ.

‌‌‌ - ಎಲ್. ಎಸ್. ಶಾಸ್ತ್ರಿ

16 views0 comments

Comments


bottom of page