top of page

ಪತ್ರಿಕೋದ್ಯಮ

ವೃತ್ತಿ ಮತ್ತು ನಾನು : ಭಾಗ - ೧

(೬೦ ವರ್ಷಗಳ ನಡೆದುಬಂದ ದಾರಿ)

ಪತ್ರಿಕೋದ್ಯಮ ನನ್ನ ವೃತ್ತಿ. ಕಲೆ ಸಾಹಿತ್ಯ ನನ್ನ ಪ್ರವೃತ್ತಿ. ನನ್ನ ವೃತ್ತಿಯಲ್ಲಿ ನಾನು ಅದೆಷ್ಟು ಒಳಗೊಂಡಿದ್ದೇನೆಂದರೆ ಅರ್ವತ್ತು ವರ್ಷಗಳ ದೀರ್ಘಕಾಲದ ನಂತರವೂ ಅದನ್ನು ಬಿಡುವ ವಿಚಾರ ಮಾಡುತ್ತಿಲ್ಲ. ಬಿಡಲು ಆಗುತ್ತಲೂ ಇಲ್ಲ. ಅದೊಂದು ಬಗೆಯ ತಾದಾತ್ಮ್ಯ ಭಾವ. ಹದಿನೆಂಟರಿಂದ ಈಗ ಎಪ್ಪತ್ತೆಂಟರವರೆಗೂ ಅದೇ ಕ್ಷೇತ್ರದಲ್ಲಿ ಸಾಗಿಬಂದುಬಿಟ್ಟಿದ್ದೇನೆ. ಈಗಲೂ ನಾನು ಒಂದು ದಿನಪತ್ರಿಕೆಗೆ ದಿನಾಲು ಸಂಪಾದಕೀಯ ಬರೆಯುವ ಕೆಲಸ ಮಾಡಿ ನನ್ನನ್ನು ನಾನೇ ಅದರಲ್ಲಿ ಸಕ್ರಿಯವಾಗಿರಿಸಿಕೊಂಡಿದ್ದೇನೆ.

ಯಾವುದೇ ವೃತ್ತಿಯನ್ನು ಬಹಳ ಪ್ರೀತಿಯಿಂದ ಮಾಡುವಾಗ ಮಾತ್ರ ಈ ಬಿಡಲಾಗದ ನಂಟು ಬಂದುಬಿಡುತ್ತದೆ. ಅದರಿಂದ ನಾನು ಪಡೆದದ್ದು ಮಾನಸಿಕ ತೃಪ್ತಿ ಮಾತ್ರ ಇರಬಹುದು. ಏಕೆಂದರೆ ನಾನು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಇಂದಿನ ಯಾವ ಸೌಕರ್ಯಗಳೂ ಇಲ್ಲದ ಕಾಲದಲ್ಲಿ. ಕಂಪ್ಯೂಟರ್ ಯುಗವಿನ್ನೂ ಆರಂಭವಾಗಿರಲಿಲ್ಲ. ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದ್ದವು.

ಪತ್ರಿಕಾ ರಂಗದಲ್ಲಿ ನನಗೆ ಆಸಕ್ತಿ ಮೂಡಿದ್ದು ಹದಿನಾರರ ಹರೆಯದಲ್ಲೇ. ಶ್ರೇಷ್ಠ ಪತ್ರಕರ್ತ- ಕವಿ ಪಾಂಡೇಶ್ವರರು ಆಗ ನಮ್ಮೂರಲ್ಲೇ ಜನತಾ ವಾರಪತ್ರಿಕೆಯ ಸಂಪಾದಕರಾಗಿದ್ದರು. ನನ್ನ ಬಿಡುವಿನ ವೇಳೆ ಅವರ ಪ್ರೆಸ್ಸಿನಲ್ಲೇ. ನನ್ನ ಬರೆಯುವ ಹವ್ಯಾಸಕ್ಕೆ ನೀರೆರೆದವರೂ ಅವರೇ. ಆದರೆ ಪತ್ರಿಕಾ ರಂಗಕ್ಕೆ ನನ್ನನ್ನು ತಂದಿದ್ದು ಹಿರಿಯ ಸಹೋದರ ಗಂಗಾಧರ ಶಾಸ್ತ್ರಿಯವರು.

ನನ್ನ ಪತ್ರಿಕಾ ಪಯಣ ಅಧಿಕೃತವಾಗಿ ಆರಂಭವಾದದ್ದು ೧೯೬೨ ರ ಜನೆವರಿ ೨೬ ರಂದು. ಅದೂ ಪತ್ರಿಕೆಯ ಸಂಪಾದಕ- ಪ್ರಕಾಶಕನಾಗಿಯೇ. ಶೃಂಗಾರ ಎಂಬ ಆ ಪತ್ರಿಕೆಯನ್ನು ಅಂದು ಬಿಡುಗಡೆ ಮಾಡಿದ್ದು ವರಕವಿ ದ. ರಾ. ಬೇಂದ್ರೆಯವರು ಎನ್ನುವದೊಂದು ಹೆಮ್ಮೆಯ ಸಂಗತಿ. ಆ ನಂತರದಲ್ಲಿ ಪಾಂಡೇಶ್ವರರು ಬಿಟ್ಟ ಕಾರಣ ಜನತಾ ವಾರಪತ್ರಿಕೆಯ ಸಂಪಾದಕನಾದೆ. ಮುಂದೆ ಗುಲಬರ್ಗಾದ ನವಕಲ್ಯಾಣ" ಸಾಪ್ತಾಹಿಕ ದಲ್ಲಿ ಉಪಸಂಪಾದಕನಾಗಿ , ಹುಬ್ಬಳ್ಳಿಯ ವಿಶಾಲ ಕರ್ನಾಟಕ ದಿನಪತ್ರಿಕೆ ಸುದ್ದಿಸಂಪಾದಕನಾಗಿ ಕೆಲಸ. ನವಕಲ್ಯಾಣ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರದು ಮತ್ತು ವಿಶಾಲ ಕರ್ನಾಟಕ ಆಗಿನ ಸಚಿವ ಹುಲಕೋಟಿ ಹುಲಿ ಕೆ. ಎಚ್. ಪಾಟೀಲರ ಮಾಲಕತ್ವದ್ದು. ಹಿರಿಯ ಪತ್ರಕರ್ತರುಗಳಾದ ತಾಯಿನಾಡು ಸಿದ್ದಪ್ಪ ಮತ್ತು ಪ. ಲೋ. ಬಂಕಾಪುರ ಅವರಿಂದ ಮಾರ್ಗದರ್ಶನ ದೊರಕಿತು. ಖಾದ್ರಿ ಅಚ್ಚುತನ್, ಅಪ್ಪಾರಾವ್ ಅಕ್ಕೋಣೆ ನವಕಲ್ಯಾಣದಲ್ಲಿ ನನ್ನ ಜೊತೆ ಕೆಲಸ ಮಾಡಿದ್ದರು. ೧೯೭೮-೭೯ ರಲ್ಲಿ ಪಾಟೀಲ ಪುಟ್ಟಪ್ಪನವರ ವಿಶ್ವವಾಣಿಯಲ್ಲೂ ಕೆಲಸ ಮಾಡುವ ಅವಕಾಶ ದೊರಕಿತು.

೧೯೮೦ ರಲ್ಲಿ ಹುಬ್ಬಳ್ಳಿಯ ದೀನವಾಣಿ ವಾರಪತ್ರಿಕೆಯ ಸಂಪಾದಕನಾಗಿ , ನಂತರ ೧೯೮೨ ಕ್ಕೆ ಬೆಳಗಾವಿಗೆ ಬಂದೆ. ಇಲ್ಲಿ ಕನ್ನಡಮ್ಮ , ನಾಡೋಜ, ಹಸಿರು ಕ್ರಾಂತಿ, ಸಮತೋಲಗಳಲ್ಲಿ ಕೆಲಕಾಲ ಉಪಸಂಪಾದಕನಾಗಿ ಸೇವೆ ಸಲ್ಲಿಸಿ ೧೯೮೭ ರ ನಂತರ ಲೋಕದರ್ಶನ ದಿನಪತ್ರಿಕೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಸುದ್ದಿಸಂಪಾದಕನಾಗಿ, ಆ ಮೇಲೆ ಒಂದು ವರ್ಷ ನಾಡೋಜ ದೈನಿಕದ ಸಂಪಾದಕನಾಗಿ, ಕಾರ್ಯ ನಿರ್ವಹಿಸಿದೆ.

ಈ ಮಧ್ಯೆ ಸ್ವಲ್ಪಕಾಲ ಕನ್ನಡಪ್ರಭ ದಿನಪತ್ರಿಕೆಯ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಹಿರಿಯ ಉಪಸಂಪಾದಕನಾಗಿಯೂ ಕೆಲಸ ಮಾಡುವ ಅವಕಾಶ ಬಂತು. ಆಗ ಶ್ರೀ ರಂಗನಾಥ ಅವರು ( ಈಗ ಪಬ್ಲಿಕ್ ಟಿವಿ) ಮುಖ್ಯ ಸಂಪಾದಕರಾಗಿದ್ದರು.

ಇವಲ್ಲದೆ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ , ನವನಾಡು ದಿನಪತ್ರಿಕೆ, ಮುಂಬಯಿಯ ಕನ್ನಡ ಮಲ್ಲ ದೈನಿಕಗಳ ವರದಿಗಾರನಾಗಿಯೂ ಕೆಲಸ ಮಾಡಿದ್ದಿದೆ.

ಹೀಗೆ ಆರು ದಶಕಗಳ ಕಾಲ ನಡೆದುಬಂದ ದಾರಿಯತ್ತ ಹೊರಳಿ ನೋಡಿದಾಗ ಆಸೆ- ನಿರಾಸೆ, ಸಿಹಿ- ಕಹಿ, ತೃಪ್ತಿ - ಅತೃಪ್ತಿ, ಸಂತೋಷ- ಅಸಂತೋಷ ಎಲ್ಲದರ ಮಿಶ್ರಭಾವ ಅನುಭವಕ್ಕೆ ಬರುತ್ತದೆ.

ವೃತ್ತಿರಂಗದಲ್ಲಿ ಏನಾದರೂ ಸಾಧಿಸಿದ್ದುಂಟೇ ಎನ್ನುವದರತ್ತ ಆತ್ಮಾವಲೋಕನ ಮಾಡಿಕೊಂಡರೆ ?

ಅದಕ್ಕೆ ಉತ್ತರ ನಾಳೆ ನೋಡೋಣ.

- ಎಲ್. ಎಸ್. ಶಾಸ್ತ್ರಿ17 views0 comments
bottom of page