top of page

ಪತ್ರಿಕಾರಂಗದಲ್ಲಿ ನನ್ನ ೬೦ ವರ್ಷಗಳುಭಾಗ-೧೦

ಮತ್ತೊಂದಿಷ್ಟು ಅನುಭವಗಳು/ ತೊಳಲಾಟಗಳು


ಹುಬ್ಬಳ್ಳಿಯಲ್ಲಿ ಇರುವಾಗಲೇ ನನಗೆ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳ ಸಂಪಾದಕ ಬಳಗದವರ ಪರಿಚಯ ಸಹಜವಾಗಿ ಬಂದಿತ್ತು. ಎಂ. ನಾಗರಾಜರಾವ್, ಸುರೇಂದ್ರ ದಾನಿ, ದ. ಲ. ಕೆರೂರ, ಪಾವೆಂ , ಮಾಧವ ಮಹಿಷಿ , ಗೋಪಾಲ ವಾಜಪೇಯಿ, ಅನಿಲ ಬೆಟಗೇರಿ ಮೊದಲಾದವರೆಲ್ಲರ ಒಡನಾಟ ದೊರಕಿತ್ತು. ಬಿಡುವಾದಾಗ ನಾನು ಅಲ್ಲಿಗೆ ಹೋಗಿಬರುತ್ತಿದ್ದೆ. ಪ್ರಜಾವಾಣಿಗೆ ಆಗ ಮುಖ್ಯ ವರದಿಗಾರರು ಚಕ್ರವರ್ತಿ. ಇಂಡಿಯನ್ ಎಕ್ಸಪ್ರೆಸ್ ಗೆ ಜಠಾರ್. ಆ ಹಿರಿಯರೆಲ್ಲ ನಮಗೆ ಮಾರ್ಗದರ್ಶಕರಾಗಿದ್ದರು.

೧೯೬೯ ರಲ್ಲಿ ನನಗೆ ವಿಶಾಲ ಕರ್ನಾಟಕ ಬಿಡುವ ಪ್ರಸಂಗ ಬಂದಾಗ ಕಸ್ತೂರಿ ಡೈಜೆಸ್ಟ್ ಮಾಸಿಕದಲ್ಲಿ ಉಪಸಂಪಾದಕರು ಬೇಕೆಂಬ ವಿಷಯ ತಿಳಿದು ನಾನು ಅದರ ಸಂಪಾದಕರಾದ ಪಾ. ವೆಂ. ಆಚಾರ್ಯ ಅವರನ್ನು ಭೆಟ್ಟಿಯಾದೆ. ಅರ್ಜಿ ಕೊಡಿ ಎಂದರು. ಅವರ ಇಂಟರ್ ವ್ಯೂ ಪದ್ಧತಿಯೇ ಬೇರೆಯಿತ್ತು.

ಪಾವೆಂ ಮಹಾ ಜೀನಿಯಸ್. ಅನೇಕ ಭಾಷೆಗಳನ್ನು ಬಲ್ಲವರು. ಕರ್ಮವೀರದಲ್ಲಿ ಆಗ ಅವರ ಹರಟೆಗಳು ಲಾಂಗೂಲಾಚಾರ್ಯ ಎಂಬ ಹೆಸರಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಕಸ್ತೂರಿಯಲ್ಲಿ ಅವರು ಬರೆಯುತ್ತಿದ್ದ ಪದಾರ್ಥ ಚಿಂತಾಮಣಿಯಲ್ಲಿ ಅವರ ಅಪಾರ ಜ್ಞಾನವನ್ನು ಕಾಣಬಹುದು. ಅದು ಪುಸ್ತಕ ರೂಪದಲ್ಲೂ ಬಂದಿದೆ.

ಪಾವೆಂ ನನಗೆ ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೂರು ಕಥಾಸಂಗ್ರಹ ಕೊಟ್ಟರು. ಅದರಲ್ಲಿ ಅತ್ಯುತ್ತಮವಾದ ಮೂರು ಕಥೆಗಳನ್ನು ಆಯ್ಕೆ ಮಾಡಿಕೊಡಿ ಎಂದರು. ಹತ್ತು ದಿನದಲ್ಲಿ ನಾನು ಓದಿ‌ಆಯ್ಕೆ ಮಾಡಿಕೊಟ್ಟೆ. ಅವರಿಗೆ ಸಮಾಧಾನವಾಗಿರಬೇಕು. ಒಂದನೇ ತಾರೀಕು ಬಂದು ಸೇರಿಕೊಳ್ಳಿ ಎಂದರು. ಅಂದರೆ ನಾನು ಆಯ್ಕೆಯಾಗಿದ್ದೆ. ಆದರೆ ಸೇರಿ ಅವರ ಕೈಕೆಳಗೆ ಕೆಲಸ ಮಾಡುವ ಭಾಗ್ಯ ನನಗಿರಲಿಲ್ಲ. ಅಂದು ಕಸ್ತೂರಿ ಸೇರಿದ್ದರೆ ಬಹುಶಃ ನನ್ನ ಮುಂದಿನ ದಾರಿ ಬೇರೆಯಾಗಬಹುದಿತ್ತೇನೋ. ಬದುಕು ನಮ್ಮ ಕೈಯಲ್ಲಿಲ್ಲ ಎನ್ನುವದು ಇದಕ್ಕೇ ಅನ್ನಬಹುದು‌. ಅನಿವಾರ್ಯ ಕಾರಣಗಳಿಂದ ನನ್ನ ದಿಕ್ಕು ಬದಲಾಯಿತು.

*

ಇಂತಹದೇ ಇನ್ನೊಂದು ಅನುಭವ ಕಲಬುರ್ಗಿಯ ನವಕಲ್ಯಾಣದಲ್ಲಿದ್ದಾಗಲೂ ಆಗಿತ್ತು. ಅಲ್ಲಿಯ ಪ್ರತಿಷ್ಠಿತ, ಹಿರಿಯ ವ್ಯಕ್ತಿ ಟಿ. ಎಸ್. ಅನಂತರಂಗಾಚಾರ್ ಎಂಬವರ ಪರಿಚಯ ಆಗಿತ್ತು. ನನ್ನ ಬಗ್ಗೆ ಅವರಿಗೆ ತುಂಬ ಪ್ರೀತಿಯಿತ್ತು. ಅವರಿಗೆ ಉನ್ನತ ಮಟ್ಟದ ಸಂಪರ್ಕಗಳೂ ಇದ್ದವು. ಅವರು ನನ್ನನ್ನು ವಾರ್ತಾ ಇಲಾಖೆಗೆ ಸೇರಿಸಲು ಬೆಂಗಳೂರಿಗೆ ಕರೆದೊಯ್ದು ಆಗಿನ ನಿರ್ದೇಶಕರಾದ ಭಾರದ್ವಾಜ ( ಹೆಸರು ಅದೇ ಇರಬೇಕು?) ಎಂಬವರನ್ನು ಭೆಟ್ಟಿ ಮಾಡಿಸಿದರು. ಆಗ ಒಂದು ಕಡೆ ಜಾಗ ಖಾಲಿ ಇತ್ತು . ಬಿ. ಎ. ಸರ್ಟಿಫಿಕೇಟ್ ಹಚ್ಚಿ ಅರ್ಜಿ ಕೊಡಿ ಎಂದರು. ನಾನು ಆಗಿನ್ನೂ ಬಿ. ಎ. ಪಾಸಾಗಿರಲಿಲ್ಲ. ಬಂದ ಒಳ್ಳೆಯ ಅವಕಾಶ ಕೈತಪ್ಪಿಹೋಯಿತು. "ನಸೀಬ್ ಅಪನಾ ಅಪನಾ" ಎನ್ನೋದು ಇದಕ್ಕೇ ಅಲ್ಲವೆ!

ನಾನು ಹುಬ್ಬಳ್ಳಿಯಲ್ಲಿದ್ದಾಗಲೇ "ಕಲ್ಪನಾ" ಎಂಬ ಒಂದು ಚಲನಚಿತ್ರ ಮಾಸಿಕದಲ್ಲೂ ಕೆಲಸ ಮಾಡಿದೆ. " ದೀನವಾಣಿ" ಎಂಬ ಒಂದು ವಾರಪತ್ರಿಕೆಯ ಸಂಪಾದಕನಾಗಿದ್ದೆ. ಮುಂದೆ ಪಾಟೀಲ ಪುಟ್ಟಪ್ಪನವರ " ವಿಶ್ವ ವಾಣಿ" ದಿನಪತ್ರಿಕೆಯಲ್ಕೂ ಕೆಲಸ ಮಾಡುವ ಅವಕಾಶ ದೊರಕಿತು.

*

ಈ ಮಧ್ಯೆ ಒಂದು ತಮಾಷೆ ನಡೆಯಿತು. ಹುಬ್ಬಳ್ಳಿಯಲ್ಲೇ ಆಗ ಒಂದು "ಸೆಕ್ಸ್ ಪತ್ರಿಕೆ"ಯನ್ನು ಒಬ್ಬರು ನಡೆಸುತ್ತಿದ್ದರು. ಅವರು ನನಗೆ ತಮ್ಮ ಪತ್ರಿಕೆಗೂ ಬರೆದುಕೊಡುವಂತೆ ಕೇಳಿಕೊಂಡರು. ನಾನೇನು ಲೈಂಗಿಕ ತಜ್ಞನಲ್ಲವಲ್ಲ. . ಹಣ ಬೇಕಾದಷ್ಟು ಕೊಡುತ್ತಿದ್ದರು. ಆದರೆ ನಾನು ನಿರಾಕರಿಸಿದೆ. ಇದನ್ನು ಬಿಟ್ಟು ಬೇರೆ ಸಾಹಿತ್ಯಿಕ ಮಾಸಪತ್ರಿಕೆ ಮಾಡಿ ಎಂಬ ಪುಕ್ಕಟೆ ಸಲಹೆಯನ್ನೂ ಕೊಟ್ಟೆ‌‌. ಆದರೆ ಆ ಸಲಹೆಯೂ ತಿರಸ್ಕಾರವಾಯಿತು. ಏಕೆಂದರೆ ಆ ಪತ್ರಿಕೆಗೆ ಡಿಮಾಂಡ್ ಬಹಳ ಇತ್ತು . ಕದ್ದು ಮುಚ್ಚಿ ಓದುವ ಓದುಗರೂ ಸಾಕಷ್ಟು ಇದ್ದರು.

ಹೀಗೆ ಪತ್ರಿಕಾರಂಗ ಬಹಳಷ್ಟು ಅನುಭವಗಳನ್ನೂ ಕೊಡುತ್ತದೆ, ಬಹಳಷ್ಟು ನೋವುಗಳನ್ನೂ ಕೊಡುತ್ತದೆ. ನೋವು ನುಂಗಿ ನೀಲಕಂಠರಾಗಬೇಕಾಗುತ್ತದೆ. ಈಗಿನ ಪತ್ರಕರ್ತರಿಗೆ ನಾವು ಪಡೆದಂತಹ ಅನುಭವಗಳು ಸಿಗಲಿಕ್ಕಿಲ್ಲ. ನಮ್ಮ ಕಾಲದ ಹೆಚ್ಚಿನವರು ನೀಲಕಂಠರೇ. ನಮಗೆ ಬೇಕೋ ಬೇಡವೋ, ಜೀವನ ಅನೇಕ ಬಗೆಯ ಪಾಠಗಳನ್ನು ಕಲಿಸುತ್ತದೆ. ಅಂತಹ ಕಟು ಅನುಭವಗಳ ನಡುವೆಯೇ ೬೦ ವರ್ಷ ಕಳೆದಿದ್ದೇನಲ್ಲ. ಅದು ಹೇಗೆ ಇಷ್ಟು ದೂರ ಸಾಗಿ ಬಂದೆನೋ ನನಗೇ ತಿಳಿಯದು. ಈಗ ಹಿಂತಿರುಗಿ ನೋಡಲು ಹೋದರೆ ಅಚ್ಚರಿಯಾಗುತ್ತದೆ. ಹಾಗಂತ ನಾನು ತಪ್ಪು ಮಾಡಿಲ್ಲ ಅಂತೇನಿಲ್ಲ. ನಮ್ಮಿಂದಲೂ ಕೆಲವು ತಪ್ಪುಗಳು ಆಗಿಬಿಡುತ್ತವೆ. ಎಷ್ಟೋ ಸಲ ನಮಗೂ ತಿಳಿಯದೆ ಏನೋ ನಿರ್ಧಾರ ಕೈಕೊಂಡುಬಿಡುತ್ತೇವೆ. ಆಗ ನಾವು ಬಲಕ್ಕೆ ಹೋಗುವ ಬದಲು ಎಡಕ್ಕೆ ಹೋಗಿಬಿಟ್ಟಿರುತ್ತೇವೆ. ತಿರುಗಿ ಹೋಗುವದು ಕಷ್ಟವಾಗುತ್ತದೆ. ನಮ್ಮ ತಪ್ಪಿಗೆ ನಾವೇ ಜವಾಬ್ದಾರರು.

( ಸಶೇಷ)

‌ - ಎಲ್. ಎಸ್. ಶಾಸ್ತ್ರಿ

3 views0 comments

Comments


bottom of page