top of page

ಪತ್ರಿಕಾರಂಗದ ನನ್ನ ೬೦ ವರ್ಷಗಳುಭಾಗ -೧೧

" ಕುದುರೆ ನಾವ್, ಅವನು ಪೇಳ್ದತ್ತ ಪಯಣಿಗರು"

...- ಡಿವಿಜಿ


ಬದುಕಿನ ಜಟಕಾ ಬಂಡಿಗೆ ವಿಧಿಯೆಂಬ ಸಾಹೇಬ. ಇರಲಿ. ಆದರೆ ನಾವು ಹೇಳಿದತ್ತ ಅವನು ಹೋಗುವದಿಲ್ಲ. ಅವನು ಒಯ್ದತ್ತ ನಾವು ಹೋಗಬೇಕು. ಇದು ಸಮಸ್ಯೆ. ಅವನು ನಮ್ಮ ಮಾತು ಕೇಳುವದಿಲ್ಲ. ಮೂಕ ಕುದುರೆಗಳು ನಾವು.

ಅದೇನು ಸುಳ್ಳಲ್ಲ. ಅವನು ಎಲ್ಲಿಗೆ ಒಯ್ಯಬೇಕೆಂದುಕೊಂಡಿದ್ದನೋ ಅಲ್ಲಿಗೆ ನನ್ನನ್ನು ಒಯ್ದಿದ್ದಾನೆ. ನಾನೂ ಹೋಗಿದ್ದೇನೆ. ಪತ್ರಕರ್ತನಾಗಿ ಒಂದು ರೀತಿ ಅಲೆಮಾರಿ ಜೀವನವನ್ನೂ ಕಂಡಿದ್ದೇನೆ. ತೊಂದರೆ ಆಗಿದೆ. ನನಗಷ್ಟೇ ಅಲ್ಲ, ನನ್ನ ಸಂಸಾರಕ್ಕೂ. ಹೇಗೆಹೇಗೋ ಸುಧಾರಿಸಿಕೊಳ್ಳುತ್ತ , ಒಂದೆಡೆಯಿಂದ ಇನ್ನೊಂದೆಡೆಗೆ, ಇನ್ನೊಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗಿದ್ದೇನೆ. ಹಣಕಾಸಿನ ಇಕ್ಕಟ್ಟು, ಬಿಕ್ಕಟ್ಟು ಎಲ್ಲ ಅನುಭವಿಸಿ ಗಟ್ಟಿಯಾಗಿದ್ದೇನೆ. ತಾಳ್ಮೆ ಕಳೆದುಕೊಳ್ಳಲಿಲ್ಲ. ಮನಸ್ಸನ್ನು ಶಾಂತವಾಗಿ

ಇರಿಸಿಕೊಂಡು ಮನಸ್ಸು ದುರ್ಬಲವಾಗದಂತೆ ನೋಡಿಕೊಂಡು " ಬಂದದ್ದೆಲಾ ಬರಲಿ..‌ ಗೋವಿಂದನ ದಯವೊಂದಿರಲಿ " ಎನ್ನುತ್ತ ಎಲ್ಲಿಂದೆಲ್ಲಿಗೋ ಬಂದುಬಿಟ್ಟಿದ್ದೇನೆ.

ಹಾಗೆ ಅನೇಕ ಪತ್ರಿಕೆಗಳನ್ನು ಬದಲಿಸುತ್ತ , ಊರುಗಳನ್ನೂ ಬದಲಿಸುತ್ತ ೪೦ ವರ್ಷಗಳ ಹಿಂದೆ ಬೆಳಗಾವಿಗೆ ಬಂದು ತಲುಪಿದ ನಂತರವೇ ಬದುಕು ಸ್ಥಿರವಾದದ್ದು, ಸ್ವಲ್ಪಮಟ್ಟಿಗೆ ನೆಮ್ಮದಿ ಕಂಡಿದ್ದು. ನನ್ನ ತೊಂದರೆಗಳ/ ಕಷ್ಟ ನಷ್ಟಗಳ ಕತೆ ನಾನು ಹೇಳಿ , ನೀವು ಕೇಳಿ ಆಗಬೇಕಾದ್ದೇನೂ ಇಲ್ಲ. ಪತ್ರಕರ್ತನ ಬದುಕು ಹೂವಿನ ಹಾಸಿಗೆಯಂತೂ‌ ಆಗಿರಲಿಲ್ಲ ನನ್ನ ಪಾಲಿಗೆ. ನನ್ನ ಹಾಗೇ ಕಷ್ಟ ಅನುಭವಿಸಿದವರು ಈ ಕ್ಷೇತ್ರದಲ್ಲಿ ಸಾಕಷ್ಟು ಜನರಿದ್ದಾರೆ. ಈಚೆಗೆ ಸ್ವಲ್ಪ ಸುಧಾರಿಸಿದ್ದರೂ ಎಲ್ಲರೂ ಬಹಳ ಆರಾಮಾಗಿದ್ದಾರೆಂದೇನೂ ಸುಳ್ಳು ಹೇಳಲಾರೆ.

ಈ ಮಧ್ಯೆ ಕೆಲವು ದಿನಪತ್ರಿಕೆಗಳ ವರದಿಗಾರನೂ ಆಗಿದ್ದೆ. ಸಂಯುಕ್ತ ಕರ್ನಾಟಕ, ನವನಾಡು, ಮುಂಬಯಿಯ ಕರ್ನಾಟಕ ಮಲ್ಲ ಇತ್ಯಾದಿ.

ಬೆಳಗಾವಿಯಲ್ಲಿರುವಾಗಲೇ ಎರಡು ಅನಿರೀಕ್ಷಿತ ಘಟನೆಗಳೂ ಸಂಭವಿಸಿದವು.


* ಕಾರವಾರದ ಒಬ್ಬರು ಗಾಂವಕರ ಅಂತ ಬೆಂಗಳೂರಿನಲ್ಲಿರುವ ನನ್ನ ಹಿರಿಯ ಆತ್ಮೀಯ ಮಿತ್ರರಾದ ಲೇಖಕ ಶಾ. ಮಂ. ಕೃಷ್ಣರಾಯ ಅವರಿಂದ ಒಂದು ಪತ್ರ ತಂದರು. ಗಾಂವಕರ ಅವರು ಬೆಂಗಳೂರಿನ ಒಬ್ಬರು ವಕೀಲರ ಸಹಾಯದೊಂದಿಗೆ ( ಅವರು ಮೂಲತಃ ಉತ್ತರ ಕನ್ನಡದವರೇ) " ಮನೆಮಾತು " ಎಂಬ ದಿನಪತ್ರಿಕೆ ಹೊರತರಲು ನಿರ್ಧರಿಸಿ ಕೃಷ್ಣರಾಯರನ್ನು ಸಂಪಾದಕರಾಗಲು ಕೇಳಿದಾಗ ಅವರು ನನಗಿಂತ ಶಾಸ್ತ್ರಿಯವರು ಯೋಗ್ಯ, ಅವರನ್ನು ಭೆಟ್ಟಿಯಾಗಿ ಎಂದು ಹೇಳಿ ನನಗೆ ಪತ್ರ ಕೊಟ್ಟಿದ್ದರು. ನನಗೂ ಒಂದು ಸುಪ್ತ ಆಸೆ ಇತ್ತು ಅನ್ನಿ. ನನ್ನ ಅನುಭವ ಬಳಸಿ ಉ. ಕ. ದಲ್ಲಿ ಒಂದು ಉತ್ತಮ ಪತ್ರಿಕೆ ಹೊರಬರುವಂತೆ ಮಾಡಬೇಕು ಎಂಬ ವಿಚಾರ ಹೊಂದಿದ್ದ ನಾನು ಕೃಷ್ಣರಾಯರು ಮತ್ತು ಆ ವಕೀಲರನ್ನು ( ಮಹಿಳೆ) ನಂಬಿ ಬರುತ್ತೇನೆ ಎಂದೆ. ಅವರ್ಯಾರದೂ‌ ಕೆಟ್ಟ ಉದ್ದೇಶ ಇರಲಿಲ್ಲ. ನೋಡೋಣ ಒಂದು ಪ್ರಯೋಗ , ಇಲ್ಲದಿದ್ದರೆ ಬೆಳಗಾವಿ ಇದ್ದೇಇದೆ ಎಂಬ ಧೈರ್ಯವೂ‌ ಇತ್ತು.

‌‌‌ ‌ ಸರಿ, ಆ ಗಾಂವಕರ ಎಂಬವನು ಏನೇನೋ ಸ್ವಲ್ಪ ಪೂರ್ವ ತಯಾರಿ ಮಾಡಿಕೊಂಡಿದ್ದ. ಆದರೆ ಅಂತಹ ಅಂದಾಜು ಲೆಕ್ಕಾಚಾರಗಳು‌ ಪತ್ರಿಕಾ ರಂಗದಲ್ಲಿ ನಡೆಯುವದಿಲ್ಲವಲ್ಲ. ನಾನು ಬೆಳಗಾವಿಯ ನನ್ನ ಪತ್ರಿಕಾಮಿತ್ರನೊಬ್ಬನನ್ನು ಸಹಾಯಕ್ಕೆಂದು ಸಂಗಡ ಕರೆದುಕೊಂಡು ಕಾರವಾರಕ್ಕೆ ಹೋದೆ. ಊಟ ವಸತಿ ವ್ಯವಸ್ಥೆಯೆಲ್ಲ ಮಾಡಿದ್ದ. ಬೇರೆ ಪ್ರೆಸ್ಸಲ್ಲಿ ಪ್ರಿಂಟಾಗಬೇಕು. ದಿನಪತ್ರಿಕೆಯ ಸಹವಾಸ ಬಹಳ ಕಷ್ಟ. ಓದುಗರ ವಲಯ ನಿರ್ಮಾಣವಾಗುವತನಕ ಮತ್ತು ಜಾಹೀರಾತುಗಳು ಸಿಗುವತನಕ ಆ ದೈನಂದಿನ ಭಾರ ಹೊರಬೇಕಾಗುತ್ತದೆ. ನಾವೇನೋ ಪತ್ರಿಕೆ ರೂಪಿಸಿಕೊಡಬಹುದು. ಆದರೆ ಸರ್ಕ್ಯುಲೇಶನ್ ಮತ್ತು ಮಾರಾಟ ವ್ಯವಸ್ಥೆ ‌ಆಗಬೇಕಲ್ಲ. ಅದಕ್ಕೆ ದೊಡ್ಡ ಮೊತ್ತವೂ ಬೇಕು, ದೊಡ್ಡ ನೆಟ್ ವರ್ಕ್ ಸಹ ಬೇಕು.

ಒಂದು ತಿಂಗಳು ಹೇಗೋ ದಾಟಿತು. ಸಮಸ್ಯೆಗಳ ಸರಮಾಲೆ ಆರಂಭವಾಯಿತು. ಪ್ರಿಂಟಿಂಗ್ ಬೆಂಗಳೂರಲ್ಲಿ ಎಂದು ಅಲ್ಲಿಗೆ ನಮ್ಮ ಬಿಡಾರ ಶಿಫ್ಟ್ ಆಯಿತು. ಒಂದು ತಿಂಗಳ ನಂತರ ಬಿಡಾರ ಹುಬ್ಬಳ್ಳಿಗೆ ಬಂತು. ದೇವಗಿರಿಯಿಂದ ದಿಲ್ಲಿಗೆ,, ದಿಲ್ಲಿಯಿಂದ ದೇವಗಿರಿಗೆ ಎಂಬ ತಘಲಕನ ಆಡಳಿತ ನೆನಪಾಯಿತು. ಹಣ ಹಾಕುವವರಾದರೂ ಎಷ್ಟೆಂದು ಹಾಕಲು ಸಾಧ್ಯ? ಆ ವಕೀಲರೂ ಸುಸ್ತಾಗಿದ್ದರು. ಅದೆಷ್ಟೋ ಲಕ್ಷ ಕೈಬಿಟ್ಟಿತ್ತು. ಕೊನೆಗೆ ನಾವೇ ವಾಪಸು ಬೆಳಗಾವಿಗೆ ವಾಪಸು ಹೋಗುವ ನಿರ್ಧಾರ ಮಾಡಿದೆವು. ಏಕೆಂದರೆ ಈ ಪ್ರಯತ್ನ ಯಶಸ್ವಿಯಾಗುವ ಯಾವ ಲಕ್ಷಣಗಳೂ ಇರಲಿಲ್ಲ. ಕೆಲಸ ಹೋಗುತ್ತದೆನ್ನುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ಜಿಲ್ಲೆಯಲ್ಲಿ ಒಂದು ಉತ್ತಮ ಗುಣಮಟ್ಟದ ಪತ್ರಿಕೆ ಮಾಡುವ ಆಸೆ ಈಡೇರಲಿಲ್ಲವಲ್ಲ ಎಂದು ಬೇಸರವಾದದ್ದು ನಿಜ.

‌ಇಂತಹದನ್ನೆಲ್ಲ ಒಂದು ಅನುಭವವಾಗಿ ಸ್ವೀಕರಿಸುವ ಮನಸ್ಥಿತಿ ಇಟ್ಟುಕೊಂಡಿರುವ ನನಗೆ ಅದೇನೋ ದೊಡ್ಡ ಹಿನ್ನಡೆ ಅನಿಸಲಿಲ್ಲ. ಅನೇಕ ಏರಿಳಿತಗಳನ್ನು ಕಂಡ ನನಗೆ ವಿಶೇಷ ಆತಂಕವುಂಟಾಗುವ ಪ್ರಶ್ನೆಯೂ ಇರಲಿಲ್ಲ. ಹೊಳೆಯಲ್ಲಿ ಮುಳುಗಿದವನಿಗೆ ಛಳಿಯ ಹಂಗೆಲ್ಲಿ?

( ಸಶೇಷ)

‌‌ ‌ ‌‌ ‌‌‌- ಎಲ್. ಎಸ್. ಶಾಸ್ತ್ರಿ

2 views0 comments

Comments


bottom of page